Malenadu Mitra
ರಾಜ್ಯ ಶಿವಮೊಗ್ಗ ಸೊರಬ

ಹಲವು ಸಂದೇಶ ನೀಡಿದ ಈಡಿಗರ ಹಕ್ಕೊತ್ತಾಯ ಸಮಾವೇಶ, ಸಮುದಾಯದ ಮೇಲೆ ಹಿಡಿತ ಕಳೆದುಕೊಳ್ಳುತ್ತಿರುವ ಸಮುದಾಯದ ನಾಯಕರು ಭ್ರಮೆಯಿಂದ ಹೊರಬರಲಿ

ಮಲೆನಾಡಿನ ಪ್ರಭಾವಿ ಮತ್ತು ರಾಜಕೀಯವಾಗಿ ಪ್ರಬಲ ಶಕ್ತಿಯಾದ ಈಡಿಗ ಸಮುದಾಯ ತನಗೆ ಆದ ಅನ್ಯಾಯದ ಬಗ್ಗೆ ಜಾಗೃತವಾಗಿದೆ ಎಂಬುದು ಭಾನುವಾರ ಶಿವಮೊಗ್ಗದಲ್ಲಿ ನಡೆದ ಐತಿಹಾಸಿಕ ಹಕ್ಕೊತ್ತಾಯ ಸಮಾವೇಶದಲ್ಲಿ ಸಾಬೀತಾಗಿದೆ. ಸಮುದಾಯವನ್ನು ಸೂಜಿಗಲ್ಲಿನಂತೆ ಹಿಡಿದಿಟ್ಟುಕೊಂಡಿದ್ದ ಮೋಹಕ ಶಕ್ತಿ ಮಾಜಿ ಮುಖ್ಯಮಂತ್ರಿ ಎಸ್.ಬಂಗಾರಪ್ಪರ ಬಳಿಕ ಇಡೀ ಸಮುದಾಯ ಒಡೆದ ಮನೆಯಾಗಿದೆ. ಸಮುದಾಯದ ಎಲ್ಲಾ ಒಳಸುಳಿಗಳನ್ನೂ ರಾಜಕೀಯದೊಂದಿಗೇ ತಳಕು ಹಾಕುವ ರಾಜಕೀಯ ಪಕ್ಷಗಳು ಮತ್ತು ನಾಯಕರನ್ನು ಆದರಿಸದೇ ಒಂದು ಐತಿಹಾಸಿಕ ಸಮಾವೇಶ ನಡೆದಿದ್ದು ಇದೇ ಮೊದಲಾಗಿದೆ. ರಾಜಕೀಯ ಹಿತಾಸಕ್ತಿಗಳ ತೊಡರುಗಾಲಿನ ನಡುವೆಯೇ ಸಾಗರೋಪಾದಿಯಲ್ಲಿ ಹರಿದು ಬಂದು ನಮಗೆ ನ್ಯಾಯ ಧಕ್ಕಬೇಕು ಎಂದು ಆಗ್ರಹಿಸಲಾಗಿದೆ. ಸಮುದಾಯ ಬೀದಿಗಿಳಿದು ಹೋರಾಟ ಮಾಡಿದ್ದರ ಹಿಂದೆ ಅವರಿಗೊಂದು ಆಕ್ರೋಶವಿದೆ. ಆ ಆಕ್ರೋಶ ತಮ್ಮನ್ನು ಬಿಡುವುದಿಲ್ಲ ಎಂಬುದನ್ನು ಈಡಿಗ ನಾಯಕರು ಅರ್ಥಮಾಡಿಕೊಳ್ಳುವ ಕಾಲ ಸನ್ನಿಹಿತವಾಗಿದೆ.

ಯಾವುದೇ ಒಂದು ಹೋರಾಟ ಜನರ ನಡುವೆ ಹುಟ್ಟಿ, ಜನರ ಹಸಿವಿಗೆ ಅನ್ವರ್ಥವಾಗಿ ಬೆಳೆದು ಜನರ ಆಂದೋಲನವಾದಾಗ ಮಾತ್ರ ಯಶಸ್ವಿಯಾಗುತ್ತದೆ. ಜಗತ್ತಿನಲ್ಲಿ ನಡೆದ ಬಹುತೇಕ ಜನರ ಹೋರಾಟಗಳು ಪೂರಕ ಫಲಿತಾಂಶ ಕಂಡಿವೆ ಮತ್ತು ಜನರ ನಡುವೆ ಬೆಳೆದು ಬಾಳಿವೆ. ಕಾಗೋಡು ಚಳವಳಿ, ರೈತ ಚಳವಳಿ, ದಲಿತ ಚಳವಳಿಗಳು ಈ ನೆಲದಲ್ಲಿಯೇ ಹುಟ್ಟಿದವು ಇಂದೂ ನಮ್ಮ ನಡುವೆ ಇರುವುದು ಇವು ನಾಯಕರ ತಲೆಯಲ್ಲಿ ಮೊಳೆತು ಜನಸಾಮಾನ್ಯರ ತಲೆಯಲ್ಲಿ ಬೆಳೆದಿರುವ ಕಾರಣಕ್ಕೆ ಎಂಬುದು ನಿರ್ವಿವಿವಾದ.

ಎಲ್ಲಾ ಜಾತಿಗಳೂ ಸಂಘಟಿತ

ರಾಜ್ಯದಲ್ಲಿ ಚುನಾವಣೆ ಹೊತ್ತಲ್ಲಿ ಮೀಸಲಾತಿಯ ಹೋರಾಟಗಳು ಪ್ರಬಲವಾಗಿವೆ. ಈ ವಿಚಾರವಾಗಿ ರಾಜಕೀಯ ಪಕ್ಷ ಹಾಗೂ ರಾಜ್ಯ ಸರಕಾರಗಳು ನೀಡುತ್ತಿರುವುದು ಹುಸಿ ಭರವಸೆ ಎಂಬುದು ಎಲ್ಲರಿಗೂ ಗೊತ್ತಿದೆ.ಮೀಸಲಾತಿ ಸಂವಿಧಾನದ ಚೌಕಟ್ಟಿನೊಳಗೆ ನಿಷ್ಕರ್ಶೆಯಾಗಬೇಕಿದೆಇಷ್ಟೆಲ್ಲಾ ಇರುವಾ. ವಿಷಯ ನ್ಯಾಯಾಲಯದ ಮೆಟ್ಟಿಲು ಏರಿದೆ. ರಾಜ್ಯಸರಕಾರಕ್ಕೆ ಮೀಸಲಾತಿ ಹಂಚಿಕೆ ಮಾಡುವ ಅಧಿಕಾರವೂ ಇಲ್ಲ. ಆದರೆ ಮೀಸಲಾತಿಯ ಹೋರಾಟದ ಮೂಲಕ ಎಲ್ಲಾ ಜಾತಿಗಳೂ ತಮ್ಮೊಳಗೆ ಸಂಘಟಿತವಾಗಲು ಮತ್ತು ಸಮಾಜದಲ್ಲಿ ಜಾಗೃತಿ ಮೂಡಿಸಲು ಒಂದು ಅವಕಾಶ ಸಿಕ್ಕಿರುವುದು ಸುಳ್ಳಲ್ಲ.


ರಾಜ್ಯದಲ್ಲಿ ನಾಲ್ಕನೇ ಅತಿ ದೊಡ್ಡ ಸಮುದಾಯ ಎಂದು ಹೇಳಲಾದ ೨೬ ಉಪ ಪಂಗಡಗಳನ್ನು ಹೊಂದಿರುವ ಈಡಿಗರಿಗೆ ನ್ಯಾಯ ಕೇಳುವ ಧ್ವನಿಯೂ ಬಾರದಿರುವುದು ಆ ಸಮುದಾಯದಲ್ಲಿನ ಗಟ್ಟಿ ನಾಯಕತ್ವ ಇಲ್ಲದಿರುವುದು ಮತ್ತು ಇರುವ ನಾಯಕರಲ್ಲಿನ ಬದ್ಧತೆಯ ಕೊರತೆಯಿಂದಾಗಿ ಎಂಬುದು ಅಂಗೈ ಹುಣ್ಣಿನಷ್ಟೇ ಸತ್ಯ. ಮುಂದುವರಿದ ಸಮುದಾಯಗಳ ಹೋರಾಟಗಳು ನಿರ್ಣಾಯಕ ಹಂತಕ್ಕೆ ಬಂದ ಸಂದರ್ಭದಲ್ಲ ಈಡಿಗರ ಸ್ವಾಮೀಜಿಗಳು, ಕೆಲ ಸಂಘಟನೆಗಳು ಬಿಡಿಬಿಡಿಯಾಗಿ ಅಲ್ಲಲ್ಲಿ ಮೀಸಲಾತಿ, ಈಡಿಗ ನಿಗಮದ ಬಗ್ಗೆ ಧ್ವನಿ ಎತ್ತಿದ್ದವು.
ಅವಕಾಶ ಕೈಚೆಲ್ಲಿದ ನಾಯಕರು:

ಶ್ರೀ ನಾರಾಯಣಗುರು ವಿಚಾರ ವೇದಿಕೆ ನೇತೃತ್ವದಲ್ಲಿ ಶಿವಮೊಗ್ಗದಲ್ಲಿ ನಡೆದ ಹೋರಾಟ ಯಶಸ್ವಿಯಾಗಿದೆ. ಆದರೆ ಇದಕ್ಕೆ ಕಾಂಗ್ರೆಸ್‌ನ ಕಾಗೋಡು ತಿಮ್ಮಪ್ಪ, ಮಧುಬಂಗಾರಪ್ಪ, ಬೇಳೂರು ಗೋಪಾಲಕೃಷ್ಣರಂತಹ ನಾಯಕರು ಮತ್ತು ಬಿಜೆಪಿಯ ಕುಮಾರ್ ಬಂಗಾರಪ್ಪ ಅವರು ಕೈಜೋಡಿಸಲಿಲ್ಲ ಎಂದು ಹೇಳಲಾಗಿದೆ. ಬಿಜೆಪಿಯ ಶಾಸಕ ಹರತಾಳು ಹಾಲಪ್ಪ ಮಾತ್ರ ಸಮಾವೇಶದಲ್ಲಿ ಭಾಗಿಯಷ್ಟೇ ಅಗಿ ಎಲ್ಲಾ ಬೇಡಿಕೆಗಳಿಗೂ ತಮ್ಮ ತಾತ್ವಿಕ ಬೆಂಬಲ ಇದೆ. ನನ್ನ ಇತಿಮಿತಿಯಲ್ಲಿ ಪರಿಹಾರಕ್ಕೆ ಪ್ರಯತ್ನಿಸುವೆ ಎಂದು ಹೇಳುವ ಮೂಲಕ ತಮ್ಮ ರಾಜಕೀಯ ಜಾಣ್ಮೆ ಮೆರೆದರು.
ಯುವಜನರು ಸಂಘಟಿತ ಪ್ರಯತ್ನ:

ಸಂಘಪರಿವಾರದ ಮಾಜಿ ನಾಯಕ ಸತ್ಯಜಿತ್ ಸುರತ್ಕಲ್ ಅವರು ನೇತೃತ್ವ ವಹಿಸಿದ್ದರೂ, ಇಡೀ ಸಮಾವೇಶ ಯಶಸ್ವಿಯಾಗಲು ಮತ್ತು ಹಗಲಿರಳೂ ಸಂಘಟನೆ ಮಾಡಲು ಶ್ರಮಿಸಿದವರು, ಮುಡುಬ ರಾಘವೇಂದ್ರ, ರಾಘವೇಂದ್ರನಾಯ್ಕ ಸುಂಟ್ರಳ್ಳಿ, ಹೊದಲ ಶಿವು, ಪ್ರವೀಣ್ ಇಡಗೋಡು, ವಕೀಲ ಕೆ.ಎಲ್.ಉಮೇಶ್ ಸೇರಿದಂತೆ ಎಸ್‌ಎನ್‌ಜಿವಿ ಜಿಲ್ಲಾ ಹಾಗೂ ತಾಲೂಕು ಪದಾಧಿಕಾರಿಗಳು. ಮತ್ತು ಸಮುದಾಯದ ಇತರೆ ಸಂಘಟನೆಗಳ ಯುವ ಮುಂದಾಳುಗಳು. ಶ್ರೀಕ್ಷೇತ್ರ ಸಿಗಂದೂರಿನ ಧರ್ಮದರ್ಶಿ ಡಾ.ಎಸ್.ರಾಮಪ್ಪ ಅವರು ಕಾರ್ಯಾಧ್ಯಕ್ಷರಾಗಿದ್ದು,ಇಡೀ ಹೋರಾಟಕ್ಕೆ ಪ್ರೇರಕ ಶಕ್ತಿಯಾಗಿದ್ದರು. ಹಿರಿಯರಾದ ಮಾಜಿ ಶಾಸಕ ಡಾ.ಜಿ.ಡಿನಾರಾಯಣಪ್ಪ, ಕಲಗೋಡು ರತ್ನಾಕರ್, ಡಾ.ರಾಜನಂದಿನಿ,ಬಂಡಿರಾಮಚಂದ್ರ ಮತ್ತಿತರರ ಸಾತ್ವಿಕ ಬೆಂಬಲ ಮತ್ತು ಶ್ರಮವೂ ಇತ್ತು.

ರಾಜಕೀಯೇತರವಾಗಿದ್ದ ನಿಗಮ, ಮೀಸಲಾತಿ, ಸಿಗಂದೂರು ದೇವಸ್ಥಾನದಲ್ಲಿ ಅನ್ಯರ ಹಸ್ತಕ್ಷೇಪ, ಶರಾವತಿ ಸಂತ್ರಸ್ತರ ಸಮಸ್ಯೆ ಮತ್ತು ವಿಮಾನ ನಿಲ್ದಾಣಕ್ಕೆ ಬಂಗಾರಪ್ಪರ ಹೆಸರಿಡಬೇಕೆಂಬ ನ್ಯಾಯಯುತ ಬೇಡಿಕೆ ಇಟ್ಟುಕೊಂಡು ಮಾಡಿದ್ದ ಈ ಹೋರಾಟದಲ್ಲಿ ಹಿರಿಯರಾದ ಕಾಗೋಡು ತಿಮ್ಮಪ್ಪ, ಮಧುಬಂಗಾರಪ್ಪ ಮತ್ತುಕುಮಾರ ಬಂಗಾರಪ್ಪ ಬೇಳೂರು ಇವರೆಲ್ಲ ಭಾಗವಹಿಸಿ ಸಮುದಾಯದ ಬೆನ್ನಿಗಿದ್ದೇವೆ ಎಂದು ಹೇಳಬಹುದಿತ್ತು ಆದರೆ ಹಾಗಾಗಲಿಲ್ಲ.

ಕಾಗೋಡು ತಿಮ್ಮಪ್ಪ ಅವರ ಚಿಂತನೆ ಬಡವರ ಪರ ಅವರಿಗಿರುವ ಬದ್ಧತೆಯನ್ನು ಯಾರೂ ಪ್ರಶ್ನೆಮಾಡಲಾಗದು. ಆದರೆ ತಮ್ಮ ರಾಜಕೀಯದುದ್ದಕ್ಕೂ ಬೆಂಬಲ ನೀಡಿದ್ದ ಜಾತಿಯ ಸಮಾವೇಶಕ್ಕೆ ನಾ ಸೀಮಿತವಲ್ಲ. ಸಮಾಜವಾದಿ ಮತ್ತು ನಿಷ್ಟಾವಂತ ಕಾಂಗ್ರೆಸ್ಸಿಗ ಎಂಬ ಹೇಳಿಕೆ ನೀಡಿ ಗೊಂದಲಕ್ಕೆ ಕಾರಣವಾಗಿದ್ದರ ಬಗ್ಗೆಯೂ ಬಹಳಷ್ಟು ಚರ್ಚೆಯಾಯಿತು. ಈಡಿಗ ಸಮುದಾಯ ಬೆಂಬಲಿಸಿದರೆ ಮಾತ್ರ ಮಲೆನಾಡು ಮತ್ತು ಕರಾವಳಿಯಲ್ಲಿ ಕಾಂಗ್ರೆಸ್ ಬೇಳೆ ಬೇಯಿವುದು ಎಂಬ ಸತ್ಯ ಆ ಹಿರಿಯ ರಾಜಕೀಯ ಮುತ್ಸದ್ದಿಗೆ ಇಷ್ಟು ಬೇಗ ಮರೆತುಹೋಗಿದ್ದು ಮಾತ್ರ ದುರಂತವೇ ಸರಿ.


ಬಂಗಾರಪ್ಪರ ಬೆನ್ನಿಗೆ ನಿಂತಿದ್ದು ಜಾತಿ:

ಮಾಜಿ ಮುಖ್ಯಮಂತ್ರಿ ಎಸ್.ಬಂಗಾರಪ್ಪ ಅವರೊಬ್ಬ ಈ ರಾಜ್ಯ ಕಂಡ ಮಾಸ್‌ಲೀಡರ್, ಅವರು ಸರ್ವಜಾತಿಯ ನಾಯಕನಾಗಿ ಬೆಳೆಯಲು ಮೊದಲು ಶಕ್ತಿ ನೀಡಿದ್ದು ಅವರದೇ ಆದ ಈಡಿಗ ಸಮುದಾಯ ಎಂಬುದು ರಾಜಕೀಯ ಇತಿಹಾಸ ಬಲ್ಲವರಿಗೆ ಗೊತ್ತಿದೆ. ನಾಮಪತ್ರ ಸಲ್ಲಿಸಿ ಫಲಿತಾಂಶದ ದಿನ ಬಂದರೆ ಸಾಕು ಅರನ್ನು ಗೆಲ್ಲಿಸಲಾಗುತಿತ್ತು. ಅವರೂ ಈಡಿಗ ಸೇರಿದಂತೆ ಹಿಂದುಳಿದ ಜಾತಿಗಳ ಬಗ್ಗೆ ಕಾಳಜಿ ಹೊಂದಿದ್ದರು. ಈ ಕಾರಣದಿಂದ ಅವರಿರುವ ತನಕ ಈಡಿಗ ಸಮುದಾಯ ಅವರ ಬೆನ್ನಿಗಿತ್ತು. ಈ ಸತ್ಯ ಅರಿಯದ ಅವರ ಪುತ್ರರು ಈಡಿಗ ಸಮುದಾಯದ ಹಕ್ಕೊತ್ತಾಯ ಸಮಾವೇಶದಿಂದ ಅಂತರ ಕಾಪಾಡಿಕೊಂಡಿದ್ದು, ರಾಜಕೀಯವಾಗಿ ಅಪಕ್ವ ನಿರ್ಧಾರವೇ ಸರಿ ಎಂಬ ಚರ್ಚೆ ಸಮುದಾಯದಲ್ಲಿ ಆರಂಭವಾಗಿದೆ. ಸಮಾವೇಶ ಸಂಘಟಿಸಿದವರ ಉದ್ದೇಶ ಸಮಾಜದಲ್ಲಿ ಜಾಗೃತಿ ಮೂಡಿಸುವುದು ಮತ್ತು ನ್ಯಾಯಯುತ ಬೇಡಿಕೆ ಕೇಳುವುದಾಗಿತ್ತು. ರಾಜಕೀಯವಾಗಿ ಕವಲುದಾರಿಯಲ್ಲಿರುವ ಸಮುದಾಯವನ್ನು ಸಂಘಟಿಸುವ ಅವಕಾಶ ತಾನಾಗಿಯೇ ಬಂದಿದ್ದರೂ ಬಂಗಾರಪ್ಪ ಪುತ್ರರು ಅದನ್ನು ಬಳಸಿಕೊಳ್ಳಲಿಲ್ಲ.
ಭ್ರಮೆ ಕಳಚದಿದ್ದರೆ ಉಳಿಗಾಲವಿಲ್ಲ:
ರಾಜಕೀಯ ಪಕ್ಷಗಳಲ್ಲಿ ಹರಿದು ಹಂಚಿಹೋಗಿರುವ ಸಮುದಾಯದ ವಿಚಾರದಲ್ಲಿ ಒಂದಾಗದಿದ್ದರೂ, ಆವರ ಮರ್ಜಿಗೆ ಕಾಯದ ಜನ ಸಂಘಟನೆ ಯಾರು ಮಾಡಿದರೇನು, ಬೇಡಿಕೆ ನ್ಯಾಯಯುತ ಎಂದು ಸಾಗರೋಪಾದಿಯಲ್ಲಿ ಬಂದು ಹಕ್ಕೊತ್ತಾಯ ಮಂಡಿಸಿದ್ದಾರೆ. ಸಂಘಟಕರಿಗೆ ರಾಜಕೀಯ ಸೇರಿದಂತೆ ಅನ್ಯ ಹಿತಾಸಕ್ತಿ ಇಲ್ಲದಿದ್ದರೆ ಇದೊಂದು ಜನಾಂದೋಲನವಾಗುವ ಅವಕಾಶವೂ ಇದೆ. ಬಂಗಾರಪ್ಪ ಅವರಿಗೆ ಎಲ್ಲಾ ಶಕ್ತಿಯೂ ಇತ್ತು. ಅವರ ಬದುಕೇ ಒಂದು ರಾಜಕೀಯ ಹೋರಾಟವಾಗಿತ್ತು. ಜನಮಾನಸದ ನಾಯಕನಾಗಿ ಜನರೊಂದಿಗೆ ಅವರಿಗಿರುವ ಬಾಂಧವ್ಯವೇ ಬೇರೆಯಾಗಿದ್ದರಿಂದ ಅವರೊಬ್ಬ ಯಶಸ್ವಿ ರಾಜಕಾರಣಿಯಾಗಿದ್ದರು. ಆದರೆ ಈಗಿನ ಎರಡನೇ ಹಂತದ ನಾಯಕರು ತಮಗಿರುವ ಭ್ರಮೆಯನ್ನು ಕಳಚಿ ಜನಸಮುದಾಯವನ್ನು ಸೇರಿಕೊಳ್ಳದಿದ್ದರೆ ಈಡಿಗ ಸಮುದಾಯ ಯಾರನ್ನೂ ಕೇಳುವುದಿಲ್ಲ ಎಂಬ ಸಂದೇಶವನ್ನಂತು ಹಕ್ಕೊತ್ತಾಯ ಸಮಾವೇಶ ನೀಡಿದೆ ಎನ್ನಬಹುದು.

Ad Widget

Related posts

ರಾಗಿಗುಡ್ಡ ಗಲಭೆ ಪ್ರಕರಣ ನ್ಯಾಯಾಂಗ ತನಿಖೆಗೆ ಬಿಜೆಪಿ ಒತ್ತಾಯ

Malenadu Mirror Desk

ಮೈಲುಗಲ್ಲಾಗಲಿರುವ ಸರಕಾರಿ ನೌಕರ ಭವನ

Malenadu Mirror Desk

ಭಾನುಮತಿಗೆ ಹೆಣ್ಣು ಮರಿ, ಸಕ್ರೆಬೈಲಿಗೆ ಹೊಸ ಅತಿಥಿ

Malenadu Mirror Desk

Leave a Comment

error: Content is protected !! ಮಲೆನಾಡು ಮಿರರ್‌ನಲ್ಲಿ ಪ್ರಕಟಗೊಂಡ ಸುದ್ದಿ, ಲೇಖನ, ಫೊಟೊಗಳನ್ನುಪೂರ್ವಾನುಮತಿಯಿಲ್ಲದೆ ನಕಲು ಮಾಡುವುದು ಕಾನೂನುಬಾಹಿರವಾಗಿದೆ.