ಮಾಜಿ ಶಾಸಕ ಹಾಗೂ ಇತ್ತೀಚೆಗಷ್ಟೇ ಕಾಂಗ್ರೆಸ್ ಸೇರ್ಪಡೆಗೊಂಡಿರುವ ಮಧುಬಂಗಾರಪ್ಪ ಅವರು ಗುರುವಾರ ಹೊಸದಿಲ್ಲಿಯಲ್ಲಿ ಕಾಂಗ್ರೆಸ್ ವರಿಷ್ಠ ರಾಹುಲ್‌ಗಾಂಧಿ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಿದರು.
ವರಿಷ್ಠರ ಆಹ್ವಾನದ ಮೇರೆಗೆ ದಿಲ್ಲಿಗೆ ತೆರಳಿದ ಅವರು, ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲಾ ಸಮ್ಮುಖದಲ್ಲಿ ರಾಹುಲ್ ಅವರೊಂದಿಗೆ ಮಧುಬಂಗಾರಪ್ಪ ಮಾತುಕತೆ ನಡೆಸಿದರು. ಮಾಜಿ ಮುಖ್ಯಮಂತ್ರಿ ಬಂಗಾರಪ್ಪ ಅವರ ಕಾಂಗ್ರೆಸ್‌ದಿನಗಳು ಮತ್ತು ಅವರು ಅಧಿಕಾರದಲ್ಲಿದ್ದಾಗ ಜಾರಿಗೆ ತಂದ ಜನಪ್ರಿಯ ಕಾರ್ಯಕ್ರಮಗಳು ಹಾಗೂ ಮಾಜಿ ಪ್ರಧಾನಿ ರಾಜೀವ್‌ಗಾಂಧಿ ಅವರೊಂದಿಗೆ ಬಂಗಾರಪ್ಪ ಅವರ ಬಾಂಧವ್ಯ ಕುರಿತು ಈ ಸಂದರ್ಭ ಸ್ಮರಿಸಲಾಯಿತು.
ಮಧುಗೆ ಆಯಕಟ್ಟಿನ ಹುದ್ದೆ ?
ಬಂಗಾರಪ್ಪ ಅವರು ಕಾಂಗ್ರೆಸ್‌ನಲ್ಲಿರುವಾಗ ಹಿಂದುಳಿದ ಈಡಿಗ ಸಮುದಾಯ ಆ ಪಕ್ಷಕ್ಕೆ ಬೆಂಬಲ ನೀಡಿತ್ತು. ಈಗ ಮತ್ತೊಬ್ಬ ಪುತ್ರ ಶಾಸಕ ಕುಮಾರ್ ಬಂಗಾರಪ್ಪ ಬಿಜೆಪಿಯಲ್ಲಿದ್ದಾರೆ. ಪ್ರಸ್ತುತ ರಾಜ್ಯದಲ್ಲಿ ಈಡಿಗ ಸಮುದಾಯದ ಶಾಸಕರು ಮತ್ತು ಸಚಿವರು ಬಿಜೆಪಿಯಲ್ಲಿದ್ದಾರೆ. ಈ ಸಂದರ್ಭದಲ್ಲಿ ಬಂಗಾರಪ್ಪ ಅಭಿಮಾನಿಗಳು ಮತ್ತು ಜಾತಿಯ ಮತಗಳನ್ನು ಕಾಂಗ್ರೆಸ್‌ನತ್ತ ಸೆಳೆಯಲು ಮಧುಬಂಗಾರಪ್ಪ ಅವರನ್ನು ಬಳಸಿಕೊಳ್ಳಲು ಕಾಂಗ್ರೆಸ್ ಮುಂದಾಗಿದೆ ಎನ್ನಲಾಗಿದೆ. ಈ ಹಿನ್ನೆಲೆಯಲ್ಲಿ ಮಧು ಬಂಗಾರಪ್ಪ ಅವರಿಗೆ ಕಾಂಗ್ರೆಸ್‌ನಲ್ಲಿ ಆಯಕಟ್ಟಿನ ಹುದ್ದೆ ನೀಡಬಹುದು ಎನ್ನಲಾಗಿದೆ.
ಮಧುಬಂಗಾರಪ್ಪ ಅವರ ಕಾಂಗ್ರೆಸ್ ಸೇರ್ಪಡೆ ಸಮಾರಂಭವನ್ನು ಅದ್ದೂರಿಯಾಗಿ ಮಾಡಬೇಕೆಂಬ ಉದ್ದೇಶಕ್ಕೆ ಕೊರೊನ ಅವಕಾಶ ಮಾಡಿಕೊಟ್ಟಿಲ್ಲ.ಪಕ್ಷದಲ್ಲಿ ಪ್ರಮುಖ ಹುದ್ದೆ ನೀಡಿ ಅವರನ್ನು ಪಕ್ಷದಲ್ಲಿ ಸಕ್ರಿಯವಾಗಿ ಬಳಸಿಕೊಳ್ಳುವ ಉದ್ದೇಶವನ್ನು ಡಿಕೆಶಿ ಬಳಗ ಹೊಂದಿದೆ ಎನ್ನಲಾಗಿದೆ.