Malenadu Mitra
ರಾಜ್ಯ ಶಿವಮೊಗ್ಗ ಸಾಗರ

ಶರಾವತಿ ಸಂತ್ರಸ್ಥರ ಭೂಮಿ ಸಮಸ್ಯೆಗೆ ಕಾನೂನು ಹೋರಾಟ, ಅರಣ್ಯ,ಕಂದಾಯ ಭೂಮಿ ಜಂಟಿ ಸರ್ವೆ,
ರಾಜ್ಯಸರಕಾರದ ಉನ್ನತ ಮಟ್ಟದ ಸಭೆಯಲ್ಲಿ ನಿರ್ಣಯ

ಬೆಂಗಳೂರು,18: ರಾಜ್ಯದಲ್ಲಿ ದಶಕಗಳಿಂದ ಕಾಡುತ್ತಿರುವ ಅರಣ್ಯ ಮತ್ತು ಕಂದಾಯ ಭೂಮಿ ಸಾಗುವಳಿದಾರರ ಸಮಸ್ಯೆ ಇತ್ಯರ್ಥಕ್ಕೆ ಜಂಟಿ ಸರ್ವೆ ಮಾಡಲು ಮಂಗಳವಾರ ವಿಧಾನಸೌಧದಲ್ಲಿ ನಡೆದ ಸಂಬಂಧಿತ ಇಲಾಖೆಗಳ ಸಚಿವರ ಸಭೆಯಲ್ಲಿ ತೀರ್ಮಾನ ಕೈಗೊಳ್ಳಲಾಯಿತು.
ಅರಣ್ಯ , ಕಂದಾಯ, ಸಮಾಜ ಕಲ್ಯಾಣ ಹಾಗೂ ಶಿವಮೊಗ್ಗ ಜಿಲ್ಲೆ ಉಸ್ತುವಾರಿ ಸಚಿವರ ಸಭೆಯಲ್ಲಿ ಈ ತೀರ್ಮಾನ ಮಾಡಲಾಯಿತು. ರಾಜ್ಯದಲ್ಲಿ ಮಲೆನಾಡು ಜಿಲ್ಲೆಗಳಲ್ಲಿ ಅರಣ್ಯ ಮತ್ತು ಕಂದಾಯ ಭೂಮಿ ಜಂಟಿ ಸರ್ವೆ ನಡೆಯದ ಕಾರಣ ಆಯಾ ಭೂಮಿಗಳ ಗಡಿಗುರುತಿಸುವಿಕೆ ಸರಿಯಾಗಿ ನಡೆದಿಲ್ಲ. ಈ ಜಂಟಿ ಸರ್ವೆ ಆದ ಬಳಿಕವೇ ಇಂಡೀಕರಣ ಮಾಡಬೇಕು. ಅರಣ್ಯ ಹಾಗೂ ಕಂದಾಯ ಇಲಾಖೆ ಅಧಿಕಾರಿಗಳು ಈ ದಿಸೆಯಲ್ಲಿ ತುರ್ತುಗಮನ ಹರಿಸಬೇಕೆಂದು ಸೂಚಿಸಲಾಯಿತು.
ಶರಾವತಿ ಸಂತ್ರಸ್ತರ ಭೂಮಿ ಡಿನೋಟಿಫಿಕೇಷನ್ ಪ್ರಸ್ತಾವನೆಯನ್ನು ಕೇಂದ್ರ ಸರಕಾರ ವಾಪಸ್ ಮಾಡಿದ್ದು, ಅದನ್ನು ಸಮರ್ಪಕ ಸಮಜಾಯಿಷಿ ಮೂಲಕ ಕೇಂದ್ರಕ್ಕೆ ಮತ್ತೆ ಪ್ರಸ್ತಾವನೆ ಸಲ್ಲಿಸಬೇಕು. ಪ್ರಕರಣ ನ್ಯಾಯಾಲಯದಲ್ಲಿರುವುದರಿಂದ ಶರಾವತಿ ಸಂತ್ರಸ್ತರ ಸಮಸ್ಯೆ ೧೯೭೮ ಕ್ಕಿಂತ ಪೂರ್ವದ್ದಾಗಿದ್ದರಿಂದ ಇದರ ಸ್ವರೂಪವೇ ಬೇರೆಯಾಗಿದ್ದು, ಇದನ್ನೊಂದು ವಿಶೇಷ ಪ್ರಕರಣ ಎಂದು ನ್ಯಾಯಾಲಯದ ಗಮನಕ್ಕೆ ತರಬೇಕೆಂದು ಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಯಿತು.

ಡೀಮ್ಡ್ ಅರಣ್ಯ ಗುರುತಿಸುವ ಕಾರ್ಯ ಚುರುಕುಗೊಳಿಸಬೇಕು. ರಾಜ್ಯದಲ್ಲಿ ಅರಣ್ಯ ಭೂಮಿಯಲ್ಲಿ ಸಾಗುವಳಿ ಜಮೀನು, ವಾಸದ ಮನೆ ಹಾಗೂ ಸರಕಾರಿ ಕಟ್ಟಡಗಳಿದ್ದು, ಈ ಜಾಗದಲ್ಲಿ ಅರಣ್ಯ ಸ್ವರೂಪವೇ ಇಲ್ಲದೇ ಇದ್ದರೂ ಮೀಸಲು ಅರಣ್ಯ ಎಂದು ಪ್ರಾಥಮಿಕ ಅಧಿಸೂಚನೆ ಹೊರಡಿಸುವ ಕೆಲಸ ನಡೆಯುತ್ತಿದೆ. ಇದು ರೈತರ ಬದುಕಿಗೇ ಸಂಚಕಾರ ತಂದಿದೆ. ಮೀಸಲು ಅರಣ್ಯ ಘೋಷಿಸುವಾಗ ಕಾಲಮಿತಿಯನ್ನು ಹಾಕಿಕೊಳ್ಳಬೇಕು. ಸಾಗುವಳಿ ಭೂಮಿಯನ್ನು ಅರಣ್ಯದಿಂದ ಹೊರತು ಪಡಿಸಬೇಕೆಂದು ಸಭೆಯಲ್ಲಿ ಅರಣ್ಯ ಸಚಿವರ ಗಮನಕ್ಕೆ ತರಲಾಯಿತು.

ಸೊಪ್ಪಿನ ಬೆಟ್ಟ, ಕುಮ್ಕಿ, ಕಾನು ಇತ್ಯಾದಿ ವಿಶೇಷ ಹಕ್ಕುಳ್ಳ ಭೂಮಿಯಲ್ಲಿ ಸಾಗುವಳಿ ಮಾಡಿರುವ ರೈತರಿಗೆ ಹಕ್ಕು ಪತ್ರ ನೀಡಬೇಕು. ಅರಣ್ಯ ಹಕ್ಕು ಕಾಯಿದೆಯಲ್ಲಿ ಹಕ್ಕುಪತ್ರ ನೀಡಲು ಕೇಂದ್ರ ಸರಕಾರ ನಿಗದಿ ಮಾಡಿರುವ ಮೂರು ತಲೆಮಾರಿನ ಅನುಭವ ಇರಬೇಕೆಂಬ ನಿಬಂಧನೆ ಹಾಕಿದೆ ಅದನ್ನು ಒಂದು ತಲೆಮಾರಿಗೆ ಅಂದರೆ ೨೫ ವರ್ಷಕ್ಕೆ ಇಳಿಸುವಂತೆ ತಿದ್ದುಪಡಿ ತರಲು ಮನವಿ ಮಾಡಲು ಸಭೆ ತೀರ್ಮಾನಿಸಿತು. ಶಿವಮೊಗ್ಗ ಜಿಲ್ಲೆ ಹೊಸನಗರ ತಾಲೂಕಿನ ಖೈರಗುಂದ ಹೋಬಳಿಯಲ್ಲಿ ರೈತರ ಸಾಗುವಳಿ ಭೂಮಿ, ವಾಸದ ಮನೆ, ಸರಕಾರಿ ಕಟ್ಟಡಗಳಿರುವ ಭೂಮಿಯನ್ನು ಪ್ರಸ್ತಾವಿತ ಅರಣ್ಯ ಎಂದು ಪಹಣಿಯಲ್ಲಿ ದಾಖಲಾಗುತ್ತಿದೆ. ಈ ಸಮಸ್ಯೆ ನಿವಾರಣೆಗೆ ಡಿನೋಟಿಫಿಕೇಷನ್ ಮಾಡುವ ಬಗ್ಗೆ ಸರಕಾರಕ್ಕೆ ಶಿಫಾರಸು ಮಾಡಬೇಕೆಂದು ಮನವಿ ಮಾಡಲಾಯಿತು.

ಬಗರ್‌ಹುಕುಂ ಭೂಮಿಯನ್ನು ಸಕ್ರಮಗೊಳಿಸಲು ಕ್ರಮ ಕೈಗೊಳ್ಳಬೇಕು. ಶರಾವತಿ ಸಂತ್ರಸ್ತರು ಸೇರಿದಂತೆ ಸಣ್ಣ ಹಿಡುವಳಿ ದಾರರನ್ನು ಯಾವುದೇ ಕಾರಣಕ್ಕೂ ಒಕ್ಕಲೆಬ್ಬಿಸಬಾರದು ಎಂದು ಅರಣ್ಯ ಸಚಿವ ಈಶ್ವರಖಂಡ್ರೆ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಶಿವಮೊಗ್ಗ ಜಿಲ್ಲಾ ಉಸ್ತುವಾರಿ ಸಚಿವ ಮಧುಬಂಗಾರಪ್ಪ ಅವರ ಸಮನ್ವಯತೆಯಲ್ಲಿ ನಡೆದ ಸಭೆಯಲ್ಲಿ ಕಂದಾಯ ಸಚಿವ ಕೃಷ್ಣಬೈರೇಗೌಡ, ಬುಡಕಟ್ಟು ಕಲ್ಯಾಣ ಸಚಿವ ಬಿ.ನಾಗೇಂದ್ರ .ಅರಣ್ಯ ಸಚಿವ ಈಶ್ವರ ಖಂಡ್ರೆ, ಸಾಗರ ಶಾಸಕ ಬೇಳೂರು ಗೋಪಾಲಕೃಷ್ಣ, ಶಿವಮೊಗ್ಗ ಗ್ರಾಮಾಂತರ ಶಾಸಕಿ ಶಾರದಾಪೂರ್ಯನಾಯ್ಕ್, ಶಿರಸಿ ಶಾಸಕ ಭೀಮಣ್ಣ ನಾಯ್ಕ್, ಶಿವಮೊಗ್ಗ ಮಹಾನಗರ ಪಾಲಿಕೆ ಸದಸ್ಯ ಹಾಗೂ ನ್ಯಾಯವಾದಿ ಬಿ.ಎ.ರಮೇಶ್‌ಹೆಗ್ಡೆ , ವಿರಾಜಪೇಟೆ ಶಾಸಕ ಪೊನ್ನಣ್ಣ, ಶಿವಮೊಗ್ಗ ಶಾಸಕ ಚನ್ನಬಸಪ್ಪ, ಹೆಚ್ಚುವರಿ ಅಡ್ವಕೇಟ್ ಜನರಲ್ ಶಶಿಕಿರಣ್ ಶೆಟ್ಟಿ ಸೇರಿದಂತೆ ಸಂಬಂಧಿತ ಇಲಾಖೆಗಳು ಹಿರಿಯ ಅಧಿಕಾರಿಗಳು ಹಾಜರಿದ್ದರು.

Ad Widget

Related posts

ಸಂವಿಧಾನವನ್ನು ಅರ್ಥ ಮಾಡಿಕೊಂಡು ಗೌರವಿಸಬೇಕು : ನ್ಯಾ.ಮುಸ್ತಫಾ ಹುಸೇನ್

Malenadu Mirror Desk

ಪರಿಸರ ಸಂರಕ್ಷಣೆ ಎಲ್ಲರ ಜವಾಬ್ದಾರಿ, ಸಸ್ಯ ಶಾಮಲ ಕಾರ್ಯಕ್ರಮದಲ್ಲಿ ಜಿ.ಪಂ.ಸಿಇಒ ಸ್ನೇಹಲ್ ಸುಧಾಕರ್ ಹೇಳಿಕೆ

Malenadu Mirror Desk

ಯಡಿಯೂರಪ್ಪ ಪದಚ್ಯುತಿಗೆ ಈಶ್ವರಪ್ಪ ಅವರೇ ನೇರ ಕಾರಣ

Malenadu Mirror Desk

Leave a Comment

error: Content is protected !! ಮಲೆನಾಡು ಮಿರರ್‌ನಲ್ಲಿ ಪ್ರಕಟಗೊಂಡ ಸುದ್ದಿ, ಲೇಖನ, ಫೊಟೊಗಳನ್ನುಪೂರ್ವಾನುಮತಿಯಿಲ್ಲದೆ ನಕಲು ಮಾಡುವುದು ಕಾನೂನುಬಾಹಿರವಾಗಿದೆ.