Malenadu Mitra
ರಾಜ್ಯ ಶಿವಮೊಗ್ಗ

ನ್ಯಾಯಾಧೀಶರಿಗೆ ರಾಜಕೀಯ ಅಧಿಕಾರ ನೀಡಿದರೆ ತಪ್ಪು ಸಂದೇಶ, ನಿವೃತ್ತ ನ್ಯಾಯಮೂರ್ತಿ ಹೆಚ್.ಎನ್.ನಾಗಮೋಹನ್ ದಾಸ್ ಅಭಿಪ್ರಾಯ

ಶಿವಮೊಗ್ಗ : ಅರ್ಹತೆ ಅನುಸಾರ ಯಾರಿಗೆ ಯಾವ ಹುದ್ದೆಯನ್ನಾದರೂ ನೀಡಬಹುದು. ಆದರೆ ನಿವೃತ್ತರಾದ ತಕ್ಷಣ ನ್ಯಾಯಾಧೀಶರಿಗೆ ರಾಜಕೀಯ ಸ್ಥಾನಮಾನ ನೀಡುವುದರಿಂದ ಸಮಾಜದಲ್ಲಿ ತಪ್ಪು ಸಂದೇಶಕ್ಕೆ ಕಾರಣವಾಗುತ್ತದೆ ಎಂದು ಹೈಕೋರ್ಟ್ ನಿವೃತ್ತ ನ್ಯಾಯಮೂರ್ತಿ ಹೆಚ್.ಎನ್.ನಾಗಮೋಹನ್‌ದಾಸ್ ಹೇಳಿದರು.
ಶಿವಮೊಗ್ಗ ಪ್ರೆಸ್ ಟ್ರಸ್ಟ್ ಹಾಗೂ ಶಿವಮೊಗ್ಗ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ ಸೋಮವಾರ ಆಯೋಜಿಸಿದ್ದ ಪತ್ರಿಕಾ ಸಂವಾದದಲ್ಲಿ ಅವರು ಮಾತನಾಡಿದರು. ರಾಜ್ಯಪಾಲರ ಹುದ್ದೆಗೆ ನ್ಯಾಯಧೀಶರನ್ನು ನೇಮಕ ಮಾಡುವುದು ಹೊಸದಲ್ಲ. ಅರ್ಹತೆ ಇದ್ದರೆ ನೇಮಕ ಮಾಡಲಿ, ಆದರೆ ನ್ಯಾಯಾಧೀಶರು ನಿವೃತ್ತರಾದ ಕೆಲ ವರ್ಷಗಳ ನಂತರ ನೇಮಕವಾದರೆ ಉತ್ತಮ. ಈಗ ರಾಜ್ಯಪಾಲರ ಕರ್ತವ್ಯ ಏನು ಮತ್ತು ಅವರು ನಿರ್ವಹಿಸುವ ಪಾತ್ರ ಏನು ಎಂಬುದನ್ನು ಸಂವಿಧಾನದಲ್ಲಿ ಸ್ಪಷ್ಟವಾಗಿ ಉಲ್ಲೇಖಿಸಲಾಗಿದೆ. ಇತ್ತೀಚಿನ ವರ್ಷಗಳಲ್ಲಿ ರಾಜ್ಯಪಾಲರುಗಳು ಆಡಳಿತ ಪಕ್ಷಗಳ ಹಿತಕಾಯುವ ಕೆಲಸವನ್ನೇ ಹೆಚ್ಚು ಮಾಡುತ್ತಿದ್ದಾರೆ. ಇಂತಹ ಸೂಕ್ಷ್ಮ ಸನ್ನಿವೇಶದಲ್ಲಿ ನಿವೃತ್ತ ನ್ಯಾಯಮೂರ್ತಿಗಳು ವಿಚಾರ ಮಾಡಬೇಕು ಎಂಬ ಸಲಹೆ ನೀಡಿದರು.

ಸುಮಾರು 44 ಜಾತಿಯವರು ಈಗ ಮೀಸಲಾತಿಯ ಚಳವಳಿಗೆ ಇಳಿದಿದ್ದಾರೆ. ಇವರಲ್ಲಿ ಹೆಚ್ಚಿನವರು ಕೃಷಿಕರಿದ್ದಾರೆ. ಅವರ ಮಕ್ಕಳೆಲ್ಲ ಚೆನ್ನಾಗಿ ಓದಿದ್ದಾರೆ. ಆದರೆ ಕೆಲಸವಿಲ್ಲ. ಆದ್ದರಿಂದ ಎಸ್‌ಸಿಗೆ ಸೇರಿಸಿ, ಎಸ್‌ಟಿ ಸೇರಿಸಿ, ತಮ್ಮ ಮೀಸಲಾತಿ ಬದಲಿಸಿ ಎಂದು ಹೋರಾಟ ಆರಂಭಿಸಿದ್ದಾರೆ. ಇದು ಕೃಷಿಯ ಬಿಕ್ಕಟ್ಟು. ಇದನ್ನು ಪರಿಹರಿಸುವ ನಿಟ್ಟಿನಲ್ಲಿ ಸರಕಾರಗಳು ವಿಚಾರ ಮಾಡಬೇಕು. ಧ್ವನಿಯಿಲ್ಲದವರಿಗೆ ಮೀಸಲಾತಿ ನೀಡಬೇಕು. ಆದರೆ ಯಾರನ್ನು ಯಾವ ಸ್ಥಾನದಲ್ಲಿ ನಿಲ್ಲಿಸಬೇಕು, ಯಾರಿಗೆ ಎಷ್ಟು ಮೀಸಲಾತಿ ನೀಡಬೇಕೆಂಬ ಸ್ಪಷ್ಟ ಮಾರ್ಗದರ್ಶಿ ಎಲ್ಲಿಯೂ ಇಲ್ಲವಾಗಿದೆ ಎದರು.

ಸರ್ಕಾರಿ ಸ್ವಾಮ್ಯದಲ್ಲಿ ಮಾತ್ರ ಮೀಸಲಾತಿ ಇದೆ. ಆದರೆ 6 ಲಕ್ಷ ಕೋಟಿಯಷ್ಟು ಬಂಡವಾಳವನ್ನು ಸರಕಾರ ಹಿಂತೆಗೆದುಕೊಳ್ಳುತ್ತಿದೆ. ಜೊತೆಗೆ 60 ಲಕ್ಷದಷ್ಟು ಹುದ್ದೆ ಖಾಲಿ ಇದೆ. ಇದನ್ನೆಲ್ಲ ತುಂಬದೇ ಮೀಸಲಾತಿಗಾಗಿ ಹೋರಾಟ ಮಾಡಿದರೆ ಪ್ರಯೋಜನವೇನು ಎಂದು ನಾಗಮೋಹನ್‌ದಾಸ್ ಪ್ರಶ್ನಿಸಿದರು.
ಸಮಸ್ಯೆ ಮತ್ತು ಸವಾಲು ಎರಡು ನಮ್ಮ ಮುಂದಿದೆ. ಬಡವರು, ನಿರುದ್ಯೋಗಿಗಳು, ರೈತರು ಮತ್ತು ಜನಸಾಮಾನ್ಯರು ಇದನ್ನು ಅನುಭವಿಸುತ್ತಿದ್ದಾರೆ. ಸಂವಿಧಾನದ ನಾಲ್ಕು ಅಂಗಗಳು ಸಮರ್ಪಕವಾಗಿ ಕಾರ್‍ಯ ನಿರ್ವಹಿಸಬೇಕು. ಆಗ ಮಾತ್ರ ಸಂವಿಧಾನ ಉಳಿಸುವ, ಸಮಸ್ಯೆ ಪರಿಹರಿಸುವ ಕೆಲಸ ಸಾಧ್ಯವಾಗುತ್ತದೆ. ಕೇವಲ ಸಂವಿಧಾನ ತಿದ್ದುಪಡಿಯಿಂದ ಸಮಸ್ಯೆ ಬಗೆಹರಿಯುವುದಿಲ್ಲ. ಅವಶವಿದ್ದಷ್ಟನ್ನೇ ತಿದ್ದುಪಡಿ ಮಾಡಬೇಕೆಂದು ಅವರು ಅಭಿಪ್ರಾಯಪಟ್ಟರು.

ಕೊಲಿಜಿಯಂ ಪದ್ದತಿ ಕುರಿತು ಮಾತನಾಡಿದ ಅವರು, ಈ ವ್ಯವಸ್ಥೆ ಸರಿ ಇಲ್ಲ ಎಂದು ಮಾತನಾಡಿದವರು, ನಿರ್ಣಾಯಕ ಸ್ಥಾನದಲ್ಲಿ ಇದ್ದಾಗಲೂ ವ್ಯವಸ್ಥೆ ಸರಿಯಾಗಲಿಲ್ಲ. ಸರ್ಕಾರ ನ್ಯಾಯಾಂಗ ಮತ್ತು ಜನರ ಮಧ್ಯೆ ಸೇತುವೆಯಾಗಿರಬೇಕು. ರಾಜಕೀಯ ನೇಮಕಾತಿಗಳನ್ನು ಕೈಬಿಡಬೇಕು. ನೇಮಕವಾದ ಕೂಡಲೇ ಅದನ್ನು ಒಪ್ಪಿಕೊಳ್ಳುವ ಮೊದಲು ಆತ್ಮಾವಲೋಕನ ಮಾಡಿಕೊಳ್ಳಬೇಕು ಎಂದು ಹೇಳಿದರು.

ನ್ಯಾಯಾಲಯದಲ್ಲಿ ಪ್ರಕರಣಗಳ ಸಂಖ್ಯೆ ಹೆಚ್ಚುತ್ತಿರುವ ಬಗ್ಗೆ ಪ್ರಸ್ತಾಪಿಸಿದಾಗ, ಹಕ್ಕುಗಳ ರಕ್ಷಣೆಗೆ ಜನರು ನ್ಯಾಯಾಲಯದ ಮೊರೆ ಹೋಗುತ್ತಾರೆ. ಸುಮಾರು ೫ ಕೋಟಿ ಪ್ರಕರಣಗಳು ನ್ಯಾಯಾಲಯದಲ್ಲಿ ಬಾಕಿ ಇವೆ. ನ್ಯಾಯದಾನ ವಿಳಂವಾಗಬಾರದು. ಆದರೆ ನ್ಯಾಯಾಧೀಶರ ನೇಮಕವಾಗುತ್ತಿಲ್ಲ. ಸಾಕಷ್ಟು ನ್ಯಾಯಾಧೀಶರ ಹುದ್ದೆ ಖಾಲಿ ಇದೆ. 10 ಲಕ್ಷ ಜನಸಂಖ್ಯೆಗೆ 21 ನ್ಯಾಯಾಧೀಶರ ಅನುಪಾತ ಸದ್ಯ ಇದೆ. ಜೊತೆಗೆ ಜನರ ಮನಃಸ್ಥಿತಿ ಕೂಡ ಬದಲಾಗಬೇಕು ಎಂದರು.
ನ್ಯಾಯಾಂಗ ವಿಶ್ವಾಸ ಕಳೆದುಕೊಳ್ಳುತ್ತಿದೆ ಎಂಬ ಮಾತು ಎಲ್ಲೆಡೆ ಕೇಳಿಬರುತ್ತಿದೆ. ಏಕೆಂದರೆ ಜನರ ಆಸೆ, ಆಕಾಂಕ್ಷೆಗಳೂ ಸಹ ಏರುತ್ತಲೇ ಇವೆ. ಅದಕ್ಕೆ ಸ್ಪಂದಿಸುವ ಮನೋಭಾವ ಬೇಕು ಎಂದ ಅವರು, ಯಾವುದೇ ನ್ಯಾಯಾಧೀಶರು ನಿರ್ದಿಷ್ಟ ಪ್ರಕರಣಗಳ ವಿಚಾರಣೆಯಿಂದ ಹಿಂದೆ ಸರಿಯುವ ಮುನ್ನ ಸಷ್ಟವಾದ ಕಾರಣ ಕೊಡಬೇಕು ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು. ಪ್ರೆಸ್ ಟ್ರಸ್ಟ್ ಅಧ್ಯಕ್ಷ ಎನ್. ಮಂಜುನಾಥ, ಕಾರ್‍ಯದರ್ಶಿ ನಾಗರಾಜ ನೇರಿಗೆ ಹಾಜರಿದ್ದರು.

ಮಾಧ್ಯಮ ಪ್ರತಿನಿಧಿಗಳಿಗೆ ಕಾನೂನು ಅರಿವು ಅಗತ್ಯವಿದೆ. ದೇಶದ ಪ್ರಮುಖ ಮಾನಹಾನಿ ಪ್ರಕರಣಗಳಲ್ಲಿನ ತೀರ್ಪನ್ನು ಮುಂದಿಟ್ಟುಕೊಂಡು ಅವರಿಗೆ ಮಾಹಿತಿ ಕಾರ್ಯಾಗಾರ ಮಾಡಬೇಕು. ಪತ್ರಕರ್ತರ ಬಗ್ಗೆ ನನಗೆ ವಿಶೇಷ ಪ್ರೀತಿಯಿದೆ. ಆದರೆ ಮಾಧ್ಯಮ ಸಂಸ್ಥೆ ಮಾಲೀಕರ ಮನಸ್ಥಿತಿ ಬದಲಾಗಬೇಕು. ವಾಣಿಜ್ಯೀಕರಣದ ಭರದಲ್ಲಿ ಸುದ್ದಿ ಮತ್ತು ಸತ್ಯ ಸಾಯಬಾರದು.ಸಾಮಾಜಿಕ ಮಾಧ್ಯಮಗಳ ಪೈಪೋಟಿಯಿಂದ ಗುಣಮಟ್ಟದ್ದು ಮಾತ್ರ ಉಳಿದುಕೊಳ್ಳುತ್ತದೆ.

ನ್ಯಾ.ನಾಗಮೋಹನ್ ದಾಸ್

Ad Widget

Related posts

ಇಂಗುಗುಂಡಿಗಳಿಂದ ಅಂತರ್ಜಲ ಅಭಿವೃದ್ಧಿ: ಎಸ್.ಎಂ.ನೀಲೇಶ್

Malenadu Mirror Desk

ಮಲೆನಾಡಿನಲ್ಲಿ ಭೀಕರ ಮಳೆ: ಅಪಾರ ಬೆಳೆ ಹಾನಿ, ಶಿವಮೊಗ್ಗ ನಗರದಲ್ಲಿ ತಗ್ಗು ಪ್ರದೇಶಗಳ ಮನೆಯೊಳಗೆ ಚರಂಡಿ ನೀರು

Malenadu Mirror Desk

ಶಿವಮೊಗ್ಗ ಮಹಾನಗರ ಪಾಲಿಕೆಯಿಂದ 45 ದಿನಸಿ ಕಿಟ್‌

Malenadu Mirror Desk

Leave a Comment

error: Content is protected !! ಮಲೆನಾಡು ಮಿರರ್‌ನಲ್ಲಿ ಪ್ರಕಟಗೊಂಡ ಸುದ್ದಿ, ಲೇಖನ, ಫೊಟೊಗಳನ್ನುಪೂರ್ವಾನುಮತಿಯಿಲ್ಲದೆ ನಕಲು ಮಾಡುವುದು ಕಾನೂನುಬಾಹಿರವಾಗಿದೆ.