ಶಿವಮೊಗ್ಗ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ (ಡಿಸಿಸಿ) ನಲ್ಲಿ ನೇಮಕಾತಿ ಹಗರಣ ನಡೆದಿದ್ದು, ಹುದ್ದೆಯ ಆಕಾಂಕ್ಷಿಗಳಿಂದ 50 ಲಕ್ಷದವರೆಗೆ ಹಣ ಡಿಮಾಂಡ್ ಮಾಡಲಾಗಿದೆ. ಸ್ವತಃ ಅಭ್ಯರ್ಥಿಗಳೇ ಈ ಬಗ್ಗೆ ಬಾಯ್ಬಿಟ್ಟಿದ್ದು, ಮುಂದಿನ ದಿನಗಳಲ್ಲಿ ಸಮಗ್ರ ಹಗರಣವನ್ನು ಬಯಲಿಗೆಳೆಯುವುದಾಗಿ ಪ್ರಗತಿಪರ ಹೋರಾಟಗಾರರಾದ ಕೆ. ಎಲ್. ಅಶೋಕ್ ಮತ್ತು ಸಂಗಡಿಗರು ಹೇಳಿದ್ದಾರೆ.
ಸುದ್ದಿಗೋಷ್ಟಿಯಲ್ಲಿ ಬುಧವಾರ ಮಾತನಾಡಿದ ಅವರು, 2019ರಲ್ಲಿ 84 ಸ್ಥಾನ ತುಂಬಲು ಅರ್ಜಿ ಆಹ್ವಾನಿಸಲಾಗಿತ್ತು. ಆದರೆ ಆ ವೇಳೆ ಸರಕಾರ ಬದಲಾಗಿದ್ದರಿಂದ ಈ ಆದೇಶವನ್ನು ತಡೆಹಿಡಿಯಲಾಗಿತ್ತು. ಕಳೆದ ವರ್ಷ 98 ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿತ್ತು. ಇದಕ್ಕೆ 2022
ರ ನ. 13ರಂದು ಲಿಖಿತ ಪರೀಕ್ಷೆ ನಡೆಸಲಾಗಿದೆ. ಈ ಪರೀಕ್ಷೆಯನ್ನು ರಿಸರ್ವ್ ಬ್ಯಾಂಕ್ ನಿಯಮದ ಪ್ರಕಾರ ಅನುಭವಿ ಸಂಸ್ಥೆಯ ಮೂಲಕ ನಡೆಸಬೇಕಿತ್ತು. ಆದರೆ ಯಾವುದೋ ಅಪರಿಚಿತ ಸಂಸ್ಥೆಯ ಜೊತೆ ಕೈ ಜೋಡಿಸಿ ನಡೆಸಲಾಗಿದೆ. ಪರೀಕ್ಷೆಯ ನಂತರ ಪ್ರಶ್ನೆ ಪತ್ರಿಕೆಯನ್ನು ಅಭ್ಯರ್ಥಿಗಳಿಂದ ಪಡೆಯುವ ಮೂಲಕ ಹಗರಣಕ್ಕೆ ನಾಂದಿ ಹಾಡಲಾಗಿದೆ ಎಂದು ಹೇಳಿದರು
.ಯಾವುದೇ ಪರೀಕ್ಷೆಯಲ್ಲಿ ಪ್ರಶ್ನೆ ಪತ್ರಿಕೆ ಹಿಂಪಡೆಯುವುದಿಲ್ಲ. ಆದರೆ ಓಎಂಆರ್ ಶೀಟ್‌ನಲ್ಲಿ ಉತ್ತರ ಬರೆದ ನಂತರವೂ ಇಲ್ಲಿ ಪ್ರಶ್ನೆ ಪತ್ರಿಕೆ ಹಿಂಪಡೆದಿದ್ದೇಕೆ. ಶಿಕಾರಿಪುರದ ಜಿ. ಕೆ. ಆಕಾಶ್ ಮತ್ತು ಹರಗುವಳ್ಳಿಯ ಡಿ. ಮಂಜುನಾಥ ಎನ್ನುವವರು ನ.16ರಂದೇ ಜಿಲ್ಲಾಧಿಕಾರಿ, ಜಿಲ್ಲಾ ಸಹಕಾರ ಸಂಘಗಳ ಉಪನಿಬಂಧಕರಿಗೆ ಲಿಖಿತ ದೂರು ನೀಡಿದ್ದರು. ಆದರೆ ಈ ದೂರು ಇಲ್ಲಿಯವರೆಗೆ ಏಕೆ ತನಿಖೆಯಾಗಲಿಲ್ಲ, ಯಾರ ಮೇಲೂ ಏಕೆ ಕ್ರ್ರಮ ಜರುಗಿಸಲಿಲ್ಲ ಎಂದು ಪ್ರಶ್ನಿಸಿದರು.
ಪ್ರತಿ ಹುದ್ದೆಗೆ 40ರಿಂದ 50 ಲಕ್ಷ ರೂ ವರೆಗೆ ಹಣ ಡಿಮಾಂಡ್ ಮಾಡಿದ ಬಗ್ಗೆ ದಾಖಲೆ ಇದೆ. ಫೆ. 25ರಂದು ಸಂದರ್ಶನ ಹಮ್ಮಿಕೊಳ್ಳಲಾಗಿದೆ. ಇಷ್ಟ್ಟೆಲ್ಲ ಹಗರಣ ನಡೆದಿರುವುದರಿಂದ ಇದಕ್ಕೆ ತಡೆನೀಡಬೇಕೆಂದು ಸ್ಥಾನಾಕಾಂಕ್ಷಿಗಳು ಹೈಕೋರ್ಟ್ ಮೊರೆ ಹೋಗಿದ್ದಾರೆ. ನ್ಯಾಯಾಲಯದಲ್ಲಿ ಅದರ ವಿಚಾರಣೆ ಫೆ.16ರಂದು ನಡೆಯಲಿದೆ. ಈ ಅಕ್ರಮ ನೇಮಕಾತಿ ವಿರುದ್ಧ ಈ ಬಾರಿ ಅಭ್ಯರ್ಥಿಗಳೇ ತಿರುಗಿ ಬಿದ್ದಿದ್ದ್ದಾರೆ. ನೇಮಕಾತಿ ವಿರುದ್ಧ ಚಳವಳಿ ರೂಪದಲ್ಲಿ ಪ್ರತಿಭಟನೆ, ಹೋರಾಟ ಹಮ್ಮಿಕೊಳ್ಳಲಾಗುವುದು ಎಂದು ಹೇಳಿದರು.
ಡಿಸಿಸಿ ಬ್ಯಾಂಕ್ ವ್ಯವಸ್ಥಾಪಕ ನಿರ್ದೇಶಕರನ್ನು ಅಮಾನತು ಮಾಡಿ ಬಂಧಿಸಬೇಕು. ಒಂದೇ ಸಮುಯದಾಯದ ಅತಿ ಹೆಚ್ಚು ಜನರು ಸಂದರ್ಶನಕ್ಕೆ ಆಯ್ಕೆಯಾಗಿದ್ದಾರೆ. ಈ ರೀತಿ ಆಯ್ಕೆ ಮಾಡಿರುವುದರ ಗುಟ್ಟೇನು? ಇದಕ್ಕೆಲ್ಲ ಸಂಬಂಧಿತ ಬ್ಯಾಂಕ್ ಮತ್ತು ಎಂಡಿಯವರು ಉತ್ತರ ಕೊಡಬೇಕು. ಜಿಲ್ಲಾಧಿಕಾರಿ ಈ ನೇಮಕಾತಿಯನ್ನು ಲೋಕಾಯುಕ್ತ ತನಿಖೆಗೆ ವಹಿಸಬೇಕು ಎಂದು ಒತ್ತಾಯಿಸಿದರು. ಪತ್ರಿಕಾಗೋಷ್ಠಿಯಲ್ಲಿ ಅನನ್ಯ ಶಿವು, ಎಸ್.ಕುಮಾರ್ ಇದ್ದರು.
ಡಿ ಸಿ ಗೆ ಕೊಟ್ಟ ದೂರುಗಳೇನು ?
ಜಿಲ್ಲಾಧಿಕಾರಿಗೆ ದೂರು ಸಲ್ಲಿಸಿರುವ ಇಬ್ಬರು ಸ್ಥಾನಾಕಾಂಕ್ಷಿಗಳಾದ ಆಕಾಶ್, ಮಂಜುನಾಥ ಪರೀಕ್ಷೆಯ ಬಗ್ಗೆ ೯ ಆರೋಪಗಳನ್ನು ಮಾಡಿ ಸೂಕ್ತ ತನಿಖೆ ನಡೆಸಿ ಸ್ಥಾನಾಕಾಂಕ್ಷಿಗಳಿಗೆ ನ್ಯಾಯ ದೊರಕಿಸುವಂತೆ ಮನವಿ ಮಾಡಿದ್ದಾರೆ. ಅವರು ನೀಡಿರುವ ದೂರಿನ ಸಾರಾಂಶ:
* ಅಭ್ಯರ್ಥಿಗಳಿಂದ ಪ್ರಶ್ನೆ ಪತ್ರಿಕೆ ವಾಪಸ್ ಪಡೆದಿದ್ದೇಕೆ?. ಈ ಬಗ್ಗೆ ಮೊದಲೇ ಏಕೆ ಎಲ್ಲಿಯೂ ಹೇಳಿಲ್ಲ?
* ಇದರಿಂದ ಓಎಂಆರ್ ಶೀಟ್‌ನಲ್ಲಿ ಬರೆದ ಉತ್ತರ ಸರಿ ಅಥವಾ ತಪ್ಪು ಎನ್ನುವುದನ್ನು ಪತ್ತೆ ಮಾಡಲು ಆಗುವುದಿಲ್ಲ.
* ಸರಕಾರದ ಯಾವ ಪರೀಕ್ಷೆಯಲ್ಲೂ ವಾಪಸ್ ಪಡೆಯುವ ಪದ್ದತಿ ಇಲ್ಲ. ಪ್ರವೇಶ ಪರೀಕ್ಷೆಗೆ ಹಣ ಪಡೆದಿದ್ದರೂ ಪ್ರಶ್ನೆಪತ್ರಿಕೆಯನ್ನು ಅಭ್ಯರ್ಥಿಗಳಿಗೇಕೆ ಕೊಟ್ಟಿಲ್ಲ?
* ಬ್ಯಾಂಕ್ ಪರೀಕ್ಷೆಯ ಕೀ ಆನ್ಸರ್ ಬಿಡುಗಡೆ ಮಾಡುವ ಪದ್ದತಿ ಇಲ್ಲ. ಪರೀಕ್ಷೆಗೆ ಹಾಜರಾದ ಅಭ್ಯರ್ಥಿಹಳ ಓಎಂಆರ್ ಶೀಟನ್ನು ಹರಿದುಕೊಂಡು ಸಂಗ್ರಹಿಸಲಾಗಿದೆ. ಅಂದರೆ ಹಾಜರಾಗದ ಅಭ್ಯರ್ಥಿಗಳಿಗೂ ಹಾಜರಾಗಿದ್ದಾರೆ ಎಂದು ತೋರಿಸಲು ಇದು ಅವಕಾಶ ಕಲ್ಪಿಸುತ್ತದೆ.
* ಸರಕಾರ ನಡೆಸುವ ಪರೀಕ್ಷೆಯಲ್ಲಿ ಹೆಬ್ಬೆರಳಿನ ಗುರುತು ಪಡೆಯಲಾಗುತ್ತದೆ. ಆದರೆ ಇಲ್ಲಿ ಕೇವಲ ಸಹಿ ಮಾತ್ರ ಪಡೆಯಲಾಗಿದೆ.
* ಪರೀಕ್ಷಾ ಪ್ರವೇಶ ಪತ್ರಕ್ಕೆ ಎರಡು ಭಾವಚಿತ್ರ ತರುವಂತೆ ಸೂಚಿಸಲಾಗಿತ್ತಾದರೂ ಅದನ್ನು ಅಭ್ಯರ್ಥಿಗಳಿಂದ ಪಡೆದಿಲ್ಲ ಏಕೆ?
* ಕೀ ಆನ್ಸರ್ ಬಿಡುಗಡೆ ಮಾಡಿದ ಬಳಿಕ ಆಕ್ಷೇಪ ಸಲ್ಲಿಸಲು ಸರಕಾರಿ ನಿಯಮದಲ್ಲಿ ಅವಕಾಶ ಕೊಡಲಾಗುತ್ತದೆ. ಆದರೆ ಇಲ್ಲಿ ಏಕೆ ಅವಕಾಶ ಕೊಟ್ಟಿಲ್ಲ?
* ಪರೀಕ್ಷೆ ನಡೆಸಲು ಡಿಸಿಸಿ ಬ್ಯಾಂಕ್ ಯಾವ ಸಂಸ್ಥೆಗೆ ಅವಕಾಶ ನೀಡಿದೆ. ಅದು ಸರಕಾರ ನಿಗದಿಪಡಿಸಿದ ಮಾನದಂಡವನ್ನು ಹೊಂದಿದೆಯೇ?
* ಪರೀಕ್ಷೆಯ ಉತ್ತರದ ಕುರಿತು ಯಾವ ಭದ್ರತೆ ಕೈಗೊಳ್ಳಲಾಗಿದೆ, ಪರೀಕ್ಷಾ ಮೌಲ್ಯಮಾಪನ ಮಾಡಿದ ರೀತಿ ಮತ್ತು ಅದಕ್ಕೆ ನೇಮಿಸಿದ ಸರಕಾರದ ಸಿಬ್ಬಂದಿ ಸರಕಾರದ ಮಾನಂದqದಡಿಯಲ್ಲಿ ಬರುತ್ತ್ತಾರೆಯೇ?
ಈ ಎಲ್ಲ ಪ್ರಶ್ನೆಗಳಿಗೂ ಉತ್ತರ ಸಿಕ್ಕಿಲ್ಲ. ಎಲ್ಲವುಗಳ ಬಗ್ಗೆ ತನಿಖೆಮಾಡಿ ಪ್ರತಿಭಾವಂತರಿಗೆ ಅನ್ಯಾಯವಾಗದಂತೆ ಮಾಡಬೇಕೆಂದು ಕೋರಿದ್ದಾರೆ.
ಬ್ಯಾಂಕ್ ನೇಮಕಾತಿ ಪ್ರಕ್ರಿಯೆ ಇನ್ನೂ ನಡೆಯುತ್ತಿದೆ. ಪಾರದರ್ಶಕವಾಗಿ ಪ್ರವೇಶ ಪರೀಕ್ಷೆ ನಡೆಸಲಾಗಿದೆ. ನೇಮಕಾತಿ ವಿಚಾರವಾಗಿ ಮಾಡಿರುವ ಆರೋಪ ನಿರಾಧಾರವಾಗಿದೆ. ಸಹಕಾರ ಇಲಾಖೆ ಮಾರ್ಗದರ್ಶಿಯಂತೆ ನೇಮಕ ಪ್ರಕ್ರಿಯೆ ನಡೆಯುತಿದೆ
ಚನ್ನವೀರಪ್ಪ ಎಂ.ಬಿ. ಅಧ್ಯಕ್ಷರು, ಡಿಸಿಸಿ ಬ್ಯಾಂಕ್