ಪ್ರಸ್ತುತ ದಿನಮಾನದಲ್ಲಿ ನೈತಿಕ ಶಿಕ್ಷಣದ ಅಗತ್ಯವಿದೆ. ನಮ್ಮ ಸಂವಿದಾನದಡಿಯಲ್ಲಿ ಸಿಗುವ ನ್ಯಾಯ ತೀರ್ಮಾನಕ್ಕೂ ಬೆಲೆ ಸಿಗದಂತಹ ಪರಿಸ್ಥಿತಿ ದೇಶಕ್ಕೇ ಆದ ಅವಮಾನ ಎಂಬುದನ್ನು ಮನಗಾಣಬೇಕಿದೆ ಎಂದು ೧೬ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷ ಡಾ.ಕೆಳದಿ ಗುಂಡಾ ಜೋಯ್ಸ್ ಅಭಿಪ್ರಾಯಪಟ್ಟರು.
ಶಿವಮೊಗ್ಗ ನಗರದ ಗೋಪಿಶೆಟ್ಟಿಕೊಪ್ಪದ ಸಾಹಿತ್ಯ ಗ್ರಾಮದಲ್ಲಿ ಆರಂಭವಾಗಿರುವ ೧೬ ನೇ ಜಿ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷವಹಿಸಿ ಅವರು ಮಾತನಾಡಿದರು.
ಧರ್ಮದ ಚೌಕಟ್ಟು ಮನೆಯಲ್ಲಿ ಇಟ್ಟುಕೊಂಡು ಮನೆಯಿಂದ ಹೊರಗೆ ಎಲ್ಲರೂ ಒಂದು ಎಂಬ ಭಾವನೆಯನ್ನು ರೂಪಿಸುವಂತಹ ಶಿಕ್ಷಣ ಅಗತ್ಯವಿದೆ. ಸಮುದಾಯವೊಂದನ್ನು ಓಲೈಸುವ ಪರಿಪಾಠದಿಂದ ಹೊರಬಂದು ಮಕ್ಕಳ ಸರ್ವತೋಮುಖ ಅಭಿವೃದ್ಧಿಗೆ ಪೂರಕವಾದಂತಹ ಮತ್ತು ನಮ್ಮ ನಾಡು, ನುಡಿ, ಭಾಷೆಯನ್ನು ಪರಿಚಯಿಸುವ, ಪ್ರೀತಿಸುವಂತಹ ಶಿಕ್ಷಣ ದೊರೆಯುವಂತಾಗಬೇಕಿದೆ ಎಂದರು.
ಶಿವಮೊಗ್ಗ ಜಿಲ್ಲೆಯ ಕೆಳದಿ ಇತಿಹಾಸ ಮತ್ತು ಸಂಸ್ಕೃತಿಯು ದೇಶ ವಿದೇಶಗಳಿಗೆ ಖ್ಯಾತಿ ತರಲು ಸಾಮರ್ಥ್ಯ ಹೊಂದಿದೆ. ಜಪಾನ್, ಜರ್ಮನಿ, ಇಟಲಿ, ಲಂಡನ್ ಮೊದಲುಗೊಂಡು ದೇಶ ವಿದೇಶದ ವಿದ್ವಾಂಸರು ಬೇರೆ ಬೇರೆ ವಿಶ್ವವಿದ್ಯಾಲಯಗಳಲ್ಲಿ ಕೆಳದಿ ಇತಿಹಾಸವನ್ನಾಧರಿಸಿ ಮಹಾಪ್ರಬಂಧ ಸಾದರಪಡಿಸಿದ್ದು, ಕನ್ನಡಿಗರಿಗೆ ಅರಿವಿಲ್ಲ. ಇದುವರೆಗೆ ೩೫ಕ್ಕೂ ಹೆಚ್ಚು ಪಿಹೆಚ್.ಡಿ ಪದವಿ ಘೋಷಿಸಲಾಗಿದ್ದು ಅದರಲ್ಲಿ ಕೇವಲ ಇಬ್ಬರ ಮಹಾಪ್ರಬಂಧಗಳು ಕನ್ನಡದಲ್ಲಿ ಪ್ರಕಟವಾಗಿವೆ. ಇಟಲಿ ಮ್ಯೂಜಿಯಂನಲ್ಲಿ ಡೆಲ್ಲವಲ್ಲೆಯು ರಚಿಸಿದ ಕೆಳದಿ ಇತಿಹಾಸ ಇಟಲಿ ಭಾಷೆಯಲ್ಲಿ ಹಸ್ತಪ್ರತಿಯಲ್ಲಿದೆ ಎಂದರು.
೧೫-೧೬ನೇ ಶತಮಾನದಲ್ಲಿ ಸುಮಾರು ೧೦ ಜನ ವಿದೇಶೀ ಪ್ರವಾಸಿಗಳು ಈ ಜಿಲ್ಲೆಗೆ ಭೇಟಿಯಿತ್ತು ರಚಿಸಿದ ಪ್ರವಾಸಿ ಕಥನಗಳು ಪ್ರಕಟವಾಗಬೇಕಿವೆ. ಪ್ರಕೃತಿಯು ಶಿವಮೊಗ್ಗ ಜಿಲ್ಲೆಗೆ ವಿಶ್ವವಿಖ್ಯಾತ ಜೋಗ ಜಲಪಾತವನ್ನು ನೀಡಿದೆ. ರಾಜ್ಯಕ್ಕೇ ಬೆಳಕು, ಆರ್ಥಿಕ ಸೌಲಭ್ಯ ನೀಡುವ ಇದನ್ನು ವಿಶ್ವೇಶ್ವರಯ್ಯನವರು ತೋರಿಸಿಕೊಟ್ಟಿದ್ದಾರೆ. ವಿದೇಶೀ ಕವಿಗಳು ಜೋಗವನ್ನು ಪ್ರಶಂಸಿಸಿದ್ದಾರೆ. ಉಡುಗಣಿ ಅಕ್ಕಮಹಾದೇವಿ ಕ್ಷೇತ್ರ, ತಾಳಗುಂದ, ಕೆಳದಿ ಇಕ್ಕೇರಿ, ಹಳೆನಗರ, ಕೌಲೇದುರ್ಗ, ಹೊಸಗುಂದ, ನಾಡಕಲಸಿ, ಆಗುಂಬೆ, ಈಸೂರು, ಹೈದರಾಲಿ ಓಡಿಹೋಗಿದ್ದ ಹುರಳಿಗುಡ್ಡ, ಶಿವಪ್ಪನಾಯಕನ ಅರಮನೆ, ವರದಪುರ, ವರದಾಮೂಲ, ಬಳ್ಳಿಗಾವಿ, ಬಂದಳಿಕೆ, ಹುಂಚ ಮೊದಲಾದ ಸ್ಥಳಗಳು ಆಕರ್ಷಣೀಯವೆನಿಸಿವೆ ಎಂದು ತಿಳಿಸಿದರು.
ರಾಜ್ಯದಲ್ಲಿ ಹೆಚ್ಚು ಪ್ರವಾಸಿ ತಾಣವಿರುವುದು ಶಿವಮೊಗ್ಗ ಜಿಲ್ಲೆಯಲ್ಲಿ ಎಂಬುದು ಹೆಮ್ಮೆಯ ವಿಚಾರ. ವರ್ತುಲ ಪ್ರವಾಸೋಧ್ಯಮವನ್ನು ಬೆಳೆಸುವುದರ ಮೂಲಕ ರಾಜ್ಯದ ಆರ್ಥಿಕ ಮಟ್ಟವನ್ನೂ ಹೆಚ್ಚಿಸಿಕೊಳ್ಳಲು ಅವಕಾಶವಿದ್ದು ಈ ಕುರಿತಂತೆ ಸರ್ಕಾರ ಕ್ರಮ ಕೈಗೊಳ್ಳಬೇಕಿದೆ. ಕನ್ನಡದ ಮೊದಲ ನೆಲೆ ಎನಿಸಿರುವ ಬಂದಳಿಕೆ ಮತ್ತು ಕೆಳದಿ ಎರಡನೇ ರಾಜಧಾನಿ ಇಕ್ಕೇರಿಯಲ್ಲಿ ಉತ್ಖನನ ನಡೆಸುವುದರ ಮೂಲಕ ಜಿಲ್ಲೆಯ ಇತಿಹಾಸಕ್ಕೆ ಮೆರುಗು ತರುವ ಪ್ರಯತ್ನ ಆಗಬೇಕಿದೆ
–ಗುಂಡಾಜೋಯ್ಸ್ , ಸಮ್ಮೇಳನಾಧ್ಯಕ್ಷ
ಕನ್ನಡ ಮಾತನಾಡಲು ನಾಚಿಕೆ ಬೇಡ: ಕೃಷ್ಣೇಗೌಡ
ಕನ್ನಡ ಭಾಷೆ ಮಾತನಾಡಲು ಯಾವುದೇ ನಾಚಿಕೆ, ಅಂಜಿಕೆ, ಕೀಳರಿಮೆಯೂ ಬೇಡ. ಕನ್ನಡ ಭಾಷೆಯ ಮೂಲಕವೇ ನಾವು ಜಗತ್ತನ್ನು ನೋಡಬೇಕಾಗಿದೆ. ಕನ್ನಡಿಗರಿಗೆ ಕನ್ನಡ ಬಿಟ್ಟು ಬೇರೆ ಜೀವವೇ ಇಲ್ಲ ಎಂದು ಸಾಹಿತಿ, ಸಾಂಸ್ಕೃತಿಕ ಚಿಂತಕ ಪ್ರೊ. ಕೃಷ್ಣೇಗೌಡ ಹೇಳಿದರು.
ಸಾಹಿತ್ಯ ಸಮ್ಮೇಳನ ಉದ್ಘಾಟಿಸಿ ಮಾತನಾಡಿ, ಇಂಗ್ಲಿಷ್ ಭಾಷೆಯ ಮೋಹ ನಮ್ಮನ್ನು ಆವರಿಸಿಕೊಂಡಿದೆ. ಅಲ್ಲದೇ, ಅಮಲನ್ನೂ ಏರಿಸಿದೆ. ಅದು ಶ್ರೇಷ್ಠ ಎಂಬ ಭಾವನೆ ನಮ್ಮೊಳಗೆ ಬಂದುಬಿಟ್ಟಿದೆ. ಆದರೆ, ಕನ್ನಡ ಭಾಷೆ ಧನ, ಧಾನ್ಯ ಅಲ್ಲದೇ ಮಾನ್ಯವನ್ನು ಕೂಡ ಮಾಡುತ್ತದೆ. ಇಂಗ್ಲಿಷ್ ಭಾಷೆಯನ್ನು ನಮ್ಮ ಕಿವಿ ಕೇಳಿಸಿಕೊಳ್ಳುತ್ತದೆ ಅಷ್ಟೇ. ಜಗತ್ತಿನ ಪ್ರಮುಖ ೩೦ ಭಾಷೆಗಳಲ್ಲಿ ಕನ್ನಡವೂ ಒಂದು ಎಂಬುದು ನಮ್ಮ ಹೆಮ್ಮೆಯಾಗಿದೆ ಎಂದು ಹೇಳಿದರು.
ಮನಸ್ಸನ್ನು ಒಡೆಯುವ ಭಾಷೆ ನಮಗೆ ಬೇಕಿಲ್ಲ. ಒಬ್ಬ ಕವಿ ಹೇಳಿ ದಂತೆ ಬೆಳಕು ಹಚ್ಚುವುದು ಅಷ್ಟು ಸುಲಭವಲ್ಲ. ಆದರೆ, ಬೆಂಕಿ ಹಚ್ಚುವುದು ತುಂಬಾ ಸುಲಭ. ಕನ್ನಡ ಬಿಟ್ಟು ಬೇರೆ ಜೀವ ಇಲ್ಲ ಎಂಬುದನ್ನು ಸಾರಿ ಹೇಳುತ್ತವೆ ಎಂದರು.
ಆಶಯ ಭಾಷಣ ಮಾಡಿದ ಜಿ ಕಸಾಪ ಅಧ್ಯಕ್ಷ ಡಿ. ಮಂಜುನಾಥ್, ಇಂದು ಕನ್ನಡ ಭಾಷೆಗೆ ಸಂಬಂಧಿಸಿದಂತೆ ವಿಶ್ವಾಸ ಇಲ್ಲದ ವಾತಾವರಣ ಮೂಡುತ್ತಿದೆ. ಕನ್ನಡ ಭಾಷೆ ಉಳಿಯುತ್ತದೆಯೇ ಎಂಬ ಪ್ರಶ್ನೆಯೇ ನಮ್ಮನ್ನು ಬಹುವಾಗಿ ಕಾಡುತ್ತಿದೆ ಎಂದರು.
ನಿಕಟಪೂರ್ವ ಕಸಾಪ ಸಮ್ಮೇಳನಾಧ್ಯಕ್ಷೆ ಡಾ. ವಿಜಯಾದೇವಿ ಮಾತನಾಡಿ, ಕನ್ನಡ ಕಟ್ಟುವ ಕೆಲಸವನ್ನು ನಾವು ಮಾಡಬೇಕಾಗಿದೆ. ಕನ್ನಡಕ್ಕೆ ತನ್ನದೇ ಆದ ಸಂವಿಧಾನ, ಭವ್ಯತೆ, ಅಭಿಮಾನ ಇದೆ. ಭಾಷೆಯ ಬಗ್ಗೆ ನಿರಾಕರಣೆ ಬೇಡ ಎಂದರು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಉಪ ನಿರ್ದೇಶಕ ಉಮೇಶ್, ಕಸಾಪ ತಾಲೂಕು ಅಧ್ಯಕ್ಷರಾದ ಮಹಾದೇವಿ, ಹೆಚ್.ಎಸ್. ರಘು, ಟಿ.ಕೆ. ರಮೇಶ್ ಶೆಟ್ಟಿ, ಪ್ರಮುಖರಾದ ಮಹಾಬಲೇಶ ಹೆಗ್ಡೆ, ರಮೇಶ್ ಬಾಬು, ರಾಮಲಿಂಗಪ್ಪ ಇದ್ದರು. ಎಸ್. ಶಿವಮೂರ್ತಿ ಸ್ವಾಗತಿಸಿದರು.