ಶಿವಮೊಗ್ಗ: ಕುವೆಂಪು ಅವರ ವಿಶ್ವಮಾನವ ಪ್ರಜ್ಞೆಯನ್ನು ನಾವು ಅಳವಡಿಸಿಕೊಂಡರೆ ಸಾಮರಸ್ಯದ ಬದುಕನ್ನು ಕಟ್ಟಿಕೊಳ್ಳಬಹುದು. ವೈಚಾರಿಕ ಮತ್ತು ವೈಜ್ಞಾನಿಕ ಮನೋಭಾವವನ್ನು ಬದುಕಿನಲ್ಲಿ ರೂಢಿಸಿಕೊಂಡರೆ ಯಾವುದೂ ಕಷ್ಟವಲ್ಲ. ಜನತೆಯಲ್ಲಿ ವೈಚಾರಿಕ ದೃಷ್ಟಿ ಮತ್ತು ವೈಜ್ಞಾನಿಕ ಚಿಂತನೆ ಮಾಡುವುದಕ್ಕೆ ಸಾಹಿತ್ಯ ಸಮ್ಮೇಳನಗಳು ಪ್ರೇರೇಪಿಸಬೇಕು ಎಂದು ೧೭ನೆಯ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷ ಲಕ್ಷ್ಮಣ ಕೊಡಸೆ ಹೇಳಿದರು.
ಬುಧವಾರ ಇಲ್ಲಿನ ಸಾಹಿತ್ಯ ಗ್ರಾಮದಲ್ಲಿ ಆರಂಭವಾದ ಎರಡು ದಿನಗಳ ಜಿಲ್ಲಾ ಸಾಹಿತ್ಯ ಸಮ್ಮೇಳನದಲ್ಲಿ ಸರ್ವಾಧ್ಯಕ್ಷಪೀಠದಿಂದ ಮಾತನಾಡಿದ ಅವರು, ನಮ್ಮ ಬದುಕು ಸಾಹಿತ್ಯಕ್ಕಿಂತಲೂ ಶ್ರೇಷ್ಠ. ಸಾಮರಸ್ಯದ ಬದುಕು ನಮ್ಮ ಪರಂಪರೆಯಿಂದ ಬಂದದ್ದು. ಇದರ ಆಚರಣೆ ಕಷ್ಟವಲ್ಲ. ಆದರೆ, ಇದರಂತೆ ಅನುಸರಿಸಲು ಧೈರ್ಯ ಬೇಕು. ಸ್ವತಂತ್ರ ಆಲೋಚನೆ ಮಾಡುವುದರಿಂದ ಅಂಧಾನುಕರಣೆಗಳು ಸಡಿಲಗೊಳ್ಳುತ್ತದೆ. ಪ್ರಶ್ನಿಸುವ ಧೈರ್‍ಯಕ್ಕೆ ಮೌಢ್ಯ ತಲೆಬಾಗುತ್ತದೆ ವೈಜ್ಞಾನಿಕ ಚಿಂತನೆಗೆ ಸಂಪ್ರದಾಯ ಮಣಿಯುತ್ತದೆ ಎಂದರು.
ಸಾಹಿತ್ಯ ಬದುಕಿನ ಪ್ರತಿಬಿಂಬ. ಜನತೆ ಶಾಂತಿ-ನೆಮ್ಮದಿಯಿಂದ ಬದುಕುವುದನ್ನು ಸಾಹಿತಿ ಬಯಸುತ್ತಾನೆ. ಅವರ ದುಃಖ ದುಮ್ಮಾನಗಳಿಗೆ ದನಿಯಾಗುತ್ತಾನೆ. ಜನತೆಯ ಬದುಕಿನ ಹೋರಾಟವನ್ನು ಸಹಾನುಭೂತಿಯಿಂದ ಕಂಡು ವಾಸ್ತವ ದೃಷ್ಟಿಯಿಂದ ಅದನ್ನು ಅರ್ಥೈಸಿ ಸ್ಥಾಯಿಯಾಗಿಸಿ ರಚನೆಯಾದ ಕತೆ, ಕಾಋಂಬರಿಗಳು ಸಾಹಿತ್ಯ ಕೃತಿಗಳಷ್ಟೇ ಆಗಿರದೆ ಮಾನವೀಯ ತುಡಿತದ ಕಾರಣಕ್ಕೆ ಅವು ಚಾರಿತ್ರಿಕ ಮಹತ್ವದ ಕೃತಿಗಳಾಗುತ್ತವೆ.ಈ ನಿಟ್ಟಿನಲ್ಲಿ ನಾ. ಡಿಸೋಜಾ ಅವರ ಬರಹಗಳಿಗೆ ಐತಿಹಾಸಿಕ ಮಹತ್ವವಿದೆ ಎಂದರು.
ಸಾಹಿತಿಯಾದವನಿಗೆ ಬದುಕಿನಿಂದ ಪ್ರೇರಣೆ ಸಿಗುತ್ತದೆ. ಸ್ವಂತ ಅನುಭವವೂ, ಇತರರ ಅನುಭವವೂ ಅವರ ಬರವಣಿಗೆಗೆ ಮೂಲದ್ರವ್ಯವಾಗುತ್ತದೆ. ಜನ ಬದುಕಬೇಕು ಎಂದು ಕಾವ್ಯವನ್ನು ಬರೆದಿದ್ದೇನೆ, ಇದರಲ್ಲಿ ನನಗೆ ಯಾವ ನಿರೀಕ್ಷೆಯೂ ಇಲ್ಲ ಎಂದು ಕವಿ ರಾಘವಾಂಕ ಹೇಳಿದ್ದನ್ನು ಉಲ್ಲೇಖಿಸಿದ ಅವರು, ಇದು ಅತ್ಯಂತ ಸಮಾಜಮುಖಿಯಾದ ಚಿಂತನೆ. ಪಂಪನಿಂದ ಇಂದಿನ ಕವಿಗಳವರೆಗೆ ಸೃಷ್ಟಿಯಾದ ಸಾಹಿತ್ಯದಲ್ಲಿ ಹೀಗೆ ಜನಪರವಾಗಿ ಚಿಂತನೆ ನಡೆಸಿದ ಸಾಹಿತ್ಯಕ್ಕೆ ಮೌಲ್ಯ ಉಳಿದುಕೊಂಡಿದೆ ಎಂದರು.
ಕಲಾಪ್ರಕಾರಗಳ ದಾಖಲೀಕರಣ ಆಗಲಿ
ಮಲೆನಾಡಿನ ಮೂಲನಿವಾಸಿಗಳು ಎನ್ನಬಹುದಾದ ತೀರ್ಥಹಳ್ಳಿ, ಹೊಸನಗರ, ಸಾಗರ, ಸೊರಬ ತಾಲ್ಲೂಕುಗಳಲ್ಲಿ ಸಾಂಸ್ಕೃತಿಕ ಚಹರೆಯ ಕಲಾಪ್ರಕಾರಗಳಿವೆ. ಪ್ರದರ್ಶಕ ಕಲೆಯಾಗಿ ಡೊಳ್ಳು ಕುಣಿತ, ದೀಪಾವಳಿ ಹಬ್ಬದ ಹಿನ್ನೆಲೆಯಲ್ಲಿ ಆಚರಿಸುವ ಅಂಟಿಕೆ ಪಿಂಟಿಕೆ, ಮದುವೆ ಸಂದರ್ಭಗಳಲ್ಲಿ ವ್ಯಾಪಕವಾಗಿ ಬಳಕೆಯಲ್ಲಿರುವ ಹಸೆ ಚಿತ್ತಾರ, ರೈತಾಪಿ ಸಂಭ್ರಮದ ಭೂಮಿ ಹುಣ್ಣಿಮೆ ಹಬ್ಬದಲ್ಲಿ ಬಳಕೆಯಲ್ಲಿರುವ ಭೂಮಣ್ಣಿ ಬುಟ್ಟಿಗಳಲ್ಲಿನ ಚಿತ್ತಾರಗಳು ದೇಸೀಯ ಕಲೆಗಳ ಅನನ್ಯ ಮಾದರಿಗಳು, ಮದುವೆ ಮನೆಯಲ್ಲಿ ಹಸೆಗೋಡೆಯ ಅಸ್ತಿತ್ವವನ್ನು ಕುವೆಂಪು ಅವರೇ ತಮ್ಮ ಮಲೆಗಳಲ್ಲಿ ಮದುಮಗಳು ಕಾದಂಬರಿಯಲ್ಲಿ ದಾಖಲಿಸಿದ್ದಾರೆ ಎಂದರು.
ಮಲೆನಾಡಿನ ವಿಶಿಷ್ಟ ಜಾನಪದ ಕಲಾಪ್ರಕಾರವಾಗಿರುವ ಹಸೆ ಚಿತ್ತಾರವು ಮಲೆನಾಡಿನ ಅಪ್ಪಟ ದೇಸೀಕಲೆಯಾಗಿದೆ. ಬಿಹಾರದ ಮಿಥಿಲಾ ಪ್ರದೇಶಕ್ಕೆ ಸೇರಿದ ಆದಿವಾಸಿ ಚಿತ್ರಕಲೆ ಮಧುಬನಿ ಕಲೆಯಂತೆ, ಮಹಾರಾಷ್ಟ್ರದ ಆದಿವಾಸಿಗಳ ವರ್ಲಿ ಚಿತ್ರಕಲೆಯಂತೆ ಜಾಗತಿಕ ಮನ್ನಣೆ ಪಡೆಯಬಲ್ಲ ಅಪ್ಪಟ ಜಾನಪದ ಕಲೆ ಹಸೆ. ಈ ಚಿತ್ತಾರವನ್ನು ರಾಷ್ಟ್ರೀಯ ಪ್ರದರ್ಶನಗಳಲ್ಲಿ ಪ್ರದರ್ಶಿಸಿ ರಾಷ್ಟ್ರಪ್ರಶಸ್ತಿಯನ್ನು ಪಡೆದವರು ಹಸುವಂತೆ ಈಶ್ವರ ನಾಯ್ಕ. ಹಸೆ ಚಿತ್ತಾರ ಪರಿಷತ್ತನ್ನು ಸ್ಥಾಪಿಸಿ ವೈಯಕ್ತಿಕ ನೆಲೆಯಲ್ಲಿ ಪ್ರಯತ್ನ ನಡೆಸುತ್ತಿರುವ ಕಲಾವಿದ ರವಿರಾಜ ಸಾಗರ್ ಹಾಗೂ ಇನ್ನಿತರ ಉತ್ಸಾಹಿ ಕಲಾವಿದರೊಂದಿಗೆ ಕನ್ನಡ ಸಾಹಿತ್ಯ ಪರಿಷತ್ತಿನಂತಹ ಪ್ರಾತಿನಿಧಿಕ ಸಂಸ್ಥೆಗಳು ಮುಂದಾಗಬೇಕಿದೆ ಎಂದರು.
ಅತಿವೃಷ್ಟಿ, ತೀವ್ರ ಬರಗಾಲ ಪರಿಸ್ಥಿತಿಯಿಂದ ಮುಕ್ತವಾಗಿದ್ದ ಮಲೆನಾಡು ಇತ್ತೀಚಿನ ದಶಕಗಳಲ್ಲಿ ಅರಣ್ಯ ಅತಿಕ್ರಮಣದಿಂದ ಅಕಾಲದಲ್ಲಿ ಮಳೆ, ಕೆಲವು ಕಡೆ ಹೆಚ್ಚು ಮಳೆ, ಗುಡ್ಡ ಕುಸಿತದಂತಹ ದುರಂತಗಳಿಗೆ ಸಾಕ್ಷಿಯಾಗುತ್ತಿದೆ. ಇತ್ತೀಚೆಗೆ ವರದಿಯಾದ ಜೋಶಿಮಠದ ದುರಂತ ಎರಡು ವರ್ಷಗಳ ಹಿಂದೆ ಮಂಡಗದ್ದೆ ಸಮೀಪದ ಸಿಂಗನಬಿದರೆಯಲ್ಲಿ ಗುಡ್ಡ ಕುಸಿದು ಅಡಿಕೆ ತೋಟಗಳೇ ನೆಲಸಮವಾದ ಘಟನೆಯನ್ನು ನೆನಪಿಸುತ್ತದೆ.
–ಲಕ್ಷ್ಮಣ ಕೊಡಸೆ
ಬದುಕು ಒಳಗೊಳ್ಳುವ ಸಾಹಿತ್ಯದಿಂದ ಸಂತೋಷ: ನಾ ಡಿಸೋಜಾ
ಯಾವ ಸಾಹಿತ್ಯ ನಮ್ಮ ಬದುಕಿನ ಎಲ್ಲವನ್ನೂ ಒಳಗೊಂಡಿರುತ್ತದೆಯೋ ಅದು ಹೆಚ್ಚು ಸಂತೋಷವನ್ನು ನೀಡುತ್ತದೆ. ಅಂತಹ ಸಾಹಿತ್ಯದ ಮೂಲಕ ಜನರ ಬದುಕು ರೂಪಿಸಬೇಕೆಂದು ಸಾಹಿತಿ ನಾ. ಡಿಸೋಜಾ ಸಲಹೆ ನೀಡಿದರು.
ಬುಧವಾರ ಇಲ್ಲಿನ ಸಾಹಿತ್ಯ ಗ್ರಾಮದಲ್ಲಿ ಜಿಲ್ಲಾ ೧೭ನೆಯ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಸಾಹಿತ್ಯ ಎಲ್ಲರಿಗೂ ಬೇಕು. ಸಾಕಷ್ಟು ಪ್ರೋತ್ಸಾಹವೂ ಇದೆ. ಘನತೆ ಇದೆ. ಸಾಹಿತ್ಯದ ಬಗ್ಗೆ ಜನರ ಆಸಕ್ತಿ ಇದೆ. ಸಾಹಿತ್ಯದ ಮೂಲಕ ಯಾವ ಭಾಷೆಯನ್ನು ನಾವು ಬೆಳೆಸುತ್ತೇವೆಯೋ ಅದು ನಮ್ಮನ್ನು ಬೆಳೆಸುತ್ತದೆ. ಮಹಾರಾಷ್ಟ್ರದಲ್ಲಿ ಇದನ್ನು ಕಾಣಬಹುದು. ಪೂನಾದ ಬ್ಯಾಂಕ್ ಒಂದರಲ್ಲಿ ಇಂಗ್ಲೀಷ್‌ನಲ್ಲಿರುವ ಬ್ಯಾಂಕಿನ ವ್ಯವಹಾರವನ್ನು ಗ್ರಾಹಕರಿಗೆ ಸ್ಥಳೀಯ ಭಾಷೆಯಲ್ಲಿ ಅನುವಾದಿಸಿ ಕೊಡಲು ಒಬ್ಬ ಅನುವಾದಕನನ್ನು ನೇಮಿಸಲಾಗಿದೆ. ಈ ಮೂಲಕ ಸ್ಥಳೀಯ ಭಾಷೆಯನ್ನು ಬೆಳೆಸಲಾಗುತ್ತಿದೆ. ಅಂತಹ ವಾತಾವರಣ ಇಲ್ಲಿಯೂ ನೆಲೆಯೂರಬೇಕು. ಭಾಷೆ ಬೆಳೆದರೆ ಸಾಹಿತ್ಯವೂ ಬೆಳೆಯುತ್ತದೆ ಎಂದರು.
ಡಾ. ಆರುಂಡಿ ನಾಗರಾಜಪ್ಪ ಅವರು ಸೇರಿದಂತೆ ವಿವಿಧ ಹೊಸ ಪುಸ್ತಕಗಳನ್ನು ಬಿಡುಗಡೆಗೊಳಿಸಿದ ವಿಧಾನ ಪರಿಷತ್ ಸದಸ್ಯ ಆಯನೂರು ಮಂಜುನಾಥ, ಸಾಹಿತ್ಯ ಮತ್ತು ಸಂಸ್ಕೃತಿ ಕ್ಷೇತ್ರದಲ್ಲಿ ಜಿಲ್ಲೆ ಹೆಸರುವಾಸಿ, ರಾಷ್ಟ್ರಕವಿ, ಜ್ಞಾನಪೀಠ ಮೊದಲಾದ ಪ್ರಶಸ್ತ್ತಿ ಯಾವ ಜಿಲ್ಲೆಗೂ ಸಿಗದಷ್ಟು ಈ ಜಿಲ್ಲೆಗೆ ಸಿಕ್ಕಿದೆ. ರಾಜಕಾರಣಿಗಳು ಬೇರೆ ಪಕ್ಷದವರಾದರೂ ಒಂದೇ ವೇದಿಕೆಗೆ ಬರುತ್ತಾರೆ. ಆದರೆ ಸಾಹಿತಿಗಳು ಸೇರುತ್ತಿಲ್ಲ. ಸಮ್ಮೇಳನದಂತಹ ಅದ್ಭುತ ಅವಕಾಶದಲ್ಲ್ಲಿ ಸಾಹಿತಿಗಳೆಲ್ಲ ಒಂದಾಗಬೇಕು. ಆ ಮೂಲಕ ತಮ್ಮ ಏಕತೆಯನ್ನು ಸಾಬೀತುಪಡಿಸಬೇಕು ಎಂದರು.
ನಿಕಟಪೂರ್ವ ಸಮ್ಮೇಳನಾಧ್ಯಕ್ಷ ಕೆಳದಿ ಗುಂಡಾ ಜೋಯಿಸ್ ಸಾಹಿತ್ಯ ಸಮ್ಮೇಳನದ ಲಾಂಛನವನ್ನು ಲಕ್ಷ್ಮಣ ಕೊಡಸೆ ಅವರಿಗೆ ಹಸ್ತಾಂತರಿಸಿ ಮಾತನಾಡಿ, ಕೆಳದಿ ಇತಿಹಾಸ ಕಣ್ಮರೆಯಾಗದಂತೆ ರಕ್ಷಿಸುವ ಗುರುತರ ಜವಾಬ್ದಾರಿ ಇದೆ. ಅನೇಕ ವಿದೇಶಿಯರು ಕೆಳದಿ ಇತಿಹಾಸದ ಮೇಲೆ ಸಂಶೋಧನೆ ಮಾಡಿದ್ದಾರೆ. ಆದರೆ ಕನಡದಲ್ಲಿ ಇದರ ಬಗ್ಗೆ ಬಂದ ಕೃತಿಗಳು ಅತಿ ವಿರಳ. ವೈಜ್ಞಾನಿಕವಾಗಿ ಅಪಾರ ಪ್ರಮಾಣದಲ್ಲಿ ಹಸ್ತ್ತಪ್ರತಿಯನ್ನು ಮತ್ತು ಸುಮಾರು ೨ ಲಕ್ಷದಷ್ಟು ಓಲೆಗರಿಗಳನ್ನು ಸಂಗ್ರಹಿಸಿದ್ದೇನೆ. ಸರಕಾರ ಇವೆಲ್ಲವನ್ನೂ ಸರಿಯಾಗಿ ಕಾಪಾಡುವ ವ್ಯವಸ್ಥೆ ಮಾಡಬೇಕು ಎಂದರು.ಜಿಲ್ಲಾ ಕಸಾಪ ಅಧ್ಯಕ್ಷ ಡಿ. ಮಂಜುನಾಥ ಪ್ರಾಸ್ತಾವಿಕ ಮಾತನಾಡಿದರು.
ಶಿವಮೊಗ್ಗ ತಾಲೂಕು ಸಾಹಿತ್ಯಪರಿಷತ್ ಅಧ್ಯಕ್ಷೆ ಮಹಾದೇವಿ ಸ್ವಾಗತಿಸಿದರು. ನೃಪತುಂಗ ನಿರೂಪಿಸಿದರು. ವೇದಿಕೆಯಲ್ಲಿ ಪಿಯು ಉಪನ್ಯಾಸಕರ ಸಂಘದ ಜಿಲ್ಲಾಧ್ಯಕ್ಷ ಯೋಗೀಶ್, ವಿವಿಧ ತಾಲೂಕುಗಳು ಅಧ್ಯಕ್ಷರು ಹಾಜರಿದ್ದರು.ನಂತರ ಸಾಂಸ್ಕೃತಿಕ ಕಾರ್ಯಕ್ರಮ ಹಾಗೂ ವಿವಿಧ ಗೋಷ್ಠಿಗಳು ನಡೆದವು.