Malenadu Mitra
ರಾಜ್ಯ ಶಿವಮೊಗ್ಗ

ನ್ಯಾಯಾಲಯದ ಆದೇಶ ಪಾಲಸುತ್ತೇವೆ :ಆಡಳಿತಮಂಡಳಿ ಹಿಜಾಬ್ ತೆಗೆಯುವುದಿಲ್ಲ, ಬೇಕಿದ್ದರೆ ವಿಷ ಕುಡಿತೇವೆ: ವಿದ್ಯಾರ್ಥಿನಿಯರು

ಶಿವಮೊಗ್ಗ: ಪದವಿ ಕಾಲೇಜು ಮತ್ತು ಪಿಯು ತರಗತಿಗಳು ಬುಧವಾರದಿಂದ ಆರಂಭವಾಗುತ್ತಿರುವಂತೆಯೇ ನಗರದಲ್ಲಿ ಮತ್ತೆ ಹಿಜಾಬ್ ವಿವಾದ ಭುಗಿಲೆದ್ದಿದೆs ಕಳೆದ ವಾರ ವಿವಾದ ಭುಗಿಲೆದ್ದಿದ್ದ ಸರಕಾರಿ ಪದವಿಪೂರ್ವ ಹಾಗೂ ಪದವಿ ಕಾಲೇಜುಗಳಿಗೆ ಮುಂಜಾಗ್ರತಾ ಕ್ರಮವಾಗಿ ರಜೆ ಘೋಷಿಸಲಾಗಿತ್ತು.
ಆದರೆ ಖಾಸಗಿ ಪದವಿ ಕಾಲೇಜು, ಪಿಯು ಕಾಲೇಜುಗಳಲ್ಲೂ ಬುಧವಾರವೂ ಕಂಡುಬಂದಿತು. ಆಚಾರ್‍ಯ ತುಳಸಿ ಕಾಮರ್ಸ್ ಕಾಲೇಜಿನಲ್ಲಿ ವಿದ್ಯಾರ್ಥಿನಿಯರು ಹಿಜಾಬ್ ಧರಿಸಿ ಬಂದಿದ್ದು ಪ್ರಾಧ್ಯಾಪಕರು ಮತ್ತು ಪೊಲೀಸರು ಅವರನ್ನು ತರಗತಿಗೆ ಸೇರಿಸಲಿಲ್ಲ. ಸುಮಾರು ೨೦ ವಿದ್ಯಾರ್ಥಿನಿಯರು ಇದರಿಂದ ಮನೆಗೆ ವಾಪಸಾದರು.
ಕಾಲೇಜಿಗೆ ಪ್ರವೇಶಿಸಿದ ಈ ವಿದ್ಯಾರ್ಥಿನಿಯರಿಗೆ ತರಗತಿಗೆ ಬರಲು ಹಿಜಾಬ್ ತೆಗೆಯಲು ಸೂಚಿಸಲಾಗಿತ್ತು. ಆದರೆ ನಿರಾಕರಿಸಿದ್ದರಿಂದಾಗಿ ಮನೆಗೆ ಕಳುಹಿಸಲಾಯಿತು.
ಡಿವಿಎಸ್ ಪದವಿ ಮತ್ತು ಪಿಯು ಕಾಲೇಜಿನಲ್ಲಿ ವಿವಾದ ತಾರಕಕ್ಕೇರಿತು. ವಿದ್ಯಾರ್ಥಿನಿಯರು ಹಿಜಾಬ್ ಪರವೇ ಮಾತನಾಡಿ ಆಕ್ರೋಶ ವ್ಯಕ್ತಪಡಿಸಿದರು. ಸುಮಾರು ೨೫ರಷ್ಟು ವಿದ್ಯಾರ್ಥಿನಿಯರು ಹಿಜಾಬ್ ತೆಗೆಯಲು ಸಾಧ್ಯವಿಲ್ಲ. ಬೇಕಾದರೆ ವಿಷ ಕುಡಿಯುತ್ತೇವೆ ಎಂದು ಆರ್ಭಟಿಸಿದರು. ಆದರೆ ಹಿಜಾಬ್ ತೆಗೆಯದೆ ಒಳಪ್ರವೇಶ ಸಾಧ್ಯವಿಲ್ಲ ಎಂದು ಆಡಳಿತ ಮಂಡಳಿ ಮತ್ತು ಪೊಲೀಸರು ಪಟ್ಟುಹಿಡಿದರು. ಸುಮಾರು ಅರ್ಧ ಗಂಟೆ ಹೈಡ್ರಾಮಾವೇ ನಡೆಯಿತು. ಒಂದು ಹಂತದಲ್ಲಿ ಭಾರೀ ವಾಗ್ವಾದ ನಡೆಯಿತು. ಆದರೆ ಆಡಳಿತ ಮಂಡಳಿಯವರು ಜಗ್ಗಲಿಲ್ಲ. ಆನಂತರ ಇವರೆಲ್ಲ ಮನೆಗೆ ವಾಪಸಾದರು.
ಈ ಮಧ್ಯೆ ಜಿಲ್ಲಾಧಿಕಾರಿ ಡಾ. ಸೆಲ್ವಮಣಿ ಮತ್ತು ಎಸ್ ಪಿ ಲಕ್ಷ್ಮೀಪ್ರಸಾದ್ ಸರ್ಕಾರಿ ಕಾಲೇಜುಗಳಿಗೆ ಭೇಟಿ ನೀಡಿ ಪರಿಸ್ಥಿತಿ ಪರಿಶೀಲಿಸಿದರು. ಶಿಸ್ತು, ಶಾಂತಿ ಕಾಪಾಡಿಕೊಳ್ಳುವಂತೆ ಶಿಕ್ಷಕರಿಗೆ ಮತ್ತು ಆಡಳಿತ ಮಂಡಳಿ ಸದಸ್ಯರಿಗೆ ಸೂಚಿಸಿದರಲ್ಲದೆ, ಗಲಾಟೆ ಆಗದಂತೆ ನೋಡಿಕೊಳ್ಳಬೇಕು. ಹೊರಗಿನಿಂದ ಬರುವವರಿಗೆ ಪ್ರವೇಶ ಕೊಡಬಾರದು, ಪಾಲಕರನ್ನು ಒಳಬಿಡಬಾರದು. ೨೦೦ ಮೀಟರ್ ದೂರದಿಂದಲೇ ವಾಪಸ್ ಕಳಿಸಿ ಎಂದು ಸೂಚಿಸಿದರು. ಆನಂತರ ಎಟಿಎನ್‌ಸಿಸಿ ಕಾಲೇಜಿಗೂ ಭೇಟಿ ನೀಡಿ ಮಾಹಿತಿ ಪಡೆದುಕೊಂಡರು.

ವಿದ್ಯಾರ್ಥಿನಿಯರ ಆಕ್ರೋಶ

ನಾವು ಕೊಲೆ ಮಾಡೋಕೆ ಬಂದಿಲ್ಲ. ಓದೋಕೆ ಬಂದಿದೀವಿ. ಹಿಜಾಬ್ ಧರಿಸಿಯೇ ಹೋಗ್ತೀವಿ.ಯಾವ ಕಾರಣಕ್ಕೂ ಹಿಜಾಬ್ ತೆಗೆಯೊಲ್ಲ. ಇದು ಡಿವಿಎಸ್ ಕಾಲೇಜಿನ ಹಿಜಾಬ್ ಧರಿಸಿದ ವಿದ್ಯಾರ್ಥಿನಿಯ ಮಾತು. ಪ್ರಾಣ ಬೇಕಾದರೂ ಬಿಡ್ತೇವೆ. ಹಿಜಾಬ್ ತೆಗೆಯಲ್ಲ ಎಂದಳು ಇನ್ನೊಬ್ಬ ವಿದ್ಯಾರ್ಥಿನಿ. ಹರಿದ ಬಟ್ಟೆ ಹಾಕಿಕೊಂಡು ಬಂದವರಿಗೆ ಅವಕಾಶ ಕೊಡುತ್ತೀರಿ, ನಾವು ಮೈತುಂಬಾ ಬಟ್ಟೆ ಧರಿಸಿ ಬಂದರೂ ಒಳಗೆ ಬಿಡೊಲ್ಲ ಎನ್ನುತ್ತೀರಿ. ಶಿಕ್ಷಣ ಎಲ್ಲರಿಗೂ ಬೇಕೆನ್ನುವುದನ್ನು ಅರ್ಥ ಮಾಡಿಕೊಳ್ಳಿ ಎಂದು ಇನ್ನೊಬ್ಬ ವಿದ್ಯಾರ್ಥಿನಿ ಚೀರಾಡಿದಳು. ಮುಸ್ಲಿಮ್ ಹುಡುಗಿಯರು ಓದೋಕೆ ಬಂದರೆ ಗೌರವ ಕೊಡಬೇಕು. ಹಿಜಾಬ್ ಬೇಡ ಎನ್ನುತ್ತೀರಿ. ಮುಸ್ಲೀಮ್ ಆಗಿ ಹಿಜಾಬ್ ತೆಗೆಯಬೇಕಾ. ಯಾವುದೇ ಕಾರಣಕ್ಕೂ ತೆಗೆಯೊಲ್ಲ. ಕೋರ್ಟ್ ಆರ್ಡರ್ ಎಂದು ಹೇಳಿ ನಮ್ಮನ್ನು ಒಳಗೆ ಬಿಡುತ್ತಿಲ್ಲ. ನಮ್ಮ ಶಿಕ್ಷಣಕ್ಕೆ ಅಡ್ಡಿಪಡಿಸುತ್ತಿದ್ದೀರಿ ಎಂದು ಆಕ್ರೋಶ ವ್ಯಕ್ತಪಡಿಸಿದಳು.

ಹಿಜಾಬ್ ಧರಿಸಿದ ವಿದ್ಯಾರ್ಥಿಗಳಿಗೆ ತರಗತಿಗೆ ಪ್ರವೇಶ ನೀಡದೆ ರಾಜ್ಯ ಹೈಕೋರ್ಟ್ ನೀಡಿದ ಆದೇಶವನ್ನಷ್ಟೇ ನಾವು ಪಾಲಿಸಿದ್ದೇವೆ. ನಮ್ಮ ಸಂಸ್ಥೆಯಲ್ಲಿ ಈವರೆಗೆ ಯಾವ ರೀತಿಯ ತಾರತಮ್ಯ ಮಾಡಿಲ್ಲ. ಎಲ್ಲರನ್ನೂ ಒಂದಾಗಿ ಕಾಣುವ ಸಂಸ್ಥೆ. ಏಕೆಂದರೆ ಸಂಸ್ಥೆಯನ್ನು ಆರಂಭಿಸಿದವರು ಸ್ವಾತಂತ್ರ್ಯ ಹೋರಾಟಗಾರರು. ಇಲ್ಲಿಯವರೆಗೆ ಯಾವ ಸಮಸ್ಯೆಯೂ ನಮಗೆದುರಾಗಿರಲಿಲ್ಲ. ಈಗ ಹಿಜಾಬ್ ಎದುರಾಗಿದೆ. ಅದರೆ ಹೈಕೋರ್ಟ್ ಆದೇಶವನ್ನು ನಾವು ಪಾಲಿಸಲೇಬೇಕು. ಇದರಲ್ಲಿ ಎರಡು ಮಾತಿಲ್ಲ.

  • ಅನಿಲ್‌ಕುಮಾರ್, ಪ್ರಾಚಾರ್‍ಯರು, ಡಿವಿಎಸ್ ಪದವಿ ಕಾಲೇಜು.
Ad Widget

Related posts

ಶಿಕ್ಷಣ ವ್ಯವಸ್ಥೆಯಲ್ಲಿ ಮಲೆನಾಡು ಗ್ರಾಮೀಣ ಭಾಷೆಗೆ ಆದ್ಯತೆ ಅಗತ್ಯ : ಡಾ. ಮೋಹನ್ ಚಂದ್ರಗುತ್ತಿ

Malenadu Mirror Desk

ಪಶ್ಚಿಮಘಟ್ಟದಲ್ಲಿ ಕಾಳಿಂಗ ಸರ್ಪದ ಸಂತತಿ ಕಡಿಮೆಯಾಗುತ್ತಿದೆ

Malenadu Mirror Desk

ಹಿನ್ನೀರಿನಲ್ಲಿ ನಾಪತ್ತೆಯಾಗಿದ್ದ ಮೂವರ ಶವ ಪತ್ತೆ: ಸ್ಥಳದಲ್ಲೇ ಪೋಸ್ಟ್ ಮಾರ್ಟಮ್ ಗೆ ವ್ಯವಸ್ಥೆ

Malenadu Mirror Desk

Leave a Comment

error: Content is protected !! ಮಲೆನಾಡು ಮಿರರ್‌ನಲ್ಲಿ ಪ್ರಕಟಗೊಂಡ ಸುದ್ದಿ, ಲೇಖನ, ಫೊಟೊಗಳನ್ನುಪೂರ್ವಾನುಮತಿಯಿಲ್ಲದೆ ನಕಲು ಮಾಡುವುದು ಕಾನೂನುಬಾಹಿರವಾಗಿದೆ.