Malenadu Mitra
ರಾಜ್ಯ ಶಿವಮೊಗ್ಗ

ಅರಣ್ಯ ಹಕ್ಕು ಕಾಯ್ದೆ ಸರಳೀಕರಣಗೊಳಿಸಬೇಕು, ತಿದ್ದುಪಡಿ ಮಾಡಲು ಕೇಂದ್ರ ಸರಕಾರಕ್ಕೆ ಶಿಫಾರಸು ಮಾಡುವ ಅನಿವಾರ್ಯತೆ ಇದೆ : ಕೆ.ಎಸ್.ಗುರುಮೂರ್ತಿ

ಮಲೆನಾಡಿನ ಅಸಂಖ್ಯಾತ ರೈತರು ಹಲವು ದಶಕಗಳಿಂದ ಉಳುಮೆ ಮಾಡಿಕೊಂಡು ಬರುತ್ತಿದ್ದ ಜಮೀನಿಗೆ ಹಕ್ಕುಪತ್ರ ನೀಡಿ, ಸಕ್ರಮಗೊಳಿಸಿಕೊಡುವಂತೆ ಅರಣ್ಯಹಕ್ಕು ಕಾಯಿದೆಯಡಿ ಸಲ್ಲಿಸಲಾದ ಅರ್ಜಿಗಳಿಗೆ ೭೫ವರ್ಷಗಳ ಹಿಂದಿನ ದಾಖಲೆಗಳನ್ನು ಒದಗಿಸುವಂತೆ ಸರ್ಕಾರವು ನಿಗಧಿಪಡಿಸಿರುವ ನಿಬಂಧನೆಯನ್ನು ಸರಳೀಕರಣಗೊಳಿಸಿ, ಅರ್ಹರಿಗೆ ಭೂಮಿಯ ಹಕ್ಕುಪತ್ರ ನೀಡಲು ಇರುವ ಗೊಂದಲ ನಿವಾರಣೆಗೊಳಿಸುವಲ್ಲಿ ಕಾಯ್ದೆಗೆ ತಿದ್ದುಪಡಿ ತರುವ ಅನಿವಾರ್ಯತೆ ಇದೆ ಎಂದು ಮಲೆನಾಡು ಪ್ರದೇಶ ಅಭಿವೃದ್ಧಿ ಮಂಡಳಿಯ ಅಧ್ಯಕ್ಷ ಕೆ.ಎಸ್.ಗುರುಮೂರ್ತಿ ಅವರು ಹೇಳಿದರು.
ಸೋಮವಾರ ಮಲೆನಾಡು ಪ್ರದೇಶಾಭಿವೃದ್ಧಿ ಮಂಡಳಿಯ ಸರ್ವ ಸದಸ್ಯರ ಮಹಾಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಮಲೆನಾಡಿನ ಭೂ ಸಮಸ್ಯೆಗೆ ಶಾಶ್ವತ ಪರಿಹಾರ ದೊರೆಯಬೇಕು. ಹಕ್ಕುಪತ್ರ ನೀಡಲು ೭೫ವರ್ಷಗಳ ಬದಲಾಗಿ ೨೫ವರ್ಷಗಳ ದಾಖಲೆಗಳನ್ನು ಒದಗಿಸಲು ಅನುಮತಿ ನೀಡಬೇಕು ಎಂದ ಅವರು, ಈ ಕಾಯ್ದೆಯ ತಿದ್ದುಪಡಿಗೆ ಸಂಬಂಧಿಸಿದಂತೆ ಮಲೆನಾಡು ಮತ್ತು ಬಯಲುಸೀಮೆ ವ್ಯಾಪ್ತಿಯಲ್ಲಿನ ಶಾಸಕರು ಸದನದಲ್ಲಿ ಗಂಭೀರವಾಗಿ ಸಮಾಲೋಚನೆ ನಡೆಸುವ ಅಗತ್ಯವಿದೆ ಎಂದರು.
ಮಲೆನಾಡಿನ ಜ್ವಲಂತ ಸಮಸ್ಯೆಗಳಿಗೆ ಸಕಾಲಿಕ ಪರಿಹಾರ ಕಂಡುಕೊಳ್ಳಲು ಅನುಕೂಲವಾಗುವಂತೆ ಗಂಭೀರ ವಿಷಯಗಳನ್ನು ಮಂಡಳಿಯ ವ್ಯಾಪ್ತಿಗೊಳಪಡಿಸಬೇಕು. ಮಲೆನಾಡಿನ ಪರಿಸರ ಸಂರಕ್ಷಣೆ ಜೊತೆಗೆ ನಿರಂತರವಾಗಿ ಅಭಿವೃದ್ಧಿ ಕಾರ್ಯಗಳೂ ನಡೆಯಬೇಕು ಎಂದ ಅವರು ಮಂಡಳಿಯು ಪ್ರಸಕ್ತ ಸಾಲಿನಲ್ಲಿ ೩೫೦.೦೦ಕೋಟಿ ರೂ.ಗಳಿಗೆ ಪ್ರಸ್ತಾವನೆ ಸಲ್ಲಿಸಿದ್ದು, ಅನುದಾನ ಬಿಡುಗಡೆಗೊಳಿಸುವಂತೆ ಸರ್ಕಾರಕ್ಕೆ ಈಗಾಗಲೇ ಪ್ರಸ್ತಾವನೆ ಸಲ್ಲಿಸಲಾಗಿದೆ. ಈ ಸಂಬಂಧ ಪ್ರಾಧಿಕಾರದ ಎಲ್ಲಾ ಶಾಸಕರು ಹಾಗೂ ನಾಮನಿರ್ದೇಶಿತ ಸದಸ್ಯರ ನಿಯೋಗದೊಂದಿಗೆ ಶೀಘ್ರದಲ್ಲಿ ಮಾನ್ಯ ಮುಖ್ಯಮಂತ್ರಿಗಳನ್ನು ಖುದ್ದು ಭೇಟಿ ಮಾಡಿ ಅನುದಾನ ಮಂಜೂರು ಮಾಡುವಂತೆ ಒತ್ತಾಯಿಸಲಾಗುವುದು ಎಂದರು.
ಕಳೆದ ಮಾರ್ಚ್ ಮಾಸಾಂತ್ಯದವರೆಗೆ ಒಟ್ಟು ೪೦೫ಕಾಮಗಾರಿಗಳನ್ನು ಪೂರ್ಣಗೊಳಿಸಿ, ೨೮೧೯.೦೭ಲಕ್ಷ ರೂ.ಗಳನ್ನು ಖರ್ಚು ಮಾಡಲಾಗಿದೆ. ಉಳಿದ ೨೩೬ಕಾಮಗಾರಿಗಳಲ್ಲಿ ೫೦ಕಾಮಗಾರಿಗಳ ಬದಲಾವಣೆ, ಸ್ಥಳ ತಕರಾರು, ಮುಂತಾದ ಕಾರಣಗಳಿಂದ ಆಡಳಿತಾತ್ಮಕ ಅನುಮೋದನೆಗೆ ಬಾಕಿ ಉಳಿದಿವೆ. ಉಳಿದ ೧೮೬ ಕಾಮಗಾರಿಗಳು ವಿವಿಧ ಹಂತದಲ್ಲಿ ಪ್ರಗತಿಯಲ್ಲಿದ್ದು, ಮುಂದಿನ ೦೨ತಿಂಗಳ ಅವಧಿಯಲ್ಲಿ ಪೂರ್ಣಗೊಳ್ಳಲಿವೆ ಎಂದರು.
ಸಭೆಯಲ್ಲಿ ಉಪಸ್ಥಿತರಿದ್ದ ಶಾಸಕ ಹಾಗೂ ಪ್ರಾಧಿಕಾರದ ಮಾಜಿ ಅಧ್ಯಕ್ಷ ರಾಜುಗೌಡ ಅವರು ಮಾತನಾಡಿ, ಅಧ್ಯಕ್ಷರ ವಿವೇಚನಾ ಕೋಟಾದಡಿಯಲ್ಲಿ ಮಂಡಳಿಯ ನಾಮನಿರ್ದೇಶಿತ ಸದಸ್ಯರ ಮನವಿಯನ್ನು ಪುರಸ್ಕರಿಸಬೇಕು. ಅಂತೆಯೇ ಅಲ್ಪಪ್ರಮಾಣದ ಅನುದಾನವನ್ನು ಮೀಸಲಿಡುವಂತೆ ಅಧ್ಯಕ್ಷರಿಗೆ ಮನವಿ ಮಾಡಿದರು.

ಈ ಹಿಂದಿನ ಅವಧಿಗೆ ಸಂಬಂಧಿಸಿದಂತೆ ಹೆಚ್ಚುವರಿಯಾಗಿ ಅನುದಾನ ಬಿಡುಗಡೆಗೊಳಿಸುವಂತೆ ಸರ್ಕಾರಕ್ಕೆ ಮನವಿ ಸಲ್ಲಿಸಬೇಕು. ಅಲ್ಲದೇ ಕಳೆದ ಹಣಕಾಸು ವರ್ಷದಲ್ಲಿ ಬಿಡುಗಡೆಯಾದ ಅನುದಾನವನ್ನು ಬಳಸಿಕೊಳ್ಳದಿರುವ ಬಗ್ಗೆ ಬೇಸರ ವ್ಯಕ್ತಪಡಿಸಿದ ಅವರು, ಆಯಾ ಕ್ಷೇತ್ರಗಳ ಶಾಸಕರು ಹಾಗೂ ಅಧಿಕಾರಿಗಳನ್ನು ಕರೆದು ಸಮಾಲೋಚನೆ ನಡೆಸಿ, ಅನುದಾನವನ್ನು ಸದ್ಬಳಕೆ ಮಾಡಿಕೊಳ್ಳಲು ಸೂಚಿಸುವಂತೆ ತಿಳಿಸಿದರು.
ಸಭೆಯಲ್ಲಿ ಉಪಸ್ಥಿತರಿದ್ದ ಪ್ರಾಧಿಕಾರದ ಕಾರ್ಯದರ್ಶಿ ಕೆ.ಎಸ್.ಮಣಿ ಅವರು ಮಾತನಾಡಿ, ತಮ್ಮ ಕಾರ್ಯಕ್ಷೇತ್ರಗಳಲ್ಲಿ ಕಾಮಗಾರಿಗಳನ್ನು ಕೈಗೊಳ್ಳಲು ಪ್ರಸ್ತಾವನೆಯನ್ನು ಸಲ್ಲಿಸುವ ಸದಸ್ಯರು, ವಾಣಿಜ್ಯೋದ್ದೇಶದ ಕಾಮಗಾರಿಗಳು, ಸ್ಮಾರಕ, ವಸತಿಗೃಹ, ಧಾರ್ಮಿಕ ಕಟ್ಟಡಗಳ ನಿರ್ಮಾಣ, ಸಾಲಸೌಲಭ್ಯ, ಕೊಳವೆಬಾವಿ, ಯಂತ್ರ ಖರೀದಿ, ರಸ್ತೆ ಅಭಿವೃದ್ಧಿ, ಬೀದಿದೀಪ ಅಳವಡಿಕೆಯಂತಹ ಕಾಮಗಾರಿಗಳನ್ನು ಕೈಗೊಳ್ಳಲು ಅವಕಾಶವಿರುವುದಿಲ್ಲ. ಬದಲಾಗಿ ಡಾಂಬರೀಕರಣ, ಕಾಂಕ್ರೀಟೀಕರಣಗೊಳಿಸುವ ಕಾಮಗಾರಿಗಳನ್ನು ಕೈಗೊಳ್ಳಬಹುದಾಗಿದೆ ಎಂದರು.
ಲಭ್ಯ ಅನುದಾನದಲ್ಲಿ ಶೇ. ೧೭.೧೫ರಷ್ಟು ವಿಶೇಷ ಘಟಕ ಮತ್ತು ೭.೨೫ರಷ್ಟನ್ನು ಗಿರಿಜನ ಉಪಯೋಜನೆಗಳಿಗಾಗಿ ಮೀಸಲಿರಿಸಲಾಗುವುದು. ಕಾಲುಸಂಕ, ತೂಗುಸೇತುವೆ, ಇನ್ನಿತರ ಸೇತುವೆಗಳ ನಿರ್ಮಾಣ ಕಾರ್ಯವನ್ನು ಪ್ರಥಮ ಆದ್ಯತೆಯಾಗಿ ಪರಿಗಣಿಸಲಾಗುವುದು. ಅಲ್ಲದೇ ಸಾಮಾಜಿಕ ಯೋಜನೆಗಳಾದ ಅಂಗನವಾಡಿ, ಶಾಲಾ ಕಟ್ಟಡ, ಶುದ್ಧಕುಡಿಯುವ ನೀರಿನ ಘಟಕ ಮತ್ತು ಸಮುದಾಯ ಭವನಗಳಿಗೆ ಮೀಸಲಿಡಲಾಗುವುದು. ಅಂತೆಯೇ ಸಣ್ಣ ನೀರಾವರಿ ಯೋಜನೆಗಳು, ಚೆಕ್‌ಡ್ಯಾಂ, ಇಂಗುಗುಂಡಿಗಳು ಹಾಗೂ ನೀರು ಶೇಖರಣಾ ಕಾಮಗಾರಿಗಳಿಗೆ ಮೀಸಲಿಡುವುದಾಗಿ ಅವರು ತಿಳಿಸಿದರು.
ಶಾಸಕ ಯು.ಟಿ.ಖಾದರ್, ಡಿ.ಎಸ್.ಅರುಣ್, ಬೆಳ್ಳಿಪ್ರಕಾಶ್ ಸೇರಿದಂತೆ ವಿವಿಧ ತಾಲೂಕುಗಳ ಶಾಸಕರು, ನಾಮನಿರ್ದೇಶಿತ ಸದಸ್ಯರು, ಅಧಿಕಾರಿಗಳು ಹಾಗೂ ಗಣ್ಯರು ಉಪಸ್ಥಿತರಿದ್ದರು.

Ad Widget

Related posts

ಬೆಲೆ ಏರಿಕೆ ಖಂಡಿಸಿ ಕರ್ನಾಟಕ ರಕ್ಷಣಾ ವೇದಿಕೆ ಪ್ರತಿಭಟನೆ

Malenadu Mirror Desk

ಕೋವಿಡ್ ಲಸಿಕೆ ನೀಡುವಲ್ಲಿ ಆರೋಗ್ಯ ಇಲಾಖೆ ವಿಫಲ:ಕಂಕಾರಿ

Malenadu Mirror Desk

ಪಟಗುಪ್ಪ ಸೇತುವೆ, ದಶಕಗಳ ಕನಸು ಸಾಕಾರ

Malenadu Mirror Desk

Leave a Comment

error: Content is protected !! ಮಲೆನಾಡು ಮಿರರ್‌ನಲ್ಲಿ ಪ್ರಕಟಗೊಂಡ ಸುದ್ದಿ, ಲೇಖನ, ಫೊಟೊಗಳನ್ನುಪೂರ್ವಾನುಮತಿಯಿಲ್ಲದೆ ನಕಲು ಮಾಡುವುದು ಕಾನೂನುಬಾಹಿರವಾಗಿದೆ.