Malenadu Mitra
ರಾಜ್ಯ ಶಿವಮೊಗ್ಗ

ಬಂಗಾರಪ್ಪ ಎಂಬ ಬಂಡಾಯದ ನಿಜನಾಯಕ, ಬಡವರ ಬಂಧು,ವರ್ಣರಂಜಿತ ರಾಜಕಾರಣಿ

ಲೇಖಕರು: ವೈ ಜಿ ಅಶೋಕ್ ಕುಮಾರ್

ಬಂಗಾರಪ್ಪ ಅವರ ಜನ್ಮದಿನದ ವಿಶೇಷ
ಕರ್ನಾಟಕ ಕಂಡ ಬಹುಮುಖ ಪ್ರತಿಭೆಯ ರಾಜಕಾರಣಿ ಬಂಡಾಯ ಪ್ರವೃತ್ತಿಯ ಏಕೈಕ ನಾಯಕ ಸಾರೇಕೊಪ್ಪ ಬಂಗಾರಪ್ಪ.
ಸಮಾಜವಾದಿ ಹಿನ್ನೆಲೆಯಿಂದ ಬಂದು ದೇವರಾಜ ಅರಸರ ಗರಡಿಯಲ್ಲಿ ಮಿಂದು ಪುಟಿದೇಳುವ ಚೆಂಡಿನಂತೆ ಸದಾ ಚಟುವಟಿಕೆಯ ಕೇಂದ್ರ ಬಿಂದುವಾಗಿದ್ದು ಇರುವತನಕ ಎದುರಾಳಿಗಷ್ಟೇ ಏಕೆ ಸ್ವಪಕ್ಷೀಯರಲ್ಲೂ ಆತಂಕ ಮೂಡಿಸುವಂತೆ ಚಲನಶೀಲರಾಗಿದ್ದವರು.

ಎ ಲೀಡರ್ ಹೂ ಕೆನಾಟ್ ಬಿ ಡಿಫೀಟೆಡ್, ಸೋಲಿಲ್ಲದ ಸರದಾರನೆಂದು ಪತ್ರಿಕೆಗಳಿಂದ ಕರೆಸಿಕೊಂಡ ಬಂಗಾರಪ್ಪ ೧೯೬೭ ರಿಂದ
೧೯೯೬ ವರೆಗೆ ವಿಧಾನಸಭೆಯಲ್ಲಿದ್ದವರು.ರಾಜ್ಯದ ಹನ್ನೆರಡನೆಯ ಮುಖ್ಯಮಂತ್ರಿಯಾಗಿ ವರ್ಣರಂಜಿತರಾಗಿದ್ದವರು.
ಅವರ ಸುತ್ತಲೂ ಯಾವಾಗಲೂ ಫಾಲೋವರ್ಸ್ ಇರುವಂತೆಯೇ ಅವರು ಜನಗಳ ನಡವೆಯೇ ಇರುತ್ತಿದ್ದರು.
ಸ್ನೇಹಜೀವಿ ಅಷ್ಟೇ ಧೈರ್ಯಶಾಲಿಯೂ ಆಗಿದ್ದ ಬಂಗಾರಪ್ಪ ಬ್ಯಾಡ್ಮಿಂಟನ್ ಹುಚ್ಚು ಆಟಗಾರ,ಎಷ್ಟೋ ಸಲ ಬ್ಯಾಡ್ಮಿಂಟನ್ ಚಾಂಪಿಯನ್ ಪ್ರಕಾಶ್ ಪಡುಕೋಣೆಯವರೊಂದಿಗೆ ಆಡುತ್ತ ಸಮಯ ಸರಿದದ್ದು ತಿಳಿಯದೇ ಕೆ ಜಿ ಎಸ್ ಕ್ಲಬ್ ನ ಅಂಗಳದಿಂದ ನೇರವಾಗಿ ವಿಧಾನಸೌಧದ ಕಛೇರಿಗೆ, ಸಂಪುಟ ಸಭೆಗೆ ಬಂದದ್ದು ಉಂಟು.

ಹಾಗೆಯೇ ಅವರೊಬ್ಬ ಸಂಗೀತ ಪ್ರೇಮಿ ಮತ್ತು ವಿಶಿಷ್ಟ ರೀತಿಯ ಹಾಡುಗಾರ ಯಮನ್ ಕಲ್ಯಾಣಿ , ಹಿಂಧೋಳ ರಾಗಗಳಲ್ಲಿ ತಲ್ಲೀನರಾಗಿ ಗಂಟೆಗಟ್ಟಲೆ ಹಾಡುತ್ತಿದ್ದ ಹಿಂದೂಸ್ತಾನಿ ಸಂಗೀತ ಪ್ರಿಯ.
ಎಂಥದೇ ಸಮಸ್ಯೆಗಳಿದ್ದರೂ ಸಂಗೀತದಲ್ಲಿ ಮುಳುಗಿಬಿಡುತ್ತಿದ್ದ ಬಂಗಾರಪ್ಪ ಅವರಿಗೆ ರೋಮ್ ಹತ್ತಿ ಉರಿವಾಗ ನೀರೋ ಪಿಟೀಲು ನುಡಿಸುತ್ತಿದ್ದ ಅನ್ವರ್ಥ ಸೇರಿಕೊಂಡಿತ್ತು. ರಾಜ್ ಕುಮಾರ್ ಅವರಿಗೆ ಕರ್ನಾಟಕ ರತ್ನ ಪ್ರಶಸ್ತಿ ಪ್ರದಾನ ವಿಧಾನಸೌಧದ ಮುಂದೆ ನಡೆದಾಗ ’ ಯಾರೇ ಕೂಗಾಡಲಿ ಊರೇ ಹೋರಾಡಲೀ, ನಿನ್ನ ನೆಮ್ಮದಿಗೆ ಭಂಗವಿಲ್ಲ’ ಎಂದು ಹಾಡಿ ಜನರನ್ನು ರಂಜಿಸಿದರಲ್ಲದೆ ತಮ್ಮ ಕುರ್ಚಿಗೆ ಸಂಚಕಾರ ತರಲು ಪ್ರಯತ್ನಿಸುತ್ತಿದ್ದ ಮಾರ್ಪಾಡಿ ವೀರಪ್ಪಮೊಯ್ಲಿಗೆ ಸಂದೇಶವನ್ನು ರವಾನಿಸಿದ್ದರು. ಡೊಳ್ಳು ಬಾರಿಸುತ್ತ ಕುಣಿಯುವ ಮುಖ್ಯಮಂತ್ರಿ, ಮಕ್ಕಳ ಬಾಯಲ್ಲಿ ಟ್ವಿಂಕಲ್ ಟ್ವಿಂಕಲ್ ಸೂಪರ್ ಸ್ಟಾರ್ ಅನ್ನಿಸಿಕೊಂಡಿದ್ದರು. ಬಾಯಿಂದ ಬಾಯಿಗೆ ಅತೀ ಹೆಚ್ಚು ಟ್ರೋಲ್ ಆಗಿದ್ದ ರಾಜಕಾರಣಿ ಬಂಗಾರಪ್ಪ.

ದೇವರಾಜ ಅರಸರ ನಂತರ ಹಿಂದುಳಿದ ವರ್ಗಗಳ ನೇತಾರನ ಪಟ್ಟ ಕಟ್ಟಿಕೊಂಡಿದ್ದ ಬಂಗಾರಪ್ಪ,ಅತ್ಯುತ್ತಮ ಆಡಳಿತ ನೀಡುತ್ತಿದ್ದ
ವೀರೇಂದ್ರ ಪಾಟೀಲರ ಅನಾರೋಗ್ಯದ ಕಾರಣ ಮುಖ್ಯಮಂತ್ರಿ ಗಾದಿಗೆ ಪ್ರದಾನಿ ರಾಜೀವ್ ಗಾಂಧಿಯಿಂದ ಆಯ್ಕೆಯಾದವರು. ಬೆಂಗಳೂರು ವಿಮಾನ ನಿಲ್ದಾಣದಲ್ಲಿ ಅವರ ಹೆಸರನ್ನು ರಾಜೀವ್ ಗಾಂಧಿ ಘೋಷಿಸಿದ್ದರು.
೧೭೯ ಕಾಂಗ್ರೆಸ್ ಶಾಸಕರಿದ್ದ ದೊಡ್ಡ ಹಡಗನ್ನು ಬಂಗಾರಪ್ಪ ನಡೆಸಬೇಕಿತ್ತು. ಬಸವಲಿಂಗಪ್ಪ, ಮಲ್ಲಿಕಾರ್ಜುನ ಖರ್ಗೆ, ಧರ್ಮಸಿಂಗ್, ಕಾಗೋಡು ತಿಮ್ಮಪ್ಪರಂಥಹ ಪುರಾತನ ಕಾಂಗ್ರೆಸಿಗರ ಜತೆಗೇ ಡಿ ಕೆ ಶಿವಕುಮಾರ್, ಶಿವಮೂರ್ತಿ ಸೇರಿದಂತೆ ಹನ್ನೆರಡು ಯುವಕರನ್ನು ಮಂತ್ರಿಮಾಡಿದ್ದರು.


ಯಾವತ್ತೂ ಜತೆಗಿರುತ್ತಿದ್ದ ಜಾರ್ಜ್, ಸ್ಲಂ ರಮೇಶ್, ನಜೀರ್ ಅಹಮದ್, ಆರ್ ವಿ ದೇವರಾಜ್, ಗುತ್ತೇದಾರ್ ಗಳು ಸರ್ಕಾರದ ಮಾಲೀಕರು ಗಳಾಗಿದ್ದರು. ಬಂಧಿಖಾನೆ ಮಂತ್ರಿಯಾಗಿದ್ದ ಡಿ ಕೆ ಶಿವಕುಮಾರ್ ಜೈಲಿನ ಪಕ್ಕದ ವಸತಿ ಗೃಹದಲ್ಲಿ ಕೆಲಸ ಮಾಡುತ್ತಿದ್ದ ಮೂವರು ಖೈದಿಗಳು ಪರಾರಿಯಾಗಿದ್ದು ದೊಡ್ಡ ಸುದ್ದಿಯಾಯಿತು. ಸುಮಾರು ಮೂವತ್ತಕ್ಕೂ ಹೆಚ್ಚು ಹೊಸ ಡಿಸ್ಟಿಲರಿಗಳಿಗೆ ಪರವಾನಗಿ ಕೊಟ್ಟರು.
ಅಬಕಾರಿ ಮಂತ್ರಿ ಕೆ. ಶಿವಮೂರ್ತಿಗೆ ಇಲಾಖೆಯ ವರ್ಗಾವಣೆಯ ವಿಚಾರದಲ್ಲಿ ತಮ್ಮ ನಾಯಕನಿಂದ ತಪರಾಕಿ ಬಿತ್ತು.
ಎಸ್ ಎಂ ಕೃಷ್ಣ ಸ್ಪೀಕರ್ ಆಗಿದ್ದರು. ಬಂಗಾರಪ್ಪನವರಿಗೆ ಬಲಿಷ್ಠ ವಿರೋಧ ಪಕ್ಷದ ಎದುರಾಳಿಗಳೂ ಇರಲಿಲ್ಲ, ಅವರಿಗೆ ಅವರೇ ಎದುರಾಳಿ !
ಪಟೇಲ್, ಸಿದ್ದರಾಮಯ್ಯ, ದೇವೇಗೌಡರಂಥವರು ವಿರೋಧಪಕ್ಷದ ಸಾಲಿನಲ್ಲಿ ಇರಲಿಲ್ಲ. ಹಾಗಾಗಿ ಆನೆ ನಡೆದದ್ದೇ ರಾಜ ಬೀದಿಯಾಯಿತು. ಅವರು ನಂಬಿದವರಿಗೆ ತೋರಿದ ಉದಾರತೆಯೇ ಅವರನ್ನು ಸಂಕಷ್ಟಗಳಿಗೆ ನೂಕಿ ಹಗರಣಗಳಿಗೆ ದಾರಿಯಾಯಿತು. ಅದರಲ್ಲಿ ಮುಖ್ಯವಾಗಿ ಕ್ಲಾಸಿಕ್ ಕಂಪ್ಯೂಟರ್ ಹಗರಣವನ್ನು ಮೇಲ್ಮನೆಯಲ್ಲಿ ಬಲಿಷ್ಠ ವಾಗಿದ್ದ ವಿರೋಧಪಕ್ಷದ ಎಂ ಸಿ ನಾಣಯ್ಯ ಬಹಿರಂಗಪಡಿಸದ್ದಲ್ಲದೇ ನ್ಯಾಯಾಲಯದ ಮೂಲಕ ಕಂಪ್ಯೂಟರ್ ಖರೀದಿಯ ಯೋಜನೆಯನ್ನು ರದ್ದುಗೊಳಿಸುವ ತೀರ್ಮಾನ ಪ್ರಕಟವಾಯಿತು. ಆಗ ಅಲೆಕ್ಸಾಂಡರ್ ಮುಖ್ಯ ಕಾರ್ಯದರ್ಶಿಯಾಗಿದ್ದರು. ಅವರನ್ನು ನಂಬಿ ಸಹಿ ಮಾಡಿದ್ದೇ ಮುಖ್ಯಮಂತ್ರಿ ಸ್ಥಾನಕ್ಕೆ ಮುಳುವಾಯಿತು.


ಜತೆಗೇ ಆರೋಗ್ಯ ಮಂತ್ರಿಯಾಗಿದ್ದ ಪುಟ್ಟಸ್ವಾಮಿಗೌಡರ ಡೆಂಟಲ್ ಸೀಟು ಹಗರಣವೂ ಸೇರಿಕೊಂಡಿತು ಇದರಲ್ಲೂ ನೇರವಾಗಿ ಬಂಗಾರಪ್ಪನವರ ಪಾತ್ರವಿರಲಿಲ್ಲ. ಅವರ ಪದಚ್ಯುತಿಯ ನಂತರ ತನ್ನನ್ನೇ ತಾನು ನಂಬದ ಮುಖ್ಯಮಂತ್ರಿ ಮೊಯ್ಲಿ ಪ್ರಕರಣವನ್ನು ಸಿ ಬಿ ಐಗೆ ವಹಿಸಿ ಸೇಡು ತೀರಿಸಿಕೊಂಡರು. ತಮ್ಮ ಕೊನೆಗಾಲದಲ್ಲಿ ಸ್ವತಃ ವಕೀಲರಾಗಿದ್ದ ಬಂಗಾರಪ್ಪ ಸುಪ್ರೀಂಕೋರ್ಟ್ ನಲ್ಲಿ ಆರೋಪ ಮುಕ್ತರಾಗಿ ಉಸಿರಾಡಿದರು. ಆಡಳಿತದಲ್ಲಿ ಕ್ರಾಂತಿಕಾರಿ ಬದಲಾವಣೆ:
ಮುಖ್ಯಮಂತ್ರಿಯಾಗಿ ’ಆಶ್ರಯ,ಅಕ್ಷಯ,ಆರಾಧನ,ವಿಶ್ವ, ಶುಶ್ರೂಷ’ ಮುಂತಾಗಿ ಯೋಜನೆಗಳನ್ನು ಅನುಷ್ಠಾನಗೊಳಿಸಿ,
ರೈತರ ಪಂಪ್ ಸೆಟ್ ಗಳಿಗೆ ಉಚಿತ ವಿದ್ಯುತ್ ಹರಿಸಿ ಬಡವರ ಬಂಧು ಬಿರುದಾಂಕಿತರಾದರು. ಆಡಳಿತದಲ್ಲಿ ಸಮಗ್ರವಾಗಿ ಕನ್ನಡ ಜಾರಿಗೊಳಿಸಲು ಕನ್ನಡ ಅಭಿವೃದ್ಧಿ ಪ್ರಾಧಿಕಾರಕ್ಕೆ ಶಾಸನ ಬದ್ಧ ಅಧಿಕಾರ ನೀಡಿದ್ದು ,ಕನ್ನಡ ಬಾರದ ಬಿಳಿ ಆನೆ ಅಧಿಕಾರಿಗಳು ಕನ್ನಡದಲ್ಲೇ ಸಹಿ ಮಾಡಿ ಸರ್ಕಾರಿ ಆದೇಶಗಳನ್ನು ಹೊರಡಿಸುವ ಮಟ್ಟಕ್ಕೆ ಮುಟ್ಟಿದ್ದು ಬಂಗಾರಪ್ಪ ನವರನ್ನು ’ಸಾಧನೆಯ ಸರದಾರ’ನನ್ನಾಗಿಸಿತು.
ಅವರು ನೂರು ದಿನ ಆಡಳಿತದ ಸಾಧನೆಯ ಸಮಾವೇಶ ವನ್ನು ವಿಧಾನಸೌಧದ ಮುಂದೆ ನಡೆಸಿ ವಿಜೃಂಭಿಸಿದರು.
ಹಾಗೆಯೇ ಶಾಮೀಯಾನ ಹಾಕಿದ್ದವನಿಂದ ಹಿಡಿದು ನೂರಾರು ಮಂದಿಗೆ ರಾಜ್ಯೋತ್ಸವ ಪ್ರಶಸ್ತಿ ನೀಡಿದರು. ಇದೇನು ಸರ್ ಇಂಥಹ ಅನರ್ಹರಿಗೆಲ್ಲ ಪ್ರಶಸ್ತಿ ಕೊಟ್ಟಿರಿ ಎಂದು ಪ್ರಶ್ನಿಸಿದ ಪತ್ರಕರ್ತರಿಗೆ ’ ಅರ್ಹರಿಗೆ ಮುಂದಿನ ಸಲ ’ ಎಂದು ನಿರ್ಭಿಡೆಯಿಂದ ಉತ್ತರಿಸಿ ಹುಸಿನಗೆ ನಕ್ಕು ಮೂತಿ ತಿರುವುತ್ತಾ ಮುಂದೆ ನಡೆದೇ ಬಿಟ್ಟರು. ಕಾವೇರಿ ವಿವಾದ ಉಭಯ ರಾಜ್ಯಗಳ ನಡುವೆ ಭುಗಿಲೆದ್ದಾಗ ಅಸೆಂಬ್ಲಿಯಲ್ಲಿ ವಿಧೇಯಕವನ್ನು ಮಂಡಿಸಿ ವಿರೋಧಪಕ್ಷಗಳು ಒಪ್ಪುವಂತೆ ಮಾಡಿದರು. ವಾಸ್ತವವಾಗಿ ರಾಜ್ಯ ಸರ್ಕಾರಕ್ಕೆ ಆ ಅಧಿಕಾರ ಇರಲಿಲ್ಲ.ಆದರೆ ಬಂಗಾರಪ್ಪ ಹೂಡುವ ಬಾಣಕ್ಕೆ ಅಧಿಕಾರಿಗಳು ಬೆನ್ನು ಬಾಗಲೇಬೇಕಿತ್ತು. ಕಾವೇರಿ ವಿಚಾರದಲ್ಲಿ ಕರ್ನಾಟಕ ಬಂದ್ ಗೆ ಸರ್ಕಾರವೇ ಬೆಂಬಲ ನೀಡಿದ ಮೊದಲ ಮತ್ತು ಕೊನೆಯ ಪ್ರಕರಣ ಅದು !
ಇದೆಲ್ಲವು ಅವರ ಸಂಪುಟ ಸಹೋದ್ಯೋಗಿಗಳ ಆರ್ಭಟ, ಹಗರಣಗಳಲ್ಲಿ ತೂಕ ಕಳೆದುಕೊಂಡಿತು. ಅವರ ಮಂತ್ರಿಗಳು ಖರೀದಿಸಿದ ಕಟ್ಟಡಗಳಿಗೆಲ್ಲ ಬಂಗಾರಪ್ಪನವರ ಹೆಸರಿನ ಬಣ್ಣ ಬಳಿಯಲಾಯಿತು. ತಮಗೆ ಅಭಯ ಹಸ್ತರಾಗಿದ್ದ ರಾಜೀವ್ ಗಾಂಧಿಯವರ ನಿರ್ಗಮನದ ನಂತರ ಬಂಗಾರಪ್ಪ ಬಸವಳಿದರು, ಪಿ ವಿ ನರಸಿಂಹರಾಯರ ಒಳ ಏಟಿಗೆ ತತ್ತರಿಸಿದರಾದರೂ ತಮ್ಮ ಬಂಡಾಯ ಪ್ರವೃತ್ತಿಯನ್ನು ಬಿಡಲಿಲ್ಲ. ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡುವಂತೆ ಐದಾರು ಬಾರಿ ಆಜ್ಞೆ ಮಾಡಿದರೂ ಕೇರ್ ಮಾಡಿರಲಿಲ್ಲ. ಹಾಗೆ ನೋಡಿದರೆ ಅರಸರ ಸಂಪುಟದಲ್ಲಿ ಗೃಹ ಮತ್ತು ಲೋಕೋಪಯೋಗಿ ಮಂತ್ರಿಯಾಗಿದ್ದ ಬಂಗಾರಪ್ಪ ನಂತರ ಇಂದಿರಾಗಾಂಧಿಯವರ ಹಿಂದೆ ನಡೆದರು. ಮುಂದೆ ಗುಂಡೂರಾಯರ ಸಂಪುಟದ ಕಂದಾಯ, ಕೃಷಿ ಇಲಾಖೆಯನ್ನು ತ್ಯಜಿಸಿ ಬಂಡಾಯವೆದ್ದು ಕ್ರಾಂತಿರಂಗದ ಉಪಾಧ್ಯಕ್ಷರಾದರು. ೧೯೮೩ ರ ಚುನಾವಣೆಯಲ್ಲಿ ಮೂವತ್ತೈದು ಸ್ಥಾನ ಗೆದ್ದು ಮುಖ್ಯಮಂತ್ರಿ ಸ್ಥಾನಕ್ಕೆ ಪಟ್ಟುಹಿಡಿದು ಕೂತರು. ನಾವು ಕಟ್ಟಿದ ಹುತ್ತಕ್ಕೆ ಬಂದ ಹಾವು ಎಂದು ರಾಮಕೃಷ್ಣಹೆಗಡೆ ಆಯ್ಕೆ ಯನ್ನು ವಿರೋಧಿಸಿ ಮತ್ತೆ ಹೊರ ನಡೆದರು. ಹೆಗಡೆಯವರ ಮೇಲಿನ ಆ ಕೋಪವನ್ನು ೧೯೯೧ರ ಲೋಕಸಭೆ ಚುನಾವಣೆಯಲ್ಲಿ ತೀರಿಸಿಕೊಂಡರು. ರಾಜಕಾರಣಕ್ಕೆ ಹೊಸಬರಾಗಿದ್ದ ಬ್ಯಾರೇಜ್ ಖ್ಯಾತಿಯ ಸಿದ್ದು ನ್ಯಾಮಗೌಡರನ್ನು ನಿಲ್ಲಿಸಿ ಗೆಲ್ಲಿಸಿ ಬಾಗಲಕೋಟೆಯಲ್ಲಿ ಹೆಗಡೆಯವರ ಕೋಟೆ ಬಾಗಿಲು ಮುಚ್ಚಿಸಿ ಸೋಲಿನ ರುಚಿ ತೋರಿಸಿದ್ದರು.
ಎದೆಗಾರಿಕೆಯಲ್ಲಿ ಸರಿಸಾಟಿಯಿಲ್ಲ:

ಬಂಗಾರಪ್ಪ ಸ್ವಭಾವವೇ ಹಾಗೆ ಅವರು ಬಡಪೆಟ್ಟಿಗೆ ಬಗ್ಗುವ ಆಸಾಮಿಯಲ್ಲ ತಮ್ಮನ್ನು ಪದಚ್ಯುತಿ ಗೊಳಿಸಿದ ನರಸಿಂಹರಾವ್, ವೀರಪ್ಪ ಮೊಯ್ಲಿ ಕಾಂಗ್ರೆಸ್‌ನ್ನು ಹೆಡೆಮುರಿಕಟ್ಟಲು ಪರ್ಯಾಯವಾಗಿ ಕರ್ನಾಟಕ ಕಾಂಗ್ರೆಸ್ ಪಕ್ಷ ಕಟ್ಟಿ , ಮಧ್ಯಮ ಕರ್ನಾಟಕದ ದಾವಣಗೆರೆಯಲ್ಲಿ ಬೃಹತ್ ಸಮಾವೇಶ ನಡೆಸಿದರು. ಸುಮಾರು ಮೂರು ಲಕ್ಷ ಅಭಿಮಾನಿಗಳು ಸೇರಿದ್ದ ಆ ಸಮಾವೇಶ ಮುಂದಿನ ರಾಜಕೀಯ ಸ್ಥಿತ್ಯಂತರಕ್ಕೆ ನಾಂದಿಯಾಯಿತು.
೧೯೯೪ರ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಧೂಳಿಪಟವಾಗಿ ಮೂರನೆಯ ಸ್ಥಾನಕ್ಕೆ ಕುಸಿಯಿತು. ಜನತಾದಳ ೧೩೬ ಸ್ಥಾನಗಳಿಸಿ ದೇವೇಗೌಡರು ಮುಖ್ಯಮಂತ್ರಿ ಯಾದರು. ಬಿಜೆಪಿ ವಿರೋಧಪಕ್ಷವಾಗಿ ಯಡಿಯೂರಪ್ಪ ನಾಯಕರಾದರು. ಬಂಗಾರಪ್ಪವರ ಕೆಸಿಪಿ ಹನ್ನೊಂದು ಸ್ಥಾನ ಪಡೆಯಿತು.ಆ ಮೂಲಕ ಹಿರಿಯ ಪುತ್ರ ಶರವೇಗದ ಸರದಾರ ವಸಂತ ಕುಮಾರ್ ಎಂಟ್ರಿಯಾಯಿತು. ಮುಂದೆ ಅದು ಸಂಸಾರದ ಬಂಡಾಯಕ್ಕೂ
ನಾಂದಿಯಾಯಿತು. ತಮ್ಮ ಸೊರಬ ಕ್ಷೇತ್ರವನ್ನು ಕುಮಾರ್ ಬಂಗಾರಪ್ಪ ಅವರಿಗೆ ಬಿಟ್ಟು ಬಂಗಾರಪ್ಪ ಶಿವಮೊಗ್ಗ ಲೋಕಸಭೆ ಪ್ರವೇಶಿಸಿದರು.
ಮತ್ತೆ ೧೯೯೯ರಲ್ಲಿ ಸೋಮನಹಳ್ಳಿ ಮಲ್ಲಯ್ಯ ಕೃಷ್ಣ ಅವರ ಅಧ್ಯಕ್ಷತೆಯ ಕಾಂಗ್ರೆಸ್ ನೊಡನೆ ತಮ್ಮಪಕ್ಷವನ್ನು ವಿಲೀನಗೊಳಿಸಿದ ಪರಿಣಾಮ ಜನತಾದಳಗಳು ನೆಲಕಚ್ಚಿ ಕೃಷ್ಣ ಅವರು ಮುಖ್ಯಮಂತ್ರಿಯಾದರು. ಮತ್ತೆ ಕಾಂಗ್ರೆಸ್ ಮೂಲಕ ಲೋಕಸಭೆಗೆ ಪುನರ್ ಪ್ರವೇಶ ಪಡೆದರು.ಹೀಗೆ ಆರು ಸಲ ಲೋಕಸಭೆಗೆ ಸ್ಪರ್ಧಿಸಿ ಎರಡು ಸಲ ಸೋಲುಂಡರು.ಒಮ್ಮೆ ಬಿಜೆಪಿ ಮತ್ತೊಮ್ಮೆ ಸಮಾಜವಾದಿ ಪಕ್ಷದಿಂದ ಗೆದ್ದಿದ್ದರು.
ಕಾಂಗ್ರೆಸ್‌ಗೆ ಕಾಡಿದ ನಿಜನಾಯಕ:
ಬಂಗಾರಪ್ಪ ಕೇವಲ ಶಿವಮೊಗ್ಗಕ್ಕೆ ಸೀಮಿತವಾದ ನಾಯಕರಾಗಿರಲಿಲ್ಲ. ರಾಜ್ಯದ ನೂರಾರು ಕ್ಷೇತ್ರಗಳಲ್ಲಿ ತಮ್ಮ ಪ್ರಭಾವದಿಂದ ಕಾಂಗ್ರೆಸ್‌ಗೆ ಮರ್ಮಾಘಾತ ಉಂಟು ಮಾಡಿದ್ದರು. ಅದು ಬಿಜೆಪಿಗೆ ವರವಾಗಿ ಪರಿಣಮಿಸಿತು. ಆ ಗಾಂಧಿ ಕಾಲದಲ್ಲಿ ಕಾಂಗ್ರೆಸ್ ಸ್ಟ್ರಾಂಗ್ ಇತ್ತು. ಈ ಗಾಂಧಿ ಕಾಲದಲ್ಲಿ ವೀಕ್ ಆಗಿದೆ. ಅಂತಹ ಪಕ್ಷದಲ್ಲಿ ನಾನು ಕಡಿಯುವುದಾದರೂ ಏನಿದೆ’ ಎಂದು ವಾಜಪೇಯಿಯವರೊಂದಿಗೆ ಸ್ನೇಹ ಕುದುರಿಸಿಕೊಂಡು
ಬಿಜೆಪಿ ಸೇರಿದರು. ಸಮಾಜವಾದಿ ಸ್ನೇಹಿತರಾಗಿದ್ದ ಕಾಗೋಡು ತಿಮ್ಮಪ್ಪನವರ ಮಾತಿಗೆ ಮನ್ನಣೆ ಕೊಡದೇ ಬಿಜೆಪಿ ಸಂಘಟಿಸಿ ೩೭ ಶಾಸಕರಿಂದ ೭೯ ಕ್ಕೆ ಏರಿಸಿ ಕಮಲವನ್ನು ಅರಳಿಸಿದ ಕೀರ್ತಿ ಬಂಗಾರಪ್ಪನವರದಾಯಿತು.
ಮಲೆನಾಡಿನಿಂದ ಕರಾವಳಿಯವರೆಗೂ ಬಿಜೆಪಿ ಭದ್ರಗೊಂಡಿತು. ದೇವೇಗೌಡರ ಭದ್ರಕೋಟೆಯನ್ನು ಭೇಧಿಸಿ ಹಾಸನದಲ್ಲೂ ನಾಲ್ಕು ಕ್ಷೇತ್ರ ಬಿಜೆಪಿಯ ಪಾಲಾಯಿತು.
ಮಗನ ವಿರುದ್ಧವೂ ಬಂಡಾಯ:

ಪಿತೃವಾಕ್ಯ ಪರಿಪಾಲನೆ ಮಾಡದೇ ಕಾಂಗ್ರೆಸ್ ನಲ್ಲೇ ಉಳಿದ ಮಗನ ವಿರುದ್ಧವೂ ಬಂಡಾಯ ಸಾರಿದರು. ಕೊನೆಗೆ ತಾವೇ ಕಟ್ಟಿದ ರೇಣುಕಾಂಬ ನಿಲಯವನ್ನು ತೊರೆದು ಬಾಡಿಗೆ ಮನೆ ಸೇರಿದರು. ಬಂಗಾರಪ್ಪನವರಿಗೆ ಇಬ್ಬರು ಗಂಡು ಮೂವರು ಹೆಣ್ಣುಮಕ್ಕಳು, ಹತ್ತು ಮಂದಿ ಮೊಮ್ಮಕ್ಕಳು.
ಸಾರೆಕೊಪ್ಪದಿಂದ ಕುಬಟೂರಿಗೆ ವಲಸೆ ಬಂದ ಕಲ್ಲಪ್ಪ ಮತ್ತು ಕಲ್ಲವ್ವ ದಂಪತಿಗಳ ಮಗ ಬಂಗಾರಪ್ಪ ಡಿಗ್ರಿ ಮುಗಿಸಿ ಮೈಸೂರಿನಲ್ಲಿ ಕಾನೂನು ವ್ಯಾಸಂಗ ಮಾಡಿದರು. ಲೋಹಿಯಾ ವಿಚಾರಧಾರೆಯಿಂದ ಪ್ರಭಾವಿತಗೊಂಡು ಶಾಂತವೇರಿ ಗೋಪಾಲ ಗೌಡರ ಸಮಾಜವಾದಿ ಪಕ್ಷದ ಮುಖಾಂತರ ರಾಜಕಾರಣ ಪ್ರವೇಶಿಸಿದವರು ರಾಜಕಾರಣದ ಅಂತಿಮ ಗೆಲುವು ಕೂಡಾ ಸಮಾಜವಾದಿ ಪಕ್ಷದ ಸೈಕಲ್ ನಲ್ಲಿ ಕೊನೆಗೊಂಡಿತು.
ಮುಂದೆ ಅವರು ಗೆಲುವು ಸಾಧಿಸಲಾಗಲಿಲ್ಲ. ೨೦೦೮ರಲ್ಲಿ ಯಡಿಯೂರಪ್ಪ ವಿರುದ್ಧ ಶಿಕಾರಿಪುರ ಮತ್ತೆ ೨೦೦೯ ರಲ್ಲಿ ಶಿವಮೊಗ್ಗ ಲೋಕಸಭಾ ಚುನಾವಣೆಯಲ್ಲಿ ಪರಾಭವಗೊಂಡು ೨೦೧೦ ಡಿಸೆಂಬರ್ ನಲ್ಲಿ ದೇವೇಗೌಡರ ಜನತಾದಳ ಸೇರಿ ೨೬ ಡಿಸೆಂಬರ್ ೨೦೧೧ರಲ್ಲಿ ಈ ನೆಲದ ಬಂಡಾಯಕ್ಕೆ ವಿದಾಯ ಹೇಳಿದರು. ಅತೀ ಹೆಚ್ಚು ಪಕ್ಷಾಂತರ ಮಾಡಿದರೂ ತಮ್ಮ ಕ್ಷೇತ್ರವನ್ನು ಯಾವತ್ತೂ ಬಿಟ್ಟು ಕೊಡಲಿಲ್ಲ. ಸಂಕಷ್ಟ ಸಮಯದಲ್ಲಿ ಲೋಡ್ ಗಟ್ಟಲೆ ಬಿತ್ತನೆ ಬೀಜ ತರಿಸಿ ರೈತರಿಗೆ ಹಂಚಿದ್ದರಲ್ಲದೇ ಬರಗಾಲದಲ್ಲಿ ಬಡವರಿಗೆ ಧವಸ ಧಾನ್ಯಗಳನ್ನು ವಿತರಿಸಿದ್ದು ಮುಂದೆ ಅನ್ನಭಾಗ್ಯಕ್ಕೆ ಕಾರ್ಯಕ್ರಮಕ್ಕೆ ಪ್ರೇರಣೆಯಾಯಿತೆಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿಕೊಂಡಿದ್ದರು. ತಮ್ಮ ರಾಜಕಾರಣದ ಅವಧಿಯ ಉದ್ದಕ್ಕೂ ಯಾರಿಗೂ ’ಜೀ ಹುಜೂರ್ ’ ಅನ್ನದ ಬಂಗಾರಪ್ಪನವರು ಸ್ವಲ್ಪ ಮುತ್ಸದ್ಧಿತನವನ್ನು ತೋರಿದ್ದರೆ ದೇವರಾಜ ಅರಸರ ಉತ್ತರಾಧಿಕಾರಿ ಯಾಗುವ ಎಲ್ಲಾ ಅರ್ಹತೆಗಳು ಅವರಿಗಿತ್ತು ಎಂದಷ್ಟೇ ಹೇಳಬಹುದು.

Ad Widget

Related posts

ಕೃಷಿ ವಿವಿಗೆ ಕೆಳದಿ ಶಿವಪ್ಪನಾಯಕನ ಹೆಸರು : ಬಿ.ಎಸ್.ಯಡಿಯೂರಪ್ಪ

Malenadu Mirror Desk

ಡಾ.ರಾಜೇಂದ್ರ ಕಿಶೋರ್ ಪಂಡಾ ಅವರಿಗೆ ಕುವೆಂಪು ರಾಷ್ಟ್ರೀಯ ಪುರಸ್ಕಾರ

Malenadu Mirror Desk

ಈ ಅನ್ಯಾಯದ ಸಾವುಗಳಿಗೆ ನ್ಯಾಯ ಕೊಡುವವರಾರು ?

Malenadu Mirror Desk

Leave a Comment

error: Content is protected !! ಮಲೆನಾಡು ಮಿರರ್‌ನಲ್ಲಿ ಪ್ರಕಟಗೊಂಡ ಸುದ್ದಿ, ಲೇಖನ, ಫೊಟೊಗಳನ್ನುಪೂರ್ವಾನುಮತಿಯಿಲ್ಲದೆ ನಕಲು ಮಾಡುವುದು ಕಾನೂನುಬಾಹಿರವಾಗಿದೆ.