ಅದೊಂದು ಮೂರು ಮನೆಗಳಿರುವ ಗ್ರಾಮ. ದಟ್ಟ ಅರಣ್ಯದ ನಡುವೆ ಇರುವ ಅಲ್ಲಿಗೆ ತಲುಪುವುದೇ ಒಂದು ಸಾಹಸ. ಕಾರು ಸಾಗುವ ಮಾರ್ಗ ಕೊನೆಗೊಂಡ ಬಳಿಕ ಗುಡ್ಡ ಹತ್ತಿ ಇಳಿದು ಆ ಊರಿಗೆ ಹೋಗಬೇಕೆಂದರೆ ಸುಮಾರು 9 ಕಿಲೋಮೀಟರ್ ನಡೆದೇ ಸಾಗಬೇಕು. ಗುಂಡಿಗೆ ಗಟ್ಟಿ ಇದ್ದವರು ಮಾತ್ರ ಆ ಪ್ರಯತ್ನ ಮಾಡಬಹುದು. ನಮಗೆ ನಡೆದೇ ಕ್ರಮಿಸುವ ಸಾಮರ್ಥ್ಯ ಇತ್ತಾದರೂ, ಸಮಯದ ಕೊರತೆ ಕಾರಣದಿಂದ ನಾವು ಅಲ್ಲಿಗೆ ಜೀಪೊಂದರಲ್ಲಿ ತೆರಳಿದ್ದೆವು. ಪ್ರಯಾಸದ ಜರ್ನಿಯಲ್ಲೇ ಸ್ಥಳ ತಲುಪಿದ ನಾವು ಹಳ್ಳವೊಂದರೆ ಸೇತುವೆ ದಾಟಿ ಜೀಪು ಇಳಿದೆವು. ಮಲೆನಾಡು, ಕಾಡು ಹೊಸದಲ್ಲದ ಕಾರಣ ಒಂದೇ ನೋಟದಲ್ಲಿಯೇ ಆ ಊರಿನ ಚಿತ್ರ ನಮಗೆ ಅರಿವಿಗೆ ಬಂದಿತು.
ಹಳ್ಳ, ಹಳ್ಳದಲ್ಲಿ ತಿಳಿ ಮತ್ತು ಶುಭ್ರ ನೀರು, ಕೈಯಲ್ಲಿ ತುಂಬಿದ್ದ ಮಿನರಲ್ ವಾಟರ್ ಬಾಟಲ್ ಇದ್ದರೂ, ಹರಿಯುವ ಝರಿ ಕಂಡೊಡನೆ ಬೊಗಸೆ ತುಂಬಿಕೊಂಡು ಕುಡಿದೆವು. ಅಡವಿಯ ಗರ್ಭದಿಂದ ಬಂದ ಆ ತೊರೆಯ ನೀರು ಹೊಟ್ಟೆ ತಂಪಾಗಿಸಿತು. ಹಳ್ಳ ದಾಟಿ ಹೋಗುತ್ತಲೇ ಹಿಂದೆ ಭತ್ತದ ನಾಟಿ ಮಾಡಿ, ಕೆಲ ವರ್ಷಗಳಿಂದ ಪಾಳು ಬಿದ್ದಿರುವ ಒಂದು ಮೈದಾನದಂತಹ ಪ್ರದೇಶ. ಪಕ್ಕದಲ್ಲಿಯೇ ಚಿಕ್ಕ ತೋಟ ಅದರಲ್ಲಿ ಅಡಕೆ ಮತ್ತು ಬಾಳೆ ಗಿಡಗಳಿದ್ದವು. ಅಡಕೆ ಮರದಲ್ಲಿ ತಕ್ಕಮಟ್ಟಿಗೆ ಕೊನೆ ಹಿಡಿದಿದ್ದವು. ಹಾಗೇ ಮುಂದೆ ಸಾಗಿದೆವು. ನಾವು ಅಪರಿಚಿತರಾದರು ಎದುರಾದ ಮೂರು ನಾಯಿಗಳು ಬೊಗಳಲಿಲ್ಲ. ಹೊಟ್ಟೆ ಬೆನ್ನಿಗೆ ಹತ್ತಿದ ಆ ಬಡಕಲು ನಾಯಿಗಳು ಬಾಲ ಅಲ್ಲಾಡಿಸುತ್ತಾ ನಮ್ಮನ್ನು ಅವರ ಬಂಧುಗಳೆಂಬಂತೆ ಬರಮಾಡಿಕೊಂಡವು. ಆ ನಾಯಿಗಳನ್ನು ನೋಡುತ್ತಲೇ ಅವಕ್ಕಿರುವ ಹಸಿವೆಯ ಅರಿವಾಗಿದ್ದರಿಂದ ಕೈಲಿದ್ದ ಬಿಸ್ಕೆಟ್‌ಗಳನ್ನು ಹಾಕಿದೆವು. ಒಂದು ವಾರದ ಹಿಂದೆ ಇದೇ ಊರಿಗೆ ಹಸಿವೆಯಾಗಿದೆ ಹೊಟ್ಟೆಗೆ ಅನ್ನಕೊಡಿ ಎಂದು ಬೇಡಿ ಬಂದ ನಕ್ಸಲ್ ಸಂಘಟನೆಯ ನಾಯಕ ಪ್ರೀತಂಗೌಡನನ್ನು ಪೊಲೀಸರ ಗುಂಡುಗಳು ಉಸಿರು ತೆಗೆದಿದ್ದವು.
ಸೋಲಾರ್ ಲೈಟ್ ಹೊರತಾಗಿ ನಾಗರೀಕ ಜಗತ್ತಿನ ಯಾವ ಸೌಲಭ್ಯವೂ ಇಲ್ಲದ ದುರ್ಗಮ ಕಾಡಿನಲ್ಲಿರುವ ಮೂರು ಮನೆಗಳ ಈ ಪೀತ್‌ಬೈಲ್ ಗ್ರಾಮ ಇಂದು ದೇಶ ಮಟ್ಟದಲ್ಲಿ ಸುದ್ದಿಯಾಗಿದೆ. ನಕ್ಸಲ್ ನಾಯಕ ವಿಕ್ರಂಗೌಡನ ಎನ್‌ಕೌಂಟರ್ ನಡೆದಿರುವ ಉಡುಪಿ ಜಿಲ್ಲೆ ಹೆಬ್ರಿ ತಾಲೂಕಿನ ಕಬ್ಬಿನಾಲೆ ಪಂಚಾಯಿತಿಯ ಪೀತ್‌ಬೈಲ್‌ನಲ್ಲಿ ಈಗ ಜನರೇ ಇಲ್ಲ. ಆದಿವಾಸಿ ಮಲೆಕುಡಿಯ ಸಮುದಾಯದ ಜಯಂತ್ ಗೌಡ, ನಾರಾಯಣ ಗೌಡ ಹಾಗೂ ಸುಧಾಕರ್ ಗೌಡ ಅವರ ಮನೆಯಲ್ಲಿ ನರಪಿಳ್ಳೆಯೂ ಇಲ್ಲ. ಸೂತಕದ ಕಳೆಯಲ್ಲಿರುವ ಊರಿನಲ್ಲಿ ಸಶಸ್ತ್ರಧಾರಿ ನಕ್ಸಲ್ ನಿಗ್ರಹದಳದ ಸಿಪಾಯಿಗಳಿದ್ದಾರೆ. ಅವರೊ..ನಮ್ಮೊಂದಿಗೆ ಆಡಿದ್ದು ಒಂದೋ.. ಎರಡೋ ಮಾತು. ನಿಮ್ಮ ಪ್ರಶ್ನೆಗೆ ನಮ್ಮಲ್ಲಿ ಉತ್ತರ ಇಲ್ಲ ಎಂಬುದನ್ನು ವಾರದ ಹಿಂದೆಯೇ ಅವರು ತೋರಿಸಿಬಿಟ್ಟದ್ದರು.
ವಿಕ್ರಂಗೌಡನ ಎನ್‌ಕೌಂಟರ್ ಬಗ್ಗೆ ಹಲವು ಅನುಮಾನಗಳು ಮೂಡಿರುವ ಹೊತ್ತಿನಲ್ಲಿ ಸಿಡಿಆರ್‌ಒ ಎಂಬ ಸಂಘಟನೆಯ ಮಾನವ ಹಕ್ಕುಗಳ ಹೋರಾಟಗಾರರು ಗುರುವಾರ ಪೀತ್‌ಬೈಲ್‌ಗೆ ಭೇಟಿ ನೀಡಿದ್ದರು. ಆ ಸ್ಥಳಕ್ಕೆ ಶಿವಮೊಗ್ಗದಿಂದ ಮಾಧ್ಯಮ ಪ್ರತಿನಿಧಿಗಳಾಗಿ ನಾವು ಹೋಗಿದ್ದೆವು. ಪೀತ್‌ಬೈಲಿನಲ್ಲಿ ನಡೆದಿದೆ ಎನ್ನಲಾದ ಎನ್‌ಕೌಂಟರ್ ಬಗ್ಗೆ ಮಾತನಾಡಲು ಅಲ್ಲಿ ಜನರಿರಲಿಲ್ಲ. ಪೋಲಿಸರು ಕೆಂಪು ಪಟ್ಟಿ ಕಟ್ಟಿ ನಿರ್ಬಂಧಿತ ಎಂದು ನಿಗದಿ ಮಾಡಿದ್ದ ಜಯಂತಗೌಡರ ಮನೆಯ ಜಗುಲಿಗೆ ಹೊಂದಿಕೊಂಡ ಅಡಕೆ ಮತ್ತು ಬಾಳೆ ಮರಗಳಿಗೆ ನ.18 ರಂದು ನಡೆದ ಘಟನೆಯ ಅಸಲಿಯತ್ತು ಗೊತ್ತಿದೆ. ಆದರೆ ಅವಕ್ಕೆ ಮಾತು ಬರುವುದಿಲ್ಲ. ಜಯಂತಗೌಡರ ಮನೆಯ ಸುತ್ತಮುತ್ತ ಭಾರೀ ಗುಂಡಿನ ಚಕಮಕಿ ನಡೆದ ಯಾವ ಕುರುಹುಗಳೂ ನಮಗೆ ಕಾಣಲಿಲ್ಲ. ಜಗುಲಿ ಕಟ್ಟೆಯ ನೆಲದ ಮೇಲೆ ಅಲ್ಲಲ್ಲಿ ಸಣ್ಣಗುಂಡಿಗಳಿದ್ದು, ಅವು ಫೈರಿಂಗ್ ಸಂದರ್ಭ ಬಿದ್ದ ಬುಲೆಟ್‌ಗಳಿಂದಾಗಿದ್ದವು ಎಂದು ಹೇಳಲಾಗಿದೆ.
ಕಾದು ಕುಳಿತು ಹೊಡೆದರು:
ನಕ್ಸಲ್ ನಾಯಕ ವಿಕ್ರಂಗೌಡ ಮತ್ತು ಆತನೊಂದಿಗಿದ್ದ ಮೂವರು ನಕ್ಸಲರು ದುರ್ಗಮ ಅರಣ್ಯದಲ್ಲಿದ್ದ ಪೀತ್‌ಬೈಲಿಗೆ ಹಲವು ಬಾರಿ ಭೇಟಿ ನೀಡಿದ್ದರು. ವಿಕ್ರಂಗೌಡನ ಆದಿವಾಸಿ ಸಮುದಾಯಕ್ಕೆ ಸೇರಿದ್ದ ಜಯಂತ್‌ಗೌಡರ ಮನೆಗೆ ಆಗಾಗ ಬಂದಿದ್ದು, ಅಲ್ಲಿ ಊಟ ಮಾಡಿ ಹೋಗುತಿದ್ದರು. ಈ ಮಾಹಿತಿಯನ್ನು ಪಡೆದಿದ್ದ ನಕ್ಸಲ್ ನಿಗ್ರಹ ದಳದ ಪೋಲಿಸರು. ನ.18 ಕ್ಕೂ ಒಂದು ದಿನ ಮೊದಲು ಪೀತ್‌ಬೈಲ್‌ನ ಮೂರು ಮನೆಗಳಿಂದ ಜನರನ್ನು ಖಾಲಿ ಮಾಡಿಸಿದ್ದರು. ಈ ಮಾಹಿತಿ ಅರಿಯದ ವಿಕ್ರಂಗೌಡನ ತಂಡ ಜಯಂತ್‌ಗೌಡನ ಮನೆಗೆ ಬಂದಿದೆ. ಅಲ್ಲಿ ಪೊಲೀಸರಿದ್ದಾರೆ ಎಂಬ ಯಾವ ಸುಳಿವೂ ಇಲ್ಲದೆ ಸಹಜವಾಗಿ ಬಂದ ತಂಡಕ್ಕೆ ಸಶಸ್ತ್ರಧಾರಿ ಪೊಲೀಸರು ಎದುರಾಗಿದ್ದಾರೆ. ಈ ಸಂದರ್ಭ ಗುಂಡಿನ ಚಕಮಕಿ ನಡೆದಿದೆ. ಶರಣಾಗಲು ಹೇಳಿದರೂ ವಿಕ್ರಂ ಗೌಡ ಕೇಳದೆ ಪೊಲೀಸರ ಮೇಲೆ ಗುಂಡು ಹಾರಿಸಿದ್ದಾರೆ. ಪ್ರತಿಯಾಗಿ ಪೊಲೀಸರು ಹಾರಿಸಿದ ಗುಂಡಿನಿಂದ ಆತ ಜೀವಕಳೆದುಕೊಂಡಿದ್ದಾರೆ. ಮತ್ತಿಬ್ಬರು ನಕ್ಸಲರು ಪರಾರಿಯಾಗಿದ್ದಾರೆ ಎಂದು ಖುದ್ದು ಗೃಹ ಸಚಿವರೇ ಹೇಳಿದ್ದಾರೆ. ಆದರೆ ಅಲ್ಲಿಗೆ ಭೇಟಿ ನೀಡಿದ್ದ ಮಾನವ ಹಕ್ಕು ಕಾರ್ಯಕರ್ತರು, ಅಲ್ಲಿ ಗುಂಡಿನ ಚಕಮಕಿ ನಡೆದ ಕುರೂಹುಗಳಿಲ್ಲ. ಪೀತ್‌ಬೈಲ್‌ನ ಜನರನ್ನು ಗುಪ್ತವಾಗಿಟ್ಟು ಅವರಿಗೆ ಯಾರೊಂದಿಗೂ ಮಾತನಾಡದಂತೆ ನಿರ್ಬಂಧ ಹೇರಲಾಗಿದೆ ಎಂದು ಆರೋಪಿಸಿದ್ದಾರೆ.
ಅಲ್ಲಿ ಎಲ್ಲದಕ್ಕೂ ನಿರುತ್ತರ…
ಹೊರಗಿನ ಪ್ರಪಂಚದಲ್ಲಿ ಈ ರೀತಿಯ ವ್ಯಾಖ್ಯಾನಗಳು ನಡೆಯುತ್ತಲೇ ಇವೆ. ಜಯಂತ್‌ಗೌಡರ ಮನೆಯ ವಾತಾವರಣವನ್ನು ನೋಡಿದ ಮಾಧ್ಯಮ ತಂಡಕ್ಕೆ ಹಲವು ಅನುಮಾನಗಳು ಮೂಡಿದ್ದಂತೂ ನಿಜ. ಪಶ್ಚಿಮಘಟ್ಟದ ತಪ್ಪಲಿನ ಪೀತ್‌ಬೈಲಿನ ನಿರ್ಜನ ಪ್ರದೇಶದಲ್ಲಿ ಎಲ್ಲದಕ್ಕೂ ನಿರುತ್ತುರ. ಇರುವ ಮೂರು ಮನೆಗಳಲ್ಲಿ ಜನರಿಲ್ಲ. ಇರುವ ಪೊಲೀಸರು ಮಾತನಾಡುತಿಲ್ಲ. ಸುದ್ದಿಗಾಗಿ ಹೋದವರಿಗೆ ಅಲ್ಲಿನ ನೀರವ ಮೌನವೇ ಸುದ್ದಿಯಾಯಿತು. ಆ ಮೌನದ ಹಿಂದೆ ಆದಿವಾಸಿಗಳ ಆರ್ತನಾದ ಬೆಸೆದು ಹೋಗಿದೆ. ಹೊರಡಲು ಅನುವಾದೆವು ಮತ್ತೆ ಆ ಮೂರು ಬಡಕಲು ನಾಯಿಗಳು ಬಾಲ ಅಲ್ಲಾಡಿಸುತ್ತ ನಮ್ಮನ್ನು ಹಿಂಬಾಲಿಸಿದವು. ಚೆಂದದ ಬೆಕ್ಕೊಂದು ಯಾರದೊ ಮಾಹಿತಿದಾರನೆಂಬಂತೆ ಬಂದು ಹೋಯಿತು. ಮೂರು ಮನೆಗಳಲ್ಲಿ ಅದು ಯಾರಿಗೆ ಸೇರಿದ್ದೆಂದು ತಿಳಿಯಲಿಲ್ಲ. ಇದೇ ಹೊತ್ತಲ್ಲಿ ದಷ್ಟಪುಷ್ಟ ನಾಯಿಯೊಂದು ಬಂತು. ನಾವು ಹಾಕಿದ ಬಿಸ್ಕೆಟನ್ನು ಅದು ಮುಟ್ಟಲಿಲ್ಲ. ಬಹುಷಃ ಎಎನ್‌ಎಫ್‌ನವರು ಅದಕ್ಕೆ ಆಹಾರ ಹಾಕಿದ್ದರೇನೊ…ಬಡಕಲು ನಾಯಿಗಳು ನಮಗೇನಾದರೂ ಸುದ್ದಿ ಹೇಳಿಬಿಡುತ್ತವೇನೊ ಎಂಬ ಧಾವಂತದಲ್ಲಿ ಬಂದ ಅದು, ಜೀಪು ಹೊರಡುವ ತನಕ ಅಲ್ಲಿಯೇ ನಿಂತಿತ್ತು. ಕೊಟ್ಟಿಗೆಯಲ್ಲಿ ಕಟ್ಟಿದ್ದ ಹಸುಗಳು ಮಾತ್ರ ಅಂಬಾ ಎಂದು ಕರೆಯುತ್ತಿದ್ದವು… ಈ ಕರೆಯ ಹಿಂದೆ ಯಾವ ಸಂಘರ್ಷವೂ ಬೇಡ… ಮೇವು ನೀಡುವ ತನ್ನ ಮಾಲೀಕರನ್ನು ಮುಕ್ತಗೊಳಿಸಿ ಎಂಬ ಭಾವ ಧ್ವನಿಸುವಂತಿತ್ತು.
ಚಳವಳಿ ಕ್ಷೀಣ
ಅಸಲಿಯಾಗಿ ಕರ್ನಾಟಕದಲ್ಲಿ ನಕ್ಸಲ್ ಸಂಘಟನೆ ಶಕ್ತಿ ಕಳೆದುಕೊಂಡು ಹದಿನೈದು ವರ್ಷಗಳೇ ಆಗಿವೆ.ಯಾವುದೇ ಒಂದು ಹೋರಾಟ ಜನಸಮುದಾಯದಿಂದ ಹುಟ್ಟಿದಾಗ ಮಾತ್ರ ಅದು ಗಟ್ಟಿಯಾಗುತ್ತದೆ. ಆದರೆ ಕರ್ನಾಟಕದ ಪಶ್ಚಿಮಘಟ್ಟ ಪ್ರದೇಶದಲ್ಲಿ ಜನರ ಬೆಂಬಲ ನಿರೀಕ್ಷಿತ ಪ್ರಮಾಣದಲ್ಲಿ ಸಿಗದ ಕಾರಣ ನಕ್ಸಲರು ಕೇರಳ ಮತ್ತು ತಮಿಳುನಾಡಿನ ಗಡಿಗೆ ಹೋಗಿದ್ದರು. ಕರ್ನಾಟಕದಲ್ಲಿ ನಡೆದ ಹಲವು ಎನ್‌ಕೌಂಟರ್ ಮತ್ತು ನಕ್ಸಲ್ ನಾಯಕರ ಹತ್ಯೆಯ ಕಾರಣದಿಂದ ಆ ಚಳವಳಿ ರಾಜ್ಯದಿಂದ ದೂರವಾಗಿತ್ತು. ಕೇರಳದಲ್ಲಿ ನಕ್ಸಲರ ವಿರುದ್ಧದ ಥಂಡರ್ ಬೋಲ್ಟ್ ಕಾರ್ಯಾಚರಣೆ ಜೋರಾಗುತ್ತಿದ್ದಂತೆ ಅಲ್ಲಿನ ನಕ್ಸಲರ ಸಂಖ್ಯೆಯೂ ಕಡಿಮೆಯಾಗಿದೆ. ಅಲ್ಲಿನ ಪೊಲೀಸರು ಮಾವೋವಾದಿ ಸಂಘಟನೆಯ ಕೇಂದ್ರ ಘಟಕದೊಂದಿಗೆ ಸ್ಥಳೀಯ ನಕ್ಸಲರಿಗಿದ್ದ ಸಂಪರ್ಕವನ್ನು ಕಡಿತಗೊಳಿಸುವಲ್ಲಿಯೂ ಯಶಸ್ವಿಯಾಗಿದ್ದರು. ಈ ಕಾರಣದಿಂದ ಕರ್ನಾಟಕದಿಂದ ಅಲ್ಲಿಗೆ ಹೋಗಿದ್ದ ಬೆರಳೆಣಿಕೆಯಷ್ಟು ನಕ್ಸಲ್ ಕಾರ್ಯಕರ್ತರು ಮತ್ತೆ ಕರ್ನಾಟಕಕ್ಕೆ ಬಂದಿದ್ದರು. ಕೆಲ ತಿಂಗಳುಗಳ ಹಿಂದೆಯೇ ಇಲ್ಲಿಗೆ ಬಂದಿದ್ದ ಅವರು, ಮತ್ತೆ ಸಂಘಟನೆಯನ್ನು ಬಲಗೊಳಿಸಬಹುದೇ ಎಂಬ ಚಿಂತನೆಯಲ್ಲಿದ್ದರು. ಆದರೆ ಸ್ಥಳೀಯ ಜನರ ಬೆಂಬಲ ಸಿಗದ ಕಾರಣ ಕೈ ಸೋತಿದ್ದರು. ಇತ್ತೀಚೆಗೆ ಚಿಕ್ಕಮಗಳೂರು ಮತ್ತು ಉಡುಪಿ ಜಿಲ್ಲೆಯಲ್ಲಿದ್ದ ನಕ್ಸಲರ ಎರಡು ತಂಡಗಳು ಕಾಡಂಚಿನ ಗ್ರಾಮಗಳಿಗೆ ಬಂದು ಊಟ ಕೇಳುತ್ತಿದ್ದರೇ ವಿನಾ ಮತ್ತೇನು ಕೇಳುತಿರಲಿಲ್ಲ ಎಂದು ಕಾಡಂಚಿನ ಗ್ರಾಮಗಳ ಜನರೇ ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆನ್ನಲಾಗಿದೆ.
ಸಮಸ್ಯೆಗಳು ಹಾಗೇ ಉಳಿದಿವೆ…
ಕರ್ನಾಟಕದಲ್ಲಿ ನಕ್ಸಲ್ ಹೋರಾಟಕ್ಕೆ ಮೂರು ದಶಕಗಳೇ ಕಳೆದಿವೆ. ಸಂಘರ್ಷದಲ್ಲಿ 20 ಕ್ಕೂ ಹೆಚ್ಚು ಜೀವಗಳು ಹೋಗಿವೆ. ಸರ್ಕಾರ ಕೋಟ್ಯಂತರ ರೂ. ಹಣ ವ್ಯಯವಾಗಿದೆ. ಆದರೆ ಆದಿವಾಸಿಗಳು ಕಾಡಂಚಿನ ಜನರ ಬೇಡಿಕೆಗಳು ಮಾತ್ರ ಹಾಗೇ ಇವೆ. ಮುಖ್ಯವಾಹಿನಿಯಲ್ಲಿದ್ದುಕೊಂಡು ಪ್ರಜಾತಾಂತ್ರಿಕ ನೆಲೆಯಲ್ಲಿ ಎಲ್ಲ ರೀತಿಯ ಹೋರಾಟಕ್ಕೆ ಸಂವಿಧಾನದಲ್ಲಿ ಅವಕಾಶವಿದೆ. ದೇಶದಲ್ಲಿ ಯಾವುದೇ ಸಶಸ್ತ್ರ ಹೋರಾಟಗಳು ಯಶ ಕಾಣುವುದಿಲ್ಲ ಎಂಬುದು ಮತ್ತೆ ಮತ್ತೆ ಸಾಬೀತಾಗುತ್ತಿರುವ ಹೊತ್ತಿನಲ್ಲಿ ಇಲ್ಲಿನ ನಕ್ಸಲರು ಮುಖ್ಯವಾಹಿನಿಗೆ ಬರಬೇಕಿದೆ. ರಾಜ್ಯ ಸರ್ಕಾರ ನಕ್ಸಲ್ ಶರಣಾಗತಿ ಪ್ಯಾಕೇಜ್ ಘೋಷಣೆ ಮಾಡಿದೆ. ಆದರೆ ಅದೇ ಹೊತ್ತಿನಲ್ಲಿ ಎನ್‌ಕೌಂಟರ್ ಮಾಡುವುದೂ ಸರಿಯಲ್ಲ. ಸರ್ಕಾರದಿಂದ ರಚಿತವಾಗಿರುವ ಶರಣಾಗತಿ ಪ್ಯಾಕೇಜ್ ಅನುಷ್ಠಾನ ಸಮಿತಿ ಈ ಬಗ್ಗೆ ಗಮನ ಹರಿಸಬೇಕು. ಮತ್ತೆ ಹಸಿರು ನೆಲದಲ್ಲಿ ಕೆಂಪು ನೆತ್ತರು ಚೆಲ್ಲುವುದನ್ನು ನಿಲ್ಲಿಸಬೇಕು. ಯಾರದ್ದೇ ಆದರೂ ಜೀವ ತೆಗೆಯುವುದು ಮಾನವ ಧರ್ಮವಲ್ಲ ತಾನೇ ?