ಮನುಕುಲಕ್ಕೆ ಮಾರಕವಾಗಿರುವ ಭಾರತದ ಪರಂಪರಿಕ ಕೃಷಿಯನ್ನೇ ನಾಶ ಮಾಡುವ, ಆಹಾರ ಸಂಸ್ಕೃತಿಯ ಮೇಲೆ ಕೆಟ್ಟ ಪರಿಣಾಮ ಬೀರುವ ಬಿ.ಟಿ. (ಕುಲಾಂತರಿ) ತಂತ್ರಜ್ಞಾನವನ್ನು ಸರ್ಕಾರ ಮತ್ತೆ ತರಲು ಹೊರಟಿರುವುದನ್ನು ರಾಜ್ಯ ರೈತಸಂಘ ಬಲವಾಗಿ ಖಂಡಿಸಿದೆ.
ಕೇಂದ್ರ ಮತ್ತು ರಾಜ್ಯ ಸರ್ಕಾರ ಕುಲಾಂತರಿ ಪ್ರಯೋಗ ಮಾಡಲು ಹೊರಟಿದೆ. ಈಗಾಗಲೇ ಮುಂದುವರೆದ ರಾಷ್ಟ್ರಗಳು ಈ ಕುಲಾಂತರಿ ತಂತ್ರಜ್ಞಾನದ ಆವಿಷ್ಕಾರವನ್ನು ತಮ್ಮ ದೇಶದಿಂದಲೇ ಓಡಿಸಿವೆ. ಆದರೆ, ಭಾರತ ಮಾತ್ರ ಇದನ್ನು ಸ್ವೀಕರಿಸುತ್ತಿರುವುದು ಅತ್ಯಂತ ದುರದೃಷ್ಟಕರ. ಭಾರತದ ರೈತರು ಇದನ್ನು ಖಡಾಖಂಡಿತವಾಗಿ ತಿರಸ್ಕರಿಸುತ್ತೇವೆ ಎಂದು ರೈತಸಂಘದ ರಾಜ್ಯಾಧ್ಯಕ್ಷ ಕೆ.ಟಿ.ಗಂಗಾಧರ್ ಪತ್ರಿಕಾಗೋಷ್ಟಿಯಲ್ಲಿ ಹೇಳಿದರು.
ಕುಲಾಂತರ ಪದ್ಧತಿ ಬಂಡವಾಳ ಶಾಹಿಗಳಿಗೆ ಮಣೆ ಹಾಕಿದಂತೆ. ಹಣದ ದಾಹಕ್ಕೆ, ದಾಸ್ಯಕ್ಕೆ, ಗುಲಾಮಗಿರಿಗೆ ಸರ್ಕಾರ ಶರಣಾಗುತ್ತಿರುವುದು ಸರಿಯಲ್ಲ. ಈ ಕುಲಾಂತರಿ ಪದ್ಧತಿ ಆಹಾರ ಮಾಲಿನ್ಯ, ಪರಿಸರ ಮಾಲಿನ್ಯದ ಜೊತೆಗೆ ರೈತರ ಮೂಲ ಬೇಸಾಯ ಪದ್ಧತಿಯನ್ನೇ ಕಸಿದುಕೊಂಡಂತಾಗುತ್ತದೆ. ಬಿ.ಟಿ. ತಂತ್ರಜ್ಞಾನದಿಂದ ಕೇವಲ ಪರಿಸರ ಮಾತ್ರ ನಾಶವಲ್ಲ. ಮನುಕುಲಕ್ಕೂ ತೊಂದರೆಯಾಗುತ್ತದೆ. ಈ ಹಿಂದೆ ಈಗಾಗಲೇ ಇದರ ವಿರುದ್ಧ ರೈತಸಂಘ ಹೋರಾಟ ಮಾಡಿದೆ ಎಂದರು.
ಪ್ರೊ. ನಂಜುಂಡಸ್ವಾಮಿಯವರು ಮೊದಲ ಬಾರಿ ಬಿ.ಟಿ. ಹತ್ತಿ ಬಂದಾಗ ನಾವು ಅವರ ಜೊತೆ ಸೇರಿಕೊಂಡು ಬಲವಾಗಿ ವಿರೋಧಿಸಿದ್ದೆವು ಮತ್ತು ಹತ್ತಿಯನ್ನು ಕಿತ್ತು ಸುಟ್ಟು ಹಾಕಿ ಉಗ್ರ ಪ್ರತಿಭಟನೆ ಮಾಡಿದ್ದೆವು. ಆದರೆ ಈಗ ಭಾರತ ಸರ್ಕಾರ ಈ ಬಿ.ಟಿ. ತಂತ್ರಜ್ಞಾನದ ಪ್ರಯೋಗವನ್ನು ಮಾಡಲು ಹೊರಟಿದೆ. ಭಾರತದ ಪ್ರಕೃತಿ, ಪರಿಸರ, ಆಹಾರ, ನೀರು, ವಾಯು ಇವೆಲ್ಲವನ್ನು ತಮ್ಮ ಹಿಡಿತದಲ್ಲಿ ಇಟ್ಟುಕೊಳ್ಳುವುದಕ್ಕಾಗಿಯೇ ಇಂತಹ ನೀಚ ಪ್ರಯತ್ನಗಳು ನಡೆಯುತ್ತಿವೆ. ಇದು ರೈತರ ಆತಂಕಕ್ಕೆ ಎಡೆಮಾಡಿಕೊಟ್ಟಿದೆ ಎಂದರು.ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಯಾವುದೇ ಕಾರಣಕ್ಕೂ ಈ ಕೊಳಕು ಕುಲಾಂತರಿ ವ್ಯವಸ್ಥೆಗೆ ಅವಕಾಶ ನೀಡಬಾರದು. ಪ್ರಧಾನ ಮಂತ್ರಿಯವರು ಒಂದುಕಡೆ ಕುಲಾಂತರಿಗೆ ಸಂಬಂಧಿಸಿದಂತೆ ಮತ್ತು ರೈತರ ಕೃಷಿ ಪದ್ಧತಿಗೆ ಸಂಬಂಧಿಸಿದಂತೆ ಮಾತನಾಡುವುದೇ ಬೇರೆ, ಆದರೆ ಇಂತಹ ವ್ಯವಸ್ಥೆಗೆ ಕಾನೂನಿನ ರಕ್ಷಣೆ ಕೊಡುವುದು ಇವರ ದ್ವಂಧ್ವ ನೀತಿಗೆ ಕಾರಣವಾಗಿದೆ ಎಂದರು.
ಪ್ರಪಂಚದ ಎಲ್ಲೆಡೆ ಕುಲಾಂತರಿ ತಂತ್ರಜ್ಞಾನ ಅಪಾಯಕಾರಿ ಮಾತ್ರವಲ್ಲ ಹಳಸಲು ತಂತ್ರಜ್ಞಾನವಾಗಿದೆ. ಯುರೋಪ್ನ ೨೮ಕ್ಕೂ ಹೆಚ್ಚು ದೇಶಗಳು ಇದನ್ನು ಒಪ್ಪಿಲ್ಲ. ಮತ್ತು ಕೇರಳ, ತಮಿಳುನಾಡು, ಬಿಹಾರ, ಪಶ್ಚಿಮಬಂಗಾಳ, ಮಧ್ಯಪ್ರದೇಶ, ಒರಿಸ್ಸಾ, ಛತ್ತೀಸ್ಗಡ್, ಗುಜರಾತ್ ರಾಜ್ಯಗಳು ಕೂಡ ಇದನ್ನು ವಿರೋಧಿಸುತ್ತಿವೆ. ಈ ಹಿನ್ನೆಲೆಯಲ್ಲಿ ಕರ್ನಾಟಕ ಸರ್ಕಾರ ಕೂಡ ಇದನ್ನು ತಿರಸ್ಕರಿಸಬೇಕು. ಇದರ ಅನಿವಾರ್ಯತೆಯಂತೂ ನಮಗಿಲ್ಲ. ಒಂದುಪಕ್ಷ ಇದನ್ನು ಜಾರಿಮಾಡಲು ಹೊರಟರೆ ರೈತರು ಬಹುದೊಡ್ಡ ಹೋರಾಟ ಮಾಡಬೇಕಾಗುತ್ತದೆ ಎಂದು ಎಚ್ಚರಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಪ್ರಮುಖರಾದ ವೀರೇಶ್, ಯಶವಂತರಾವ್ ಘೋರ್ಪಡೆ, ಸಣ್ಣರಂಗಪ್ಪ, ಹೆಚ್.ಪಿ. ಹಿರಣ್ಣಯ್ಯ, ಮೋಹನ್, ಜಗದೀಶ್ ನಾಯ್ಕ, ಪಾಂಡುರಂಗಪ್ಪ ಸೇರಿದಂತೆ ಹಲವರಿದ್ದರು.
ಜಿಲ್ಲಾಧಿಕಾರಿಗಳ ಮೂಲಕ ಮನವಿ
ರಾಜ್ಯ ರೈತಸಂಘ ಹಾಗೂ ಹಸಿರುಸೇನೆ ಸಾಮೂಹಿಕ ನಾಯಕತ್ವದಲ್ಲಿ ಜಿಲ್ಲಾಧಿಕಾರಿಗಳ ಮೂಲಕ ಕೇಂದ್ರ ಮತ್ತು ರಾಜ್ಯ ಸರ್ಕಾರಗಳಿಗೆ ಕುಲಾಂತರಿ ತಂತ್ರಜ್ಞಾನ ಪದ್ಧತಿಯನ್ನು ಕೂಡಲೇ ಕೈಬಿಡಬೇಕೆಂದು ಆಗ್ರಹಿಸಿ ಮನವಿ ಸಲ್ಲಿಸಲಾಯಿತು.