ಅಡಕೆಗೆ ಬೆಲೆ ಬಂದಿದ್ದರಿಂದಾಗಿ ಒಕ್ಕಲಿಗ ಸಮುದಾಯ ಸ್ವಲ್ಪ ಚೇತರಿಸಿಕೊಳ್ಳುವಂತಾಗಿದೆ. ತೀರ್ಥಹಳ್ಳಿಯಲ್ಲಿ ಅಗಲವಾಗಿರುವ ರಸ್ತೆ ಹೊಸ ಮಾಡೆಲ್ ಕಾರುಗಳನ್ನು ನಿಲ್ಲಿಸಲು ಸಾಕಾಗುತ್ತಿಲ್ಲ. ಇದು ಒಂದು ಬೆಳೆಯ ಬೆಲೆಯಿಂದಾದ ಬದಲಾವಣೆ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಹೇಳಿದರು.
ಒಕ್ಕಲಿಗರ ಯುವ ವೇದಿಕೆಯಿಂದ ನಗರದ ಆದಿಚುಂಚನಗಿರಿ ಸಮುದಾಯ ಭವನದಲ್ಲಿ ಆಯೋಜಿಸಿದ್ದ ಒಕ್ಕಲಿಗರ ಯುವ ಸಮಾವೇಶ, ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಹಾಗೂ ಸಾಧಕರಿಗೆ ಸನ್ಮಾನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಅಡಕೆ ಬೆಲೆಯಿಂದಾಗಿ ಕೆಲಸಗಾರರ ಬದುಕಿನಲ್ಲಿಯೂ ಬದಲಾವಣೆಯಾಗಿದೆ. ಉತ್ತಮ ಜೀವನ ನಡೆಸುತ್ತಿದ್ದಾರೆ.ಇಲ್ಲಿ ಆದಿಚುಂಚನಗಿರಿ ಶಾಖಾ ಮಠ ಅರಂಭವಾದ ಬಳಿಕ ಶಾಲೆಗಳು ಆರಂಭವಾಗಿ ವಿದ್ಯಾದಾನ ಮಾಡಲಾಗುತ್ತಿದೆ ಎಂದರು.
ಇಂದು ಗುರುವೂ ಇದ್ದಾರೆ. ಗುರಿಯೂ ಇದೆ. ಹೀಗಾಗಿ ಇಡೀ ಸಮುದಾಯ ವಿದ್ಯಾವಂತವಾಗಿ ಆರ್ಥಿಕವಾಗಿ ಸದೃಢವಾಗುತ್ತಿದ್ದಾರೆ. ಒಂದು ಸಮುದಾಯ ಮೇಲೆ ಬರಬೇಕಾದರೆ ಎಲ್ಲಾ ಅವಕಾಶಗಳನ್ನು ಬಳಸಿಕೊಳ್ಳಬೇಕಿದೆ. ವಿವಿಧ ಕ್ಷೇತ್ರಗಳಲ್ಲಿ ಮಕ್ಕಳು ಸಾಧನೆ ಮಾಡುತ್ತಿದ್ದು, ಇನ್ನಷ್ಟು ಉತ್ತೇಜನ ನೀಡಬೇಕಿದೆ ಎಂದರು.
ಶಿವಮೊಗ್ಗ ಜಿಲ್ಲೆಯಲ್ಲಿ ಶೈಕ್ಷಣಿಕವಾಗಿ ಮುಂದೆ ಇದ್ದೇವೆ. ಜಿಲ್ಲೆಯಲ್ಲಿ ಎರಡು ಪ್ರಮುಖ ಹಾಸ್ಟೆಲ್‌ಗಳಿವೆ. ಇವುಗಳಿಂದ ಹೆಚ್ಚಿನ ಮಕ್ಕಳು ವಿದ್ಯಾಭ್ಯಾಸ ಮಾಡಿದ್ದಾರೆ. ಬಡ ವಿದ್ಯಾರ್ಥಿಗಳಿಗೆ ಇದು ಹೆಚ್ವಿನ ಅನುಕೂಲವಾಗಿದೆ. ಇತ್ತೀಚಿನ ದಿನಗಳಲ್ಲಿ ಯುವ ಸಮುದಾಯ ಶಿಕ್ಷಣ ಪಡೆದಿರುವುದು ಶ್ಲಾಘನೀಯ. ಜಿಲ್ಲೆ ಮಾತ್ರವಲ್ಲ, ಬೆಂಗಳೂರಿನಲ್ಲಿಯೂ ಅನೇಕರು ಇದ್ದಾರೆ ಎಂದರು.
ಆದಿಚುಂಚನಗಿರಿ ಶಾಖಾ ಮಠದ ಶ್ರೀ ಪ್ರಸನ್ನನಾಥಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಯುವ ವೇದಿಕೆ ಅಧ್ಯಕ್ಷ ಕೆ. ಚೇತನ್ ಅಧ್ಯಕ್ಷತೆ ವಹಿಸಿದ್ದರು. ವೇದಿಕೆಯಲ್ಲಿ ವಿಧಾನ ಪರಿಷತ್ ಸದಸ್ಯ ಎಸ್.ಎಲ್. ಭೋಜೇಗೌಡ, ಕಾಡಾ ಅಧ್ಯಕ್ಷೆ ಪವಿತ್ರರಾಮಯ್ಯ, ಅಪೆಕ್ಸ್ ಬ್ಯಾಂಕ್ ಮಾಜಿ ಅಧ್ಯಕ್ಷ ಆರ್.ಎಂ. ಮಂಜುನಾಥ ಗೌಡ, ಸಿರಿಬೈಲು ಧರ್ಮೇಗೌಡ, ಬಿ.ಎ. ರಮೇಶ್ ಹೆಗ್ಡೆ, ಹೆಚ್.ಎಸ್. ಸುಂದರೇಶ್, ಜಿಲ್ಲಾ ಒಕ್ಕಲಿಗರ ಸಂಘದ ಅಧ್ಯಕ್ಷ ಶ್ರೀಕಾಂತ್, ಪಾಲಿಕೆ ಸದಸ್ಯೆ ಸುವರ್ಣಾ ಶಂಕರ್ ಮತ್ತಿತರರಿದ್ದರು.
ರಾಜೀನಾಮೆ ಕೇಳ್ತಾರೆ ಎನ್ ಮಾಡೋಣ: ಗೃಹ ಸಚಿವ ಆರಗ
ಹರ್ಷ ಕುಟುಂಬದ ಆಕ್ರೋಶದ ಬಗ್ಗೆ ನಾನು ಮಾತನಾಡುವುದಿಲ್ಲ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಹೇಳಿದರು.
ಶಿವಮೊಗ್ಗದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ,ಹರ್ಷ ಸೋದರಿ ನನ್ನ ಬಳಿ ಮಾತನಾಡಿದಾಗ ಸಮಾಧಾನವಾಗಿಯೇ ಮಾತನಾಡಿದ್ದೇನೆ. ಅವರು ಶ್ರೀರಾಮ ಸೇನೆಯ20 ಕ್ಕೂ ಹೆಚ್ಚು ಕಾರ್ಯಕರ್ತರೊಂದಿಗೆ ಬಂದಿದ್ದರು. ಅವರಿಗೂ ಸಹ ಹರ್ಷನ ಅಕ್ಕನ ವರ್ತನೆಯಿಂದ ಬೇಜಾರಾಗಿದೆ ಎಂದರು.
ಗೃಹ ಸಚಿವನಾಗಿ ನನಗೆ ನನ್ನದೇ ಆದ ಇತಿಮಿತಿಗಳಿದೆ. ಅವರು ಕೇಳುವ ಪ್ರತಿ ವಿಷಯಕ್ಕೂ ಉತ್ತರಿಸಲಾರೆ . ಹಿಂದೂ ಜಾಗರಣಾ ವೇದಿಕೆ ಕಾರ್ಯಕರ್ತರು ಸೇರಿದಂತೆ ಎಲ್ಲರೂ ನನ್ನ ರಾಜೀನಾಮೆ ಕೇಳುವುದು ಸಹಜ. ಏನೇ ಆದರೂ ಸಹ ಗೃಹಸಚಿವರದ್ದೇ ರಾಜೀನಾಮೆ ಕೇಳೋದು, ಎನೂ ಮಾಡೋಣ ಎಂದು ನಕ್ಕರು. ಪರಪ್ಪನ ಅಗ್ರಹಾರದಿಂದ ಹರ್ಷ ಕೊಲೆ ಆರೋಪಿಗಳು ಮೊಬೈಲ್ ಕರೆಮಾಡಿರುವ ವಿಚಾರಕ್ಕೆ ಸಂಬಂಧಿಸಿದಂತೆ ಈಗಾಗಲೇ ತಪ್ಪಿತಸ್ಥರ ವಿರುದ್ದ ಎಫ್‌ಐ ಆರ್ ದಾಖಲಿಸಲಾಗಿದೆ. ಕ್ರಮ ನಿಶ್ಚಿತವಾಗಿ ಜರುಗಲಿದೆ ಎಂದರು.