ಶಿವಮೊಗ್ಗ: ಆಶ್ರಯ ಮನೆ ಫಲಾನುಭವಿಗಳ ಆಯ್ಕೆ ಸಭೆಯನ್ನು ಯಾರಿಗೂ ತಿಳಿಸದೇ ರದ್ದುಗೊಳಿಸಿದ್ದಕ್ಕೆ ಪಾಲಿಕೆ ಆಯುಕ್ತರ ವಿರುದ್ಧ ನೂರಾರು ಜನರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಮಾತ್ರವಲ್ಲದೇ ಫಲಾನುಭವಿಗಳ ಪ್ರತಿಭಟನೆಯ ಬಿಸಿಗೆ ಸಿಲುಕಿದ ಮಹಾನಗರ ಪಾಲಿಕೆ ಆಯ್ತುಕೆ ಕವಿತಾ ಯೋಗಪ್ಪನವರ್ ಕುವೆಂಪು ರಂಗಮಂದಿರದಿಂದ ಸ್ವಲ್ಪ ದೂರ ನಡೆದುಕೊಂಡು ಹೋಗಿ, ಬೇರೊಂದು ಕಾರಿನಲ್ಲಿ ಕಚೇರಿಗೆ ತೆರಳಿದ ಘಟನೆ ಇಂದು ನಡೆದಿದೆ.
ಶಿವಮೊಗ್ಗ ನಗರದ ಕುವೆಂಪು ರಂಗಮಂದಿರದ ಆವರಣದಲ್ಲಿ ಫಲಾನುಭವಿಗಳ ಆಯ್ಕೆಗೆ ಆಯೋಜಿಸಿದ್ದ ಸಭೆಯ, ಬದಲಾಗಿ ಫಲಾನುಭವಿಗಳ ಪ್ರತಿಭಟನೆಗೆ ಇಂದು ಸಾಕ್ಷಿಯಾಯ್ತು.
ನಗರದ ಗೋವಿಂದಪುರ ಮತ್ತು ಗೋಪಿ ಶೆಟ್ಟಿಕೊಪ್ಪ ಬಡಾವಣೆಯಲ್ಲಿ ನಿವೇಶನ ಖರೀದಿಸಿದ ಸುಮಾರು 638 ಮಂದಿ ಫಲಾನುಭವಿಗಳಿಗೆ ಆಶ್ರಯ ಸಮಿತಿಯಿಂದ ಲಾಟರಿ ಮೂಲಕ ನಿವೇಶನ ಹಂಚಲು ಫಲಾನುಭವಿಗಳ ಆಯ್ಕೆ ಕಾರ್ಯಕ್ರಮ ಇಂದು ಆಯೋಜಿಸಲಾಗಿತ್ತು. ಆದರೆ, ಮಹಾನಗರ ಪಾಲಿಕೆ ಆಯುಕ್ತರಾದ ಕವಿತಾ ಯೋಗಪ್ಪನವರ್ ಕಾರ್ಯಕ್ರಮವನ್ನು ಏಕಾಏಕಿ ರದ್ದುಪಡಿಸಿದರು. ಇದಕ್ಕೆ, ಆಕ್ರೋಶಗೊಂಡ ನೂರಾರು ಫಲಾನುಭವಿಗಳು ಆಯುಕ್ತರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.
ಸಭೆ ರದ್ದುಗೊಳಿಸಿದ ಹಿನ್ನಲೆ ಸ್ಥಳಕ್ಕೆ ಆಗಮಿಸಿದ ಆಶ್ರಯ ಸಮಿತಿ ಅಧ್ಯಕ್ಷ ಎಸ್.ಎನ್.ಚನ್ನಬಸಪ್ಪ ಅವರು ಜಿಲ್ಲಾಧಿಕಾರಿಗೆ ದೂರವಾಣಿ ಕರೆ ಮಾಡಿ, ಸ್ಥಳಕ್ಕೆ ಆಗಮಿಸುವಂತೆ ಒತ್ತಾಯಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ, ಜಿಲ್ಲಾಧಿಕಾರಿ ಮಹಾನಗರ ಪಾಲಿಕೆ ಆಯುಕ್ತರನ್ನು ಸ್ಥಳಕ್ಕೆ ಕಳುಹಿಸಿಕೊಡುವುದಾಗಿ ತಿಳಿಸಿದರು.
ಶಾಸಕರ ಮಾತಿಗೂ ಮನ್ನಣೆ ನೀಡದ ಪಾಲಿಕೆ ಆಯುಕ್ತೆ ಕವಿತಾ ಯೋಗಪ್ಪನವರ್, ಒಂದು ಗಂಟೆ ತಡವಾಗಿ ಆಗಮಿಸಿದ್ರು., ಸಭೆ ರದ್ದಾಗಿದ್ದಕ್ಕೆ ಮೊದಲೇ ಸಿಟ್ಟಿನಲ್ಲಿದ್ದ ಫಲಾನುಭವಿಗಳು ಆಯುಕ್ತರನ್ನು ಮತ್ತಷ್ಟು ತರಾಟೆಗೆ ತೆಗೆದುಕೊಂಡರಲ್ಲದೇ, ಕೀ ಹಸ್ತಾಂತರಿಸುವಂತೆ ಆಗ್ರಹಿಸಿದರು. ಬಳಿಕ, ಫಲಾನುಭವಿಗಳ ಮನವಿ ಆಲಿಸಿ, ಹಿಂದಿರುಗುತ್ತಿದ್ದ ಆಯುಕ್ತೆ ಕವಿತಾ ಯೋಗಪ್ಪನವರ್ ಅವರ ಕಾರನ್ನು ಸಂತ್ರಸ್ತರು ಅಡ್ಡಗಟ್ಟಿ, ಪ್ರತಿಭಟನೆ ಸಹ ನಡೆಸಿದರು.
ಬಳಿಕ ರಂಗಮಂದಿರದ ಮುಖ್ಯದ್ವಾರದ ಗೇಟ್ ಬಂದ್ ಮಾಡಿ ಆಯುಕ್ತರ ವಿರುದ್ಧ ಘೋಷಣೆ ಕೂಗಿದರು. ಇದರಿಂದ ಸತತ ಒಂದು ಗಂಟೆ ಕಾಲ ಆಯುಕ್ತರು ಕಾರಿನಲ್ಲಿಯೇ ಕೂರಬೇಕಾಯಿತು. ಸಂತ್ರಸ್ತರ ಮನವೊಲಿಸಲು ಪೊಲೀಸರು ಎಷ್ಟೇ ಹರಸಾಹಸಪಟ್ಟರು ಸಾಧ್ಯವಾಗಲಿಲ್ಲ. ನಂತರ ಕಾರಿನಿಂದ ಇಳಿದ ಆಯುಕ್ತರು ಸ್ವಲ್ಪ ದೂರ ನಡೆದುಕೊಂಡು ಹೋಗಿ, ಬಳಿಕ ಬೇರೆ ಕಾರಿನಲ್ಲಿ ಮಹಾನಗರ ಪಾಲಿಕೆಗೆ ತೆರಳಿದರು.
ಈ ವೇಳೆ ಮಾತನಾಡಿದ ಆಶ್ರಯ ಸಮಿತಿ ಅಧ್ಯಕ್ಷ ಹಾಗೂ ಶಾಸಕ ಎಸ್.ಎನ್.ಚನ್ನಬಸಪ್ಪ, ೬೩೮ ಜನಕ್ಕೆ ನೋಟಿಸ್ ನೀಡಿ ಆಶ್ರಯ ಸಮಿತಿ ಸಭೆಗೆ ಕರೆಸಲಾಗಿತ್ತು. ಆದರೆ, ಕಾರ್ಯಕ್ರಮವನ್ನು ಏಕಾ- ಏಕಿರದ್ದು ಮಾಡಿದ್ದಾರೆ. ಬಡವರ ವಿರುದ್ದದ ನಡೆ ಆಯುಕ್ತರು ತಾಳಿದ್ದಾರೆ. ಸಚಿವ ಮಧುಬಂಗಾರಪ್ಪ ಅವರ ಕೈಗೊಂಬೆಯಾಗಿ ಆಯುಕ್ತರು ವರ್ತಿಸುತ್ತಿದ್ದಾರೆ ಎಂದು ದೂರಿದ್ದಾರೆ. ಪಾಲಿಕೆ ಆಯುಕ್ತೆ ಕವಿತಾ ಯೋಗಪ್ಪನವರ್ ಕಾಂಗ್ರೆಸ್ ಕಾರ್ಯಕರ್ತೆಯಂತೆ ವರ್ತಿಸುತ್ತಿದ್ದಾರೆ. ಅವರೂ ಸಹ ಆಶ್ರಯ ಸಮಿತಿಯ ಕಾರ್ಯದರ್ಶಿಯಾಗಿದ್ದಾರೆ. ಅವರಿಗೆ ಈ ಕಾರ್ಯಕ್ರಮ ರದ್ದು ಪಡಿಸುವ ಯಾವುದೇ ಹಕ್ಕಿಲ್ಲ ಎಂದು ಶಾಸಕ ಎಸ್.ಎನ್.ಚನ್ನಬಸಪ್ಪ ಆಕ್ರೋಶ ವ್ಯಕ್ತಪಡಿಸಿದರು.
ಆಯುಕ್ತರ ಈ ರೀತಿ ವರ್ತನೆ ಇಲ್ಲಿ ಸಲ್ಲದು. ಸಂದರ್ಭ ಬಂದರೆ, ಬಡವರ ಪರವಾಗಿ ಹಕ್ಕುಚ್ಯುತಿ ಮಾಡಬೇಕಾಗುತ್ತದೆ ಎಂದರು.
ಬಳಿಕ ಮಾತನಾಡಿದ ಪಾಲಿಕೆ ಆಯುಕ್ತೆ ಕವಿತಾ ಯೋಗಪ್ಪನವರ್, ನಗರದ ಗೋವಿಂದಪುರ ಮತ್ತು ಗೋಪಿ ಶೆಟ್ಟಿಕೊಪ್ಪ ಬಡಾವಣೆಯ ನಿವೇಶನ ಪಡೆದ ಫಲಾನುಭವಿಗಳ ಒಳಿತಿಗಾಗಿಯೇ ಈ ಕಾರ್ಯಕ್ರಮ ಆಯೋಜಿಸಲಾಗಿತ್ತು. ಆದರೆ, ಜಿಲ್ಲಾ ಉಸ್ತುವಾರಿ ಸಚಿವ ಎಸ್.ಮಧುಬಂಗಾರಪ್ಪ ಅವರ ಆದೇಶದ ಮೇರೆಗೆ ಕಾರ್ಯಕ್ರಮ ರದ್ದುಪಡಿಸಲಾಗಿದೆ ಎಂದರು.
ಆಶ್ರಯ ಬಡಾವಣೆಯಲ್ಲಿ ಮೂಲಭೂತ ಸೌಕರ್ಯ ಕಲ್ಪಿಸುವುದು ಬಾಕಿಯಿದೆ. ವಿದ್ಯುತ್ ಸಂಪರ್ಕ, ಕುಡಿಯುವ ನೀರಿನ ಸೌಲಭ್ಯ ಕಲ್ಪಿಸಬೇಕಿದೆ. ತಕ್ಷಣವೇ ಫಲಾನುಭವಿಗಳಿಗೆ ಮನೆ ಹಸ್ತಾಂತರಿಸಿದರೇ ಸಮಸ್ಯೆ ಎದುರಾಗಲಿದೆ. ಆದ್ದರಿಂದ, ಎಲ್ಲಾ ಸೌಕರ್ಯಗಳನ್ನು ಒದಗಿಸಿದ ಬಳಿಕ, ಸಚಿವ ಮಧುಬಂಗಾರಪ್ಪ ಅವರೇ ಬಂದು ಮನೆ ಹಸ್ತಾರಗೊಳಿಸಲಿದ್ದಾರೆ. ಅತೀ ಶೀಘ್ರವೇ ದಿನಾಂಕ ಪ್ರಕಟಿಸಲಾಗುವುದು ಎಂದು ಮಾಹಿತಿ ನೀಡಿದರು.
ಸೂಡಾ ಮಾಜಿ ಅಧ್ಯಕ್ಷ ನಾಗರಾಜ್, ಬಿಜೆಪಿ ನಗರ ಘಟಕ ಅಧ್ಯಕ್ಷ ಮೋಹನ್ ರೆಡ್ಡಿ, ಮಹಾನಗರ ಪಾಲಿಕೆ ಮಾಜಿ ಸದಸ್ಯೆ ಸುರೇಖಾ ಮುರುಳಿಧರ್ ಸೇರಿದಂತೆ ಪ್ರಮುಖರಿದ್ದರು.