Malenadu Mitra
ಶಿವಮೊಗ್ಗ ಸಾಗರ

ಕಾಗೋಡು ಮಾದರಿಯ ಮತ್ತೊಂದು ಭೂ ಹಕ್ಕಿನ ಚಳುವಳಿಗೆ ಮಲೆನಾಡು ಸಜ್ಜು…..

ಶಿವಮೊಗ್ಗ :1951ರಲ್ಲಿ ಆರಂಭವಾಗಿದ್ದ ಕಾಗೋಡು ರೈತ ಚಳುವಳಿ ಸ್ವಾತಂತ್ರ್ಯದ ನಂತರ ಭೂ ಹಕ್ಕಿಗಾಗಿ ನಡೆದ ಮೊದಲ ರೈತ ಚಳುವಳಿಯಾಗಿದೆ. ಈಗ ಅದೇ ಮಾದರಿಯ ಹೋರಾಟಕ್ಕೆ ಮಲೆನಾಡು ರೈತರು ಸಿದ್ದರಾಗಿದ್ದಾರೆ. ಭೂಮಿ ಹಕ್ಕಿಗಾಗಿ ಚಳುವಳಿ ರೀತಿಯ ಹೋರಾಟಕ್ಕೆ ವೇದಿಕೆ ಸಿದ್ದಗೊಂಡಿದೆ.
ಹೌದು, ಶಿವಮೊಗ್ಗ ಜಿಲ್ಲಾ ರೈತರ, ಮುಳುಗಡೆ ಸಂತ್ರಸ್ಥರ ಹಾಗೂ ಭೂ ಹಕ್ಕು ವಂಚಿತರ ಸಂಯುಕ್ತ ವೇದಿಕೆ ನೇತೃತ್ವದಲ್ಲಿ (ಜಿಲ್ಲೆಯ ಸಮಸ್ತ ರೈತರ ಪರ, ಭೂ ಹಕ್ಕು ವಂಚಿತರ ಪರ, ಮುಳುಗಡೆ ಸಂತ್ರಸ್ಥರ ಪರ ಹೋರಾಟ ನಡೆಸುತ್ತಿರುವ ಎಲ್ಲಾ ಸಂಘಗಳು ಸಂಘಟನೆಗಳು, ಅರಣ್ಯ ಹಕ್ಕು ಸಮಿತಿಗಳು ಸಂಯುಕ್ತವಾಗಿ ರಚಿಸಿರುವ ವೇದಿಕೆ) ಅ.21 ರಿಂದ ಸಾಗರ ಉಪವಿಭಾಗಾಧಿಕಾರಿ ಕಛೇರಿ ಆವರಣದಲ್ಲಿ ಬೃಹತ್ ಅನಿರ್ದಿಷ್ಟಾವಧಿ ಅಹೋರಾತ್ರಿ ಧರಣಿ / ಸತ್ಯಾಗ್ರಹವನ್ನು ಹಮ್ಮಿಕೊಂಡಿದೆ. ಈಗಾಗಲೇ ವೇದಿಕೆ ನೇತೃತ್ವದಲ್ಲಿ ಪ್ರತಿ ಗ್ರಾಮ ಮಟ್ಟದಲ್ಲಿ ಸಭೆ ನಡೆಸಿ ಜನರಲ್ಲಿ ಜಾಗೃತಿ ಮೂಡಿಸಿ, ಅಹೋರಾತ್ರಿ ಧರಣಿ ಸತ್ಯಾಗ್ರಹದಲ್ಲಿ ಭಾಗಿಯಾಗುವಂತೆ ಮನವಿ ಮಾಡಲಾಗುತ್ತಿದೆ.

ರಾಜ್ಯದ ವಿದ್ಯುತ್ ಉತ್ಪಾದನೆಗಾಗಿ ಶರಾವತಿ, ಚಕ್ರಾ, ವಾರಾಹಿ ಮತ್ತಿತರ ಯೋಜನೆಗಳಿಗಾಗಿ ಸರ್ವ ತ್ಯಾಗ ಮಾಡಿದ ಸಂತ್ರಸ್ಥರಿಗೂ, ಆ ಭಾಗದವರಿಗೂ ಇಂದಿಗೂ ಪುನರ್ವಸತಿ, ಭೂಹಕ್ಕು ಮತ್ತು ಯೋಜನಾ ಭರವಸೆಗಳನ್ನು ಈಡೇರಿಸದೇ ಎಲ್ಲ ಸರ್ಕಾರಗಳು ನಿರಂತರ ವಂಚನೆ ಮಾಡಿವೆ.ಸರ್ಕಾರದ ಇಬ್ಬಗೆಯ ನೀತಿಯನ್ನು ಖಂಡಿಸಿ ಹೋರಾಟಕ್ಕೆ ರೈತರು ಸಿದ್ದರಾಗಿದ್ದಾರೆ.ಅರಣ್ಯ ಮತ್ತು ಕಂದಾಯ ಇಲಾಖೆಯ ನಡುವಿನ ದಾಖಲೆಗಳ ಜಟಾಪಟಿಯಿಂದ ಮುಳುಗಡೆ ಸಂತ್ರಸ್ತರನ್ನು ಭೂ ವಂಚಿತರನ್ನಾಗಿ ಮಾಡಿ, ಕಾನೂನಿನ ಕುಣಿಕೆಯನ್ನು ಇನ್ನಷ್ಟು ಬಿಗಿ ಮಾಡಲಾಗಿದೆ. ಜೀವನೋಪಾಯಕ್ಕಾಗಿ ಸಾಗುವಳಿ ಮಾಡಿಕೊಂಡ ಭೂಮಿಯನ್ನು ನ್ಯಾಯಾಲಯದ ಕದ ತಟ್ಟಿ ಉಳಿಸಿಕೊಳ್ಳಬೇಕಾದ ಅನಿವಾರ್ಯತೆ ಬಂದೊದಗಿದೆ.

ಸರ್ಕಾರಗಳಿಂದಲೇ ಅನ್ಯಾಯ:

ರಾಜ್ಯಕ್ಕೆ ಬೆಳಕು ನೀಡಲು ತಮ್ಮ‌ ಮನೆಮಠ, ಹೊಲಗದ್ದೆಗಳನ್ನು ಕಳೆದುಕೊಂಡು ಆರು ದಶಕಗಳು ಕಳೆದರೂ ಇಂದಿಗೂ ಪುನರ್ವಸತಿಗಾಗಿ ಶರಾವತಿ-ಚಕ್ರಾ-ಸಾವೆಹಕ್ಲು,ತುಂಗಾಭದ್ರಾ ಮುಳುಗಡೆ ಸಂತ್ರಸ್ಥರು ಪರಿತಪಿಸುತ್ತಿದ್ದಾರೆ. ಮುಳುಗಡೆಯಾಗುವ ಸಂದರ್ಭದಲ್ಲಿ ಯೋಜನಾ ನಿರಾಶ್ರಿತರಿಗೆ ಕೊಟ್ಟ ಭರವಸೆಗಳನ್ನು ಈಡೇರಿಸದೇ ಅಂದಿನಿಂದ ಇಂದಿನವರೆಗೂ ಆಳಿದ ಸರ್ಕಾರಗಳು ವಂಚಿಸಿಕೊಂಡೇ ಬಂದಿವೆ ಎಂದರೂ ತಪ್ಪಾಗಲಾರದು.
ಮುಳುಗಡೆಯಾದ ಅರಣ್ಯ ವಿಸ್ತೀರ್ಣಕ್ಕೆ ಕಂದಾಯ ಭೂಮಿಗಳನ್ನೆಲ್ಲ ಮನಸೋಚ್ಛೆ ಅರಣ್ಯ ಇಲಾಖೆಗೆ ವರ್ಗಾಯಿಸಿಕೊಂಡು ಯಾವುದೇ ಭೂ ಮಂಜೂರಾತಿಗಳು ಲಭ್ಯವಾಗದಂತೆ ಮಾಡಲಾಗಿದೆ.
ಭೂಸ್ವಾಧೀನ ಮತ್ತು ಪುನರ್ವಸತಿ ಜವಾಬ್ದಾರಿ ಹೊತ್ತಿದ್ದ ಕಾರ್ಯಪಡೆಗಳನ್ನು 1972 ರಲ್ಲಿ ರದ್ದು ಮಾಡುವ ಮೂಲಕ ಸಂತ್ರಸ್ಥರನ್ನು ಸೌಲಭ್ಯ ವಂಚಿತರನ್ನಾಗಿ ಮಾಡುವಲ್ಲಿ ಸರ್ಕಾರಗಳು ಯಶಸ್ವಿಯಾಗಿದೆ.
1984 ರಲ್ಲಿ ತಿದ್ದುಪಡಿಯಾದ ಭೂಸ್ವಾಧೀನ ಕಾಯ್ದೆಯಲ್ಲಿ ಶರಾವತಿ,ಚಕ್ರಾ ಸಾವೆಹಕ್ಲು  ಪ್ರಕರಣಗಳಿಗೆ ಪೂರ್ವಾನ್ವಯವೇ ಇಲ್ಲವಾಗಿದೆ.1978 ರ ಪೂರ್ವದ ಸಾಗುವಳಿ ಪ್ರದೇಶಗಳಿಗೆಲ್ಲಾ 1980 ರ ಕೇಂದ್ರ ಕಾಯ್ದೆಯಲ್ಲಿ ವಿನಾಯಿತಿ ನೀಡಲಾಗಿದ್ದರೂ 1991 ರವರೆಗೂ ಯಾರಿಗೂ ಹಕ್ಕು ನೀಡದೇ ನಂತರ ಏಕಪಕ್ಷೀಯವಾಗಿ ಅರಣ್ಯ ಇಲಾಖೆಯು ಮಾರ್ಗಸೂಚಿ ಹೊರಡಿಸಿ, ಯಾರಿಗೂ ಹಕ್ಕುಗಳು ದೊರಕದಂತೆ ಮಾಡಲಾಗಿದೆ. ಯೋಜನಾ ನಿರಾಶ್ರಿತರಿಗಿರುವ ಸೆ. 4(8) ನ್ನು ಉಪಯೋಗಿಸಿಕೊಳ್ಳಲು ಕ್ರಮ ವಹಿಸದೇ ಅನ್ಯಾಯ ಎಸಗಲಾಗಿದೆ.

ಸುಪ್ರೀಂ ಕೋರ್ಟ್ ಗೆ ಸಲ್ಲಿಸಿದ ಅಫಿಡವೀಟ್ ನಲ್ಲೆ ದೋಷ:

2012ರಲ್ಲಿ ರಾಜ್ಯ ಸರ್ಕಾರವು ಸುಪ್ರೀಂಕೋರ್ಟ್‌ಗೆ ಪರಿಸರವಾದಿಗಳ ಪ್ರಕರಣವೊಂದರಲ್ಲಿ ಸಲ್ಲಿಸಿರುವ ಪ್ರಮಾಣ ಪತ್ರದಲ್ಲಿ  ಎಲ್ಲ ಅರಣ್ಯ ಒತ್ತುವರಿಗಳನ್ನು ಕಾಲಮಿತಿಯಲ್ಲಿ ತೆರವುಗೊಳಿಸುವುದಾಗಿ ಒಪ್ಪಿಕೊಂಡಿದೆ. ಅದೇ ಪ್ರಕರಣದಲ್ಲಿ ಅರಣ್ಯ ಇಲಾಖೆಯು ಸಲ್ಲಿಸಿದ್ದ ಅಂಕಿ ಅಂಶಗಳಲ್ಲಿ ಅಧಿಸೂಚಿತ ಅರಣ್ಯ ಮಾತ್ರವಲ್ಲದೇ 4(1) ಅಧಿಸೂಚಿತ, ಸೆಟ್ಲೆಮೆಂಟ್  ಬಾಕಿ ಇರುವ ಮತ್ತು ಸೂಚಿತ ಆರಣ್ಯ ವಿಸ್ತೀರ್ಣಗಳನ್ನು  ಅಫಿಡವಿಟ್ ನಲ್ಲಿ ಸೇರಿಸಿಕೊಂಡಿರುವ ಕಾರಣ ಶಿವಮೊಗ್ಗ ಜಿಲ್ಲೆಯಲ್ಲಿ ಸಾವಿರಾರು ಕುಟುಂಬಗಳಿಗೆ ಇಂದು ತೆರವುಗೊಳಿಸಲು ನೋಟೀಸ್ ನೀಡಲಾಗುತ್ತಿದೆ. ಇದಕ್ಕೆಲ್ಲ  ಮುಖ್ಯ ಕಾರಣ, ಕಂದಾಯ ಇಲಾಖೆಯ ದಿವ್ಯ ನಿರ್ಲಕ್ಷ್ಯ, ಅರಣ್ಯ ಇಲಾಖೆಯ ಪಾರಮ್ಯತೆ ಮತ್ತು ಜನಪ್ರತಿನಿಧಿಗಳ ನಿಷ್ಕ್ರಿಯತೆಗಳು.
ಸುಪ್ರೀಂಕೋರ್ಟ್‌ನಲ್ಲಿ ಪರಿಸರವಾದಿಗಳ ಎಲ್ಲ ಪ್ರಕರಣಗಳಲ್ಲಿ ಸರ್ಕಾರ ಸಮರ್ಥವಾಗಿ ವಾದ ಮಂಡಿಸದೆ ಇರುವುದು ಮಲೆನಾಡಿನ ಮುಳುಗಡೆ ಸಂತ್ರಸ್ಥರನ್ನು ಕಾನೂನಿನ ಕುಣಿಕೆಯಲ್ಲಿ ಬಂಧಿಯಾಗಿಸಿರುವುದು ನಿಜಕ್ಕೂ ದುರಂತ.

Ad Widget

Related posts

ಹಾಡುವ ಹುಡುಗಿಯ ಕರೆದುಕೊಂಡ ಕ್ರೂರ ವಿಧಿ, ಕರೂರು ಸೀಮೆಯ ಗಾನಕೋಗಿಲೆ ಶ್ರೀಲಕ್ಷ್ಮಿ ಸಾವು

Malenadu Mirror Desk

ತಂದೆಯನ್ನು ತಿಂಡಿಗೆ ಕರೆಯಲು ಬಂದ ಮಗನ ಕರೆದೊಯ್ದ ದುರ್ವಿಧಿ, ದೇವಾ ಈ ಸಾವು ನ್ಯಾಯವೆ ?

Malenadu Mirror Desk

ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ: ಬ್ರಹತ್ ಮಾನವ ಸರಪಳಿ ರಚನೆ ಯಶಸ್ವಿ

Malenadu Mirror Desk

Leave a Comment

error: Content is protected !! ಮಲೆನಾಡು ಮಿರರ್‌ನಲ್ಲಿ ಪ್ರಕಟಗೊಂಡ ಸುದ್ದಿ, ಲೇಖನ, ಫೊಟೊಗಳನ್ನುಪೂರ್ವಾನುಮತಿಯಿಲ್ಲದೆ ನಕಲು ಮಾಡುವುದು ಕಾನೂನುಬಾಹಿರವಾಗಿದೆ.