ರಾಜ್ಯದಲ್ಲಿ ಶಿವಮೊಗ್ಗ ಜಿಲ್ಲೆಯನ್ನು ಕೃಷಿ ಕ್ಲಸ್ಟರ್ ಎಂದು ಗುರುತಿಸಬೇಕು ಎಂದು ಸಂಸದರಾದ ಬಿ.ವೈ.ರಾಘವೇಂದ್ರ ಹೇಳಿದರು.
ಶನಿವಾರ ಭದ್ರಾ ಜಲಾಶಯಕ್ಕೆ ಬಾಗಿನ ಅರ್ಪಿಸಿದ ನಂತರ ವೇದಿಕೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಚನ್ನಪಟ್ಟಣವನ್ನು ಮರದ ಗೊಂಬೆ ತಯಾರಿಕೆಗೆ, ಬೆಂಗಳೂರನ್ನು ಸಾಫ್ಟ್‌ವೇರ್ ಕ್ಲಸ್ಟರ್ ಹೀಗೆ ವಿವಿಧ ಜಿಲ್ಲೆಗಳನ್ನು ಕ್ಲಸ್ಟರ್ ಆಗಿ ಗುರುತಿಸಲಾಗಿದ್ದು, ಶಿವಮೊಗ್ಗ ಜಿಲೆಯನ್ನು ಕೃಷಿ ಕ್ಲಸ್ಟರ್ ಎಂದು ಹೆಮ್ಮೆಯಿಂದ ಹೇಳಬೇಕು ಆ ರೀತಿಯಲ್ಲಿ ಕೆಲಸಗಳು ಆಗಬೇಕು ಹಾಗೂ ರೈತರು ಸ್ವಾಭಿಮಾನದಿಂದ ಬದುಕಲು ಅನುವಾಗುವಂತೆ ಕೆಲಸ ಮಾಡಿ ದೇವರು ಕೊಟ್ಟ ನೀರನ್ನು ಸದ್ಬಳಕೆ ಮಾಡಿಕೊಳ್ಳಬೇಕೆಂದು ಕರೆ ನೀಡಿದರು.
ಶಿವಮೊಗ್ಗ, ಚಿಕ್ಕಮಗಳೂರು, ದಾವಣಗೆರ, ಚಿತ್ರದುರ್ಗ, ಹಾವೇರಿ ಗದಗ್, ವಿಜಯನಗರ ಸೇರಿ 8 ಜಿಲ್ಲೆಗಳಿಗೆ ಈ ಜಲಾಶಯದಿಂದ ನೀರಾವರಿ ಕಲ್ಪಿಸಿರುವುದು ಹೆಮ್ಮೆಯ ವಿಚಾರ. ಪ್ರಕೃತಿ ವಿರುದ್ದ ಮನಷ್ಯನ ದರ್ಪ ಮತ್ತು ವಿನಾಶಕಾರಿ ಪ್ರವೃತ್ತಿಗೆ ಪ್ರಕೃತಿ ಸಾಕಷ್ಟು ಬಾರಿ ಸುನಾಮಿ ,ಇತರೆ ಪ್ರಾಕೃತಿಕ ವಿಕೋಪಗಳ ಮೂಲಕ ಸೇಡನ್ನು ತೀರಿಸಿಕೊಳ್ಳುತ್ತಿದೆ. ಪ್ರಸ್ತುತ ಕೋವಿಡ್ ಕೂಡ ಪ್ರಕೃತಿಯ ಉತ್ತರವೇ ಆಗಿದ್ದು, ನಾವೆಲ್ಲ ಸಾಕಷ್ಟು ಎಚ್ಚರಿಕೆಯಿಂದ ಪ್ರಕೃತಿ ಜೊತೆ ನಡೆದುಕೊಳ್ಳಬೇಕು ಎಂದು ಹೇಳಿದರು.
ಭದ್ರಾ ಅಚ್ಚುಕಟ್ಟು ಪ್ರಾಧಿಕಾರದ ಅಧ್ಯಕ್ಷೆ ಪವಿತ್ರಾ ರಾಮಯ್ಯ ಮಾತನಾಡಿ, ಯೋಜನೆಯ ಕೊನೆ ಭಾಗದ ರೈತರಿಗೆ ನೀರು ಕೊಡಬೇಕೆಂದು ನನ್ನ ಹಠವಾಗಿದ್ದು ಈ ನಿಟ್ಟಿನಲ್ಲಿ ಕಾರ್ಯಗತಳಾಗಿದ್ದೇನೆ. ರೈತರು ಮತ್ತು ಅಧಿಕಾರಿಗಳ ನಡುವಿನ ಕಂದಕದಿಂದ ಇದು ಸಾಧ್ಯವಾಗುತ್ತಿರಲಿಲ್ಲ. ರೈತರು ಮತ್ತು ಅಧಿಕಾರಿಗಳನ್ನು ಸೇರಿಸುವ ಕೆಲಸ ಮಾಡುತ್ತಿದ್ದೇನೆ. ಭದ್ರಾ ಮೇಲ್ದಂಡೆಗೆ ನೀರು ಕೊಡುವ ಬಗ್ಗೆ ವಿರೋಧವಿಲ್ಲ. ಆದರೆ ನಮ್ಮ ಜಲಾಶಯದ ಪರಿಸ್ಥಿತಿ ಬಗ್ಗೆ ನಾನು ಸಂಸದರಿಗೆ ಹೇಳಲೇಬೇಕು.15 ಟಿಎಂಸಿ ಭದ್ರಾದಿಂದ ೧೬ ಟಿಎಂಸಿ ತುಂಗಾದಿಂದ ನೀರೆತ್ತಬೇಕೆಂದು ಡಿಪಿಆರ್ ಆಗಿದೆ. ಆದರೆ ೨೯ ಟಿಎಂಸಿ ನೀರನ್ನೂ ತುಂಗಾದಿಂದಲೇ ಲಿಫ್ಟ್ ಮಾಡಿದರೆ ಅನುಕೂಲ ಆಗುತ್ತದೆ. ನಾಲ್ಕು ಮೋಟಾರ್ ಶುರು ಮಾಡಿದರೆ ನಮ್ಮ ರೈತರಿಗೆ ತೊಂದರೆ ಆಗಲಿದೆ. ಆದ ಕಾರಣ ಡಿಪಿಆರ್ ನಲ್ಲಿ 29 ಟಿಎಂಸಿ ನೀರನ್ನು ತುಂಗಾದಿಂದಲೇ ಲಿಫ್ಟ್ ಮಾಡುವಂತೆ ಬದಲಾವಣೆ ಮಾಡಬೇಕೆಂದು ಆಗ್ರಹಿಸಿದರು.
ಕಾರ್ಯಕ್ರಮದಲ್ಲಿ ಕೈಗಾರಿಕಾ ಅಭಿವೃದ್ದಿ ನಿಗಮದ ಉಪಾಧ್ಯಕ್ಷ ದತ್ತಾತ್ರಿ, ಸೂಡಾ ಅಧ್ಯಕ್ಷ ಎಸ್.ಎಸ್.ಜ್ಯೋತಿಪ್ರಕಾಶ್, ಭದ್ರ ಕಾಡಾ ಸದಸ್ಯರಾದ ಷಡಕ್ಷರಪ್ಪ ನಾಗಸಮುದ್ರ, ಕೆಎಸ್.ರುದ್ರಮೂರ್ತಿ, ಹರಿಹರದ ರಾಜಪ್ಪ, ಹೊನ್ನಾಳಿಯ ಹನುಮಂತಪ್ಪ, ಶಿಕಾರಿಪುರದ ಮಂಜುನಾಥ್, ತರೀಕೆರೆಯ ವಿನಾಯಕ್, ರಾಜ್ಯ ರೈತಮುಖಂಡರು, ಜನಪ್ರತಿನಿಧಿಗಳು, ಕಾಡ ಆಡಳಿತಾಧಿಕಾರಿ ಪ್ರಸಾದ್, ತುಂಗಾ ಮೇಲ್ದಂಡೆ ಯೋಜನೆಯ ಮುಖ್ಯ ಅಭಿಯಂತರ ಶಿವಾನಂದ ಬಣಕಾರ್, ಬಿ.ಆರ್ ಪ್ರಾಜೆಕ್ಟ್ ಅಧೀಕ್ಷಕ ಅಭಿಯಂತರ ಚಂದ್ರಹಾಸ್ , ಇತರೆ ಅಧಿಕಾರಿಗಳು ಪಾಲ್ಗೊಂಡಿದ್ದರು.