ರಾಜ್ಯದಲ್ಲಿ ನೂರಾರು ಜಾತಿಗಳಿವೆ. ಎಲ್ಲ ಜಾತಿಗೂ ಸಚಿವ ಸ್ಥಾನ ಕೇಳಲು ಸಾಧ್ಯವಿಲ್ಲ. ಸದ್ಯಕ್ಕೆ ನಾನೇ ಈಡಿಗ ಅಂದುಕೊಳ್ಳಿ. ಆ ಜಾತಿ ಈ ಜಾತಿ ಎಂದು ಭೇದಭಾವ ಮಾಡುವುದಕ್ಕಿಂತ ಜಿಲ್ಲೆಯ ಅಭಿವೃದ್ದಿ ದೃಷ್ಟಿಯಿಂದ ಎಲ್ಲರೂ ಸಂಘಟಿತವಾಗಿ ಹೋಗಬೇಕಾಗಿದೆ ಇದು ಗ್ರಾಮೀಣಾಭಿವೃದ್ಧಿ ಸಚಿವ ಈಶ್ವರಪ್ಪ ಅವರ ಮಾತು. ಬಹುಸಂಖ್ಯಾತರಿರುವ ಶಿವಮೊಗ್ಗ ಜಿಲ್ಲೆಯಲ್ಲಿ ಈಡಿಗ ಸಮುದಾಯದವರಿಗೆ ಸಚಿವ ಸ್ಥಾನ ಕೊಡದಿರುವ ಸಾಗರದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು ಮೇಲಿನಂತೆ ಹೇಳಿದರು.
ಮುಂದಿನ ಒಂದು ವರ್ಷ 10 ತಿಂಗಳು ಕಾಲ ಇದನ್ನು ಸವಾಲಾಗಿ ತೆಗೆದುಕೊಂಡು ಖಾತೆಯನ್ನು ಯಶಸ್ವಿಯಾಗಿ ನಿಭಾಯಿಸುವುತ್ತೇನೆ. ಗ್ರಾಮೀಣಾಭಿವೃದ್ದಿ ಖಾತೆ ಗ್ರಾಮೀಣ ಜನರಿಗೆ ಮೂಲಭೂತ ಸೌಲಭ್ಯ ಕಲ್ಪಿಸಲು ಅತ್ಯಂತ ಪೂರಕವಾಗಿದೆ. ನರೇಗಾ ಸೇರಿದಂತೆ ಕೇಂದ್ರದ ಅನೇಕ ಯೋಜನೆಗಳನ್ನು, ರಾಜ್ಯದ ಯೋಜನೆಗಳನ್ನು ಗ್ರಾಮೀಣ ಭಾಗದಲ್ಲಿ ಅನುಷ್ಟಾನಕ್ಕೆ ತರಲು ಪ್ರಯತ್ನ ನಡೆಸಲಾಗುತ್ತದೆ ಎಂದು ಹೇಳಿದರು.
ಕಳೆದ ವರ್ಷ ನೆರೆಯಿಂದ ಉಂಟಾದ ಹಾನಿಯನ್ನು ಸರಿಪಡಿಸುವ ಕೆಲಸ ನಡೆದಿದೆ. ಈಗಾಗಲೆ 69 ಕಿರು ಸೇತುವೆ ನಿರ್ಮಾಣ ಮಾಡಲಾಗಿದೆ. ಜೊತೆಗೆ ಕಾಂಕ್ರೀಟ್ ಮತ್ತು ಟಾರ್ ರಸ್ತೆ ನಿರ್ಮಿಸಲಾಗಿದೆ. ಈ ಬಾರಿ ನೆರೆಯಿಂದ ಫಸಲು ಕಳೆದು ಕೊಂಡವರಿಗೆ ಗರಿಷ್ಟ 35ಸಾವಿರ ರೂ. ಹೆಕ್ಟೇರ್‍ವೊಂದಕ್ಕೆ ಪರಿಹಾರ ಕೊಡಲಾಗುತ್ತದೆ. ಈ ಪರಿಹಾರ ತೀರ ಕಡಿಮೆ ಎಂದು ಗೊತ್ತಿದೆ. ಈ ಬಗ್ಗೆ ಸಚಿವ ಸಂಪುಟದಲ್ಲಿ ಚರ್ಚೆ ನಡೆಸಲಾಗುತ್ತದೆ. ಮನೆ ಜೊತೆಗೆ ಕೊಟ್ಟಿಗೆಮನೆ ಬಿದ್ದರೂ ಪರಿಹಾರ ಕೊಡಲಾಗುತ್ತಿದ್ದು, ಅಧಿಕಾರಿಗಳು ಸಂತ್ರಸ್ತರಿಂದ ಅರ್ಜಿ ಪಡೆದು ತಕ್ಷಣ ಪರಿಹಾರ ಕಲ್ಪಿಸುವ ನಿಟ್ಟಿನಲ್ಲಿ ಗಮನ ಹರಿಸಬೇಕು ಎಂದರು.
ಕರೂರು ಭಾರಂಗಿ ಹೋಬಳಿ ಭಾಗದಲ್ಲಿ ನೆಟ್‍ವರ್ಕ್ ಸಮಸ್ಯೆ ಇರುವುದು ನನ್ನ ಗಮನಕ್ಕೆ ಬಂದಿದೆ. ಈ ನಿಟ್ಟಿನಲ್ಲಿ ಸರ್ಕಾರ ಸೂಕ್ತ ಕ್ರಮ ಕೈಗೊಳ್ಳುತ್ತದೆ. ಸಂಸದ ಬಿ.ವೈ.ರಾಘವೇಂದ್ರ ಅವರು ಸಂಸತ್ ಕಲಾಪದಲ್ಲಿ ಇರುವುದರಿಂದ ಅವರು ಬಂದ ತಕ್ಷಣ ಅವರೊಂದಿಗೆ ಸಭೆ ನಡೆಸಿ ನೆಟ್‍ವರ್ಕ್ ಸಮಸ್ಯೆ ಬಗೆಹರಿಸಲು ಕ್ರಮ ಕೈಗೊಳ್ಳಲಾಗುತ್ತದೆ ಎಂದು ಹೇಳಿದರು.
ಶಾಸಕ ಎಚ್.ಹಾಲಪ್ಪ ಹರತಾಳು, ನಗರಸಭೆ ಅಧ್ಯಕ್ಷೆ ಮಧುರಾ ಶಿವಾನಂದ್, ಉಪಾಧ್ಯಕ್ಷ ವಿ.ಮಹೇಶ್, ಬಿಜೆಪಿ ಜಿಲ್ಲಾಧ್ಯಕ್ಷ ಟಿ.ಡಿ.ಮೇಘರಾಜ್, ತಾಲ್ಲೂಕು ಅಧ್ಯಕ್ಷ ಲೋಕನಾಥ ಬಿಳಿಸಿರಿ, ನಗರ ಅಧ್ಯಕ್ಷ ಗಣೇಶಪ್ರಸಾದ್ ಇನ್ನಿತರರು ಹಾಜರಿದ್ದರು.
ಸಾಗರ ತಾಲ್ಲೂಕಿನಲ್ಲಿ ವಿಪರೀತ ಮಳೆಯಿಂದಾಗಿ 136.68 ಕೋಟಿ ರೂ. ನಷ್ಟ ಸಂಭವಿಸಿದೆ. ಈ ನಷ್ಟ ಶುಕ್ರವಾರದವರೆಗೆ ಮಾತ್ರ ಅಂದಾಜಿಸಲಾಗಿದ್ದು, ಇನ್ನೂ ಪೂರ್ಣ ಪ್ರಮಾಣದ ವರದಿ ನೀಡುವಂತೆ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ – ಕೆ.ಎಸ್.ಈಶ್ವರಪ್ಪ ,ಶಿವಮೊಗ್ಗ ಜಿಲ್ಲಾ ಉಸ್ತುವಾರಿ ಸಚಿವ