ಕಾಂಗ್ರೆಸ್ ಪಕ್ಷವನ್ನು ಗುರಿಯಾಗಿಸಿಕೊಂಡು ನೀಡಿದ ಹೇಳಿಕೆಯಿಂದ ಗೃಹ ಸಚಿವ ಆರಗ ಜ್ಣಾನೇಂದ್ರ ಅವರೇ ವಿವಾದವನ್ನು ಮೈಮೇಲೆ ಎಳೆದುಕೊಂಡಿದ್ದಾರೆ ಎಂದು ಮಾಜಿ ಸಚಿವ,ಕಾಂಗ್ರೆಸ್ ವಕ್ತಾರ ಕಿಮ್ಮನೆ ರತ್ನಾಕರ್ ಹೇಳಿದ್ದಾರೆ.
ಹೊಸನಗರ ತಾಲೂಕಿನ ನಗರ ಹೋಬಳಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು,ಅರಗ ಅವರು ಕಾಂಗ್ರೆಸ್ ಪಕ್ಷವನ್ನು ಗುರಿಯಾಗಿಸಿಕೊಂಡು ಹೇಳಿಕೆ ನೀಡಬಾರದು.ರಾಜ್ಯದ ಆರು ಕೋಟಿ ಜನರನ್ನು ಗಮನದಲ್ಲಿರಿಸಿಕೊಂಡು ಮಾತನಾಡಬೇಕು.ಅಧಿಕಾರದಲ್ಲಿದ್ದಾಗ ಒಂದು ಪಕ್ಷದ ಪರವಾದ ಹೇಳಿಕೆ ನೀಡುವುದು ಸರಿಯಲ್ಲ ಎಂದರು.
ಅರಗ ಜ್ಣಾನೇಂದ್ರ ಅವರು ತೀರ್ಥಹಳ್ಳಿಯಲ್ಲಿ ನಮ್ಮನ್ನು ಬೈದುಕೊಂಡು ಓಡಾಡುತ್ತಿದ್ದರು.ಈಗ ಅದನ್ನೇ ಮಾಡಿಕೊಂಡು ರಾಜ್ಯದಲ್ಲಿ ಓಡಾಡುತ್ತಿದ್ದಾರೆ.ಕಾಂಗ್ರೆಸ್ ಪಕ್ಷಕ್ಕೂ ಅತ್ಯಾಚಾರಕ್ಕೂ ಏನು ಸಂಬಂಧ.ಕಾಂಗ್ರೆಸ್ ಪಕ್ಷದವರು ತಮ್ಮ ಮೇಲೆ ಅತ್ಯಾಚಾರ ಮಾಡಿದರು ಎಂದು ಹೇಳುವುದು ಎಷ್ಟು ಸರಿ.ಗೃಹ ಸಚಿವ ಸ್ಥಾನಕ್ಕೆ ತಕ್ಕ ಪ್ರಬುದ್ದತೆಯನ್ನು ತೋರಿಸಬೇಕು ಎಂದ ಕಿಮ್ಮನೆ ಸಲಹೆ ನೀಡಿದ್ದಾರೆ.
ಬಂಗಾರದ ಅಂಗಡಿಯವರು ರಾತ್ರಿ ಹೊತ್ತಲ್ಲೂ ವ್ಯಾಪಾರ ಮಾಡುತ್ತಾರೆ.ದರೋಡೆ ನಡೆಯುತ್ತೆ ಎಂದು ಹಗಲು ಹೊತ್ತು ಬಾಗಿಲು ಹಾಕಿಕೊಂಡೇ ಇರಲು ಸಾಧ್ಯವೇ.ಬಾಗಿಲು ಹಾಕಿಕೊಂಡೇ ಇರಿ ಎಂದು ಹೇಳಲು ಪೊಲೀಸ್ ವ್ಯವಸ್ಥೆ ಬೇಕಾ.ಅದೇ ರೀತಿ ಹೆಣ್ಣು ಮಕ್ಕಳು ಮನೆಯಲ್ಲಿ ಇರಿ ಎಂದು ಹೇಳಲು ಪೊಲೀಸ್ ವ್ಯವಸ್ಥೆ ಬೇಕಾ.ಅವರ ಕುಟುಂಬದವರೆ ಹೆಣ್ಣುಮಕ್ಕಳ ರಕ್ಷಣೆ ಮಾಡಿಕೊಳ್ಳುತ್ತಾರೆ ಎಂದು ಕಿಮ್ಮನೆ ರತ್ನಾಕರ್ ಅವರು ಗೃಹ ಸಚಿವ ಆರಗ ಜ್ಣಾನೇಂದ್ರ ಹೇಳಿಕೆಗೆ ತಿರುಗೇಟು ನೀಡಿದ್ದಾರೆ.