ಮಾಜಿ ಮುಖ್ಯಮಂತ್ರಿ ಸೋಲಿಲ್ಲದ ಸರದಾರ ಬಂಗಾರಪ್ಪ ಅವರಿಗೆ ತಮ್ಮ ಕಿರಿಯ ಪುತ್ರ ಮಧುಬಂಗಾರಪ್ಪರನ್ನು ತಮ್ಮ ಜೀವಿತ ಅವಧಿಯಲ್ಲಿಯೇ ರಾಜಕೀಯವಾಗಿ ಬಲಗೊಳಿಸಬೇಕೆಂಬ ಇಚ್ಚೆಯಿತ್ತು. ಈ ಕಾರಣದಿಂದ ಅವರು ಸಾಕಷ್ಟು ಪ್ರಯತ್ನ ಮಾಡಿದ್ದರು. ಹಿರಿಯ ಮಗನನ್ನು ಶಾಸಕ ಮತ್ತು ಸಚಿವರನ್ನಾಗಿ ಮಾಡಿದ್ದರೂ, ಅವರೊಂದಿಗೆ ರಾಜಕೀಯವಾಗಿ ಭಿನ್ನಾಭಿಪ್ರಾಯ ಬಂದಿತ್ತು. ಆ ಹೊತ್ತಿನಲ್ಲಿಯೇ ಕಿರಿಯ ಪುತ್ರ ಮಧುಬಂಗಾರಪ್ಪರನ್ನು ಸೋದರನ ವಿರುದ್ಧವೇ ಚುನಾವಣೆಗೆ ಸ್ಪರ್ಧಿಸುವಂತೆ ಸೂಚಿಸಿದ್ದರು.
೨೦೦೪ ವಿಧಾನ ಸಭೆ ಚುನಾವಣೆ ಸಮಯದಲ್ಲಿ ಕಾಂಗ್ರೆಸ್ ಪಕ್ಷದಲ್ಲಿ ಬಂಗಾರಪ್ಪ ಅವರನ್ನು ಕಡೆಗಣಿಸಲಾಗಿತ್ತು. ಕುಮಾರ್ ಬಂಗಾರಪ್ಪ ಅವರು ಪಕ್ಷದಲ್ಲಿ ಮೇಲುಗೈ ಸಾಧಿಸಿದ್ದರು. ಆ ಹೊತ್ತಿನಲ್ಲಿ ತಮಗೆ ಸೈದ್ಧಾಂತಿಕವಾಗಿ ವಿರುದ್ಧವಾಗಿದ್ದ ಬಿಜೆಪಿಗೆ ಬಂಗಾರಪ್ಪ ಅವರು ಹೋಗಿದ್ದರು. ಇದರ ಹಿಂದೆ ತಮ್ಮ ರಾಜಕೀಯ ಅಸ್ತಿತ್ವಕ್ಕಿಂತ ಮಗ ಮಧು ಬಂಗಾರಪ್ಪ ಅವರಿಗೆ ರಾಜಕೀಯ ಶಕ್ತಿನೀಡುವ ಉದ್ದೇಶವೇ ಹೆಚ್ಚಿತ್ತು. ಆದರೂ ಅಂದಿನ ಚುನಾವಣೆಯಲ್ಲಿ ಮಧು ಬಂಗಾರಪ್ಪ ಅವರಿಗೆ ಸೋಲಾಗಿತ್ತು.
ಹೋರಾಟ ಹಾದಿಗೆ:
ಮಧುಬಂಗಾರಪ್ಪ ಅವರು ಒಟ್ಟು ಮೂರು ವಿಧಾನ ಸಭೆ, ಎರಡು ಲೋಕಸಭೆ ಚುನಾವಣೆಯಲ್ಲಿ ಸೋಲು ಕಂಡಿದ್ದು, ಒಂದು ಬಾರಿ ಜೆಡಿಎಸ್‌ನಿಂದ(೨೦೧೩) ಈಗ ಕಾಂಗ್ರೆಸ್‌ನಿಂದ ಗೆಲುವು ಸಾಧಿಸಿದ್ದಾರೆ.ರಾಜಕಾರಣದಲ್ಲಿ ತಂದೆ ಬಂಗಾರಪ್ಪ ಅವರ ಹಾದಿಯಲ್ಲಿಯೇ ಸಾಗಿದ ಮಧು ಬಂಗಾರಪ್ಪ ಹೋರಾಟದ ದಾರಿ ಕಂಡುಕೊಂಡ ಮೇಲೆ ಒಬ್ಬರ ಜನರ ನಾಯಕ ಎನಿಸಿಕೊಂಡರು. ಅಧಿಕಾರ ಇಲ್ಲದಾಗಲೂ ಜನರೊಂದಿಗೆ ಬೆರೆಯುವ ಅವರು ಸೊರಬ ಕ್ಷೇತ್ರದ ಸಮಸ್ಯೆಗಳನ್ನು ಮುಂದಿಟ್ಟುಕೊಂಡು ಪಾದಯಾತ್ರೆ, ಪ್ರತಿಭಟನಾ ಸಮಾವೇಶಗಳನ್ನು ನಡೆಸುವ ಮೂಲಕ ಜನರ ಮನಸಲ್ಲಿ ನೆಲೆನಿಂತರು. ಈ ಹೋರಾಟದ ಮನೋಭಾವದಿಂದಾಗಿಯೇ ಅವರು ಈ ಬಾರಿಯ ವಿಧಾನ ಸಭೆ ಚುನಾವಣೆಯಲ್ಲಿ ಅತೀ ಹೆಚ್ಚು ಮತಗಳ ಅಂತರದಿಂದ ಗೆಲುವು ಸಾಧಿಸಲು ಸಾಧ್ಯವಾಯಿತು.
ಕಾಂಗ್ರೆಸ್‌ನಿಂದ ಮನ್ನಣೆ:
ರಾಜ್ಯ ರಾಜಕಾರಣದಲ್ಲಿ ಬಂಗಾರಪ್ಪ ಅವರ ಹೆಸರು ಅಜರಾಮರ.ಬಡವರ ಬಂಧು ಎಂದೇ ಹೆಸರಾಗಿದ್ದ ಬಂಗಾರಪ್ಪರ ವರ್ಚಸ್ಸು ಇಂದಿಗೂ ಇದೆ. ಈ ಕಾರಣದರಿಂದ ಮಧುಬಂಗಾರಪ್ಪ ಅವರನ್ನು ಕಾಂಗ್ರೆಸ್‌ಗೆ ಸೇರಿಸಿಕೊಂಡಿರುವ ಪಕ್ಷ ಅವರಿಗೆ ಹಿಂದುಳಿದ ವರ್ಗಗಳ ವಿಭಾಗದ ರಾಜ್ಯ ಅಧ್ಯಕ್ಷ, ರಾಜ್ಯ ಉಪಾಧ್ಯಕ್ಷ ಹಾಗೂ ಚುನಾವಣೆಯಲ್ಲಿ ಪ್ರಣಾಳಿಕೆ ಸಮಿತಿ ಉಪಾಧ್ಯಕ್ಷರನ್ನಾಗಿಯೂ ಮಾಡಿ ಮನ್ನಣೆ ನೀಡಲಾಯಿತು. ಚುನಾವಣೆಯಲ್ಲಿ ರಾಜ್ಯಾದ್ಯಾಂತ ಓಡಾಡಿ ಪ್ರಚಾರವನ್ನು ಮಾಡಿದರು. ಶಿವಮೊಗ್ಗ ಮಾತ್ರವಲ್ಲದೆ, ಉತ್ತರ ಕನ್ನಡ ಜಿಲ್ಲೆಯಲ್ಲಿ ಕಾಂಗ್ರೆಸ್ ಮಾಡಿರುವ ಸಾಧನೆಯಲ್ಲಿ ಮಧುಬಂಗಾರಪ್ಪ ಅವರ ಪಾತ್ರವೂ ಇತ್ತು. ಮಧು ಕಾರಣದಿಂದಾಗಿ ರಾಜಕೀಯದಿಂದ ದೂರವೇ ಇದ್ದ ನಟ ಡಾ.ಶಿವರಾಜ್‌ಕುಮಾರ್ ಅವರು ಕಾಂಗ್ರೆಸ್ ಪರವಾಗಿ ಅಧಿಕೃತವಾಗಿ ಪ್ರಚಾರವನ್ನೂ ನಡೆಸಿದ್ದರು. ಈ ಎಲ್ಲಾ ಕಾರಣದಿಂದ ಇಂದು ಮಧುಬಂಗಾರಪ್ಪ ಅವರು ಸಿದ್ದರಾಮಯ್ಯ ಅವರ ಸಂಪುಟ ಸದಸ್ಯರಾಗುವ ಅವಕಾಶ ಪಡೆದುಕೊಂಡಿದ್ದಾರೆ.
4-09-1966 ರಲ್ಲಿ ಕರ್ನಾಟಕದ ಮಾಜಿ ಮುಖ್ಯಮಂತ್ರಿ ಎಸ್.ಬಂಗಾರಪ್ಪ ಮತ್ತು ಶಕುಂತಲಾ ದಂಪತಿ ಪುತ್ರನಾಗಿ ಜನಿಸಿದ ಅವರು, ಚಲನಚಿತ್ರ ನಿರ್ಮಾಕರಾಗಿ, ಆಕಾಶ್ ಆಡಿಯೊ ಮಾಲೀಕರಾಗಿ, ಚಿತ್ರನಟರಾಗಿ, ಕೃಷಿಕರಾಗಿ, ಶಿಕ್ಷಣೋದ್ಯಮಿಯಾಗಿ ವೃತ್ತಿ ನಿರ್ವಹಿಸುತ್ತಿದ್ದು ಜತೆಯಲ್ಲಿಯೇ ರಾಜಕಾರಣ ಮಾಡಿಕೊಂಡು ಬಂದವರು. ೨೦೧೩ ರಲ್ಲಿ ಮೊದಲ ಬಾರಿ ವಿಧಾನ ಸಭೆ ಸದಸ್ಯರಾಗಿ ಆಯ್ಕೆಯಾಗಿದ್ದರು. ಅಂದು ಪ್ರತಿಪಕ್ಷದ ಸದಸ್ಯರಾಗಿದ್ದರೂ ಕ್ಷೇತ್ರಕ್ಕೆ ಹೆಚ್ಚು ಅನುದಾನ ತರುವಲ್ಲಿ ಯಶಸ್ವಿಯಾಗಿದ್ದರು.