ಶಿವಮೊಗ್ಗ: ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಅವರು ಚುನಾವಣಾ ರಾಜಕೀಯದಿಂದ ಹಿಂದೆ ಸರಿದ ಮೇಲೆ ಅವರ ಕರ್ಮಭೂಮಿ ಶಿಕಾರಿಪುರದ ಚಿತ್ರಣ ಬದಲಾಗಿದೆ. ಯಡಿಯೂರಪ್ಪರೇನೊ ನನ್ನ ಉತ್ತರಾಧಿಕಾರಿ ಮಗ ವಿಜಯೇಂದ್ರ ಎಂದು ಘೋಷಿಸಿ ಟಿಕೆಟ್ ಕೂಡಾ ಕೊಡಿಸಿದರು. ಆದರೆ ಅಭಿವೃದ್ಧಿ ವಿಚಾರದಲ್ಲಿ ರಾಜ್ಯಕ್ಕೇ ಮಾದರಿಯಾದ ಕ್ಷೇತ್ರದಲ್ಲಿ ಕೆಲಸ ಮಾಡಿದವರಿಗೆ ಜಯ ಖಾತರಿ ಎಂಬ ವಾತಾವರಣ ಸಧ್ಯಕ್ಕಂತೂ ಇಲ್ಲವಾಗಿದೆ.
ಹೌದು!. ದೇಶ ಭೂಪಟದಲ್ಲಿ ವಿಶಿಷ್ಟ ಸ್ಥಾನ ಪಡೆದಿರುವ ಶಿವಶರಣರ ಕ್ಷೇತ್ರ ಶಿಕಾರಿಪುರದಲ್ಲಿ ಆಗಾಗ ಕ್ರಾಂತಿಗಳು ನಡೆದಿವೆ. ಕೊಬ್ಬಿದ್ದ ಬ್ರಿಟಿಷರ ವಿರುದ್ಧ ದಿಟ್ಟ ಹೋರಾಟ ಮಾಡಿ ದೇಶದಲ್ಲಿಯೇ ಮೊದಲ ಸ್ವತಂತ್ರ ಗ್ರಾಮ ಎಂದು ಘೋಷಿಸಿಕೊಂಡ ಈಸೂರು ಇರುವುದೂ ಇದೇ ಶಿಕಾರಿಪುರ ಕ್ಷೇತ್ರದಲ್ಲಿ. ಇದನ್ನು ನೋಡಿದಾಗ ತಾಲೂಕಿನ ಜೀವನದಿ ಕುಮದ್ವತಿಯ ಹರಿವು ಒಂದೇ ರೀತಿಯಲ್ಲಿರುವುದಿಲ್ಲ ಎಂಬುದು ದಿಟ. ಇದು1999 ರ ಚುನಾವಣೆಯಲ್ಲಿ ಯಡಿಯೂರಪ್ಪರಿಗೆ ಅನುಭವಕ್ಕೆ ಬಂದಿದೆ.
ಈ ಬಾರಿಯ ವಿಧಾನ ಸಭೆ ಚುನಾವಣೆಯಲ್ಲಿ ಒಂದು ನಮೂನಿ ಗಾಳಿ ಬೀಸುತ್ತಿದೆ. ರಾಜ್ಯ ಮಟ್ಟದಲ್ಲಿ ಕರ್ನಾಟಕದ ಅಮಿತ್ ಶಾ(ಚಾಣಕ್ಯ) ಎಂಬ ಬಿರುದು ಹೊಂದಿರುವ ಬಿ.ವೈ.ವಿಜಯೇಂದ್ರ ಬೆಜೆಪಿಯ ಪ್ರಬಲ ಅಭ್ಯರ್ಥಿ, ಎಂದಿನಂತೆ ಪೈಲ್ವಾನ್ ಗೋಣಿ ಮಾಲತೇಶ್ ಮೂರನೇ ಬಾರಿ ಕಾಂಗ್ರೆಸ್ ಅಭ್ಯರ್ಥಿಯಾಗಿದ್ದಾರೆ. ಈ ಇಬ್ಬರ ನಡುವೆ ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿದಿರುವ ನಾಗರಾಜ್ ಗೌಡ (ಎಸ್.ಪಿ.ನಾಗನಗೌಡ)ಗಮನ ಸೆಳೆದಿದ್ದಾರೆ. ಹೇಳಿಕೇಳಿ ಶಿಕಾರಿಪುರ ಹೋರಿ ಹಬ್ಬಕ್ಕೆ ಖ್ಯಾತಿಗಳಿಸಿದ ಊರು. ಈ ಬಾರಿಯ ರಣಾಂಗಣದಲ್ಲಿ ನಾಗರಾಜ್ ಗೌಡ ಅವರು ಥೇಟ್ ಗೂಳಿಯಂತೆ ಧೂಳೆಬ್ಬಿಸುತ್ತಿರುವುದರಿಂದ ಶಿಕಾರಿಪುರದಲ್ಲಿನ ರಾಜಕೀಯ ಗಾಳಿಯ ಲಯ ಬದಲಾಗಿದೆ. ಆಪ್‌ನ ಚಂದ್ರಕಾಂತ್ ರೇವಣಕರ್ ಸೇರಿದಂತೆ ೧೦ ಅಭ್ಯರ್ಥಿಗಳು ಕಣದಲ್ಲಿದ್ದರೂ ಮೇಲ್ನೋಟಕ್ಕೆ ನೇರ ಸ್ಪರ್ಧೆ ಇರುವುದು ಬಿಜೆಪಿಯ ಮರಿಹುಲಿ ವಿಜಯೇಂದ್ರ ಮತ್ತು ಪಕ್ಷೇತರ ಅಭ್ಯರ್ಥಿ ನಾಗರಾಜ್ ಗೌಡ ನಡುವೆ.
ಟಿಕೆಟ್ ಸಿಗದಿರುವುದೇ ವರದಾನ
ಕಾಂಗ್ರೆಸ್‌ನಲ್ಲಿ ನಾಗರಾಜ್ ಗೌಡ ಅವರಿಗೆ ಟಿಕೆಟ್ ಸಿಗಲಿದೆ ಎಂದೇ ಹೇಳಲಾಗಿತ್ತು. ಆದರೆ ಕೊನೇ ಕ್ಷಣದ ಪ್ರಯತ್ನ ಹೊರತಾಗಿಯೂ ನಾಗರಾಜ್ ಗೌಡರಿಗೆ ಟಿಕೆಟ್ ಸಿಗಲಿಲ್ಲ. ಕಾಂಗ್ರೆಸ್ ಪಕ್ಷ ಟಿಕೆಟ್ ಕೊಡಲಿಲ್ಲ ಎಂಬ ಸಂಗತಿಯೇ ವರದಾನವಾಗಿ ಶಿಕಾರಿಪುರ ಕ್ಷೇತ್ರದಲ್ಲಿ ಒಂದು ಸ್ವಾಭಿಮಾನಿ ಹೋರಾಟವಾಗಿ ರೂಪುಗೊಂಡಿದೆ. ಜನರೇ ಕರೆದು ತಂದು ನಾಮಪತ್ರ ಹಾಕಿಸಿದ್ದಾರೆ. ಪ್ರತಿ ಊರಿನಲ್ಲಿ ಸ್ವಯಂ ಪ್ರೇರಿತವಾಗಿ ಹಣ ಸಂಗ್ರಹಮಾಡಿ ಚುನಾವಣೆ ಖರ್ಚಿಗೆ ಹಣ ಕೊಡುತ್ತಿದ್ದಾರೆ. ಪ್ರತಿ ಊರಲ್ಲಿ ಕಂಕಣ ಕಟ್ಟಿ, ಆರತಿ ಬೆಳಗಿ ಗೆದ್ದು ಬಾ ವೀರ ಎಂದು ಹಾರೈಸುವ ದೃಶ್ಯ ಕಂಡು ಬರುತ್ತಿವೆ. ಮನೆ ಮಗ ನಾನು, ೨೦ ವರ್ಷಗಳಿಂದ ಬೇರೆಯವರಿಗಾಗಿ ಚುನಾವಣೆ ಮಾಡಿದ್ದೇನೆ. ನಿಮ್ಮ ನಡುವೆ ಇದ್ದು, ನಿಮ್ಮ ಸೇವೆ ಮಾಡುವ ಅವಕಾಶ ಕೊಡಿ ಎಂದು ನಾಗರಾಜ್‌ಗೌಡ ಮತಯಾಚನೆ ಮಾಡುತ್ತಿದ್ದಾರೆ.
ಆರು ತಿಂಗಳ ಮೊದಲೇ ವಿಜಯೇಂದ್ರ ಹೆಸರು:
ಯಡಿಯೂರಪ್ಪ ಅವರು ಚುನಾವಣೆ ನಿವೃತ್ತಿ ಘೋಷಿಸಿದಾಗಲೇ ವಿಜಯೇಂದ್ರ ಶಿಕಾರಿಪುರದ ಹುರಿಯಾಳು ಎಂದು ಹೇಳಲಾಗಿತ್ತು. ಅವರು ಈಗಾಗಲೇ ನಾಲ್ಕು ಸುತ್ತು ಕ್ಷೇತ್ರ ತಿರುಗಿದ್ದಾರೆ. ಯಡಿಯೂರಪ್ಪ ಅವರು ಕ್ಷೇತ್ರದಲ್ಲಿ ನಾಲ್ಕು ದಶಕಗಳ ಮಾಡಿರುವ ಅಭಿವೃದ್ಧಿ ಕೆಲಸದ ಮೈಲುಗಲ್ಲುಗಳು ಪ್ರತಿ ಊರಲ್ಲಿ ಕಾಣುತ್ತಿವೆ. ಕ್ಷೇತ್ರಕ್ಕೆ ಮಾಡಿರುವ ನೀರಾವರಿ ಯೋಜನೆಗಳಿಂದ ಅವರಿಗೆ ಆಧುನಿಕ ಭಗೀರಥ ಎಂದೇ ಕರೆಯಲಾಗುತ್ತಿದೆ. ಕ್ಷೇತ್ರದಲ್ಲಿನ ಮೂಲಭೂತ ಸೌಕರ್ಯಗಳು, ಒಂದು ಜಿಲ್ಲಾ ಕೇಂದ್ರದಲ್ಲಿ ಇರಬಹುದಾದ ಚಿತ್ರಣ ಇದೆ. ಯಡಿಯೂರಪ್ಪ ಮುಖ್ಯಮಂತ್ರಿಯಾಗಿ, ಸಂಸದರಾಗಿ ರಾಘವೇಂದ್ರ ಅವರು ಕ್ಷೇತ್ರಕ್ಕೆ ಭರಪೂರ ಯೋಜನೆ ತಂದಿದ್ದಾರೆ. ಈ ಎಲ್ಲಾ ಅಂಶಗಳು ಅವರ ಪರವಾಗಿವೆ. ಈ ಎಲ್ಲಾ ಪೂರಕ ಅಂಶಗಳು ಅವರನ್ನು ಲೀಲಾಜಾಲವಾಗಿ ಗೆಲ್ಲಿಸಬಹುದು ಎಂಬ ನಿರೀಕ್ಷೆ ಇತ್ತು. ಆದರೆ ಪರಿಸ್ಥಿತಿ ಅವರಂದುಕೊಂಡಂತೆ ಇಲ್ಲ ಎಂಬುದು ಕ್ಷೇತ್ರಕ್ಕೆ ಹೋದ ಮೇಲೆ ಗೊತ್ತಾಗಿದೆ. ವಿಜಯೇಂದ್ರ ಅವರು ಕ್ಷೇತ್ರಕ್ಕೆ ಹೊಸಬರು, ಯಡಿಯೂರಪ್ಪ ಡಿಸಿಎಂ ಆದಂದಿನಿಂದ ಕ್ಷೇತ್ರದ ಜನರಿಗೆ ಸಿಗುತ್ತಿರಲಿಲ್ಲ. ಅವರನ್ನು ತಲಪುಲು ಸಾಮಾನ್ಯ ಜನರಿಗೆ ಆಗುತ್ತಿರಲಿಲ್ಲ. ಕ್ಷೇತ್ರದ ಆಳ ಅಗಲ ಗೊತ್ತಿಲ್ಲದ ವಿಜಯೇಂದ್ರ ಅವರನ್ನು ಗೆಲ್ಲಿಸಿದರೂ ಕೈಗೆ ಸಿಗದ ಶಾಸಕರಾಗುತ್ತಾರೆ ಎಂಬ ಅಪಸ್ವರ ವಿಜಯೇಂದ್ರರಿಗೆ ಸವಾಲಾಗಿದೆ.
ನಾಲ್ಕು ದಶಕ ನಿಮ್ಮನ್ನೇ ಗೆಲ್ಲಿಸಿದ್ಧೇವೆ
ಪಕ್ಷೇತರ ಅಭ್ಯರ್ಥಿ ನಾಗರಾಜ್ ಗೌಡರ ಕುಟುಂಬ ಮೊದಲು ಯಡಿಯೂರಪ್ಪರ ರಾಜಕೀಯಕ್ಕೆ ಬೆಂಬಲ ನೀಡಿದವರೇ,ಈಗ ಪಕ್ಷ ಬದಲಿಸಿದ್ದಾರೆ. ನಾವು ಯಡಿಯೂರಪ್ಪ ಅವರನ್ನು ಮುಖ್ಯಮಂತ್ರಿ ಮಾಡಿದ್ದೇವೆ. ಒಬ್ಬ ಮಗ ರಾಘವೇಂದ್ರ ಅವರನ್ನು ಸಂಸದರನ್ನಾಗಿ ಮಾಡಿದ್ದೇವೆ. ಎಲ್ಲಾ ಚುನಾವಣೆಯಲ್ಲಿ ಅವರಿಗೇ ಲೀಡ್ ಕೊಟ್ಟಿದ್ದೇವೆ. ವಿಜಯೇಂದ್ರ ಅವಗಿರುವ ರಾಜಕೀಯ ಬಲಕ್ಕೆ ರಾಜ್ಯದ ಯಾವ ಕ್ಷೇತ್ರದಲ್ಲಾದರೂ ಗೆಲ್ಲಬಹುದು. ಈಗ ನಮಗೊಂದು ಅವಕಾಶ ಕೊಡಿ. ಊರಿನ ಮಗ ಊರಲ್ಲೇ ಇದ್ದು ಜನ ಸೇವೆ ಮಾಡುವೆ ಎಂದು ಕೇಳುತ್ತಿದ್ದಾರೆ. ನಾಗರಾಜ್ ಗೌಡರ ಸ್ಪರ್ಧೆ ಕ್ಷೇತ್ರದಲ್ಲಿ ಒಂದು ಆಂದೋಲನದಂತೆ ಭಾಸವಾಗುತ್ತಿದೆ ಎಂಬುದು ಕ್ಷೇತ್ರದರ್ಶನ ಮಾಡಿದಾಗ ತಿಳಿದುಬಂದ ಸಂಗತಿ.
ಜಾತಿ ಲೆಕ್ಕಾಚಾರ:
ಒಂದು ಕಾಲದಲ್ಲಿ ಮೀಸಲು ಕ್ಷೇತ್ರವಾಗಿದ್ದ ಶಿಕಾರಿಪುರದಲ್ಲಿ ಎಸ್ಸಿ ಎಸ್ಟಿ ಮತದಾರರು 60(ಬಂಜಾರ ಸೇರಿ) ಸಾವಿರಕ್ಕೂ ಹೆಚ್ಚಿದ್ದಾರೆ. ಲಿಂಗಾಯತ ಮತದಾರರು ಸುಮಾರು 55 ಸಾವಿರವಿದ್ದು, ಅದರಲ್ಲಿ 45ಸಾವಿರಕ್ಕೂ ಹೆಚ್ಚು ಸಾದರ ಲಿಂಗಾಯತರಿದ್ದಾರೆ. 20 ಸಾವಿರ ಮುಸ್ಲಿಮರು, 25ಸಾವಿರ ಬಂಜಾರ ಮತದಾರರಿದ್ದಾರೆ.ಕುರುಬ ಮತ್ತು ವಾಲ್ಮೀಕಿ ಸಮುದಾಯದ ತಲಾ 15 ಸಾವಿರ ಮತದಾರರು ಹಾಗೂ7 ಸಾವಿರ ಈಡಿಗರ ಮತದಾರರಿದ್ದಾರೆ ಎನ್ನಲಾಗಿದೆ.
ಕಾಂಗ್ರೆಸ್‌ನ ಮಾಲತೇಶ್ ಅವರು ಕುರುಬ, ವಿಜಯೇಂದ್ರ ಗಾಣಿಗ ಲಿಂಗಾಯತ ಹಾಗೂ ನಾಗರಾಜ್ ಗೌಡ ಸಾದರ ಲಿಂಗಾಯತ ಸಮುದಾಯದವರಾಗಿದ್ದಾರೆ. ಕ್ಷೇತ್ರದಲ್ಲಿರುವ ೪೦ ಸಾವಿರಕ್ಕೂ ಹೆಚ್ಚಿರುವ ಸಾದರ ಲಿಂಗಾಯತ ಸಮುದಾಯದ ಮುಖಂಡರುಗಳೇ ನಾಗರಾಜ್‌ಗೌಡರನ್ನು ಚುನಾವಣೆಗೆ ನಿಲ್ಲಿಸಿದ್ದಾರೆ. ಇಷ್ಟು ವರ್ಷ ಅವರನ್ನು ಗೆಲ್ಲಿಸಿದ್ದೇವೆ ಈ ಬಾರಿ ನಮ್ಮವರೇ ಪ್ರತಿನಿಧಿ ಇರಲಿ ಎಂಬುದು ಅವರ ವಾದ ಎನ್ನಲಾಗಿದೆ. ಮುಸ್ಲಿಂ ಮತಗಳು ಪ್ರಬಲ ಪೈಪೋಟಿ ನೀಡುವ ಪಕ್ಷೇತರ ಅಭ್ಯರ್ಥಿಪರ ವಾಲುವ ಸಾಧ್ಯತೆಯಿದೆ. ಒಳ ಮೀಸಲಾತಿ ಹೊಡೆತದಿಂದಾಗಿ ಇಷ್ಟುವರ್ಷ ಯಡಿಯೂರಪ್ಪ ಬೆಂಬಲಿಸಿದ ಲಂಬಾಣಿಗರು ಈಗ ನಿಲುವು ಬದಲಿಸಿರುವ ವಾತಾವರಣ ಕ್ಷೇತ್ರದಲ್ಲಿದೆ.
ಬಿರುಸಿನ ಪ್ರಚಾರ :
ಕ್ಷೇತ್ರದಲ್ಲಿ ಅಭ್ಯರ್ಥಿಗಳ ಪ್ರಚಾರ ವೈಖರಿ ಬಿರುಸಾಗಿದೆ. ಬಿಜೆಪಿಯಲ್ಲಿ ಕಾರ್ಯಕರ್ತರ ಜಾಲ ಪ್ರಬಲವಾಗಿದೆ. ಗಟ್ಟಿ ತಳಪಾಯದ ಸಂಘಟನಾ ಶಕ್ತಿ ವಿಜಯೇಂದ್ರ ಪರವಾಗಿ ಕೆಲಸ ಮಾಡುತ್ತಿದೆ. ಯಡಿಯೂರಪ್ಪರ ಪರ ರಾಮನ ಭಂಟ ಹನುಮನಂತೆ ಕಾಯಾವಾಚಾಮನಸಾ ಕೆಲಸ ಮಾಡಿದ್ದ ಕೆ.ಎಸ್.ಗುರುಮೂರ್ತಿ ಎಂಬ ಚುನಾವಣೆ ಪರಿಣತ ಈಗ ಮಗನ ಪರ ಹಗಲಿರಳೂ ದುಡಿಯುತ್ತಿದ್ದಾರೆ. ರಾಷ್ಟ್ರಾಧ್ಯಕ್ಷ ನಡ್ಡಾ ಬಂದು ಹೋಗಿದ್ದಾರೆ. ಇದೆಲ್ಲಕ್ಕಿಂತ ಮುಖ್ಯವಾಗಿ ಸಂಸದ ರಾಘವೇಂದ್ರ ಮತ್ತವರ ಪರಿವಾರ ಅಂಗಜನ ಗೆಲ್ಲಿಸುವ ಪಣತೊಟ್ಟಿದೆ. ಕೊನೆಯ ಎರಡು ದಿನ ಯಡಿಯೂರಪ್ಪರು ಠಿಕಾಣಿ ಹೂಡಲಿದ್ದಾರೆ. ನಟ ಸುದೀಪ್, ಜಗ್ಗೇಶ್ ಮೊದಲಾದವರು ಪ್ರಚಾರ ಮಾಡುವ ಕಾರ್ಯಕ್ರಮವಿದೆ.
ನಾಗರಾಜ್‌ಗೌಡರಿಗೆ ಜನರೇ ಸ್ಟಾರ್ ಕ್ಯಾಂಪೆನರ್ ಆಗಿದ್ದಾರೆ. ಪ್ರತಿ ಊರಲ್ಲಿ ಜನ ಪ್ರಚಾರಕ್ಕೂ ಬಂದು, ಖರ್ಚಿಗೆ ಹಣವನ್ನೂ ಕೊಡುತ್ತಿದ್ದಾರೆ. ಈ ಇಬ್ಬರ ನಡುವೆ ತುಸು ಮಂಕಾದಂತೆ ಕಾಣುವ ಕಾಂಗ್ರೆಸ್ ಅಭ್ಯರ್ಥಿ ಗೋಣಿ ಮಾಲತೇಶ್ ಪ್ರಚಾರ ಚುರುಕುಗೊಳಿಸಿದ್ದಾರೆ.