ಶಿವಮೊಗ್ಗ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ ಹಾಗೂ ಶಿವಮೊಗ್ಗ ಪ್ರೆಸ್‌ಟ್ರಸ್ಟ್‌ನ ಕುಗ್ರಾಮ ಭೇಟಿ ಕಾರ್ಯಕ್ರಮ
ಶಿವಮೊಗ್ಗ: ಇದೊಂದು ನತದೃಷ್ಟ ಊರು, ಸರಕಾರಿ ದಾಖಲೆಯಲ್ಲಿ ಈ ಗ್ರಾಮಕ್ಕೆ ಅಸಿತ್ವವೇ ಇಲ್ಲ. ರಾಜ್ಯದಲ್ಲಿ ಆಶ್ರಯ ಯೋಜನೆ ಜಾರಿಯಾಗಿ ೩೦ ವರ್ಷ ಕಳೆದರೂ ಈ ಊರಿಗೆ ಯೋಜನೆ ತಲುಪಿಲ್ಲ ಎಂದರೆ ಅಚ್ಚರಿಯಾಗುತ್ತದೆ. ಜಿಲ್ಲಾ ಕೇಂದ್ರ ಶಿವಮೊಗ್ಗ ನಗರದಿಂದ ಕೇವಲ 30 ಕಿ.ಮೀ. ಅಂತರದಲ್ಲಿರುವ ಬೆಳಗಲು ಎಂಬ ಕುಗ್ರಾಮಕ್ಕೆ ಸರಕಾರದ ಯಾವುದೇ ಯೋಜನೆಗಳು ತಲುಪಿಲ್ಲ.
ಶಿವಮೊಗ್ಗ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ ಹಾಗೂ ಶಿವಮೊಗ್ಗ ಪ್ರೆಸ್‌ಟ್ರಸ್ಟ್‌ನ ಕುಗ್ರಾಮ ಭೇಟಿ ಕಾರ್ಯಕ್ರಮದಲ್ಲಿ ಗ್ರಾಮಕ್ಕೆ ಭೇಟಿ ನೀಡಿದ್ದ ಪತ್ರಕರ್ತರಿಗೆ ಈ ಗ್ರಾಮದ ಸಮಸ್ಯೆಗಳ ದರ್ಶನವಾಯಿತು.
ತುಂಗಾ ಜಲಾಶಯದ ಹಿನ್ನೀರಿನಲ್ಲಿ ಶಿವಮೊಗ್ಗ ನರಸಿಂಹರಾಜಪುರ ರಸ್ತೆಯಲ್ಲಿ ಕೊರ್ಲಕೊಪ್ಪದ ಬಳಿ ಮುಖ್ಯ ರಸ್ತೆಯಿಂದ 4ಕಿ.ಮೀ. ದೂರದಲ್ಲಿ ಶಿವಮೊಗ್ಗ- ಚಿಕ್ಕಮಗಳೂರು ಗಡಿಯಲ್ಲಿರುವ ಬೆಳಗಲು ಗ್ರಾಮ ಆಧುನಿಕ ಜಗತ್ತಿನ ಎಲ್ಲ ಸೌಲಭ್ಯಗಳಿಂದ ವಂಚಿತವಾಗಿ ಶೋಚನೀಯ ಸ್ಥಿತಿಯಲ್ಲಿದೆ. ರಾಜ್ಯದೆಲ್ಲೆಡೆ ಗ್ಯಾರಂಟಿ ಸೌಲಭ್ಯಗಳ ಬಗ್ಗೆ ದೊಡ್ಡ ಚರ್ಚೆ ನಡೆದಿದ್ದರೆ, ಈ ಊರಿನ ಜನ ಈಗಲೂ ರಸ್ತೆ, ಮನೆ, ನೀರು, ಚರಂಡಿ, ಶೌಚಾಲಯ ಮತ್ತು ಇತರೆ ಮೂಲ ಸೌಲಭ್ಯಗಳನ್ನೇ ಕಂಡಿಲ್ಲ.
ಖರಾಬು ಜಂಗ್ಲಿ:
ಬೆಳಗಲು ಗ್ರಾಮದಲ್ಲಿ ಆದಿಕರ್ನಾಟಕ ಜಾತಿಯ 18 ಮನೆಗಳ ೮೦ ಜನ ಇದ್ದಾರೆ. ತುಂಗಾ ಹಳೇ ಜಲಾಶಯದ ಮುಳುಗಡೆ ಸಂತ್ರಸ್ತರಾದ ಇವರಿಗೆ ಸಮೀಪದ ಕೈದೊಟ್ಲು ಗ್ರಾಮದಲ್ಲಿ ಜಾಗವನ್ನು ಗುರುತಿಸಲಾಗಿತ್ತು. ಆದರೆ ನಿವಾಸಿಗಳು ಅಲ್ಲಿಗೆ ಹೋಗಲು ಇಷ್ಟಪಡದೆ ದಡದಲ್ಲಿ ಆಶ್ರಯ ಪಡೆದುಕೊಂಡರು. ಅದಾದ ಬಳಿಕ ಮೂರು ತಲೆಮಾರುಗಳು ಸರಿದು ಹೋದರೂ ಆದಿವಾಸಿಗಳಂತೆ ಬದುಕುತ್ತಿದ್ದಾರೆ.
ಖರಾಜು ಜಂಗ್ಲಿ ವ್ಯಾಪ್ತಿಯಲ್ಲಿ ಬರುವುದರಿಂದ ಕಂದಾಯ ಇಲಾಖೆ ಪ್ರಕಾರ ಈ ಗ್ರಾಮ ಅಸ್ತಿತ್ವದಲ್ಲೆ ಇಲ್ಲ. ಚುನಾವಣೆಯಲ್ಲಿ ಮತ ಚಲಾವಣೆಗೆ ಯಾವುದೇ ನಿಯಮ ಕೇಳದ ಅಧಿಕಾರಿಗಳು ಸೌಲಭ್ಯಗಳಿಗೆ ಮಾತ್ರ ಕಾನೂನು ನೆಪವೊಡ್ಡಿ ಸೌಲಭ್ಯದಿಂದ ದೂರ ಇಟ್ಟಿದ್ದಾರೆ. ಅಕ್ರಮ ಸಕ್ರಮದಡಿ ಹಲವು ಬಾರಿ ಅರ್ಜಿ ಸಲ್ಲಿಸಿದರೂ ಸ್ಪಂದಿಸಿಲ್ಲ. ಮನೆಗಳನ್ನಾದರೂ ಕೊಡಿ ಎಂದು ಕೇಳಿದರೂ ಮರುಗಿಲ್ಲ.
ಆಧಾರ್ ಮತ್ತು ಪಡಿತರ ಬಿಟ್ಟರೆ ಬೇರೇನೂ ಇವರ ಹೆಸರಿನಲ್ಲಿ ಇಲ್ಲ. ನಿತ್ಯ ಕೂಲಿಗೆ ಹೋಗಲು ಸಹ ಇವರು ೫ ಕಿ.ಮೀ. ನಡೆಯಬೇಕು. ಅಂಗನವಾಡಿ ಮತ್ತು ಪ್ರಾಥಮಿಕ ಶಾಲೆಗೆ ಮಕ್ಕಳು ಕಾಡಿನೊಳಗೆ 4ಕಿ.ಮೀ. ನಡೆಯಬೇಕು, ಹಿರಿಯ ಪ್ರಾಥಮಿಕ ಶಾಲೆ 6ಕಿ.ಮೀ., ಪ್ರೌಢಶಾಲೆ 13 ಕಿ.ಮೀ. ಅಂತರದಲ್ಲಿವೆ. ಪಡಿತರ ಪಡೆಯಲು ಸಹ13 ಕಿ.ಮೀ. ದೂರದ ಉಂಬ್ಳೇಬೈಲಿಗೆ ಹೋಗಬೇಕು. ಇಷ್ಟೆಲ್ಲ ಸಂಕಷ್ಟದ ನಡುವೆಯೂ ಇಬ್ಬರು ಪದವಿ, 10 ಯುವಕರು ಪಿಯುಸಿ,10 ಮಂದಿ 10ನೇ ತರಗತಿ ಓದಿದ್ದಾರೆ. ಕಾಡಿನೊಳಗೆ ಇಲ್ಲದ ರಸ್ತೆಯಲ್ಲಿ ನಡೆಯಬೇಕೆಂಬ ಕಾರಣಕ್ಕೆ ಮಕ್ಕಳು ಶಾಲೆಗೆ ಹೋಗಲು ಹಿಂಜರಿಯುತ್ತವೆ ಎಂದು ಗ್ರಾಮದ ಪುಟ್ಟಮ್ಮ ಬೇಸರ ವ್ಯಕ್ತಪಡಿಸಿದರು.
ಮಾಜಿ ಸಚಿವ ಕಿಮ್ಮನೆ ರತ್ನಾಕರ್ ಅವರ ಕಾಳಜಿಯಿಂದಾಗಿ 2006 ರಲ್ಲಿ ವಿದ್ಯುತ್ ಸಂಪರ್ಕ ಕಲ್ಪಿಸಲಾಯಿತು. ಹಿಂದೆಲ್ಲ ತುಂಗಾ ಹಿನ್ನೀರು ಪ್ರದೇಶದಲ್ಲಿ ಗದ್ದೆ ಮಾಡುತ್ತಿದ್ದರಿಂದ ಗುಡಿಸಲುಗಳಿಗೆ ಹುಲ್ಲು ಸಿಗುತ್ತಿತ್ತು. ತುಂಗಾ ಮೇಲ್ದಂಡೆ ಜಲಾಶಯ ನಿರ್ಮಿಸಿದ ಬಳಿಕ ಸಾಗುವಳಿ ಮಾಡುತ್ತಿದ್ದ ಭೂಮಿಯೂ ಮುಳುಗಡೆಯಾಗಿದ್ದರಿಂದ ಈಗ ಗುಡಿಸಲುಗಳಿಗೆ ಹೊದಿಸಲು ಹುಲ್ಲು ಸಹ ಸಿಗುತ್ತಿಲ್ಲ. ಹೀಗಾಗಿ ಧರ್ಮಸ್ಥಳ ಸಂಘಗಳನ್ನು ರಚಿಸಿಕೊಂಡು ಸಾಲ ಮಾಡಿ ಕೆಲವರು ಕಚ್ಚಾ ಮನೆಗಳಿಗೆ ಹೆಂಚುಗಳನ್ನು ಹಾಕಿಸಿಕೊಂಡಿದ್ದಾರೆ.
ಹೊಸ ಮದುವೆ ಸಂಬಂಧವೇ ಇಲ್ಲ
ಈ ಊರು ಎಲ್ಲ ರೀತಿಯ ಮೂಲ ಸೌಲಭ್ಯಗಳಿಂದ ವಂಚಿತವಾಗಿರುವುದರಿಂದ ಇಲ್ಲಿನವರೊಂದಿಗೆ ಯಾರೂ ಹೊಸ ಸಂಬಂಧ ಬೆಳೆಸಲು ಇಚ್ಚಿಸುವುದಿಲ್ಲ. ಒಮ್ಮೆ ಇಲ್ಲಿಗೆ ಬಂದು ಹೋದವರು ನಿಮ್ಮ ಹೆಣ್ಣು ಬೇಡ, ನಮ್ಮ ಹೆಣ್ಣು ಮಕ್ಕಳನ್ನೂ ಈ ವನವಾಸಕ್ಕೆ ಕೊಡುವುದಿಲ್ಲ ಎಂದು ವಾಪಸ್ಸು ಹೋಗುತ್ತಾರೆ. ಹೀಗಾಗಿ ಇವರು ಹಳೇ ಸಂಬಂಧಗಳಲ್ಲೆ ವಿವಾಹಗಳನ್ನು ಮಾಡಿಕೊಂಡು ಬಂದಿದ್ದಾರೆ.
ನಾವು ಕಂದಾಯ ಕಟ್ಟುತ್ತೇವೆ. ನಮಗೆ ಸೌಲಭ್ಯ ಕೊಡಿ ಎಂದರೂ ಪಂಚಾಯಿತಿ ಅಧಿಕಾರಿಗಳು ಕೇಳುತ್ತಿಲ್ಲ. ೧೯೯೧-೯೨ರಲ್ಲಿ ಒಮ್ಮೆ ಕಂದಾಯ ಕಟ್ಟಿಸಿಕೊಂಡಿದ್ದರು. ಆನಂತರ ಮತ್ತೆ ಈ ಕಡೆ ಬರಲೆ ಇಲ್ಲ. ನಾವೆ ಹೋದರೂ ಕಟ್ಟಿಸಿಕೊಳ್ಳುತ್ತಿಲ್ಲ. ನಮ್ಮ ತಾತನ ಕಾಲದಿಂದಲೂ ಇಲ್ಲೆ ಇದ್ದೇವೆ. ನನ್ನ ಮೊಮ್ಮಕ್ಕಳು ಸಹ ಕತ್ತಲಲ್ಲೆ ಉಳಿಯುವಂತಾಗಿದೆ.
*ಬಸವರಾಜಪ್ಪ, ಗ್ರಾಮದ ಹಿರಿಯರು, ಬೆಳಗಲು.
ಈ ಊರಿಗೆ ಸೌಲಭ್ಯ ಕೊಡಬೇಕೆಂದು ಪಂಚಾಯಿತಿಯಲ್ಲಿ ಹಲವು ಬಾರಿ ನಿರ್ಣಯ ಕೈಗೊಳ್ಳಲಾಗಿದೆ. ಆದರೆ, ಪಿಡಿಒಗಳು ಒಪ್ಪುವುದಿಲ್ಲ. ಸರಕಾರದಿಂದ ಆದೇಶ ಬೇಕು ಎನ್ನುತ್ತಾರೆ. ಅಕಾರಿಗಳ ಅಸಹಕಾರದ ನಡುವೆಯು ಕೆಲವರಿಗೆ ವೈಯಕ್ತಿಕ ಸೌಲಭ್ಯಗಳನ್ನು ನೀಡಿದ್ದೇವೆ.
ಅರವಿಂದ್, ಗ್ರಾಪಂ ಸದಸ್ಯರು, ಉಂಬ್ಳೇಬೈಲು.
ಬೆಳಗಲು ಗ್ರಾಮಸ್ಥರ ಸ್ಥಿತಿಯು ಬೇಸರ ಮೂಡಿಸುತ್ತದೆ. ಗ್ರಾಮದ ಭೂಮಿ ಯಾರಿಗೆ ಸೇರಿದ್ದೆಂಬುದು ಇನ್ನೂ ಗೊತ್ತಿಲ್ಲ. ಅರಣ್ಯ ಮತ್ತು ಕಂದಾಯ ಇಲಾಖೆ ಜಂಟಿ ಸರ್ವೆ ಮಾಡಿ ಸರಕಾರದಿಂದ ಅಧಿಸೂಚನೆ ಹೊರಡಿಸಬೇಕು. ಸರಕಾರ ಗಮನ ಹರಿಸಬೇಕು.
ಕೆ.ಪಿ.ದುಗ್ಗಪ್ಪಗೌಡ, ನಿರ್ದೇಶಕರು, ಡಿಸಿಸಿ ಬ್ಯಾಂಕ್, ಶಿವಮೊಗ್ಗ.