ಬದುಕಿನಲ್ಲಿ ಉನ್ನತ ಸ್ಥಾನಕ್ಕೇರಲು ಶಿಕ್ಷಣ ಬಿಟ್ಟರೆ ಬೇರೆ ದಾರಿ ಇಲ್ಲ. ಆದ್ದರಿಂದ ವಿದ್ಯಾರ್ಥಿ ಜೀವನದಲ್ಲಿ ಶಿಕ್ಷಣ ಬಿಟ್ಟು ಬೇರೆ ದುಷ್ಚಟಗಳ ಬಗ್ಗೆ ಯೋಚಿಸದೇ, ತಮ್ಮ ನಡತೆಯನ್ನು ತಿದ್ದಿಕೊಳ್ಳಿ ಎಂದು ಶಿವಮೊಗ್ಗ ಜಿಲ್ಲಾಧಿಕಾರಿ ಕೆ.ಬಿ. ಶಿವಕುಮಾರ್ ಹೇಳಿದ್ದಾರೆ.
ದುರ್ಗಿಗುಡಿ ಸರ್ಕಾರಿ ಪ್ರೌಢಶಾಲೆಯಲ್ಲಿ ಸಾರ್ವಜನಿಕ ಶಿಕ್ಷಣ ಇಲಾಖೆ ಮತ್ತು ಜಿಲ್ಲಾ ಪೊಲೀಸ್ ಮತ್ತು ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ವತಿಯಿಂದ ಹಮ್ಮಿಕೊಂಡಿದ್ದ ಮಾದಕ ವಸ್ತುಗಳ ಕಾಯ್ದೆ ಕುರಿತು ಕಾನೂನು ಅರಿವು ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದರು.
ನೀವು ಮಾದಕ ವ್ಯಸನಿಗಳಾದರೆ ನೀವು ಮಾತ್ರವಲ್ಲ, ನಿಮ್ಮ ಇಡೀ ಕುಟುಂಬ ಸಂಕಷ್ಟಕ್ಕೀಡಾಗುತ್ತದೆ. ನಿಮ್ಮ ಸುತ್ತಮುತ್ತಲೂ ಯಾವುದೇ ಮಾದಕ ವಸ್ತುಗಳು, ಗಾಂಜಾ ಮಾರಾಟ ಅಥವಾ ಆಮಿಷಗಳನ್ನೊಡ್ಡಿ ಮಾದಕ ದ್ರವ್ಯ ಸಾಗಾಟ ಅಥವಾ ಮಾರಾಟಕ್ಕೆ ಪ್ರೋತ್ಸಾಹ ನೀಡುವುದು ಕಂಡು ಬಂದಲ್ಲಿ ಕೂಡಲೇ ಪ್ರಾಂಶುಪಾಲರಿಗೆ ಅಥವಾ ಪೊಲೀಸರಿಗೆ ದೂರು ನೀಡಿ ನಿಮ್ಮ ಹೆಸರನ್ನು ಗೌಪ್ಯವಾಗಿ ಇಡಲಾಗುತ್ತದೆ. ಆದಷ್ಟು ಸಮಾಜ ಒಳ್ಳೆಯದಾಗಲು ಪ್ರಯತ್ನಿಸಿ ಎಂದರು.
ಒಂದು ಸಲ ಮಾದಕ ಚಟಕ್ಕೆ ಸಿಕ್ಕಿಬಿದ್ದರೆ ಬದುಕಿನಲ್ಲಿ ಅದೊಂದು ಕಪ್ಪು ಚುಕ್ಕೆಯಾಗುತ್ತದೆ. ಸಮಾಜಕ್ಕೆ ಒಂದು ಕಳಂಕವಾಗುತ್ತೀರಿ. ಹಲವಾರು ಸೌಲಭ್ಯಗಳನ್ನು ಕಳೆದುಕೊಳ್ಳುತ್ತೀರಿ. ಆದ್ದರಿಂದ ಮಾದಕ ವ್ಯಸನಗಳಿಗೆ ಬಲಿಯಾಗಿ ದಾರಿ ತಪ್ಪದಿರಿ ಎಂದು ಸಲಹೆ ನೀಡಿದರು.
ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ಮುಸ್ತಾಫ್ ಹುಸೇನ್ ಎಸ್.ಎ. ಮಾತನಾಡಿ, ವಿದ್ಯಾರ್ಥಿಗಳಲ್ಲಿ ಜಾಗೃತಿ ಮೂಡಿಸುವ ಉದ್ದೇಶದಿಂದ ಈ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಅಕ್ಟೋಬರ್ ೨ ರಿಂದ ನವೆಂಬರ್ ೧೪ ರ ವರೆಗೆ ಮಾದಕ ವಸ್ತುಗಳ ಬಗ್ಗೆ ವಿದ್ಯಾರ್ಥಿಗಳಲ್ಲಿ ಸಂದೇಶಗಳ ಮೂಲಕ ಜಾಗೃತಿ ಮೂಡಿಸುವುದು, ಕರಪತ್ರ ಹಂಚಿಕೆ ಮೂಲಕ ಮತ್ತು ಜಾಥಾಗಳ ಮೂಲಕ ಜನ ಜಾಗೃತಿ ಅಭಿಯಾನ ಹಮ್ಮಿಕೊಳ್ಳಲಾಗಿದೆ. ನಿಮ್ಮ ಸ್ನೇಹಿತರು ಅಥವಾ ಬಂಧು ಮಿತ್ರರು ಮಾದಕ ವ್ಯಸನಿಗಳಾಗಿದ್ದರೆ, ಕೂಡಲೇ ಪಾಲಕರಿಗೆ ವಿಷಯ ಮುಟ್ಟಿಸಿ. ವಿದ್ಯಾರ್ಥಿಗಳು ಸಹಕರಿಸಿದರೆ ಈ ಪಿಡುಗಿನ ನಿಯಂತ್ರಣ ಸಾಧ್ಯ ಎಂದು ಹೇಳಿದರು.
ಶಿವಮೊಗ್ಗ ಜಿಲ್ಲೆಯಲ್ಲಿ ಮಾದಕ ವ್ಯಸನಿಗಳ ಪ್ರಮಾಣ ಹೆಚ್ಚುತ್ತಿದೆ. ಈ ಚಟಕ್ಕೆ ಸುಲಭವಾಗಿ ಸಿಕ್ಕಿಹಾಕಿಕೊಳ್ಳುತ್ತಾರೆ. ಒಮ್ಮೆ ಈ ಚಟಕ್ಕೆ ದಾಸರಾದರೆ ಹೊರಗೆ ಬರುವುದು ಬಹಳ ಕಷ್ಟ. ಪ್ರಾರಂಭದಲ್ಲಿ ಉಚಿತವಾಗಿ ನೀಡಿ, ಆಕರ್ಷಿಸುತ್ತಾರೆ. ಆಮೇಲೆ ನೀವು ಇದಕ್ಕೆ ದಾಸರಾಗುತ್ತೀರಿ. ಪೋಷಕರು ನಿಮ್ಮ ಮೇಲೆ ಭರವಸೆ ಇಟ್ಟು ಎಲ್ಲವನ್ನು ತ್ಯಾಗ ಮಾಡಿ ಓದಲು ಕಳಿಸುತ್ತಾರೆ. ಆದರೆ, ನೀವು ದುಷ್ಚಟಕ್ಕೆ ಬಲಿಯಾದರೆ ನಿಮ್ಮ ವೈಯಕ್ತಿಕ ಜೀವನ ಹಾಳಾಗುತ್ತದೆ. ಇದನ್ನು ಗಂಭೀರವಾಗಿ ಯೋಚಿಸಿ ಜೀವನ ರೂಪಿಸಿಕೊಳ್ಳಿ ಎಂದು ತಿಳಿಸಿದರು.
ಮಾದಕ ವಸ್ತುಗಳ ಸೇವನೆ ಕೂಡ ದೊಡ್ಡ ಅಪರಾಧವಾಗಿದ್ದು ಇದರ ತಡೆಗೆ ಕಠಿಣ ಖಾಯ್ದೆ ರೂಪಿಸಲಾಗಿದೆ. ಜಾಮೀನು ಕೂಡ ಸಿಗುವುದಿಲ್ಲ. ಒಮ್ಮೆ ಕಪ್ಪು ಚುಕ್ಕೆ ಜೀವನದಲ್ಲಿ ಬಂದರೆ ಉದ್ಧಾರವಾಗುವುದಿಲ್ಲ. ಜೊತೆಗೆ ಇಡೀ ಸಮಾಜ ಕೆಟ್ಟ ದೃಷ್ಠಿಯಿಂದ ನೋಡುತ್ತದೆ. ಈ ಸಂದೇಶವನ್ನು ನಿಮ್ಮ ಸ್ನೇಹಿತರಿಗೂ ರವಾನಿಸಿ ಎಂದರು.
ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿಗಳಾದ ಕೆ.ಎನ್. ಸರಸ್ವತಿ, ಎರಡನೇ ಹೆಚ್ಚುವರಿ ನ್ಯಾಯಾಧೀಶರಾದ ಕೃಪಾ ಸಿ.ಎಲ್., ಜಿಪಂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಎಂ.ಎಲ್. ವೈಶಾಲಿ ಮೊದಲಾದವರಿದ್ದರು.
15 ರಿಂದ 20 ವರ್ಷದೊಳಗಿನ ಮಕ್ಕಳಲ್ಲಿ ಗಾಂಜಾ ಚಟಕ್ಕೆ ಬಲಿಯಾಗುತ್ತಿರುವುದು ಕಂಡು ಬಂದಿದೆ. ಮೊದಲು ಸಿಗರೇಟ್ ಸೇದಲು ಪ್ರೇರೇಪಿಸುತ್ತಾರೆ. ನಂತರ ಅದು ಗಾಂಜಾ ಸೇವನೆಗೆ ಬದಲಾಗುತ್ತದೆ. ಬಳಿಕ ಒಮ್ಮೆ ದಾಸರಾದರೇ ಅವರಿಗೆ ಗೊತ್ತಾಗದ ಹಾಗೇ ಪ್ರತಿ ಎರಡು ದಿನಕ್ಕೆ 500 ರೂ.ಗೂ ಹೆಚ್ಚು ಹಣ ಬೇಕಾಗುತ್ತದೆ. ಆಗ ಅನಿವಾರ್ಯವಾಗಿ ಹಣಕ್ಕಾಗಿ ಮೊಬೈಲ್ ಕಳ್ಳತನ ಸೇರಿದಂತೆ ಇನ್ನಿತರ ಅಪರಾಧ ಕೃತ್ಯಗಳಿಗೆ ಕೈಹಾಕುತ್ತಾರೆ. ಆದ್ದರಿಂದ ಈ ಬಗ್ಗೆ ಜಾಗೃತಿ ಮೂಡಿಸಲು ಈ ಅಭಿಯಾನ ಹಮ್ಮಿಕೊಳ್ಳಲಾಗಿದೆ
– ಲಕ್ಷ್ಮಿ ಪ್ರಸಾದ್, ಜಿಲ್ಲಾ ಪೊಲಿಸ್ ಅಧೀಕ್ಷಕ