ಶಿವಮೊಗ್ಗ: ಘರ್ ಘರ್ ತಿರಂಗ ಅಭಿಯಾನ ಜತೆಗೆ ಘರ್ ಘರ್ ಚರಕ ಅಭಿಯಾನ ಆರಂಭವಾಗಬೇಕು. ಮನೆಗೊಂದು ಚರಕ, ಊರಿಗೊಂದು ಹತ್ತಿ ಘಟಕ ಕೂಡ ಸ್ಥಾಪನೆಗೊಳ್ಳಬೇಕು ಎಂದು ಕರ್ನಾಟಕ ಜ್ಞಾನ -ವಿಜ್ಞಾನ ಸಮಿತಿ ರಾಜ್ಯ ಘಟಕ ಉಪಾಧ್ಯಕ್ಷ ಡಾ.ಎಚ್.ಕೆ.ಎಸ್.ಸ್ವಾಮಿ ಅಭಿಪ್ರಾಯಪಟ್ಟರು.
ವೀರಶೈವ ಕಲ್ಯಾಣ ಮಂದಿರದಲ್ಲಿ ಬುಧವಾರ ಉಳಿವು ಫೌಂಡೇಶನ್, ಗೋ ಸಿರಿ ಸೇವಾ ಟ್ರಸ್ಟ್ ವತಿಯಿಂದ ಆಯೋಜಿಸಿದ್ದ ಚರಕೋತ್ಸವ ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿದರು.
ಶಾಲಾ ಮಟ್ಟದಲ್ಲಿ ಮಕ್ಕಳಿಗೆ ಹತ್ತಿ ಬಟ್ಟೆ ಉತ್ಪನ್ನಗಳ ಬಗ್ಗೆ ಅರಿವು ಮೂಡಿಸುವ ಕಾರ್ಯ ಆಗುತ್ತಿಲ್ಲ. ಆದ್ದರಿಂದ, ಹತ್ತಿಯ ಮೌಲ್ಯ ಕುಸಿಯುತ್ತಿದೆ. ಹತ್ತಿ ಹಿಂಜುವುದೂ ಸಹ ಅದ್ಭುತ ಕಲೆ. ಆದ್ದರಿಂದ, ಮಕ್ಕಳಿಗೆ ಹತ್ತಿಯ ಮೌಲ್ಯದ ಬಗ್ಗೆ ಜಾಗೃತಿ ಮೂಡಿಸಬೇಕು ಎಂದರು.
ಮದುವೆ ಸೇರಿದಂತೆ ಶುಭ ಸಮಾರಂಭಗಳಲ್ಲಿ ಹತ್ತಿ ಬಟ್ಟೆಯನ್ನೇ ಉಡುಗೊರೆಯಾಗಿ ಕೊಡಬೇಕು. ಸ್ವದೇಶಿ ಉತ್ಪನ್ನ ತಯಾರಿಕೆಯ ಕನಸು ಗಾಂಧೀಜಿ ಕಂಡಿದ್ದರು. ಆದರೆ, ಈ ನಿಲುವಿನ ವಿರುದ್ಧ ನಾವು ಹೆಜ್ಜೆ ಹಾಕುತ್ತಿದ್ದೇವೆ. ಎಲ್ಲರ ಮನೆಗಳಲ್ಲಿ ಹೆಣ್ಣು ಮಕ್ಕಳಿಗೆ ಬಾಗಿನ ಕೊಡುವ ಶಾಸ್ತ್ರವಿದೆ. ಆದರೆ, ಇದು ಪ್ಲಾಸ್ಟಿಕ್ ಮೊರಗಳಲ್ಲಿ ನೀಡಲಾಗುತ್ತಿದೆ. ಬಿದಿರು, ಬೆತ್ತದ ಮೊರಗಳು ಮೂಲೆ ಸೇರಿವೆ ಎಂದು ಬೇಸರ ವ್ಯಕ್ತಪಡಿಸಿದರು.
ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಉಡುಪಿ ಸಾಂಗತ್ಯ ಸಂಸ್ಥೆ ಸಹ ಸಂಸ್ಥಾಪಕ ಡಾ.ಶ್ರೀಕುಮಾರ್, ಚರಕದ ಮಹತ್ವ ಅರ್ಥ ಮಾಡಿಕೊಳ್ಳಬೇಕಾದ ಸಮಯ ಬಂದಿದೆ.
ನಮಗೆ ನಿಜವಾದ ಅರ್ಥದಲ್ಲಿ ಸ್ವತಂತ್ರ ಸಿಕ್ಕಿಲ್ಲ. ಯುವಜನತೆಯಲ್ಲಿ ದೇಶ ಕಟ್ಟುವ ಪಾತ್ರ ನನ್ನದಿದೆ ಅನಿಸಬೇಕು. ಆಗ ಸ್ವಾತಂತ್ರ್ಯ ಲಭಿಸಿದ ಹಾಗೆ ಎಂದರು.
ಗಾಂಧೀಜಿ ತಮ್ಮ ಆಶ್ರಮ ವಾಸಿಗಳಿಗೆ ಸತ್ಯ, ಅಹಿಂಸೆ, ಸ್ವದೇಶಿ ತತ್ವ ಬೋಧನೆ ಮಾಡಿದ್ದರು.
ಚರಕ ಕೇವಲ ಬಟ್ಟೆ ತಯಾರಿಕೆ ಯಂತ್ರ ಅಲ್ಲ. ಸರಳ ಜೀವನದ ಧ್ಯೋತಕ. ಚರಕ ಬಳಕೆಯಿಂದ ಅಸಮಾನತೆ ಕಡಿಮೆ ಆಗುತ್ತದೆ. ಸ್ವಾಯತ್ತತೆ ಸಿಗುತ್ತದೆ ಎಂದರು.
ಪರಿಸರ ಅಧ್ಯಯನ ಕೇಂದ್ರದ ಜಿ.ಎಲ್.ಜನಾರ್ದನ್ ಮಾತನಾಡಿ, ಮಾನವ ತುರ್ತು ಪರಿಸ್ಥಿತಿಯಲ್ಲಿ ಜೀವಿಸುತ್ತಿದ್ದಾನೆ. ಖಾದಿ ಸ್ವಾವಲಂಭಿತನ ಕಲಿಸುತ್ತದೆ. ಹಿಂದೆಲ್ಲಾ ಶಾಲೆಗಳಲ್ಲಿ ಸ್ವಾವಲಿಂಬಿತ ಕಲಿಸಲಾಗುತ್ತಿತ್ತು. ಆದರೆ, ಪ್ರಸ್ತುತ ಇದು ಆಗುತ್ತಿಲ್ಲ. ಮಕ್ಕಳನ್ನು ಬಾಲ್ಯದಲ್ಲಿಯೇ ಸ್ವದೇಶಿ ವಸ್ತುಗಳ ಬಳಕೆಗೆ ಪ್ರೋತ್ಸಾಹ ನೀಡಬೇಕು ಎಂದರು.ಉಳಿವು ಫೌಂಡೇಶನ್ ಸಂಸ್ಥಾಪಕಿ ಸೀಮಾ ಸಜ್ಜನ್, ರಾಘವ ಸೇರಿ ಗಣ್ಯರು ಹಾಜರಿದ್ದರು.
ಸಿನೆಮಾ ನಟರೂ ಸೇರಿ ರಾಜಕಾರಣಿಗಳು ಕೈಯಲ್ಲಿ ಚರಕ ಹಿಡಿಯಬೇಕು. ಅದು ಸಮಾಜದ ಮೇಲೆ ಪ್ರಭಾವ ಬೀರುತ್ತದೆ. ಮಾದ್ಯಮಗಳು ಚರಕರದ ಬಗ್ಗೆ ಹೆಚ್ಚು ಪ್ರಚಾರಪಡಿಸಬೇಕು. ಗ್ರಾಮೀಣ ಸೊಗಡಿನ ಖಾದಿ ಬಟ್ಟೆಗಳನ್ನು ಹೆಚ್ಚಾಗಿ ಪ್ರಚಾರ ಮಾಡಬೇಕು. ಚರಕದ ಮಹತ್ವ ಪ್ರಪಂಚಕ್ಕೆ ಸಾರಬೇಕು. –
–ಡಾ.ಎಚ್.ಕೆ.ಎಸ್.ಸ್ವಾಮಿ, ರಾಜ್ಯ ಉಪಾಧ್ಯಕ್ಷ, ಜ್ಞಾನ -ವಿಜ್ಞಾನ ಸಮಿತಿ