Malenadu Mitra
ರಾಜಕೀಯ ರಾಜ್ಯ ಶಿವಮೊಗ್ಗ ಸಾಗರ

ಸಾಗರದ ಹಾಲಿ-ಮಾಜಿ ಶಾಸಕರಿಂದ ಧರ್ಮಸ್ಥಳದಲ್ಲಿ ಆಣೆ -ಪ್ರಮಾಣ ,ಟೀಕೆಗೊಳಗಾದ ಹಾಲಪ್ಪ-ಬೇಳೂರು ನಡೆ

ಸಾರ್ವಜನಿಕ ವಲಯದಲ್ಲಿ ಟೀಕೆಗೊಳಪಟ್ಟಿದ್ದ ಸಾಗರದ ಹಾಲಿ ಹಾಗೂ ಮಾಜಿ ಶಾಸಕರ ನಡುವಿನ ಆಣೆ-ಪ್ರಮಾಣದ ಪ್ರಸಂಗ ಶನಿವಾರ ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ಸಮಾಪನಗೊಂಡಿದೆ. ಶಾಸಕ ಹರತಾಳು ಹಾಲಪ್ಪ ಅವರು ತಮ್ಮ ಮಿತ್ರ ವಿನಾಯಕ ಭಟ್ ಮತ್ತು ಸೋದರನ ಪುತ್ರ ರವಿ ಅವರೊಂದಿಗೆ ಶನಿವಾರ ಧರ್ಮಸ್ಥಳದಲ್ಲಿ ಪ್ರಮಾಣ ಮಾಡಿ ಧರ್ಮಾಧಿಕಾರಿ ಡಾ.ವೀರೇಂದ್ರ ಹೆಗ್ಗಡೆ ಅವರನ್ನು ಭೇಟಿ ಮಾಡಿ ತಮ್ಮ ಸಂಕಲ್ಪವನ್ನು ಅರಿಕೆ ಮಾಡಿಕೊಂಡರು. ಇದು ಆತ್ಮ ಸಾಕ್ಷಿಯ ವಿಚಾರವಾಗಿದ್ದು, ಅದರಂತೆ ನೀವು ನಿವೇದನೆ ಮಾಡಿಕೊಳ್ಳಿ ಎಂದು ಧರ್ಮಾಧಿಕಾರಿ ಹೇಳಿದರೆನ್ನಲಾಗಿದೆ.
ಈ ಸಂದರ್ಭ ಮಾತನಾಡಿದ ಹಾಲಪ್ಪ ಅವರು, ಮಾಜಿ ಶಾಸಕರು ಹಾಕಿದ ಸವಾಲು ಸ್ವೀಕರಿಸಿದ ನಾನು ಸ್ನೇಹಿತ ವಿನಾಯಕ ಮತ್ತು ರವಿ ಜತೆ ಬಂದು ಮರಳು ಲಾರಿ ಮಾಲೀಕರಿಂದ ಅಥವಾ ಕ್ವಾರಿಯವರಿಂದ ಹಣ ಪಡೆದಿಲ್ಲ ಮತ್ತು ತಿಂಗಳ ಮಾಮೂಲಿ ನಿಗದಿ ಮಾಡಿಲ್ಲ ಎಂದು ಹೇಳಿದರು.

ಬೇಳೂರು ಧರ್ಮಸ್ಥಳ ಭೇಟಿ

ಮಾಜಿ ಶಾಸಕ ಬೇಳೂರು ಗೋಪಾಲಕೃಷ್ಣ ಅವರೂ ಧರ್ಮಸ್ಥಳಕ್ಕೆ ಶನಿವಾರ ಭೇಟಿ ನೀಡಿದ್ದು, ಶಾಸಕರು ತಿಳಿವಳಿಕೆ ಪತ್ರ ನೀಡಿದಂತೆ ನಾನು ಮತ್ತು ನನ್ನ ಬೆಂಬಲಿಗರು ಬಂದಿದ್ದೇವೆ. ಆದರೆ ಅವರು ನಾವು ಬರುವ ಮುನ್ನವೇ ಬಂದು ಹೋಗಿದ್ದಾರೆ. ನಾನು ಪಲಾಯನವಾದಿಯಲ್ಲಿ ಹೇಳಿದಂತೆ ದೇಗುಲಕ್ಕೆ ಬಂದಿದ್ದು, ಅದರಂತೆ ನಡೆದುಕೊಳ್ಳುತ್ತೇವೆ. ಆಣೆ ಪ್ರಮಾಣ ಮುಖಾಮುಖಿಯಾಗಿಯೇ ಆಗಬೇಕಿತ್ತು. ಆದರೆ ಶಾಸಕರು ನಾನು ಬರುವ ಮುನ್ನವೇ ಹೋಗಿದ್ದಾರೆ ಎಂದು ಆರೋಪಿಸಿದ್ದಾರೆ.

ಸಾರ್ವಜನಿಕರಿಂದ ಟೀಕೆ

ಸೈದ್ಧಾಂತಿಕ ರಾಜಕಾರಣಕ್ಕೆ ಹೆಸರಾಗಿದ್ದ ಶಿವಮೊಗ್ಗದಲ್ಲಿ ಈ ರೀತಿಯ ಆಣೆ -ಪ್ರಮಾಣದ ರಾಜಕಾರಣಕ್ಕೆ ತೀವ್ರ ಟೀಕೆ ವ್ಯಕ್ತವಾಗಿದೆ. ಶಾಂತವೇರಿ ಗೋಪಾಲಗೌಡರು ಪ್ರತಿನಿಧಿಸಿದ್ದಂತಹ ಸಾಗರ ಕ್ಷೇತ್ರದ ಇಬ್ಬರು ಮುಖಂಡರು ತಮ್ಮ ರಾಜಜಕಾರಣಕ್ಕೆ ಭಕ್ತರ ಪುಣ್ಯಕ್ಷೇತ್ರ ಧರ್ಮಸ್ಥಳದ ಹೆಸರನ್ನು ಬಳಸಿಕೊಳ್ಳಬಾರದಿತ್ತು.ರಾಜಕೀಯದಲ್ಲಿ ಆರೋಪ ಪ್ರತ್ಯಾರೋಪ ಸುಳ್ಳು ಸೆಟೆ ಸಹಜ ಎಂಬ ಮಾತಿದೆ. ಆದರೆ ಜನರಿಗೆ ಮಾದರಿಯಾಗಬೇಕಿರುವ ಜನನಾಯಕರು ಹೀಗೆ ಆಣೆ ಪ್ರಮಾಣ ಮಾಡಿಕೊಂಡರೆ ಹೇಗೆ ಎಂಬ ಆಭಿಪ್ರಾಯ ವ್ಯಕ್ತವಾಗಿದೆ.

ಕ್ಷೇತ್ರದಲ್ಲಿ ಪ್ರಾಮಾಣಿಕವಾಗಿ ಜನಸೇವೆ ಮಾಡುವ ನನಗೆ ವಿರೋಧ ಪಕ್ಷದವರು ಮಾಡಿದ ಆರೋಪ ಸತ್ಯಕ್ಕೆ
ದೂರ ಎನಿಸಿದೆ. ನನ್ನ ಸತ್ಯ ಮತ್ತು ಪ್ರಾಮಾಣಿಕತೆಯನ್ನು ನಿರೂಪಿಸಲು ಅವರ ಸವಾಲಿನಂತೆ
ಧರ್ಮಸ್ಥಳಕ್ಕೆ ಬಂದು ಭಗವಂತನ ಸನ್ನಿಧಿಯಲ್ಲಿ ಪ್ರಮಾಣ ಮಾಡಿದ್ದೇನೆ.

-ಹರತಾಳು ಹಾಲಪ್ಪ, ಶಾಸಕರು, ಸಾಗರ

ನೋಟಿಸ್ ಕೊಟ್ಟಂತೆ ಅವರು ಇರಬೇಕಿತ್ತು. ಈಗ ನಾವು ಬರುವುದರೊಳಗೆ ಅವರು ಹೋಗಿದ್ದಾರೆ. ಧರ್ಮಕ್ಷೇತ್ರದಲ್ಲಿ
ನಾನೂ ಕೂಡಾ ಮಾತಿನಂತೆ ನಡೆದುಕೊಳ್ಳುತ್ತೇನೆ

ಬೇಳೂರು ಗೋಪಾಲಕೃಷ್ಣ, ಮಾಜಿ ಶಾಸಕ

Ad Widget

Related posts

ಮಹಿಳಾ ಅಧಿಕಾರಿಗೆ ನಿಂದನೆ ಖಂಡಿಸಿ ಪ್ರತಿಭಟನೆ

Malenadu Mirror Desk

ಮಲೆನಾಡಿಗೆ ಜನ ಸಾಗರ, ಜೋಗಕ್ಕೆ ಜೀವಕಳೆ

Malenadu Mirror Desk

ಜಾಹಿರಾತು ತಾರತಮ್ಯ ಖಂಡಿಸಿ ಸಂಪಾದಕರ ಪ್ರತಿಭಟನೆ

Malenadu Mirror Desk

Leave a Comment

error: Content is protected !! ಮಲೆನಾಡು ಮಿರರ್‌ನಲ್ಲಿ ಪ್ರಕಟಗೊಂಡ ಸುದ್ದಿ, ಲೇಖನ, ಫೊಟೊಗಳನ್ನುಪೂರ್ವಾನುಮತಿಯಿಲ್ಲದೆ ನಕಲು ಮಾಡುವುದು ಕಾನೂನುಬಾಹಿರವಾಗಿದೆ.