ಬೇಸಿಗೆ ಹಂಗಾಮಿನಲ್ಲಿ ಬಿತ್ತನೆ ಮಾಡಿದ್ದ ಭತ್ತ, ಮೆಕ್ಕೆಜೋಳದ ಬೆಳೆಗೆ ಸಂಕಟ
ನಾಗರಾಜ್ ಹುಲಿಮನೆ, ಶಿವಮೊಗ್ಗ
ಜಿಲ್ಲೆಯಲ್ಲಿ ಸುರಿಯುತ್ತಿರುವ ಮುಂಗಾರು ಪೂರ್ವ ಮಳೆಯಿಂದ ರೈತರು ಹೈರಾಣಾಗಿದ್ದಾರೆ. ಇದರಿಂದ, ಬೇಸಿಗೆ ಹಂಗಾಮಿನಲ್ಲಿ ರೈತರು ಬಿತ್ತನೆ ಮಾಡಿದ್ದ ಭತ್ತ, ಮೆಕ್ಕೆಜೋಳದ ಬೆಳೆಗೆ ಸಂಕಟ ಎದುರಾಗಿದೆ.
ಕಳೆದ ವರ್ಷದಲ್ಲಿ ಬರಗಾಲ ಇರುವ ಕಾರಣ ಬೋರ್‌ವೆಲ್ ಆಧರಿಸಿಯೇ ರೈತರು ಬಂಡವಾಳ ಹಾಕಿ ಬೇಸಿಗೆ ಹಂಗಾಮಿನ ಬೆಳೆ ಬೆಳದಿದ್ದರು. ಅದು ಕಟಾವಿಗೆ ಬಂದ ಹಂತದಲ್ಲಿಯೇ ಮುಂಗಾರು ಪೂರ್ವ ಮಳೆ ಬಂದಿದ್ದು, ಬೆಳೆ ಹಸನು ಮಾಡಿಕೊಳ್ಳುವುದು ಸವಾಲಾಗಿದೆ.
ಇಲ್ಲಿ ಸುರಿಯುತ್ತಿರುವ ಮಳೆಯು ಬರಗಾಲದ ದಾಹ ನೀಗಿಸಿತು ಎನ್ನುವ ಸಂತಸ ಒಂದು ಕಡೆಯಾದರೆ, ರೈತರು ಸಾವಿರಾರು ಹೆಕ್ಟೇರ್ ಪ್ರದೇಶದಲ್ಲಿ ಬೆಳೆದಿದ್ದ ಬೆಳೆ ನೆಲ ಕಚ್ಚುವ ಆತಂಕ ಕಾಡುತ್ತಿದೆ.
ಜಿಲ್ಲೆಯಲ್ಲಿ ಬೇಸಿಗೆ ಹಂಗಾಮಿನಲ್ಲಿ ೨೦,೫೬೮ ಹೆಕ್ಟೇರ್ ಪ್ರದೇಶದ ಬಿತ್ತನೆಗೆ ಗುರಿ ಹೊಂದಲಾಗಿತ್ತು. ಆದರೆ, ಈ ಪೈಕಿ ಶಿವಮೊಗ್ಗ ೩,೬೯೧, ಭದ್ರಾವತಿ ೧,೦೯೪, ತೀರ್ಥಹಳ್ಳಿ ೧೦, ಶಿಕಾರಿಪುರ ೨,೧೭೫, ಸೊರಬ ೧,೫೦೫ ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆ ಮಾಡಲಾಗಿದ್ದು, ಇಲ್ಲಿ ಒಟ್ಟು ೮,೪೭೫ ಹೆಕ್ಟೇರ್ ಪ್ರದೇಶದಲ್ಲಿ ರೈತರು ಬೆಳೆ ಬೆಳೆದಿದ್ದರು. ಇಲ್ಲಿ ಭತ್ತ, ಮೆಕ್ಕೆಜೋಳ, ಅಲಸಂದೆ, ಹೆಸರು, ಅವರೆ, ಸೂರ್ಯಕಾಂತಿ ಸೇರಿ ವಿವಿಧ ತಳಿಯ ಬೆಳೆ ಬಿತ್ತನೆ ಮಾಡಿದ್ದು, ಬಹುತೇಕ ಕಡೆ ಬೆಳೆ ಕಟಾವು ಕಾರ್ಯ ಆಗಿದೆ. ಆದರೆ, ಇನ್ನೂ ಕೆಲವೆಡೆ ಕಟಾವಿನ ಹೊಸ್ತಿಲಲ್ಲಿ ಬೆಳೆ ಸಿಲುಕಿಕೊಂಡಿದ್ದು, ಮಳೆಯಿಂದಾಗಿ ರೈತರು ಕಂಗಾಲಾಗಿದ್ದಾರೆ.
ಭದ್ರಾವತಿ ತಾಲ್ಲೂಕು ವ್ಯಾಪ್ತಿಯ ನೂರಾರು ಎಕರೆಯಲ್ಲಿ ರೈತರು ಬೇಸಿಗೆ ಬೆಳೆಯಾಗಿ ಭತ್ತ ಬಿತ್ತನೆ ಮಾಡಿದ್ದಾರೆ. ಪ್ರಸ್ತುತ, ಇಲ್ಲಿ ಮಳೆಯ ಬಿಡುವಿನ ನಡುವೆ ಯಂತ್ರದ ಸಹಾಯದಿಂದ ರೈತರು ಭತ್ತದ ಕೊಯ್ಲು ನಡೆಸುತ್ತಿದ್ದಾರೆ. ಆದರೆ, ಕಟಾವುಗೊಳಿಸಿದ ಭತ್ತವನ್ನು ಒಣಗಿಸಲು ಸ್ಥಳವಿಲ್ಲ. ರಸ್ತೆಯ ಬದಿಯಲ್ಲಿ ಟಾರ್ಪಲ್ ಮೇಲೆ ಒಣಗಿಸಿ, ಮಳೆ ಬಂದ ಕೂಡಲೆ ಎತ್ತಿಡಬೇಕು. ಆದ್ದರಿಂದ, ಈ ಅಕಾಲಿಕ ಮಳೆ ರೈತರಿಗೆ ತಲೆ ನೋವು ತರಿಸಿದೆ
ಮಳೆ ಸುರಿಯುತ್ತಿರುವುದು ಕುಸಿಯ ವಿಚಾರ. ಆದರೆ, ಈ ರೀತಿ ಮುಂಗಾರು ಆರಂಭಕ್ಕೂ ಮುನ್ನ ಸುರಿಯುತ್ತಿರುವ ಅಕಾಲಿಕ ಮಳೆಗೆ ಬೇಸಿಗೆಯಲ್ಲಿ ಬಿತ್ತಿದ್ದ ಭತ್ತದ ಬೆಳೆ ನೆಲ ಕಚ್ಚುತ್ತಿದೆ. ಇದರಿಂದ, ಐದಾರು ಎಕರೆ ಪ್ರದೇಶದಲ್ಲಿ ಬೆಳೆದು ನಿಂತ ಬೆಳೆ ‘ಕೈಗೆ ಬಂದ ತುತ್ತು ಬಾಯಿಗೆ ಬಾರದಂತೆ’ ಆಗಲಿದೆಯ ಎನ್ನುವ ಆತಂಕ ಕಾಡುತ್ತಿದೆ ಎಂದು ಭದ್ರಾವತಿ ತಾಲ್ಲೂಕು ಕಲ್ಲಳ್ಳಿ ಗ್ರಾಮದ ರಾಜಪ್ಪ ಅಳಲು ತೋಡಿಕೊಂಡರು.
ಮೇ ೩೧ ರ ಹೊತ್ತಿಗೆ ಮುಂಗಾರು ಆಗಮನ ಎಂಬ ವರದಿಯಿದೆ. ಆದರೆ, ಈಗ ಸುರಿಯುತ್ತಿರುವ ಮಳೆ ಬಿಡುವು ಕೊಡದ ಹೊರತು ಭತ್ತದ ಕೊಯ್ಲು ಸಾಧ್ಯವಿಲ್ಲ. ಕೊಯ್ಲು ಮಾಡಿದರೂ ಸಹ ಭತ್ತ ಒಣಗಿಸಲು ಸಮಸ್ಯೆ ಎದುರಾಗಲಿದೆ ಎಂದು ಬೇಸರ ವ್ಯಕ್ತಪಡಿಸಿದರು.
ಕೊಯ್ಲು ಮಾಡಿದ ಭತ್ತ ರಕ್ಷಿಸಿಕೊಳ್ಳುವುದೇ ಸಮಸ್ಯೆ ಆಗಿದೆ. ಮನೆಯ ಒಳಗೆ ಭತ್ತ ಒಣಗಿಸಲು ಯೋಗ್ಯ ಸ್ಥಳವಿಲ್ಲ. ರಸ್ತೆಯ ಬದಿಯಲ್ಲಿಯೇ ಒಣಗಿಸಬೇಕು. ಮನೆಯ ಜಗಲಿಯಲ್ಲಿ ಒಣಗಿಸಿದರೆ, ಹಸಿ ಭತ್ತ
ಕಾವು ಬರುತ್ತದೆ. ರಸ್ತೆ ಬದಿಯಲ್ಲಿ ಒಣಗಿಸಿದ
ಭತ್ತವನ್ನು ಮಳೆ ಬಂದರೆ, ಪುನಃ ಒಟ್ಟು ಮಾಡಬೇಕು. ಮಳೆಗೆ ಒದ್ದೆಯಾಗದಂತೆ ರಕ್ಷಿಸಿಕೊಳ್ಳಬೇಕು. ಇಲ್ಲಿ ಮಳೆ ಬಿಟ್ಟರೆ ಸಾಕಾಗಿದೆ ಎಂದು ಕಲ್ಲಳ್ಳಿಯ ಶಾರದಾ ಬಾಯಿ ಹೇಳಿದರು.
ಜಿಲ್ಲೆಯಲ್ಲಿ ಕಳೆದ ೨೪ ಗಂಟೆಯಲ್ಲಿ ೨.೭ ಮಿ.ಮೀ ಮಳೆ ಸುರಿಯಬೇಕಿತ್ತು. ಆದರೆ, ೮.೩ ಮಿ.ಮೀ.ಮಳೆ ಆಗಿದೆ. ಆದ್ದರಿಂದ, ಇಲ್ಲಿ ಶೇ ೨೦೭ ರಷ್ಟು ಹೆಚ್ಚು ಮಳೆ ಆಗಿದೆ. ಅದೇ ರೀತಿ, ಕಳೆದ ಏಳು ದಿನಗಳಲ್ಲಿ ೨೨ ಮಿ.ಮೀ ಮಳೆ ಆಗಬೇಕಿತ್ತು. ಆದರೆ, ೬೧ ಮಿ.ಮೀ ಮಳೆ ಆಗಿದೆ. ಇಲ್ಲಿ ಶೇ ೧೭೭ ರಷ್ಟು ಹೆಚ್ಚು ಮಳೆಯ ಪ್ರಮಾಣ ಹೆಚ್ಚಾಗಿದೆ.ಪ್ರಸ್ತುತ ಸಾಲಿನ ಮೇ ೧ ರಿಂದ ಮೇ ೨೦ ರವರೆ ೮೯ ಮಿ.ಮೀ ಮಳೆ ಆಗಬೇಕು. ಆದರೆ, ೧೧೯ ಮಿ.ಮೀ ಮಳೆ ಸುರಿದಿದೆ. ಇಲ್ಲಿ, ಶೇ ೩೫ ಮಿ.ಮೀ ಮಳೆಯ ಪ್ರಮಾಣ ಹೆಚ್ಚಾಗಿದೆ. ಒಟ್ಟಾರೆಯಾಗಿ ಮಲೆನಾಡಿನ ಚಿಕ್ಕಮಗಳೂರು, ಹಾಸನ, ಕೊಡುಗು ಭಾಗದಲ್ಲಿ ಕಳೆದ ೨೪ ಗಂಟೆಯಲ್ಲಿ ೧೪.೧ ಮಿ.ಮೀ ಮಳೆ ಆಗಿದೆ. ಇಲ್ಲಿ ವಾಡಿಕೆ ಮಳೆಯ ಪ್ರಮಾಣ ೩.೭ ರಷ್ಟಿದೆ. ಒಟ್ಟು ಇಲ್ಲಿಯವರೆಗೆ ಶೇ ೨೮೧ ರಷ್ಟು ಮಳೆ ಸುರಿದಿದೆ.
ಜಿಲ್ಲೆಯಲ್ಲಿ ಮುಂದಿನ
೪ ದಿನ ಗುಡುಗು ಸಹಿತ ಮಳೆ ಆಗಲಿದೆ.ಹವಮಾನ ಇಲಾಖೆ.
ಮುಂಗಾರು ಪೂರ್ವ ಮಳೆಯಿಂದ ಬೇಸಿಗೆ ಹಂಗಾಮಿನ ಬೆಳೆಗೆ ಹಾನಿ ಆದ ವರದಿ ದಾಖಲಾಗಿಲ್ಲ. ಇಲ್ಲಿ ಬಹುತೇಕ ಕಡೆ ಕೊಯ್ಲು ಕಾರ್ಯ ಮುಗಿದಿದೆ. ಇನ್ನೂ ಕೆಲವೆಡೆ ಭತ್ತ ಮಳೆಗೆ ಸಿಲುಕಿಕೊಂಡಿದೆ. ಈ ಬಗ್ಗೆ ಗಮನಹರಿಸಲಾಗುವುದು.
ಜಿ.ಸಿ.ಪೂರ್ಣಿಮಾ,
ಜಂಟಿ ನಿರ್ದೇಶಕರು, ಕೃಷಿ ಇಲಾಖೆ.
ಮಳೆ ಬಂದಿರುವುದು ಸಂತಸದ ವಿಚಾರ. ಆದರೆ, ಈ ರೀತಿಯ ಅಕಾಲಿಕ ಮಳೆಯಿಂದ ರೈತರ ಬೆಳೆ, ಮನೆ, ಜಾನುವಾರುಗಳು ಸೇರಿದಂತೆ ಅನೇಕ ಪ್ರಮಾಣದ ಹಾನಿ ಆಗುತ್ತಿದೆ. ಆದ್ದರಿಂದ, ಕೃಷಿ ಇಲಾಖೆ ಹಾಗೂ ಜಿಲ್ಲಾಡಳಿತ ಈ ಬಗ್ಗೆ ವರದಿ ಪಡೆದು ರಾಜ್ಯ ಪರಿಹಾರ ನಿಧಿಯಿಂದ ರೈತರಿಗೆ ನ್ಯಾಯ ಒದಗಿಸಬೇಕು. ಅದೇ ರೀತಿ, ಬರಗಾಲದಲ್ಲಿ ರೈತರು ಕಡಿಮೆ ನೀರು ಬಳಸಿ ಬೆಳೆ ಬೆಳೆದಿದ್ದಾರೆ. ಇದಕ್ಕೆ ರೈತರನ್ನು ಸರ್ಕಾರ ಶ್ಲಾಘಿಸಬೇಕು.
ಕೆ.ಟಿ.ಗಂಗಾಧರ, ಅಧ್ಯಕ್ಷರು, ರಾಜ್ಯ ರೈತ ಸಂಘ.