Malenadu Mitra
ರಾಜ್ಯ ಶಿವಮೊಗ್ಗ ಸೊರಬ

ಸೊರಬಕ್ಕೆ ಮಧು ಬಂಗಾರವೊ.. ಕುಮಾರ ಕೃಪೆಯೊ,.. ಅಣ್ತಮ್ಮ ನಡುವೆ ತೀವ್ರ ಪೈಪೋಟಿ, ಜೆಡಿಎಸ್ ಸ್ಪೀಡ್ ಬ್ರೇಕರ್

ಸೊರಬ ಕ್ಷೇತ್ರದಲ್ಲಿ ಬಂಗಾರಪ್ಪರ ಹೆಸರು ಮತ್ತು ಅವರು ಮಾಡಿದ ಕೆಲಸ, ಜಾರಿಗೆ ತಂದ ಯೋಜನೆಗಳು, ಸರ್ವಜಾತಿಗಳೊಂದಿಗೆ ಅವರಿಗಿದ್ದ ಸಂಪರ್ಕವನ್ನು ಬಳಸಿಕೊಳ್ಳಲು ಇಬ್ಬರೂ ಪುತ್ರರೂ ಹವಣಿಸುತ್ತಿದ್ದಾರೆ. ಮತದಾರರು ಮಧು ಬಾಳನ್ನು ಬಂಗಾರ ಮಾಡುವರೊ, ಕುಮಾರನಿಗೆ ಕೃಪೆದೋರುವರೊ ಎಂಬುದನ್ನು ಕಾದು ನೋಡಬೇಕಿದೆ.

ರಾಜ್ಯ ರಾಜಕಾರಣದ ಚುಂಬಕ ಶಕ್ತಿಯಾಗಿದ್ದ ಮಾಜಿ ಮುಖ್ಯಮಂತ್ರಿ ವರ್ಣರಂಜಿತ ರಾಜಕಾರಣಿ ಸಾರೇಕೊಪ್ಪ ಬಂಗಾರಪ್ಪ ಇರುವ ತನಕ ಸೊರಬ ಕ್ಷೇತ್ರ ರಾಜ್ಯ ಹಾಗೂ ದೇಶ ಮಟ್ಟದಲ್ಲಿ ಸುದ್ದಿಯಾಗಿತ್ತು. ಬಂಗಾರಪ್ಪರ ಪುತ್ರರೇ ಮುಖಾಮುಖಿಯಾಗುತ್ತಿರುವ ಕಾರಣದಿಂದ ಈ ಕ್ಷೇತ್ರ ಈಗಲೂ ರಾಜ್ಯದ ಗಮನ ಸೆಳೆದಿದೆ. ತಾಲೂಕಿನ ಬಂಗಾರಪ್ಪ ಅಭಿಮಾನಿಗಳು ಈಗ ಎರಡು ದೋಣಿಯಲ್ಲಿ ಸಾಗುತ್ತಿದ್ದಾರೆ. ಈ ಬಾರಿಯ ಚುನಾವಣೆ ಹಿಂದೆಂದಿಗಿಂತಲೂ ಕುತೂಹಲ ಕೆರಳಿಸಿದೆ. ನಾಲ್ಕು ಬಾರಿ ಶಾಸಕರಾಗಿರುವ ಹಿರಿಮಗ  ಕುಮಾರ ಬಂಗಾರಪ್ಪ, ಅಪ್ಪನ ನೆರಳಲ್ಲಿಯೇ ಇದ್ದು ಉತ್ತರಾಧಿಕಾರಿಯಂತೆ ಬಿಂಬಿತವಾಗಿರುವ  ಒಮ್ಮೆ ಮಾತ್ರ ಶಾಸಕರಾಗಿರುವ ಮಧುಬಂಗಾರಪ್ಪ ನಡುವೆ ತೀವ್ರ ಪೈಪೋಟಿಯಿದೆ. ಜೆಡಿಎಸ್‌ನಿಂದ ಬಾಸೂರು ಚಂದ್ರೇಗೌಡ, ಸಮಾಜವಾದಿ ಪಕ್ಷದಿಂದ ವಿ.ಜಿ.ಪರಶುರಾಮ್, ಎಎಪಿಯಿಂದ ಕೆ.ವೈ.ಚಂದ್ರಶೇಖರ್, ಪ್ರಜಾಕಿಯ ಲಕ್ಷ್ಮೀಕಾಂತ್, ಕೆಆರ್‌ಎಸ್‌ನಿಂದ ಟಿ.ಮಂಜುನಾಥ್ ಪಕ್ಷೇತರವಾಗಿ ಮೂರು ಮಂದಿ ಕಣದಲ್ಲಿದ್ದಾರೆ.

ಬಂಗಾರಪ್ಪ ಅವರು ನಾಲ್ಕು ದಶಕಗಳ ಕಾಲ ಸೊರಬ ರಾಜಕಾರಣವನ್ನು ತಮ್ಮ ಅಂಕೆಯಂತೆ ನಡೆಸಿದವರು. ಸಮಾಜವಾದಿ ನೆಲೆಯಾದ ಸೊರಬ ಕ್ಷೇತ್ರದಲ್ಲಿ ಬಿಜೆಪಿಯನ್ನು ಹೆಮ್ಮರವಾಗಿ ಬೆಳೆಸಿದವರೂ ಅವರೇ, ಈಗ ಅವರ ಮಗ ಕುಮಾರ ಬಂಗಾರಪ್ಪ  ಬಿಜೆಪಿಯ ಹುರಿಯಾಳು. ಜೆಡಿಎಸ್‌ನಿಂದ ಒಮ್ಮೆ ಶಾಸಕರಾಗಿ ನಾಲ್ಕು ಬಾರಿ ಸೋತಿರುವ ಮಧು ಬಂಗಾರಪ್ಪ ಕಾಂಗ್ರೆಸ್ ಪಕ್ಷವನ್ನು ಪ್ರತಿನಿಧಿಸುತ್ತಿದ್ದಾರೆ. ಇದು ಎರಡು ರಾಷ್ಟ್ರೀಯ ಪಕ್ಷಗಳ ನಡುವಿನ ಸ್ಪರ್ಧೆಯಾದರೂ  ಸೊರಬದಲ್ಲಿರುವುದು ಸೋದರರ ನಡುವಿನ ಜಿದ್ದಾಜಿದ್ದಿಯೇ ಆಗಿದೆ. ಕ್ಷೇತ್ರದಲ್ಲಿ ಮೇಲ್ನೋಟಕ್ಕೆ ಈ ಇಬ್ಬರ ನಡುವೆಯೇ ನೇರ ಪೈಪೋಟಿ ಕಂಡು ಬರುತ್ತಿದೆ.
ಬಂಗಾರಪ್ಪ ಕುಟುಂಬ ಒಂದಾಗಿರುವ ತನಕ ಸೊರಬದಲ್ಲಿ ಮತ್ತೊಂದು ರಾಜಕೀಯ ಶಕ್ತಿ ಬೆಳೆದಿರಲಿಲ್ಲ. ಆದರೆ ಈ ಕುಟುಂಬದಲ್ಲಿ ಒಡಕು ಮೂಡಿದ ಬಳಿಕ ಸೊರಬದಲ್ಲಿ ಪರ್ಯಾಯ ರಾಜಕೀಯ ಶಕ್ತಿಗೆ ನಾಯಕತ್ವ ಸಿಕ್ಕಿತು. ೨೦೦೪ ರಲ್ಲಿ ಕುಮಾರ್ ಬಂಗಾರಪ್ಪ ಅವರೇ ಬಂಗಾರಪ್ಪರೊಂದಿಗಿದ್ದ ಮಧುಬಂಗಾರಪ್ಪರನ್ನು ಸೋಲಿಸಿ ಪರ್ಯಾಯ ನಾಯಕತ್ವ ಪಡೆದುಕೊಂಡಿದ್ದರು. ಇದಾದ ಬಳಿಕ ೨೦೦೮ ರಲ್ಲಿ ಸೋದರರ ನಡುವಿನ ಜಗಳದ ಲಾಭ ಪಡೆದಿದ್ದ ಬಿಜೆಪಿ, ಬಂಗಾರಪ್ಪ ಕುಟುಂಬದ ಬಂಧುವೇ ಆಗಿರುವ ಹರತಾಳು ಹಾಲಪ್ಪ ಅವರನ್ನು ಕಣಕ್ಕಿಳಿಸಿ ಗೆಲ್ಲಿಸಿತ್ತು. ಈಗ ಮಧು ಬಂಗಾರಪ್ಪ ಮತ್ತು ಕುಮಾರ್ ಬಂಗಾರಪ್ಪ ಅವರೇ ಪರಸ್ಪರ ರಾಜಕೀಯ ಎದುರಾಳಿಗಳಾಗಿದ್ದು, ಕ್ಷೇತ್ರದ ರಾಜಕಾರಣ ಸ್ಪಷ್ಟವಾಗಿ ಇಬ್ಬಾಗವಾಗಿದೆ.  
ಜಾತಿ ಲೆಕ್ಕಾಚಾರ:
ಸೊರಬ ಕ್ಷೇತ್ರದಲ್ಲಿ ಬಹಸಂಖ್ಯಾತ ಈಡಿಗರೇ ಪ್ರಾಬಲ್ಯ ಹೊಂದಿದ್ದು, ಸುಮಾರು ೬೦ ಸಾವಿರಕ್ಕೂ ಹೆಚ್ಚು ಮತದಾರರಿದ್ದಾರೆ. ಬಲಾಢ್ಯಸಮುದಾಯವಾದ ಲಿಂಗಾಯತರೂ ೪೦ ಸಾವಿರದಷ್ಟಿದ್ದಾರೆ. ಉಳಿದಂತೆ ಪರಿಶಿಷ್ಟ ಜಾತಿ ಮತ್ತು ಪಂಗಡದ ೩೫ ಸಾವಿರ, ೧೫ ಸಾವಿರ ಮಡಿವಾಳರು, ಮುಸ್ಲಿಂ ಸಮುದಾಯದ ೧೨ ಸಾವಿರ, ೧೦ ಸಾವಿರ ಗಂಗಾಮತಸ್ಥರು, ಒಕ್ಕಲಿಗರ ೯ ಸಾವಿರ, ಬ್ರಾಹ್ಮಣ ಸಮುದಾಯದ ೮ ಸಾವಿರ ಹಾಗೂ ಇತರೆ ಜನಾಂಗದ ಸುಮಾರು ೪ ಸಾವಿರ ಮತದಾರರಿದ್ದಾರೆಂದು ಅಂದಾಜಿಸಲಾಗಿದೆ.

ಸಮೀಕರಣ ಹೇಗಿದೆ:
ಬಂಗಾರಪ್ಪರಪ್ಪ ಕುಟುಂಬ ಒಂದಾಗಿರುವ ತನಕ ಈಡಿಗ ಸಮುದಾಯ ಅವರಿಗೆ ಸೋಲಿಲ್ಲದ ಸರದಾರ ಎಂಬ ಬಿರುದು ಬರುವಂತೆ ನೋಡಿಕೊಂಡಿತ್ತು. ರಾಜಕೀಯವಾಗಿ ಕುಟುಂಬದ ದಿಕ್ಕು ಎರಡಾಗುತ್ತಿದ್ದಂತೆ ಆ ಸಮುದಾಯದ ಮತಗಳು ಚದುರಿದ್ದು ಇತಿಹಾಸ. ಪ್ರಸ್ತುತ ರಾಜಕೀಯ ಸನ್ನಿವೇಶದಲ್ಲಿ ಯಾವುದೇ ಸಮುದಾಯ ಸಾರಾಸಗಟಾಗಿ ಒಬ್ಬರನ್ನೇ ಬೆಂಬಲಿಸುವ ಪರಿಸ್ಥಿತಿ ಇಲ್ಲವಾಗಿದೆ. ಯಡಿಯೂರಪ್ಪ ಅವರು ಮುಖ್ಯಮಂತ್ರಿಯಾಗುತ್ತಾರೆಂಬ ಕಾರಣಕ್ಕೆ ಕಳೆದ ಚುನಾವಣೆಯಲ್ಲಿ ಲಿಂಗಾಯತರು ಅವರ ಬೆನ್ನಿಗೆ ನಿಂತಿದ್ದರು. ಆದರೆ ಈಗ ಆ ಸನ್ನಿವೇಶ ಇಲ್ಲವಾಗಿದೆ. ಮಡಿವಾಳ ಸಮುದಾಯದ ಒಲವು ಬಿಜೆಪಿಯತ್ತಲೇ ಹೆಚ್ಚಿದ್ದು, ಮುಸ್ಲಿಂ ಸಮುದಾಯದ ಬೆಂಬಲ ಕಾಂಗ್ರೆಸ್‌ಗಿದೆ. ಉಳಿದ  ಸಮುದಾಯಗಳ ಮತ ಎಲ್ಲ ಕಡೆ ಹಂಚಿಹೋಗುವ ಸಾಧ್ಯತೆ ಇದೆ ಎನ್ನವುದು ಕ್ಷೇತ್ರದಲ್ಲಿರುವ ಜನಾಭಿಪ್ರಾಯ. ಲಿಂಗಾಯತ ಸಮುದಾಯದ ಬಾಸೂರು ಚಂದ್ರೇಗೌಡ ಅವರು ಈ ಬಾರಿ ಜೆಡಿಎಸ್ ಅಭ್ಯರ್ಥಿಯಾಗಿದ್ದು, ಬಂಗಾರಪ್ಪರ ಕಾಲದಿಂದಲೂ ಆ ಕುಟುಂಬದ ಎದುರಾಳಿಯಾಗಿ ಸ್ಪರ್ಧೆ ಮಾಡುತ್ತಲೇ ಇದ್ದಾರೆ. ಹಲವು ಚುನಾವಣೆಗಳಲ್ಲಿ ಈಡಿಗೇತರ ಮತಗಳನ್ನು ಕ್ರೋಢೀಕರಿಸುವ ಅವರ ಪ್ರಯತ್ನ ವಿಫಲವಾಗಿದೆ. ಹಿಂದಿನ ಚುನಾವಣೆಗಳಲ್ಲಿ ಅವರದೇ ಸಮುದಾಯ ಕೂಡಾ ಅವರ ಕೈ ಹಿಡಿದಿರಲಿಲ್ಲ. ಈ ಬಾರಿ ಅವರು  ಎಷ್ಟು ಮತ ಪಡೆಯುತ್ತಾರೆ ಎಂಬುದರ ಮೇಲೆ ಕಾಂಗ್ರೆಸ್ ಹಾಗೂ ಬಿಜೆಪಿ ಅಭ್ಯರ್ಥಿಗಳು ಪಡೆಯುವ ಮತಗಳು ನಿರ್ಣಾಯಕವಾಗಲಿವೆ.

ಗೆಲುವಿಗೆ ಸಕಾರಾತ್ಮಕ ಮತ್ತು ನಕಾರಾತ್ಮಕ ಅಂಶಗಳು

ಕುಮಾರ್ ಬಂಗಾರಪ್ಪ

ನಾಲ್ಕು ಬಾರಿ ಶಾಸಕರಾಗಿರುವ ಹಾಲಿ ಶಾಸಕ ಕುಮಾರ್ ಬಂಗಾರಪ್ಪ ಅವರಿಗೆ ತಮ್ಮ ಅವಧಿಯಲ್ಲಿ ಮಾಡಿರುವ ಕೆಲಸಗಳು ಪೂರಕವಾಗಿವೆ. ಹಾಲಿ ಅವಧಿಯಲ್ಲಿ ತಂದಿರುವ ಸಾವಿರಾರು ಕೋಟಿ ಅನುದಾನ, ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ, ಸಂಸದ ರಾಘವೇಂದ್ರ ಅವರ ಬೆಂಬಲವಿದ್ದು, ಲಿಂಗಾಯತ ಮತಗಳ ಮೇಲೆ ಅವರು ಬೀರುವ ಪ್ರಭಾವ. ಮೂಡಿ,ಮೂಗೂರು ,ಕಚವಿ ಏತಾ ನೀರಾವರಿ ಅನುಷ್ಠಾನ. ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಸೇರಿದಂತೆ ಸ್ಟಾರ್ ಪ್ರಚಾರಕರಿಂದ ಮತಯಾಚನೆ ಪೂರಕ ಅಂಶಗಳಾಗಿವೆ.
ಮೂಲ ಬಿಜೆಪಿಗರ ಅಸಮಾಧಾನ, ಅನೇಕ ಮುಖಂಡರ ಪಕ್ಷ ತ್ಯಾಗ, ಶಾಸಕತ್ವದ ಅವಧಿಯಲ್ಲಿ ಸಾಮಾನ್ಯ ಜನರು ಮತ್ತು ಮುಖಂಡರೊಂದಿಗೆ ಉತ್ತಮ ಬಾಂಧವ್ಯ ಹೊಂದಿಲ್ಲದಿರುವುದು. ಅಧಿಕಾರಿಗಳ ಮೇಲೆ ರೇಗಾಟ, ಪ್ರಮುಖವಾಗಿ ಬಗರ್‌ಹುಕುಂ ಸಾಗುವಳಿದಾರರಿಗೆ ನೀಡಿದ್ದ ಹಕ್ಕುಪತ್ರ ರದ್ದು ಮಾಡಿರುವುದು. ಸೊರಬದಲ್ಲಿ ಭಾರೀ ಭೂಗಳ್ಳತನ ನಡೆದಿದೆ ಎಂಬಂತೆ ಶಾಸನ ಸಭೆಯಲ್ಲಿ ಪ್ರಸ್ತಾಪಿಸಿರುವ ಅಂಶಗಳು ಅವರಿಗೆ ಕ್ಷೇತ್ರದಲ್ಲಿ ಭಾರೀ ವಿರೋಧಕ್ಕೆ ಕಾರಣವಾಗಿವೆ. ಕ್ಷೇತ್ರದಲ್ಲಿ ಕೆಲಸ ಮಾಡಿದ್ದಾರೆ ಆದರೆ ಅವರ ದರ್ಪದ ನಡೆಯಿಂದ ಯಾವ ಮುಖಂಡರು ಅವರ ಬಳಿ ನಿಲ್ಲಲಿಲ್ಲ ಮತ್ತು ಕ್ಷೇತ್ರದಲ್ಲಿರುವ ರೈತರ ಭೂಮಿಗಿರುವ ಹಕ್ಕುಪತ್ರ ಸಮಸ್ಯೆ ಇವರಿಂದ ಈಡೇರದು ಎಂಬ ಭಾವನೆ ಜನರಲ್ಲಿದ್ದು, ಈ ಎಲ್ಲಾ ಅಂಶಗಳು ಅವರಿಗೆ ಮಾರಕವಾಗುವ ಸಾಧ್ಯತೆಗಳಿವೆ.


ಮಧು ಬಂಗಾರಪ್ಪ

ಮಧು ಬಂಗಾರಪ್ಪ ಯಾವತ್ತೂ ಜನರ ಜತೆಗೆ ಇರುತ್ತಾರೆ. ಬಂಗಾರಪ್ಪರ ಉತ್ತರಾಧಿಕಾರಿ ಎಂಬಂತೆ ಬಿಂಬಿತವಾಗಿರುವುದು. ತಂದೆಯಂತೆ ಜನರ ಕಷ್ಟ-ನಷ್ಟಗಳಿಗೆ ಸ್ಪಂದಿಸುವ ಗುಣ. ಮೂಡಿ, ಮೂಗೂರು,ಕಚವಿ ಏತಾ ನೀರಾವರಿ ಯೋಜನೆಗೆ ಹೋರಾಟ,  ಅಂದಿನ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಸರಕಾರದಲ್ಲಿ ಬಜೆಟ್‌ನಲ್ಲಿ ಈ ಯೋಜನೆಗಳನ್ನು ಸೇರಿಸಿದ್ದರು.
ಶಾಸಕರಾದ ಅವಧಿಯಲ್ಲಿ ಅತೀ ಹೆಚ್ಚು ಹಕ್ಕುಪತ್ರ ವಿತರಣೆ. ರೈತರ ಪರ ನಿರಂತರ ಪಾದಯಾತ್ರೆ. ಗೆದ್ದರೆ ಜಿಲ್ಲಾ ಹಾಗೂ ರಾಜ್ಯಮಟ್ಟದಲ್ಲಿ ಪ್ರಬಲ ನಾಯಕತ್ವ ಬೆಳೆಯುತ್ತದೆ. ರಾಜ್ಯ ಕಾಂಗ್ರೆಸ್ ಹಿಂದುಳಿದ ವರ್ಗಗಳ ರಾಜ್ಯಾಧ್ಯಕ್ಷ, ಕಾಂಗ್ರೆಸ್ ಪ್ರಣಾಳಿಕೆ ಸಮಿತಿ ಸದಸ್ಯರಾಗಿರುವುದು.  ತಂದೆಯಂತೆ ಕಷ್ಟ ಎಂದವರಿಗೆ ಕೈ ಎತ್ತಿ ಕೊಡುವ ಮಾತೃಹೃದಯಿ ಎಂಬ ಅಂಶಗಳು ಪೂರಕವಾಗಿವೆ. ನಟ ಶಿವರಾಜ್ ಕುಮಾರ್, ಸೋದರಿ ಗೀತಾ ಶಿವರಾಜ್ ಕುಮಾರ್ ಬೆಂಬಲ ಮತ್ತು ಪ್ರಚಾರದ ಬಲ. ಪತ್ನಿ ಅನಿತಾ ಅವರು ಇದೇ ಮೊದಲ ಬಾರಿಗೆ ಕ್ಷೇತ್ರದಲ್ಲಿ ಮಹಿಳೆಯರ ಮನ ಗೆಲ್ಲುತ್ತಿರುವುದು ರಾಷ್ಟ್ರೀಯ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಕಾಗೋಡು ತಿಮ್ಮಪ್ಪರ ನೈತಿಕ ಬೆಂಬಲ. ಮಧು ಅವರಿರುವ  ಪೂರಕ ಅಂಶಗಳಾಗಿವೆ.
ಮುಖಂಡರುಗಳನ್ನೇ ಹೆಚ್ಚು ನಂಬಿಕೊಂಡಿರುವುದು. ಸಮಸ್ಯೆಗಳ ಅರಿವಿದೆ. ಆದರೆ ಅಧ್ಯಯನ ಮಾಡಿಲ್ಲ ಎಂಬ ನಕಾರಾತ್ಮಕ ಅಂಶಗಳು. ವೈಯಕ್ತಿಕ ವರ್ಚಸ್ಸಿಗಿಂತ ತಂದೆಯ ಹೆಸರನ್ನೇ ಹೆಚ್ಚು ನಂಬಿಕೊಂಡಿದ್ದಾರೆ ಎಂಬ ಮಾರಕ ಅಂಶಗಳು ಮಧು ಅವರಿಗಿವೆ.

 ಹಣದ ಮಾಯೆ
ಕಳೆದ ಚುನಾವಣೆಯಲ್ಲಿ ಸೊರಬ ಸೇರಿದಂತೆ ಜಿಲ್ಲೆಯ ಎಲ್ಲಾ ಕ್ಷೇತ್ರಗಳಲ್ಲಿ ಕಾಂಚಾಣದ ಪಾತ್ರ ಜೋರಾಗಿಯೇ ಇತ್ತು. ಈ ಬಾರಿಯೂ ಕೊನೇ ಕ್ಷಣದಲ್ಲಿ ಹಣದ ಹರಿವು ಹೆಚ್ಚಾಗುವ ಸಾಧ್ಯತೆಯಿದ್ದು, ಮತದಾರರು ಆಮಿಷಕ್ಕೊಳಗಾಗುವರೊ ಇಲ್ಲವೊ ಎಂಬುದನ್ನು ಹೇಳಲಾಗದು.

Ad Widget

Related posts

ಮಲೆನಾಡಿನಲ್ಲಿ ಕೊರೊನ ಹೆಚ್ಚಳ, ಎಲ್ಲೆಲ್ಲಿ ಎಷ್ಟು ಪಾಸಿಟಿವ್ ?

Malenadu Mirror Desk

ಭೂಮಿ ಹಕ್ಕು: ಸಚಿವರ ಭರವಸೆ ನಡುವೆ 7ನೇ ದಿನವೂ ಮುಂದುವರಿದ ರೈತರ ಪ್ರತಿಭಟನೆ

Malenadu Mirror Desk

ಶಿವಮೊಗ್ಗ ಮಾರಿಕಾಂಬೆ ಜಾತ್ರೆಗೆ ಅದ್ದೂರಿ ಚಾಲನೆ, ದೇವಿ ದರ್ಶನಕ್ಕೆ ನೆರೆದ ಭಕ್ತ ಸಾಗರ

Malenadu Mirror Desk

Leave a Comment

error: Content is protected !! ಮಲೆನಾಡು ಮಿರರ್‌ನಲ್ಲಿ ಪ್ರಕಟಗೊಂಡ ಸುದ್ದಿ, ಲೇಖನ, ಫೊಟೊಗಳನ್ನುಪೂರ್ವಾನುಮತಿಯಿಲ್ಲದೆ ನಕಲು ಮಾಡುವುದು ಕಾನೂನುಬಾಹಿರವಾಗಿದೆ.