ಈಶ್ವರಪ್ಪ ಮಣಿಸಲು ಜಾತ್ಯಾಸ್ತ್ರ ಪ್ರಯೋಗಕ್ಕೆ ಮುಂದಾದ ಕೈ ನಾಯಕರು
ಶಿವಮೊಗ್ಗ: ಶಿವಮೊಗ್ಗ ನಗರ ವಿಧಾನಸಭಾ ಕ್ಷೇತ್ರದಲ್ಲಿ ಪ್ರಬಲವಾಗಿರುವ ಬಿಜೆಪಿ ಹಾಗೂ 1989ರಿಂದ ಆ ಪಕ್ಷದ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತಾ ಬಂದಿರುವ, ಐದು ಬಾರಿ ಶಾಸಕರಾಗಿ ಆಯ್ಕೆಯಾದ ಕೆ.ಎಸ್.ಈಶ್ವರಪ್ಪ ಅವರನ್ನು ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಶತಾಯಗತಾಯ ಮಣಿಸಲು ಕಾರ್ಯತಂತ್ರ ರೂಪಿಸಿರುವ ಕಾಂಗ್ರೆಸ್ ವರಿಷ್ಠರು, ಅವರದೇ ಕೋಮಿನ ಮುಖಂಡ, ಜಿಲ್ಲಾ ಜೆಡಿಎಸ್ ಅಧ್ಯಕ್ಷ ಎಂ.ಶ್ರೀಕಾಂತ್ ಅವರನ್ನು ಪಕ್ಷಕ್ಕೆ ಕರೆತಂದು ಕಣಕ್ಕೆ ಇಳಿಸಲು ಒಲವು ತೋರಿದ್ದಾರೆ.
ಕುರುಬ ಸಮುದಾಯದ ಪ್ರಶ್ನಾತೀತ ನಾಯಕ, ದೇವರಾಜ ಅರಸು ನಂತರದ ಹಿಂದುಳಿದ, ದಲಿತ ಸಮುದಾಯದ ನೇತಾರ ಎಂದೇ ಜನರು ಗುರುತಿಸುವ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಕ್ಷುಲ್ಲಕ ಕಾರಣಗಳನ್ನು ಇಟ್ಟುಕೊಂಡು ಸದಾ ವಾಗ್ದಾಳಿ ನಡೆಸುವ, ತೇಜೋವಧೆ ಮಾಡುವ ಈಶ್ವರಪ್ಪ ಅವರನ್ನು ಈ ಬಾರಿ ವಿಧಾನಸಭೆ ಪ್ರವೇಶಿಸದಂತೆ ತಡೆಯಲು ಯೋಜನೆ ರೂಪಿಸಿದೆ. ಅವರನ್ನು ಮಣಿಸುವ ಸಮರ್ಥ ನಾಯಕರ ಹುಡುಕಾಟದಲ್ಲಿ ತೊಡಗಿದೆ.
2018ರ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ, ಅಂದು ಹಾಲಿ ಶಾಸಕರಾಗಿದ್ದ ಕೆ.ಬಿ.ಪ್ರಸನ್ನಕುಮಾರ್ ಭಾರಿ ಅಂತರರಿಂದ ಸೋಲುಕಂಡದ್ದು ಕಾಂಗ್ರೆಸ್‌ಗೆ ಮರ್ಮಾಘಾತ ತಂದಿತ್ತು. ಕ್ಷೇತ್ರದಲ್ಲಿ ಸರಿ ಸುಮಾರು 60 ಸಾವಿರ ಮುಸ್ಲಿಂ ಸಮುದಾಯದ ಮತಗಳಿವೆ. ಕಾಂಗ್ರೆಸ್ ಹಾಗೂ ಸಿದ್ದರಾಮಯ್ಯ ಅವರ ಸಾಂಪ್ರದಾಯಿಕ ಮತಗಳಾದ ಪರಿಶಿಷ್ಟರು, ಹಿಂದುಳಿದ ವರ್ಗಗಳ ಮತಗಳನ್ನು ಲೆಕ್ಕಹಾಕಿದರೆ ಕಾಂಗ್ರೆಸ್ ಅಭ್ಯರ್ಥಿಯ ಮತಗಳಗಳಿಕೆ 80 ಸಾವಿರದಿಂದ ಆರಂಭವಾಗುತ್ತದೆ. ಇಂತಹ ಗಟ್ಟಿ ಬುನಾದಿ ಕ್ಷೇತ್ರದಲ್ಲಿದ್ದರೂ ಕಾಂಗ್ರೆಸ್ ಅಭ್ಯರ್ಥಿ ಕನಿಷ್ಠ 60 ಸಾವಿರ ಮತಗಳನ್ನು ಮುಟ್ಟಲು ಸಾಧ್ಯವಾಗಿರಲಿಲ್ಲ. ಈ ಎಲ್ಲ ಬೆಳವಣಿಗೆಳಿಂದ ಪಾಠ ಕಲಿತಿರುವ ಕಾಂಗ್ರೆಸ್ ವರಿಷ್ಠರು ಸೂಕ್ತ ಅಭ್ಯರ್ಥಿಯನ್ನು ಈ ಬಾರಿ ಕಣಕ್ಕೆ ಇಳಿಸಲು ತೀವ್ರ ಪ್ರಯತ್ನ ನಡೆಸುತ್ತಿದ್ದಾರೆ.
ನಿರಾಸೆ ಮೂಡಿಸಿದ ಬ್ರಾಹ್ಮಣರು:
2013ರ ಚುನಾವಣೆಯಲ್ಲಿ ಬಿಜೆಪಿ ಸಾಂಪ್ರದಾಯಿಕ ಮತಗಳಾದ ಬ್ರಾಹ್ಮಣ ಸಮುದಾಯವನ್ನು ಸೆಳೆಯಲು ಕಾಂಗ್ರೆಸ್ ನಗರಸಭೆ ಸದಸ್ಯ ಕೆ.ಬಿ.ಪ್ರಸನ್ನಕುಮಾರ್ ಅವರನ್ನು ಕಣಕ್ಕೆ ಇಳಿಸಿತ್ತು. ಅಂದು ಪ್ರಸನ್ನಕುಮಾರ್ ಗೆಲುವು ಸಾಧಿಸಿದ್ದರೂ, ಬ್ರಾಹ್ಮಣರ ಮತಗಳು ಸಿಕ್ಕಿದ್ದು ಅಷ್ಟಕಷ್ಟೆ. ಅಂದು ಬಿ.ಎಸ್.ಯಡಿಯೂರಪ್ಪ ಅವರು ಬಿಜೆಪಿ ವಿರುದ್ಧ ಸಿಡಿದೆದ್ದು ಕೆಜೆಪಿ ಕಟ್ಟಿ, ಪಕ್ಷದ ಅಭ್ಯರ್ಥಿಯಾಗಿ ಉದ್ಯಮಿ ಎಸ್.ರುದ್ರೇಗೌಡ ಅವರನ್ನು ಕಣಕ್ಕೆ ಇಳಿಸಿದ್ದರು. ಬಿಜೆಪಿ ಮತಗಳು ವಿಭಜನೆಗೊಂಡು ಕಾಂಗ್ರೆಸ್‌ಗೆ ಅನುಕೂಲವಾಗಿತ್ತು. ೨೦೧೮ರ ಚುನಾವಣೆಯಲ್ಲಿ ಬ್ರಾಹ್ಮಣರಿರಲಿ, ಹಿಂದುಳಿದ, ದಲಿತ ಮತಗಳೂ ಪಕ್ಷದ ಕೈಹಿಡಿಯಲಿಲ್ಲ. ಹಾಗಾಗಿ, ಈ ಬಾರಿ ಬ್ರಾಹ್ಮಣರಿಗೆ ಟಿಕೆಟ್ ನೀಡಲು ಕಾಂಗ್ರೆಸ್ ಒಲವು ತೋರಿಲ್ಲ ಎನ್ನಲಾಗಿದೆ.
ಯಡಿಯೂರಪ್ಪ ಬೆನ್ನಿಗೆ ಲಿಂಗಾಯತರು:
ಕ್ಷೇತ್ರದಲ್ಲಿ 30 ಸಾವಿರದಷ್ಟಿರುವ ವೀರಶೈವ ಲಿಂಗಾಯತ ಮತಗಳು ಯಡಿಯೂರಪ್ಪ ಅವರ ಜತೆಗಿವೆ. ಹಿಂದೆ 1999ರಲ್ಲಿ ಲಿಂಗಾಯತ ಅಭ್ಯರ್ಥಿ ಎಚ್.ಎಂ.ಚಂದ್ರಶೇಖರಪ್ಪ ಈಶ್ವರಪ್ಪ ಅವರ ವಿರುದ್ಧ ಗೆಲುವು ಸಾಧಿಸಿದ್ದರು. ಆದರೆ, 2004ರ ಚುನಾವಣೆಯಲ್ಲಿ ಸೋಲುಕಂಡಿದ್ದರು. ಅಲ್ಲಿಂದ ಮತ್ತೆ ಲಿಂಗಾಯತರಿಗೆ ಅವಕಾಶ ದೊರೆತಿಲ್ಲ. ಈ ಬಾರಿ ಸಮರ್ಥ ಲಿಂಗಾಯತ ಅಭ್ಯರ್ಥಿಯನ್ನು ಕಣಕ್ಕೆ ಇಳಿಸಲು ಕಾಂಗ್ರೆಸ್ ಆರಂಭದಲ್ಲಿ ಯೋಚಿಸಿತ್ತು.
ಸರ್ಜಿ ಆಸ್ಪತ್ರೆಯ ಮುಖ್ಯಸ್ಥ ಡಾ.ಧನಂಜಯ ಸರ್ಜಿ ಅವರು ಶಾಂತಿಯ ನಡಿಗೆ ಮೂಲಕ ಆರ್‌ಎಸ್‌ಎಸ್ ಅಂಗಳದಿಂದ ಜಿಗಿದು ಜಾತ್ಯಾತೀತ ಅಂಗಿ ತೊಡಲು ಸಿದ್ಧರಾಗಿದ್ದರು. ಪಕ್ಷವೂ ಒಲವು ತೋರಿತ್ತು. ದಿಢೀರ್ ಬೆಳವಣಿಗೆಯಲ್ಲಿ ಸರ್ಜಿ ಮರಳಿ ಬಿಜೆಪಿ ಗೂಡು ಸೇರಿದ್ದಾರೆ. ಕಾಂಗ್ರೆಸ್ಸಿನಲ್ಲೇ ಇರುವ ಎಚ್.ಎಂ.ಚಂದ್ರಶೇಖರಪ್ಪ ಪುತ್ರ ಯೋಗೀಶ್ ನಿಂತರೆ ಗೆಲ್ಲುವುದು ಕಷ್ಟ. ಸಹಕಾರ ಕ್ಷೇತ್ರದಲ್ಲಿ ಹೆಸರು ಮಾಡಿರುವ ಎಸ್.ಪಿ.ದಿನೇಶ್ ಎರಡು ಬಾರಿ ವಿಧಾನ ಪರಿಷತ್ ಚುನಾವಣೆಯಲ್ಲಿ ಸೋಲುಕಂಡಿರುವ ಕಾರಣ ಅವರನ್ನು ಪಕ್ಷ ನಂಬುವ ಸ್ಥಿತಿಯಲ್ಲಿ ಇಲ್ಲ. ಅಲ್ಲದೇ ಯಡಿಯೂರಪ್ಪ ಹಾಗೂ ಅವರ ಮಕ್ಕಳ ಮುಂದೆ ಲಿಂಗಾಯತ ಮತಗಳನ್ನು ಸೆಳೆಯುವ ತಾಕತ್ತೂ ಕ್ಷೇತ್ರದ ಕಾಂಗ್ರೆಸ್‌ನ ಯಾವ ಲಿಂಗಾಯತ ಮುಖಂಡರಿಗಿಲ್ಲ ಎನ್ನುವುದು ಮನವರಿಕೆಯಾಗಿದೆ.
ಶ್ರೀಕಾಂತ್ ವೈಯಕ್ತಿಕ ಮತಗಳೇ ನಿರ್ಣಾಯಕ:
ಕಾಂಗ್ರೆಸ್‌ನತ್ತ ಚಿತ್ತ ಹರಿಸಿರುವ ಎಂ.ಶ್ರೀಕಾಂತ್ ಅವರು ಈಶ್ವರಪ್ಪ ಸಮುದಾಯದ ನಾಯಕರಾದರೂ, ಶಿವಮೊಗ್ಗದ ಜನರಿಗೆ ನಿಜವಾದ ಜಾತ್ಯಾತೀತ ನಾಯಕ. ಆಪದ್ಭಾಂದವ. ಎಲ್ಲರ ಕಷ್ಟಕ್ಕೂ ಸದಾ ಮಿಡಿಯುವ, ಸ್ಪಂದಿಸುವ ಹೃದಯವಂತ ವ್ಯಕ್ತಿ. 2013ರ ಚುನಾವಣೆಯಲ್ಲಿ ಅವರು ಬಿಜೆಪಿ, ಕೆಜೆಪಿ ಸೇರಿದ್ದರೆ ಆ ಪಕ್ಷದ ಅಭ್ಯರ್ಥಿಗಳೇ ಶಾಸಕರಾಗುತ್ತಿದ್ದರು. ಕ್ಷೇತ್ರದಲ್ಲಿ ಜೆಡಿಎಸ್ ಮತಗಳೇ ಇಲ್ಲದಿದ್ದರೂ, ಮೂರು ಪಕ್ಷಗಳಿಗೆ ಪ್ರಬಲ ಪೈಪೋಟಿ ನೀಡಿ, ಹೆಚ್ಚು ಕಡಿಮೆ ಅಷ್ಟೇ ಸಂಖ್ಯೆಯ ಮತಗಳನ್ನು ಪಡೆದಿದ್ದು ಅವರ ವೈಯಕ್ತಿಕ ಸಾಮರ್ಥ್ಯದ ದ್ಯೋತಕ. ಬಡವರು, ಕಾರ್ಮಿಕರು, ಅಲ್ಪ ಸಂಖ್ಯಾತರು, ಪರಿಶಿಷ್ಟರು, ಲಿಂಗಾಯತರೂ ಸೇರಿದಂತೆ ಎಲ್ಲ ಸಮುದಾಯಗಳ ಒಡನಾಡಿಯಾದ ಅವರಿಗೆ 80 ಸಾವಿರಕ್ಕೂ ಹೆಚ್ಚಿರುವ ಪಕ್ಷದ ಸಾಂಪ್ರದಾಯಿಕ ಮತಗಳು ದೊರೆತರೆ ಈಶ್ವರಪ್ಪ ಅವರನ್ನು ಸುಲಭವಾಗಿ ಮಣಿಸಬಹುದು ಎನ್ನುವ ಲೆಕ್ಕಾಚಾರ ಕೈ ನಾಯಕರಲ್ಲಿದೆ.
ಮತ್ತೊಮ್ಮೆ ಮುಖ್ಯಮಂತ್ರಿಯಾಗುವ ಕನಸು ಕಾಣುತ್ತಿರುವ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ತಮ್ಮ ಅನುಯಾಯಿಗಳ ಮೂಲಕ ಶ್ರೀಕಾಂತ್ ಅವರನ್ನು ಸಂಪರ್ಕಿಸಿದ್ದು, ಪಕ್ಷಕ್ಕೆ ಬರುವಂತೆ ಆಹ್ವಾನಿಸಿದ್ದಾರೆ.