ಬೊಮ್ಮಾಯಿ ಸಂಪುಟಕ್ಕೆ ಶಿವಮೊಗ್ಗದಿಂದ ಯಾರು ?
ಮಾಸಾಂತ್ಯದಲ್ಲಿ ಬಸವರಾಜ್ ಬೊಮ್ಮಾಯಿ ಅವರ ಸಚಿವ ಸಂಪುಟ ವಿಸ್ತರಣೆಯಾಗಲಿದ್ದು, ಮಧ್ಯ ಕರ್ನಾಟಕದಲ್ಲಿ ಸಂಪುಟ ಸೇರುವ ಅವಕಾಶ ಯಾರಿಗೆ ಸಿಗಲಿದೆ ಎಂಬ ಚರ್ಚೆಗಳು ಈಗ ಆರಂಭವಾಗಿವೆ.
ಹಿರಿಯ ಸಚಿವರನ್ನು ಕೈಬಿಟ್ಟು ಹೊಸಬರಿಗೆ ಅವಕಾಶ ಕೊಡಲು ಬಿಜೆಪಿ ಹೈಕಮಾಂಡ್ ನಿರ್ಧಾರ ಮಾಡಿದ್ದರಿಂದ ಕೆ.ಎಸ್.ಈಶ್ವರಪ್ಪ ಅವರು ಸಹಜವಾಗಿಯೇ ಹುದ್ದೆ ಬಿಡುವವರಿದ್ದರು.ಆದರೆ ಸಂತೋಷ್ ಪಾಟೀಲ್ ಆತ್ಮಹತ್ಯೆ ಪ್ರಕರಣದಲ್ಲಿ ವರಿಷ್ಠರ ಸೂಚನೆಯಂತೆ ರಾಜೀನಾಮೆ ನೀಡಿದ್ದರಿಂದ ಶಿವಮೊಗ್ಗ ಜಿಲ್ಲೆಯ ಕೋಟಾದಲ್ಲಿ ಒಂದು ಸ್ಥಾನ ಈಗಲೇ ಖಾಲಿಯಾಗಿದೆ.
ಸಂಪುಟದಲ್ಲಿ ಖಾಲಿ ಇರುವ ನಾಲ್ಕು ಸ್ಥಾನ ಸೇರಿ ಒಟ್ಟು ಹತ್ತು ಜನ ಹೊಸಬರು ಸಂಪುಟ ಸೇರಬಹುದೆಂಬ ನಿರೀಕ್ಷೆಯಿದೆ. ಚುನಾವಣೆಗೆ ಕೇವಲ ಒಂದು ವರ್ಷ ಬಾಕಿ ಇರುವಾಗ ಆಕಾಂಕ್ಷಿಗಳನ್ನು ಸಂತೃಪ್ತಗೊಳಿಸಲು ಬಿಜೆಪಿ ನಾಯಕತ್ವ ತೀರ್ಮಾನ ಮಾಡಿದ್ದು, ಮುಂದಿನ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡೇ ವಿಸ್ತರಣೆ ಆಗಲಿದೆ ಎನ್ನಲಾಗಿದೆ.
ಈ ಬಾರಿಯ ಸಂಪುಟ ವಿಸ್ತರಣೆಯಲ್ಲಿ ಪ್ರಮುಖವಾಗಿ ಶಿವಮೊಗ್ಗ,ದಾವಣಗೆರೆ, ಚಿಕ್ಕಮಗಳೂರು ಹಾಗೂ ಚಿತ್ರದುರ್ಗ ಜಿಲ್ಲೆಗಳಿಗೆ ಪ್ರಾತಿನಿಧ್ಯ ಸಿಗಲಿದೆ ಎಂಬ ನಿರೀಕ್ಷೆ ಹೊಂದಲಾಗಿದೆ. ಯಡಿಯೂರಪ್ಪ ಹಾಗೂ ಬಳಿಕ ಬಂದ ಬಸವರಾಜ ಬೊಮ್ಮಾಯಿ ಅವರ ಸಂಪುಟದಲ್ಲಿ ದಾವಣಗೆರೆಗೆ ಪ್ರಾತಿನಿಧ್ಯ ಸಿಕ್ಕಿರಲಿಲ್ಲ. ಚಿಕ್ಕಮಗಳೂರಿಂದ ಸಿ.ಟಿ.ರವಿ ಅವರು ಸಂಪುಟ ಸೇರಿದ್ದರಾದರೂ ಪಕ್ಷದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಯಾಗಿ ನೇಮಕವಾದ ಬಳಿಕ ಹುದ್ದೆ ತ್ಯಜಿಸಿದ್ದರು. ಇನ್ನು ಚಿತ್ರದುರ್ಗದಿಂದ ಶ್ರೀರಾಮುಲು ಅವರು ಸಂಪುಟದಲ್ಲಿದ್ದರೂ ಸ್ಥಳೀಯ ನಾಯಕರಿಗೆ ಈ ಅವಕಾಶ ಸಿಕ್ಕಿಲ್ಲ. ಪ್ರಸ್ತುತ ಜಿ.ಹೆಚ್ ತಿಪ್ಪಾರೆಡ್ಡಿ, ಹೊಳಲ್ಕೆರೆ ಚಂದ್ರಪ್ಪ ಮತ್ತು ಹಿರಿಯೂರಿನ ಪೂರ್ಣಿಮಾ ಅವರು ಆಕಾಂಕ್ಷಿಯಾಗಿದ್ದಾರೆ. ದಾವಣಗೆರೆಯಿಂದ ಎಂ.ಪಿ.ರೇಣುಕಾಚಾರ್ಯ ಮತ್ತು ಚಿಕ್ಕಮಗಳೂರಿಂದ ಎಂ.ಪಿ.ಕುಮಾರಸ್ವಾಮಿ ಪ್ರಬಲ ಆಕಾಂಕ್ಷಿಯಾಗಿದ್ದಾರೆ.
ಶಿವಮೊಗ್ಗದಲ್ಲಿ ಪ್ರಬಲ ಪೈಪೋಟಿ
ಬಿಜೆಪಿ ಶಕ್ತಿ ಕೇಂದ್ರ ಶಿವಮೊಗ್ಗದಲ್ಲಿ ಈ ಬಾರಿ ಯಾರು ಸಚಿವ ಸಂಪುಟ ಸೇರುವರು ಎಂಬ ಕುತೂಹಲ ಹೆಚ್ಚಿದೆ. ಬಿ.ಎಸ್.ಯಡಿಯೂರಪ್ಪ ಅವರು ಮುಖ್ಯಮಂತ್ರಿಯಾಗಿ ಮಾಜಿಯಾಗಿದ್ದರೂ ಸರಕಾರ ಮತ್ತು ಪಕ್ಷದಲ್ಲಿ ಅವರ ಪ್ರಭಾವಳಿ ಇನ್ನೂ ಗಟ್ಟಿಯಾಗಿಯೇ ಇದೆ. ಶಿವಮೊಗ್ಗ ಜಿಲ್ಲೆಯಲ್ಲಿ ಯಾರು ಸಂಪುಟ ಸೇರಬೇಕೆಂಬ ವಿಚಾರದಲ್ಲಿ ಅವರ ಮಾತೇ ಶಾಸನವಾಗುವ ಸಾಧ್ಯತೆಯನ್ನು ಅಲ್ಲಗಳೆಯಲಾಗದು. ಪ್ರಸ್ತುತ ಜಿಲ್ಲೆಯಲ್ಲಿ ಒಕ್ಕಲಿಗ ಸಮುದಾಯವನ್ನು ಪ್ರತಿನಿಧಿಸುವ ಗೃಹಸಚಿವ ಆರಗ ಜ್ಞಾನೇಂದ್ರ ಮಾತ್ರ ಸಂಪುಟದಲ್ಲಿದ್ದಾರೆ.
ಜಿಲ್ಲೆಯ ಬಹುಸಂಖ್ಯಾತ ಈಡಿಗ ಸಮುದಾಯದ ಹರತಾಳು ಹಾಲಪ್ಪ, ಕುಮಾರ ಬಂಗಾರಪ್ಪ, ವಿಧಾನ ಪರಿಷತ್ ಸದಸ್ಯರಾದ ಪ್ರಬಲ ಲಿಂಗಾಯತ ಸಮುದಾಯದ ಆಯನೂರು ಮಂಜುನಾಥ್, ಎಸ್.ರುದ್ರೇಗೌಡ ಹಾಗೂ ಬಂಟ ಸಮುದಾಯ ಮತ್ತು ಮಹಿಳಾ ಕೋಟಾದಿಂದ ಭಾರತೀ ಶೆಟ್ಟಿ ಅವರು ಆಕಾಂಕ್ಷಿಗಳಾಗಿದ್ದಾರೆ. ಈ ಆರು ಮಂದಿಯಲ್ಲಿ ಯಾರಿಗೇ ಅವಕಾಶ ಕೊಡುವುದಾದರೂ ಯಡಿಯೂರಪ್ಪ ಮತ್ತು ಈಶ್ವರಪ್ಪರ ಮಾತಿಗೆ ಮನ್ನಣೆ ಸಿಗುವ ಸಾಧ್ಯತೆಗಳಿವೆ.
ಜೋಡೆತ್ತುಗಳು ನೇಪಥ್ಯಕ್ಕೆ ?
ಮುಂಬರುವ ವಿಧಾನಸಭೆ ಚುನಾವಣೆ ಹೊತ್ತಿಗೆ ಬಿಜೆಪಿಯ ಬೆಳವಣಿಗೆಗೆ ಜೋಡೆತ್ತುಗಳಂತೆ ದುಡಿದಿದ್ದ ಬಿಜೆಪಿ ನೇತಾರರಾದ ಯಡಿಯೂರಪ್ಪ ಹಾಗೂ ಈಶ್ವರಪ್ಪ ಅವರನ್ನು ವಯಸ್ಸಿನ ಕಾರಣಕ್ಕೆ ನೇಪಥ್ಯಕ್ಕೆ ಸರಿಸುವ ಸಾಧ್ಯತೆಗಳು ಹೆಚ್ಚಿವೆ. ಈ ಕಾರಣದಿಂದ ಈ ಇಬ್ಬರು ನಾಯಕರುಗಳು ಸಂಪುಟ ವಿಸ್ತರಣೆ ಸೇರಿದಂತೆ ಯಾವುದೇ ಸಂದರ್ಭದಲ್ಲಿ ತೆಗೆದುಕೊಳ್ಳುವ ನಿರ್ಧಾರಗಳು ತಮ್ಮ ಮಕ್ಕಳ ರಾಜಕೀಯ ಭವಿಷ್ಯದ ಮೇಲೆ ಅವಲಂಭಿತವಾಗಿರುತ್ತವೆ ಎಂಬುದರಲ್ಲಿ ಎರಡು ಮಾತಿಲ್ಲ. ಈ ಹಿನ್ನೆಲೆಯಲ್ಲಿ ಬೊಮ್ಮಾಯಿ ಸಂಪುಟ ವಿಸ್ತರಣೆಯಲ್ಲಿ ಅವರು ಅತ್ಯಂತ ನಾಜೂಕಿನ ನಿರ್ಧಾರ ತೆಗೆದುಕೊಳ್ಳುತ್ತಾರೆ ಎಂಬುದು ರಾಜಕೀಯ ಗೊತ್ತಿರುವ ಯಾರಿಗೇ ಆದರೂ ಅರ್ಥವಾಗುತ್ತದೆ.
ಈಶ್ವರಪ್ಪ ಅವರು ತಮ್ಮ ಮಗನ ರಾಜಕೀಯ ಭವಿಷ್ಯಕ್ಕೆ ಸೀಮಿತವಾದ ನಿಲುವಿಗೆ ಅಂಟಿಕೊಳ್ಳುವ ಸಾಧ್ಯತೆಯೇ ಹೆಚ್ಚು. ಆದರೆ ಯಡಿಯೂರಪ್ಪ ಅವರು ತಮ್ಮ ಇಬ್ಬರು ಮಕ್ಕಳ ರಾಜಕೀಯ ಭವಿಷ್ಯದ ಜತೆಗೆ ಇಡೀ ಶಿವಮೊಗ್ಗ ಜಿಲ್ಲೆಯ ರಾಜಕಾರಣ ತಮ್ಮ ಮಕ್ಕಳ ಅಂಕೆಯಂತೆ ನಡೆಯಬೇಕು ಎಂಬ ಇರಾದೆಯನ್ನು ಹೊಂದಿರುತ್ತಾರೆ ಎಂಬುದರಲ್ಲಿ ಅನುಮಾನವಿಲ್ಲ.
ಈ ಎಲ್ಲ ಒಳಸುಳಿಗಳನ್ನು ಇಟ್ಟುಕೊಂಡು ನೋಡುವುದೇ ಆದರೆ ಯಡಿಯೂರಪ್ಪ ಅವರು ಈಡಿಗ ಸಮುದಾಯದ ಮತಗಳನ್ನು ಓಲೈಸಲು ಹರತಾಳು ಹಾಲಪ್ಪ ಅವರ ಪರ ವಕಾಲತು ವಹಿಸುವ ಸಾಧ್ಯತೆ ಇದೆ. ಆದರೆ ಹಿಂದೆ ಅವರು ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಸಚಿವ ಸ್ಥಾನ ಕಳೆದುಕೊಂಡಿರುವುದರಿಂದ ವರಿಷ್ಟರು ಈ ಸಂಗತಿ ಇಟ್ಟುಕೊಂಡು ಅಡ್ಡಗಾಲು ಹಾಕುವರೆ ಎಂಬ ಒಂದು ಅನನುಮಾನವೂ ಇದೆ. ಹಾಲಪ್ಪ ಅವರು ಸ್ವಾಮಿನಿಷ್ಠೆಗೆ ಹೆಸರಾಗಿದ್ದು, ಯಡಿಯೂರಪ್ಪ ಅವರೊಂದಿಗೆ ಉತ್ತಮ ಬಾಂಧವ್ಯ ಹೊಂದಿದ್ದಾರೆ ಕೂಡಾ. ಈ ನಡುವೆ ಸಾಗರದಲ್ಲಿ ಎಂ.ಡಿ.ಎಫ್ ಸರ್ವಸದಸ್ಯರ ಸಭೆಯಲ್ಲಿ ನಡೆದಿರುವ ಹಲ್ಲೆ ಘಟನೆಯನ್ನು ಹಿಡಿದುಕೊಂಡು ಆ ಭಾಗದ ಬ್ರಾಹ್ಮಣರು ಮತ್ತು ಲಿಂಗಾಯತ ಸಮುದಾಯದವರು ಹಾಲಪ್ಪ ವಿರುದ್ಧ ಯಡಿಯೂರಪ್ಪ ಅವರಿಗೆ ಈಗಾಗಲೇ ದೂರು ನೀಡಿದ್ದಾರೆ. ಈ ಅಂಶಗಳು ಮುಂದೆ ಚುನಾವಣೆ ಮೇಲೆ ಪರಿಣಾಮ ಬೀರಬಹುದೇ ಎಂಬ ಜಿಜ್ಞಾಸೆಯೂ ಇಲ್ಲಿದೆ.
ಕುಮಾರ ಬಂಗಾರಪ್ಪ ನಾಲ್ಕು ಬಾರಿ ಶಾಸಕರಾಗಿದ್ದು, ಈಡಿಗ ಸಮುದಾಯದ ಪ್ರಮುಖ ನಾಯಕರಾಗಿದ್ದಾರೆ. ಇವರ ಸೋದರ ಮಧುಬಂಗಾರಪ್ಪ ಅವರು ಕಾಂಗ್ರೆಸ್‌ಗೆ ಬಂದಿರುವುದರಿಂದ ಶಿವಮೊಗ್ಗದಲ್ಲಿ ಕಾಂಗ್ರೆಸ್‌ಗೆ ಸಾಕಷ್ಟು ಬಲವೂ ಬಂದಿದೆ. ಅವರಿಗೆ ಠಕ್ಕರ್ ಕೊಡಲು ಕುಮಾರಬಂಗಾರಪ್ಪ ಅವರನ್ನು ಮಂತ್ರಿ ಮಾಡಲು ಮನಸ್ಸು ಮಾಡಬಹುದಾದರೂ ಸೊರಬ ಬಿಜೆಪಿಯಲ್ಲಿರುವ ಕುಮಾರ್ ವಿರೊಧಿಗಳು ಮೊದಲಿಂದಲೂ ಕಾಲೆಳೆಯುತ್ತಿದ್ದಾರೆ. ಮೇಲಾಗಿ ಕುಮಾರ್ ಸಚಿವರಾದರೆ ತಮ್ಮ ಅಂಕೆಯಲ್ಲಿ ಇರುವುದಿಲ್ಲ ಎಂಬ ಅನುಮಾನ ಬಿಎಸ್‌ವೈ ಕುಟುಂಬಕ್ಕಿದೆ.
ವೀರಶೈವ ಸಮುದಾಯವನ್ನು ಪ್ರತಿನಿಧಿಸುವ ಆಯನೂರು ಮಂಜುನಾಥ್ ಅವರು ನಾಲ್ಕೂ ಮನೆಯನ್ನು (ಲೋಕಸಭೆ,ರಾಜ್ಯಸಭೆ,ವಿಧಾನ ಸಭೆ,ವಿಧಾನಪರಿಷತ್) ಪ್ರತಿನಿಧಿಸಿರುವ ಅನುಭವಿ ರಾಜಕಾರಣಿ. ಒಮ್ಮೆಯೂ ಸಚಿವರಾಗದ ಅವರನ್ನು ಸಂಪುಟಕ್ಕೆ ಸೇರಿಸಿಕೊಳ್ಳಲು ಅಂತರಂಗದಲ್ಲಿ ಜೋಡೆತ್ತುಗಳಿಗೆ ಇಷ್ಟವಿಲ್ಲ ಎಂದೇ ಹೇಳಲಾಗುತ್ತಿದೆ. ಆಯನೂರು ಒಮ್ಮೆ ಮಂತ್ರಿಯಾಗಿ ಮತ್ತಷ್ಟು ಪ್ರಭಾವಿಯಾದರೆ ಎರಡನೇ ಹಂತದ ನಾಯಕರ ರಾಜಕೀಯದ ಮೇಲೆ ಪ್ರತಿಕೂಲ ಪರಿಣಾಮ ಬೀರಬಹುದು ಎಂಬ ಅಂಜಿಕೆ ಉಭಯ ನಾಯಕರಿಗಿದೆ. ಮೇಲಾಗಿ ಬಿಜೆಪಿ ಹೈಕಮಾಂಡ್ ಜತೆ ಆಯನೂರು ಅವರಿಗೆ ಮೊದಲಿನಷ್ಟು ನಿಕಟ ಸಂಪರ್ಕವೂ ಇಲ್ಲವಾಗಿದೆ.
ಇನ್ನುಳಿದಿರುವ ಆಯ್ಕೆ ಎಸ್.ರುದ್ರೇಗೌಡ ಅವರದು. ಮುಂದೆ ಬಂದರೆ ಹಾಯದ ಹಿಂದೆ ಬಂದರೆ ಒದೆಯದ ಸಜ್ಜನ ಎಸ್.ರುದ್ರೇಗೌಡರು ಲಿಂಗಾಯತ ಸಮುದಾಯವನ್ನು ಪ್ರತಿನಿಧಿಸುತ್ತಿದ್ದು, ಮೊದಲ ಬಾರಿ ಪರಿಷತ್ ಸದಸ್ಯರಾಗಿದ್ದಾರೆ. ಇವರನ್ನು ಸಂಪುಟಕ್ಕೆ ಸೇರಿಸಿದಲ್ಲಿ ಯಾವುದೇ ಅಪಾಯ ಇಲ್ಲವಾದರೂ, ಈಶ್ವರಪ್ಪರಿಂದ ತೆರವಾದ ಹಿಂದುಳಿದ ವರ್ಗದ ಕೋಟಾವನ್ನು ಶಿವಮೊಗ್ಗಕ್ಕೆ ಕೊಡುವುದಾದಲ್ಲಿ ಲಿಂಗಾಯತರಿಗೆ ಅವಕಾಶ ಸಿಗಲಾರದು. ಈಡಿಗ ಸಮುದಾಯದ ಶ್ರೀನಿವಾಸ್ ಪೂಜಾರಿ, ಸುನೀಲ್ ಕುಮಾರ್ ಈಗಾಗಲೇ ಸಂಪುಟದಲ್ಲಿರುವುದರಿಂದ ಶಿವಮೊಗ್ಗ ಜಿಲ್ಲೆಯ ಕೋಟಾದಲ್ಲಿ ಭಾರತಿ ಶೆಟ್ಟಿ ಅವರನ್ನು ಸಂಪುಟಕ್ಕೆ ಸೇರಿಸಿ ಉಳಿದೆಲ್ಲ ಅಪಾಯಗಳಿಂದ ಪಾರಾಗುವ ತಂತ್ರವನ್ನು ಹೆಣೆದರೂ ಅಚ್ಚರಿಯಿಲ್ಲ. ರಾಜಕಾರಣದಲ್ಲಿ ಮಿತ್ರನೂ ಇಲ್ಲ, ಶತ್ರುವೂ ಇಲ್ಲ ಎಂಬ ಮಾತು ಸಾರ್ವಕಾಲಿಕವಾಗಿರುವುದರಿಂದ ಇಲ್ಲಿ ಯಾವುದನ್ನೂ ಅಸಂಭವ ಎಂದೂ ಹೇಳಲಾಗುವುದಿಲ್ಲ.
ವಿಜಯೇಂದ್ರ ಸಂಪುಟ ಸೇರಲಾರರು?
ರಾಜ್ಯ ಬಿಜೆಪಿ ಉಪಾಧ್ಯಕ್ಷ ಬಿ.ವೈ.ವಿಜಯೇಂದ್ರ ಅವರು ಈಗಾಗಲೇ ಕಿಂಗ್ ಮೇಕರ್ ಎಂಬ ಬಿಗ್ ಎಕ್ಸ್‌ಫೋಜರ್ ಪಡೆದುಕೊಂಡಿರುವುದರಿಂದ ಅವರನ್ನು ಹಿಂಬಾಗಿಲಿನಿಂದ ತಂದು ಸಂಪುಟ ಸೇರಿಸುವ ಮನಸ್ಸನ್ನು ಯಡಿಯೂರಪ್ಪ ಮಾಡಲಾರರು. ಮುಂದಿನ ಚುನಾವಣೆಯಲ್ಲಿ ವಿಜಯೇಂದ್ರ ಅವರು ನಿರ್ಣಾಯಕ ಪಾತ್ರ ನಿರ್ವಹಿಸುವಂತೆ ಮಾಡಲು ಆಗಬೇಕಾದ ಕ್ರಮಗಳ ಬಗ್ಗೆ ಮಾತ್ರ ಅವರ ಚಿತ್ತವಿದೆ. ಈ ನಡುವೆ ಅವರ ಪುತ್ರಿಯೂ ಮುಂದಿನ ಚುನಾವಣೆಯಲ್ಲಿ ಕಣಕ್ಕಿಳಿಯಲಿದ್ದಾರೆ ಎಂಬ ವದಂತಿಯೂ ಇದೆ.