ಶಿವಮೊಗ್ಗ : ಧರ್ಮ ಕೃತಿಯೊಂದು ಕಾಲಾಂತರದಲ್ಲಿ ಸಾಹಿತ್ಯ ಕೃತಿಯಾಗಿ ರೂಪುಗೊಳ್ಳುವ ಎಲ್ಲಾ ಸಾಧ್ಯತೆಗಳು ಇವೆ ಎಂದು ವಿಶ್ರಾಂತ ಪ್ರಾಧ್ಯಾಪಕ ಹಾಗೂ ವಿಮರ್ಶಕ ಡಾ. ರಾಜೇಂದ್ರ ಚೆನ್ನಿ ಹೇಳಿದರು.
ಕನ್ನಡ ಸಾಹಿತ್ಯ ಪರಿಷತ್ತು, ಸಹ್ಯಾದ್ರಿ ಕಲಾ ಕಾಲೇಜು ಇವರ ಸಂಯುಕ್ತ ಆಶ್ರಯದಲ್ಲಿ ಆಯೋಜಿಸಿದ್ದ ಸಾಹಿತ್ಯ ವಿಮರ್ಶೆ ಕುರಿತ ಅನುಸಂಧಾನದ ನೆಲೆಗಳು ವಿಚಾರ ಸಂಕಿರಣದಲ್ಲಿ ಆಶಯ ಭಾಷಣ ಮಾಡಿದರು. ಒಂದು ಸಾಹಿತ್ಯ ಕೃತಿ ಯಾವುದು, ಅದು ಹೇಗಿರಬೇಕು ಎಂಬ ಬಗ್ಗೆಯೇ ಜಿಜ್ಞಾಸೆಗಳಿವೆ. ಯಾವುದೇ ಒಂದು ಕೃತಿ ಸಾಹಿತ್ಯ ರೂಪ ಪಡೆಯಬೇಕಾದರೆ ಅದಕ್ಕೆ ಹಲವು ಸಮಸ್ಯೆಗಳು, ನ್ಯೂನತೆಗಳು ಉಂಟಾಗುತ್ತವೆ. ನಾವು ಸಾಮಾನ್ಯವಾಗಿ ಒಂದು ಸಾಹಿತ್ಯ ಕೃತಿಯನ್ನು ಓದು, ವಿವರಣೆ, ವ್ಯಾಖ್ಯಾನ,ಮೌಲ್ಯಮಾಪನ ಎಂದು ವಿಂಗಡಿಸಿ ಸರಳವಾಗಿ ಹೇಳುತ್ತೇವೆ. ಸಾಮಾನ್ಯ ಜ್ಞಾನದ ಮೇಲೆ ತೀರ್ಮಾನವಾಗುವ ಒಂದು ಸಾಹಿತ್ಯ ಕೃತಿಗೆ ಅದರ ಸುತ್ತಲೂ ಅನೇಕ ಚೌಕಟ್ಟುಗಳು ಸಂಧಾನ ಅನುಸಂಧಾನಗಳು ಉಂಟಾಗಿ ಗೊಂದಲವೂ ಆಗುತ್ತದೆ ಎಂದರು.
ವಚನಗಳನ್ನೇ ಉದಾಹರಣೆಯಾಗಿ ತೆಗದುಕೊಂಡರೆ ಅವೆಲ್ಲಾ ತಾಳೆಗರಿಯಲ್ಲಿದ್ದವು. ವಚನಕಾರರು ಅವುಗಳನ್ನು ಒಂದು ಛಂದಸ್ಸಿನ ಬಂಧದಲ್ಲಿ ಇಟ್ಟಿದ್ದರು. ಅವರಿಗೆ ಅದು ಕಾವ್ಯವಾಗಬೇಕು ಎಂದು ಸ್ಪಷ್ಟವಾಗಿ ಅನಿಸಿತ್ತು. ಆದರೆ ಅಂತಹ ಕೃತಿಗಳು ಒಂದು ಸಮುದಾಯಕ್ಕೆ ಸೇರಿದ್ದು, ಅದರಿಂದ ಬಿಡುಗಡೆ ಹೊಂದಿ ಒಂದು ಸಾಹಿತ್ಯ ಕೃತಿಯಾಗುತ್ತದೆ ಎಂದರು.
ಕಾರ್ಯಕ್ರಮ ಉದ್ಘಾಟಿಸಿ ಜಿಲ್ಲಾ ಕಸಾಪ ಅಧ್ಯಕ್ಷ ಡಿ. ಮಂಜುನಾಥ್ ಮಾತನಾಡಿ, ವಿದ್ಯಾರ್ಥಿಗಳಿದ್ದಲ್ಲಿಯೇ ಸಾಹಿತ್ಯವನ್ನು ತೆಗೆದುಕೊಂಡು ಹೋಗುವುದು ಕಸಾಪದ ಪ್ರಮುಖ ಉದ್ದೇಶವಾಗಿದೆ. ಹೀಗಾಗಿಯೇಜಿಲ್ಲೆಯ ಎಲ್ಲಾ ಕಾಲೇಜುಗಳಲ್ಲಿ ಸಾಹಿತ್ಯಿಕ ಕಾರ್ಯಕ್ರಮಗಳ್ನನು ಆಯೋಜಿಸುತ್ತ ಬಂದಿದ್ದೇವೆ ಇದರಿಂದ ವಿದ್ಯಾರ್ಥಿಗಳ ಸಾಹಿತ್ಯ ಆಸಕ್ತಿ ಹೆಚ್ಚುತ್ತದೆ ಎಂದರು.
ಸಾಹಿತ್ಯ ವಿಮರ್ಶೆ ಎನ್ನುವುದು ಸೂಕ್ಷ್ಮವಾದ ವಿಷಯವಾಗಿದೆ. ಯಾವುದೇ ಪಠ್ಯಗಳು ಶಿಕ್ಷಕ ಸಮುದಾಯದ ಒಳಗೆಯೇ ಸಿದ್ಧವಾಗಬೇಕು. ಅದು ರಾಜಕಾರಣಿಗಳ ಕೈಗೆ ಸಿಗಬಾರದು. ಇದರಿಂದ ಅನೇಕ ಅನಾಹುತಗಳಾಗುವುದನ್ನು ನಾವು ನೋಡುತ್ತೇವೆ. ಇಂಗ್ಲಿಷ್ ಹೆಸರಲ್ಲಿ ಮಾತೃಭಾಷೆಯ ಸೃಜನಶೀಲತೆಯನ್ನು ಕಸಿದುಕೊಳ್ಳುವುದು ದುರದೃಷ್ಟಕರ ಸಂಗತಿ ಎಂದರು.
ಪ್ರಾಂಶುಪಾಲ ಕೆ.ಬಿ. ಧನಂಜಯ ಮಾತನಾಡಿ, ಸಹ್ಯಾದ್ರಿ ಕಲಾ ಕಾಲೇಜಿನ ಬಗ್ಗೆ ಕೆಲವು ಅಪವಾದಗಳಿವೆ. ಅಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳೇ ತುಂಬಿ ತುಳುಕುತ್ತವೆ ಎನ್ನುವವರಿದ್ದಾರೆ. ಆದರೆ ಕಲಾ ವಿದ್ಯಾರ್ಥಿಗಳು ಪಾಠಕ್ಕಿಂತೆ ಹೆಚ್ಚಾಗಿ ಇಂತಹ ಸಾಹಿತ್ಯಿಕ ಕಾರ್ಯಕ್ರಮಗಳಿಂದ ತಮ್ಮ ಜೀವನವನ್ನು ಮರುಪರಿಶೀಲನೆಗೆ ಒಳಪಡಿಸಿಕೊಂಡು ಬದುಕನ್ನು ಸಾರ್ಥಕ ಮಾಡಿಕೊಳ್ಳುತ್ತಾರೆ ಎಂದರು.
ಕಾರ್ಯಕ್ರಮದಲ್ಲಿ ಪ್ರಾಧ್ಯಾಪಕ ಜಿ.ಆರ್. ಲವ, ಕುವೆಂಪು ಕನ್ನಡ ಅಧ್ಯಯನ ಕೇಂದ್ರದ ಡಾ. ಬಿ.ಎಂ. ಪುಟ್ಟಯ್ಯ, ಹಾಲಮ್ಮ ಮುಂತಾದವರಿದ್ದರು.
ಪ್ರಾಧ್ಯಾಪಕರಾದ ಸಬಿತಾ ಬನ್ನಾಡಿ, ಎನ್. ವಸುಂಧರ, ಡಾ. ಪ್ರಕಾಶ್ ಬಿ.ಎನ್., ವಿಶ್ರಾಂತ ಪ್ರಾಧ್ಯಾಪಕ ಡಾ. ಕೇಶವ ಮೂರ್ತಿ, ಚಿಂತಕ ಡಾ. ಹೆಚ್.ಟಿ.ಕೃಷ್ಣಮೂರ್ತಿ, ಸಂಪನ್ಮೂಲ ವ್ಯಕ್ತಿಗಳಾಗಿ ಭಾಗವಹಿಸಿದ್ದರು.