ಕಾರ್ಗಲ್ : ನಾಡಿನ ಶಕ್ತಿ ನದಿ ಶರಾವತಿ ಕಣಿವೆಯಲ್ಲಿ ವ್ಯಾಪಕ ಮಳೆಯಾಗಿದ್ದರಿಂದ ಲಿಂಗನಮಕ್ಕಿ ಜಲಾಶಯ ತುಂಬುವ ಹಂತ ತಲುಪಿದೆ. ಒಳಹರಿವು ಹೆಚ್ಚಿರುವ ಕಾರಣ ಗುರುವಾರ ಅಣೆಕಟ್ಟೆಯ ಮೂರು ಗೇಟ್‌ಗಳನ್ನು ತೆರೆದು ಹತ್ತು ಸಾವಿರ ಕ್ಯೂಸೆಕ್ ನೀರನ್ನು ನದಿಗೆ ಬಿಡಲಾಗಿದೆ. ಜಲಾಶಯದಲ್ಲಿ ಒಟ್ಟು ೧೧ ರೇಡಿಯಲ್ ಗೇಟ್‌ಗಳಿದ್ದು, ಒಳಹರಿವಿನ ಪ್ರಮಾಣಕ್ಕೆ ಅನುಗುಣವಾಗಿ ಸುರಕ್ಷತೆಯ ದೃಷ್ಟಿಯಿಂದ ಮೂರು ಗೇಟ್‌ಗಳನ್ನು ತೆರೆಯಲಾಗಿದೆ. ಜಲಾಶಯಕ್ಕೆ ಬಾಗಿನ ಅರ್ಪಿಸುವ ಮೂಲಕ ಜಲಾಶಯದಿಂದ ನೀರು ದುಮ್ಮಿಕ್ಕುವ ರೋಮಾಂಚನಕಾರಿ ದೃಶ್ಯಕ್ಕೆ ಶಾಸಕ ಬೇಳೂರು ಗೋಪಾಲಕೃಷ್ಣ ಹಾಗೂ ಕೆಪಿಸಿ ಹಿರಿಯ ಅಧಿಕಾರಿಗಳು ಸಾಕ್ಷಿಯಾದರು.
ಜಲಾಶಯದ ನೀರಿನ ಮಟ್ಟ 1,819 ಅಡಿಗಳಿದ್ದು, ಗುರುವಾರ 1,814.2 ಅಡಿ ನೀರು ಸಂಗ್ರಹವಾಗಿತ್ತು. ಮಳೆ ಹೆಚ್ಚಿರುವುದರಿಂದ ಜಲಾಶಯದ ಮಟ್ಟ ಶೀಘ್ರವೇ ಗರಿಷ್ಠ ಮಟ್ಟ ತಲುಪುವ ಸಾಧ್ಯತೆ ಇದ್ದು, ಜಲಾಶಯ ಸಂಪೂರ್ಣ ಭರ್ತಿಗೆ ೪.೫ ಅಡಿಗಳು ಮಾತ್ರ ಬಾಕಿ ಉಳಿದಿದೆ. ಆದ್ದರಿಂದ, ಅಣೆಕಟ್ಟೆಯ ಸುರಕ್ಷತೆಯ ದೃಷ್ಟಿಯಿಂದ ನೀರು ನದಿಗೆ ಬಿಡಲಾಯಿತು.
ಈಚೆಗೆ ಶರಾವತಿ ಜಲಾನಯನ ಪ್ರದೇಶದಲ್ಲಿ ಉತ್ತಮ ಮಳೆಯಾಗಿದ್ದರಿಂದ ಒಳ ಹರಿವು ಹೆಚ್ಚುತ್ತಿದ್ದು, ಜಲಾಶಯಕ್ಕೆ 53,061 ಕ್ಯುಸೆಕ್ ನೀರು ಹರಿದು ಬರುತ್ತಿದೆ. ನದಿಪಾತ್ರದ ನಿವಾಸಿಗಳ ಸುರಕ್ಷತೆ ದೃಷ್ಟಿಯಿಂದ ದಿಢೀರನೆ ನೀರನ್ನು ಹೊರಕ್ಕೆ ಹಾಯಿಸದೇ ಹಂತ ಹಂತವಾಗಿ ಹರಿಸಲಾಗುವುದು’ ಎಂದು ಶಾಸಕ ಗೋಪಾಲ ಕೃಷ್ಣ ಬೇಳೂರು ಅವರು ಜಲಾಶಯಕ್ಕೆ ಪೂಜೆ ಸಲ್ಲಿಸಿ, ಬಳಿಕ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು.
ಕಳೆದ ವರ್ಷ ಮಳೆಯ ಕೊರತೆಯಿಂದಾಗಿ ಜಲಾಶಯದ ನೀರಿನ ಸಂಗ್ರಹ ಪ್ರಮಾಣದಲ್ಲಿ ಭಾರಿ ಇಳಿಕೆ ಕಂಡಿತ್ತು. ಇದರಿಂದ, ವರ್ಷಾಂತ್ಯದೊಳಗೆ ವಿದ್ಯುತ್ ಉತ್ಪಾದನೆಗೆ ನೀರಿನ ಕೊರತೆ ಎದುರಾಗುವ ಆತಂಕ ಸಹಜವಾಗಿ ತಲೆ ದೋರಿತ್ತು. ಆದರೆ, ಈ ಭಾರಿ ಉತ್ತಮ ಮಳೆ ಸುರಿದು, ಜಲಾಶಯದ ಸ್ಥಿರತೆ ಕಾಯ್ದುಕೊಂಡಿದೆ. ಇದರಿಂದ, ಕುಡಿಯಲು ಹಾಗೂ ವಿದ್ಯುತ್ ಉತ್ಪಾದನೆಗೆ ಸಮಸ್ಯೆ ಇಲ್ಲ ಎಂದು ಬೇಳೂರು ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಅನಿತಾ ಕುಮಾರಿ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕಳಸೆ ಚಂದ್ರಪ್ಪ, ತಾಲ್ಲೂಕು ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಪ್ರಭಾವತಿ ಚಂದ್ರಕಾಂತ್, ಯುವ ಕಾಂಗ್ರೆಸ್ ಅಧ್ಯಕ್ಷ ಅಶೋಕ್ ಬೇಳೂರು, ಗಣಪತಿ ಮಂಡಗಳಲೆ, ರವಿ ಲಿಂಗನಮಕ್ಕಿ, ಸೋಮಣ್ಣ ಇದ್ದರು.
‘ರಾಮೋಜಿರಾವ್ ಫಿಲ್ಮ್ ಸಿಟಿ ಮಾದರಿ ಜೋಗ ಅಭಿವೃದ್ಧಿ’
ರಾಮೋಜಿರಾವ್ ಫಿಲ್ಮ್ ಸಿಟಿ ಮಾದರಿ ಜೋಗ ಜಲಪಾತವನ್ನು ಅಭಿವೃದ್ಧಿ ಪಡಿಸುವ ಆಲೋಚನೆ ಇದೆ. ಇದಕ್ಕಾಗಿ ನಾನು ಹೈದರಾಬಾದ್ ಗೆ ತೆರಳಿ ಕೆಲವು ಸ್ಥಳಗಳಿಗೆ ಭೇಟಿ ನೀಡಲು ನಿರ್ಧರಿಸಿದ್ದೇನೆ ಎಂದು ಶಾಸಕ ಗೋಪಾಲಕೃಷ್ಣ ಬೇಳೂರು ಹೇಳಿದರು.
ಜೋಗ ಜಲಾಶಯದ ಬಳಿ ಪ್ರವಾಸೋದ್ಯಮ ಅಭಿವೃದ್ಧಿಗೆ ಒತ್ತು ನೀಡಲಾಗುತ್ತದೆ. ಬಿಜೆಪಿ ಸರ್ಕಾರದ ಅವಧಿಯಲ್ಲಿ ಕೇವಲ ಯೋಜನೆ ರೂಪಿಸಲಾಗಿತ್ತು. ಆದರೆ, ಯಾವುದೇ ಹಣ ಮಂಜೂರು ಆಗಿರಲಿಲ್ಲ. ನಮ್ಮ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ನಂತರ 30 ಕೋಟಿ ಬಿಡುಗಡೆ ಆಗಿದೆ ಎಂದು ಶಾಸಕರು ಹೇಳಿದರು.
ಜೋಗದ ಅಭಿವೃದ್ಧಿಯಿಂದ ಪರಿಸರಕ್ಕೆ ಯಾವುದೇ ಹಾನಿ ಆಗುವುದಿಲ್ಲ. ಪರಿಸರಕ್ಕೆ ಹಾನಿ ಆಗದ ರೀತಿಯಲ್ಲಿ ಅಭಿವೃದ್ಧಿ ಮಾಡಲಾಗುವುದು. ಇನ್ನೊಂದು ವರ್ಷದಲ್ಲಿ ಈ ಯೋಜನೆ ಪೂರ್ಣಗೊಳ್ಳುವ ಸಾಧ್ಯತೆ ಇದೆ. ಪ್ರವಾಸಿಗರಿಗೆ ಯಾವುದೇ ರೀತಿಯ ತೊಂದರೆ ಆಗದಂತೆ ಕ್ರಮ ವಹಿಸಲಾಗುತ್ತದೆ ಎಂದರು.
ರಾಜೀನಾಮೆ ಅಗತ್ಯವಿಲ್ಲ:
ಮುಡಾ ಹಾಗು ವಾಲ್ಮೀಕಿ ಅಭಿವೃದ್ಧಿ ನಿಗಮದ ಹಗರಣದ ವಿರುದ್ಧ ಬಿಜೆಪಿಯ ಪಾದಯಾತ್ರೆ ರಾಜಕೀಯ ಗಿಮಿಕ್ ಅಷ್ಟೆ. ಬಿಜೆಪಿ ನಾಯಕರಾದ ಬಸವರಾಜ್ ಪಾಟೀಲ್ ಯತ್ನಾಳ್ ಸೇರಿದಂತೆ ಅನೇಕರು ವಾದಯಾತ್ರೆ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಹಾಗೆ ಬಿಜೆಪಿಯ ಮೈತ್ರಿ ಪಕ್ಷವಾದ ಜೆಡಿಎಸ್ ಸಹ ಪಾದಯಾತ್ರೆಗೆ ಬೆಂಬಲ ವ್ಯಕ್ತಪಡಿಸಿಲ್ಲ. ಮೈಸೂರು ಭಾಗದಲ್ಲಿ ತಮ್ಮ ಪ್ರಾಬಲ್ಯ ಕುಗ್ಗುತ್ತದೆ ಎಂಬ ಕಾರಣಕ್ಕೆ ಜೆಡಿಎಸ್ ಈ ರೀತಿ ನಡೆದುಕೊಳ್ಳುತ್ತಿದೆ. ಹಗರಣದ ಬಗ್ಗೆ ಈಗಾಗಲೇ ತನಿಖೆ ನಡೆಯುತ್ತಿದೆ. ಹಾಗಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ರಾಜೀನಾಮೆ ನೀಡುವ ಅಗತ್ಯ ಇಲ್ಲ ಎಂದರು.
’24 ಗಂಟೆ ವಿದ್ಯುತ್ ನೀಡಿ, ನೀರು ಕೊಂಡೊಯ್ಯಿರಿ’
ಲಿಂಗನಮಕ್ಕಿಯಿಂದ ಬೆಂಗಳೂರಿಗೆ ಕುಡಿಯುವ ನೀರನ್ನು ತೆಗೆದುಕೊಂಡು ಹೋಗುವ ಪ್ರಸ್ತಾಪ ಈ ಹಿಂದೆ ಇತ್ತು. ಕುಡಿಯುವ ನೀರನ್ನು ಬಳಸಿಕೊಳ್ಳಲು ನಮ್ಮ ಯಾವುದೇ ಆಕ್ಷೇಪ ಇಲ್ಲ. ಏಕೆಂದರೆ, ಲಿಂಗನಮಕ್ಕಿ ಜಲಾಶಯ ಯಾವುದೇ ಕೃಷಿ ಚಟುವಟಿಕೆಗೆ ಬಳಕೆಯಾಗುವುದಿಲ್ಲ. ಆದರೆ, ಜಲಾಶಯ ನಿರ್ಮಾಣಕ್ಕಾಗಿ ಭೂಮಿಯನ್ನು ತ್ಯಾಗ ಮಾಡಿರುವ ಜನರಿಗೆ ನಿರಂತರ ವಿದ್ಯುತ್ ಸಂಪರ್ಕ ನೀಡಬೇಕಿದೆ. ಸಂತ್ರಸ್ತರಿಗೆ ಮೂಲ ಸೌಕರ್ಯ ನೀಡಿದ ಬಳಿಕ ಕುಡಿಯುವ ನೀರನ್ನು ತೆಗೆದುಕೊಂಡು ಹೋಗಲು ನಮ್ಮ ಅಕ್ಷೇಪ ಇಲ್ಲ ಎಂದರು.
ನಾನು ಸಚಿವಾಕಾಂಕ್ಷಿಯಲ್ಲ:
ರಾಜ್ಯ ಸಚಿವ ಸಂಪುಟದಲ್ಲಿ ಬದಲಾವಣೆ ಆಗಲಿದೆ ಎಂಬ ಮಾತು ಕೇಳಿ ಬರುತ್ತಿದೆ ಎಂದು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ಮಾಧ್ಯಮಗಳ ಮೂಲಕ ಈ ಬಗ್ಗೆ ನಾನು ಕೇಳಿದ್ದೇನೆ. ಆದರೆ, ನನಗೆ ಈ ಬಗ್ಗೆ ಅಧಿಕೃತವಾಗಿ ಮಾಹಿತಿ ಇಲ್ಲ. ಕೆಲವರನ್ನು ಸಂಪುಟದಿಂದ ಕೈ ಬಿಡಲಾಗುತ್ತದೆ ಎಂದು ಹೇಳಲಾಗುತ್ತಿದೆ. ನಾನು ಸಚಿವ ಸ್ಥಾನದ ಆಕಾಂಕ್ಷಿಯಲ್ಲ. ಆದರೆ, ಅವಕಾಶ ಸಿಕ್ಕರೆ ಕೆಲಸ ಮಾಡಲು ಸಿದ್ಧನಿದ್ದೇನೆ ಎಂದರು.
ಚಕ್ರಾದಿಂದ ಲಿಂಗನಮಕ್ಕಿಗೆ ನೀರು ಬಿಡುಗಡೆ:
ಹೊಸನಗರ ತಾಲ್ಲೂಕಿನ ನಗರ ಹೋಬಳಿಯ ಚಕ್ರಾ ಜಲಾಶಯದಿಂದ ಚಾನಲ್ ಮೂಲಕ ಲಿಂಗನಮಕ್ಕಿ ಜಲಾಶಯಕ್ಕೆ 2000 ಕ್ಯುಸೆಕ್ ನೀರು ಹರಿಸಲಾಗುತ್ತಿದೆ.ಲಿಂಗನಮಕ್ಕಿಯ ಪೂರಕ ಜಲಾಶಯ ಚಕ್ರಾಗೆ ಗುರುವಾರ ಬೆಳಿಗ್ಗೆ 2000 ಕ್ಯುಸೆಕ್ ಒಳಹರಿವು ಇದೆ. 580.57 ಅಡಿ ಸಾಮರ್ಥ್ಯದ ಜಲಾಶಯದಲ್ಲಿ ಸದ್ಯ 579.36 ಅಡಿ ನೀರಿನ ಸಂಗ್ರಹ ಇದೆ.
ಜೋಗ ಮತ್ತಷ್ಟು ರಮಣೀಯ
ಉತ್ತಮ ಮಳೆಯಿಂದಾಗಿ ಜೋಗದ ಜಲಸಿರಿ ಪ್ರವಾಸಿಗರನ್ನು ಸೆಳೆಯುತ್ತಿದೆ. ಈಗ ಡ್ಯಾಂನಿಂದ ನೀರು ಬಿಟ್ಟಿರುವ ಕಾರಣ ಜಲಪಾತ ಮತ್ತಷ್ಟು ರಮಣೀಯವಾಗಲಿದೆ. ಇಂದು ಸಂಜೆ ಹೊತ್ತಿಗೆ ‘ರಾಜಾ’, ‘ರೋರರ್’, ‘ರಾಕೆಟ್’, ‘ರಾಣಿ’ ಮೈದುಂಬಿಕೊಂಡಿದ್ದು, ಪ್ರವಾಸಿಗರನ್ನು ಕೈಬೀಸಿ ಕರೆಯುತ್ತಿದ್ದು, ಜಲಪಾತಕ್ಕೆ ಪ್ರವಾಸಿಗರ ದಂಡು ಲಗ್ಗೆ ಇಡುತ್ತಿದೆ. ಜೋಗದ ಜಲವೈಭವ ದ್ವಿಗುಣಗೊಳ್ಳುವ ಕಾರಣ ಹೆಚ್ಚಿನ ಪ್ರವಾಸಿಗರು ಬರಲಿದ್ದಾರೆ.
ಕೆಪಿಸಿ ಮನವಿ:
ಅಣೆಕಟ್ಟೆಯ ಕೆಳದಂಡೆಯಲ್ಲಿ ಹಾಗೂ ನದಿಪಾತ್ರದುದ್ದಕ್ಕೂ ವಾಸಿಸುತ್ತಿರುವ ಸಾರ್ವಜನಿಕರು ತಮ್ಮ ಜನ, ಜಾನುವಾರುಗಳೊಂದಿಗೆ ಸುರಕ್ಷಿತ ಪ್ರದೇಶಕ್ಕೆ ಸ್ಥಳಾಂತರಗೊಳ್ಳುವಂತೆ ಕೆಪಿಸಿ ಮನವಿ ಮಾಡಿದೆ.
ಜಲಾಶಯದಿಂದ 1ಲಕ್ಷ ಕ್ಯೂಸೆಕ್ ನೀರು ಬಿಟ್ಟರೆ ಸುಮಾರು 2 ಸಾವಿರ ಮನೆಗಳು ಮುಳುಗುವ ಸಾಧ್ಯತೆ ಇದೆ. ಆದ್ದರಿಂದ, ಒಳ ಹರಿವು ಮತ್ತು ನೀರು ಸಂಗ್ರಹದ ಸಮತೋಲನ ನೋಡಿಕೊಂಡು ನೀರು ಹರಿಸಲಾಗುತ್ತದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.