ಬಸ್ ಸಂಚಾರ ತಡೆಗೆ ಯತ್ನ, ಉರುಳು ಸೇವೆ,
ಒಕ್ಕೂಟ ಸರ್ಕಾರದ ವಿವಾದಿತ ಕೃಷಿ ಕಾಯ್ದೆ ಜಾರಿಗೊಳಿಸಿ ಒಂದು ವರ್ಷ ಪೂರೈಸುತ್ತಿರುವ ಹಿನ್ನಲೆಯಲ್ಲಿ ಸಂಯುಕ್ತ ಕಿಸಾನ್ ಮೋರ್ಚಾ ಕರೆ ನೀಡಿರುವ ಭಾರತ್ ಬಂದ್‌ಗೆ ಶಿವಮೊಗ್ಗದಲ್ಲಿ ನೀರಸ ಪ್ರತಿಕ್ರಿಯೆ ವ್ಯಕ್ತವಾಯಿತು.
ಅನೇಕ ಸಂಘಟನೆಗಳು ನೈತಿಕ ಬೆಂಬಲ ನೀಡಿದ್ದು, ಬಂದ್ ಗೆ ನೀರಸ ಪ್ರತಿಕ್ರಿಯೆ ವ್ಯಕ್ತವಾಯಿತು. ಶಿವಮೊಗ್ಗದಲ್ಲಿ ಜನಜೀವನ ಸಹಜವಾಗಿತ್ತು. ಖಾಸಗಿ, ಸರ್ಕಾರಿ ಬಸ್ ಸಂಚಾರ ಎಂದಿನಂತೆ ಇದ್ದುದರಿಂದ ಪ್ರಯಾಣಿಕರಿಗೆ ತೊಂದರೆಯಾಗಲಿಲ್ಲ. ಬಸ್, ಆಟೋ, ರೈಲು, ವಾಹನ ಸಂಚಾರ ಎಂದಿನಂತೆ ಇತ್ತು. ಬಂದ್ ಬಿಸಿ ಸಾರ್ವಜನಿಕರಿಗೆ ತಟ್ಟಲಿಲ್ಲ. ಆದರೆ, ಎಪಿಎಂಸಿ ತರಕಾರಿ ಮಾರುಕಟ್ಟೆ ಮಾತ್ರ ಬೆಳಗ್ಗೆಯೇ ಸಂಪೂರ್ಣ ಬಂದ್ ಆಗಿತ್ತು. ವ್ಯಾಪಾರ ವಹಿವಾಟು ನಡೆಯಲಿಲ್ಲ. ಮಾರುಕಟ್ಟೆ ಹೊರಗೆ ರಸ್ತೆ ಬದಿಯಲ್ಲಿ ಚಿಲ್ಲರೆ ವ್ಯಾಪಾರಸ್ಥರು ವ್ಯಾಪಾರ ನಡೆಸಿದರು. ಸಗಟು ವ್ಯಾಪಾರ ಬಂದ್ ಆಗಿತ್ತು. ರೈತ ಸಂಘಟನೆಗಳ ಪ್ರತಿಭಟನಾ ಮೆರವಣಿಗೆ ನಡೆಯುವ ಸಂದರ್ಭದಲ್ಲಿ ಅಂಗಡಿ ಮುಂಗಟ್ಟುಗಳನ್ನು ಸ್ವಯಂ ಪ್ರೇರಿತವಾಗಿ ಮುಚ್ಚಲಾಗಿತ್ತು. ಶಾಲಾ, ಕಾಲೇಜುಗಳು, ಕಚೇರಿ, ಬ್ಯಾಂಕ್ ಗಳು ಎಂದಿನಂತೆ ನಡೆದವು.
ಕನ್ನಡ ಪರ ಸಂಘಟನೆಗಳ ಪ್ರತಿಭಟನೆ
ನಗರದ ಖಾಸಗಿ ಬಸ್ ಹಾಗೂ ಕೆಎಸ್‌ಆರ್‌ಟಿಸಿ ನಿಲ್ದಾಣದ ಮುಂಭಾಗ ಹಲವು ಕನ್ನಡಪರ ಸಂಘಟನೆಗಳ ಪ್ರಮುಖರು ಬೆಳಗ್ಗೆ ೬ ಗಂಟೆಯಿಂದಲೇ ಪ್ರತಿಭಟನೆ ನಡೆಸಿದರು. ನಗರದ ಕೆಎಸ್‌ಆರ್ ಟಿಸಿ ಬಸ್ ನಿಲ್ದಾಣದ ಮುಂದೆ ಪ್ರತಿಭಟನೆ ನಡೆಸಿದ ಕನ್ನಡಪರ ಸಂಘಟನೆಗಳ ಕಾರ್ಯಕರ್ತರು ಕೇಂದ್ರ ಸರ್ಕಾರದ ರೈತವಿರೋಧಿ ಹಾಗೂ ಜನ ವಿರೋಧಿ ಕಾಯ್ದೆಗಳ ವಿರುದ್ದ ದಿಕ್ಕಾರ ಕೂಗಿದರು.ಕೂಡಲೇ ಕೇಂದ್ರ ಸರ್ಕಾರ ಜಾರಿಗೊಳಿಸಿರುವ ವಿವಾದಿತ ಮೂರು ಕೃಷಿ ಕಾಯ್ದೆಗಳನ್ನು ಹಿಂಪಡೆದುಕೊಳ್ಳಬೇಕು ಎಂದು ಆಗ್ರಹಿಸಿದರು.
ಬಸ್ ಸಂಚಾರ ತಡೆಗೆ ಯತ್ನ:
ಇನ್ನು ಕೆ ಎಸ್ ಆರ್ ಟಿಸಿ ಬಸ್ಸುಗಳ ಸಂಚಾರಕ್ಕೆ ತಡೆಯಲು ಕನ್ನಡಪರ ಸಂಘಟನೆಗಳ ಕಾರ್ಯಕರ್ತರು ಯತ್ನಿಸಿದರು.
ಬಸ್ಸುಗಳು ಹೊರಗೆ ಹೋಗುವ ಮಾರ್ಗದಲ್ಲಿ ರಸ್ತೆ ಕುಳಿತು ಪ್ರತಿಭಟನೆ ನಡೆಸಿದರು.ಈ ವೇಳೆ ಸ್ಥಳಕ್ಕೆ ಆಗಮಿಸಿದ ಪೊಲೀಸರು ಪ್ರತಿಭಟನಾನಿರತರನ್ನು ಪಕ್ಕಕ್ಕೆ ಸರಿಸಿ ಬಸ್ಸುಗಳ ಸಂಚಾರಕ್ಕೆ ಅವಕಾಶ ಮಾಡಿಕೊಟ್ಟರು.
ಉರುಳು ಸೇವೆ:
ಶಿವಮೊಗ್ಗದ ಆಶೋಕ್ ಸರ್ಕಲ್ ನಲ್ಲಿ ಕನ್ನಡ ಪರ ಸಂಘಟನೆಯ ಮುಖಂಡ ವಾಟಳ್ ಮಂಜುನಾಥ್ ಅವರು ಉರುಳು ಸೇವೆ ಮಾಡುವ ಮೂಲಕ ವಿಭಿನ್ನವಾಗಿ ಪ್ರತಿಭಟನೆ ನಡೆಸಿದರು.
ಬೃಹತ್ ಪ್ರತಿಭಟನೆ:
ನಗರದ ವಿವಿಧೆಡೆಯಿಂದ ಬಂದ ಸಂಘಟನೆಗಳ ಪ್ರಮುಖರು ರಾಮಣ್ಣ ಶ್ರೇಷ್ಠಿ ಪಾರ್ಕ್ ನಲ್ಲಿ ಒಟ್ಟಾಗಿ ಅಲ್ಲಿಂದ ಮೆರವಣಿಗೆಯಲ್ಲಿ ಹೊರಟು ಗಾಂಧಿ ಬಜಾರ್ ನಿಂದ ಅಮೀರ್ ಅಹ್ಮದ್ ವೃತ್ತ, ಗೋಪಿ ವೃತ್ತ ಮೂಲಕ ಮಹಾವೀರ ವೃತ್ತಕ್ಕೆ ತಲುಪಿ ಅಲ್ಲಿ ಬಹಿರಂಗ ಸಭೆ ಏರ್ಪಡಿಸಲಾಗಿತ್ತು.
ಬಹಿರಂಗ ಸಭೆಯನ್ನುದ್ದೇಶಿಸಿ ಮಾತನಾಡಿದ ಜೆಡಿಎಸ್ ರಾಜ್ಯ ಪ್ರಧಾನ ಕಾರ್ಯದರ್ಶಿ ಎಂ.ಶ್ರೀಕಾಂತ್, ಯಾವುದೇ ಕಾರಣಕ್ಕೂ ಜೀವನಾವಶ್ಯಕ ವಸ್ತುಗಳ ಮಾರಾಟ ಮತ್ತು ಉತ್ಪನ್ನ ಕಾಯ್ದೆಗೆ ತಿದ್ದುಪಡಿ ಮಾಡಬಾರದು. ಎಪಿಎಂಸಿ ಕಾಯ್ದೆಗೆ ತಂದಿರುವ ತಿದ್ದುಪಡಿ ರದ್ದುಗೊಳಿಸಬೇಕು, ವಿದ್ಯುತ್ ಖಾಸಗೀಕರಣಕ್ಕೆ ಕೈಹಾಕಬಾರದು. ಕನಿಷ್ಠ ಬೆಂಬಲ ಬೆಲೆಯನ್ನು ಎಂ.ಎಸ್.ಪಿ. ಕಾನೂನಿನ ಚೌಕಟ್ಟಿನಲ್ಲಿ ತರಬೇಕು. ಭೂಸುಧಾರಣಾ ಕಾಯ್ದೆಗೆ ರಾಜ್ಯಮಟ್ಟದಲ್ಲಿ ತಿದ್ದುಪಡಿ ಮಾಡಿರುವುದನ್ನು ವಿರೋಧಿಸಿ, ಮೇಕೆದಾಟಿನ ಅಣೆಕಟ್ಟಿನ ಕೆಲಸವನ್ನು ಇನ್ನೂ ಆರಂಭಿಸದೇ ಇರುವುದರ ವಿರುದ್ಧ, ಕಬ್ಬು ಬೆಳೆಗೆ ಸೂಕ್ತ ಬೆಲೆ ನಿಗದಿ ಮಾಡಬೇಕು ಎಂದು ಆಗ್ರಹಿಸಿದರು.
ಈ ಸಂದರ್ಭದಲ್ಲಿ ಕಿಸಾನ್ ಮೋರ್ಚಾ ಪ್ರಮುಖರಾದ ಹಾಗೂ ಸಂಚಾಲಕರಾ ಎಂ. ಶ್ರೀಕಾಂತ್, ಎನ್. ರಮೇಶ್, ಕೆ.ಎಲ್. ಅಶೋಕ್, ಕೆ.ಪಿ. ಶ್ರೀಪಾಲ್, ಯಮುನಾ ರಂಗೇಗೌಡ, ಸಿಐಟಿಯು ಪ್ರಮುಖರಾದ ಹನುಮಕ್ಕ, ಮಧುಸೂದನ್, ನಾಗರಾಜ್ ಕಂಕಾರಿ, ಶಾಂತಾ ಸುರೇಂದ್ರ, ಹೆಚ್.ಪಿ. ಗಿರೀಶ್, ರವಿಕುಮಾರ್, ಪಾಲಾಕ್ಷಿ, ಹಾಲೇಶಪ್ಪ ಮೊದಲಾದವರಿದ್ದರು.
ಜನಸಾಮಾನ್ಯರ ಊಟದ ತಟ್ಟೆಗೆ ಕೇಂದ್ರ ಸರ್ಕಾರ ಕೈಹಾಕಿದ್ದು, ರೈತರು ಮತ್ತು ದೇಶದ ಜನ ಸಾಮಾನ್ಯ ಮುಂದಿನ ದಿನಗಳಲ್ಲಿ ಕಾರ್ಪೋರೇಟ್ ಕಂಪನಿಗಳ ಗುಲಾಮರಾಗುತ್ತಾರೆ. ವಂಶ ಪಾರಂಪರ್ಯದಿಂದ ಉಳಿಸಿಕೊಂಡ ಭೂಮಿಯನ್ನು ಮುಂದಿನ ಪೀಳಿಗೆ ಕಳೆದುಕೊಳ್ಳಲಿದೆ. ಆಹಾರಕ್ಕಾಗಿ ಸಂಕಟಪಡುವ ದಿನ ದೂರವಿಲ್ಲ. ಕೂಡಲೇ ಕೇಂದ್ರ ಮತ್ತು ರಾಜ್ಯ ರೈತರನ್ನು ಕರೆದು ಅವರ ವಿಶ್ವಾಸ ಪಡೆದು ಮಾತುಕತೆ ನಡೆಸಿ ಕೃಷಿ ಕಾಯ್ದೆ ತಿದ್ದುಪಡಿ ನೀತಿಯನ್ನು ವಾಪಸ್ ಪಡೆಯಬೇಕು.
-ಕೆ.ಟಿ ಗಂಗಾಧರ್,ರೈತ ಮುಖಂಡ
ಬಂದ್ ಯಶಸ್ವಿಯಾಗಿದೆ. ದೆಹಲಿಯಲ್ಲಿ ೧೦ ತಿಂಗಳಿಂದ ರೈತರು ಅಹೋರಾತ್ರಿ ಹೋರಾಟ ನಡೆಸುತ್ತಿದ್ದರು, ಕೇಂದ್ರ ಸರ್ಕಾರ ರೈತರೊಂದಿಗೆ ಮಾತುಕತೆ ಮಾಡದೇ ಏಕ ಪಕ್ಷೀಯ ಧೋರಣೆ ಅನುಸರಿಸುತ್ತಿದೆ. ಮುಂದಿನ ದಿನ ಗಳಲ್ಲಿ ರೈತರು ಸರ್ಕಾರಕ್ಕೆ ತಕ್ಕ ಪಾಠ ಕಲಿಸಲಿದ್ದಾರೆ.ರೈತರ ಭೂಮಿಯನ್ನು ಕಸಿದುಕೊಂಡು ಕಾರ್ಪೋರೇಟ್ ಕಂಪನಿಗಳಿಗೆ ಅನುಕೂಲ ಮಾಡಿಕೊಡುವ ಕೇಂದ್ರ ಸರ್ಕಾರದ ಕೃಷಿ ಕಾಯ್ದೆ ತಿದ್ದುಪಡಿ ನೀತಿಯನ್ನು ರೈತರು ಸಂಪೂರ್ಣವಾಗಿ ವಿರೋಧಿಸಿದ್ದಾರೆ. ಮುಂದಿನ ದಿನಗಳಲ್ಲಿ ಈ ಪ್ರತಿಭಟನೆ ಇನ್ನೂ ದೊಡ್ಡ ಪ್ರಮಾಣದಲ್ಲಿ ಹೊರಹೊಮ್ಮಲಿದೆ.
–ಹೆಚ್.ಆರ್ ಬಸವರಾಜಪ್ಪ.ರೈತ ಮುಖಂಡ