Malenadu Mitra
ರಾಜ್ಯ ಶಿವಮೊಗ್ಗ

ಸರ್ಕಾರಿ ನೌಕರರ ಹಿತ ಕಾಯಲು ಸರ್ಕಾರ ಬದ್ದ : ಬಸವರಾಜ ಬೊಮ್ಮಾಯಿ

ಸರ್ಕಾರಿ ನೌಕರರ ದಿನಾಚರಣೆ

ಜಾಗತೀಕರಣ- ಉದಾರೀಕರಣ, ಖಾಸಗೀಕರಣ ಪರಿಣಾಮ ನೌಕರರ ಮೇಲೂ ಆಗಿದೆ. ತಂತ್ರಜ್ಞಾನ ಬಳಕೆಗೆ ಹೆಚ್ಚಿನ ಒತ್ತು ನೀಡಬೇಕಿದೆ. ನಿಗದಿತ ಸಮಯದಲ್ಲಿ ಕೆಲಸ ಮಾಡಿದಲ್ಲಿ ಭ್ರಷ್ಟತೆ ಕಡಿಮೆಯಾಗುತ್ತದೆ. ಬದಲಾವಣೆ ಮಾಡೋಣ, ಬನ್ನಿ ಕೈ ಜೋಡಿಸಿ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.
ರಾಜ್ಯ ಸರ್ಕಾರಿ ನೌಕರರ ದಿನಾಚರಣೆ ಉದ್ಘಾಟಿಸಿ ಮಾತನಾಡಿದ ಅವರು, ರಾಜ್ಯದ ನೌಕರರಿಗೆ ದೇಶದಲ್ಲೇ ದಕ್ಷರು ಎಂಬ ಖ್ಯಾತಿ ಇದೆ. ನಮ್ಮ ಜವಾಬ್ದಾರಿ, ಕರ್ತವ್ಯದ ಮಹತ್ವ ಅರಿತು ಕೆಲಸ ಮಾಡಬೇಕು. ಆಳುವುದು- ಆಡಳಿತ ನಡೆಸುವುದು ಬೇರೆ ಬೇರೆ. ಸಮಗ್ರ ಕರ್ನಾಟಕದ ಅಭಿವೃದ್ಧಿ ಫಲ ಜನರಿಗೆ ತಲುಪಿಸಬೇಕಿದೆ. ಸಮಾಜದ ಕಟ್ಟಕಡೆಯ ವ್ಯಕ್ತಿಯನ್ನು ನೆನಪಿಟ್ಟುಕೊಂಡು ಕೆಲಸ ಮಾಡಿ. ಸಾಮಾನ್ಯರಿಗೆ ನೆರವಾಗಲು ಕಾನೂನು ಉಲ್ಲಂಘಿಸಿದರೂ ತಪ್ಪಲ್ಲ ಎಂದರು.
2 ಲಕ್ಷ ಹುದ್ದೆಗಳು ಖಾಲಿಯಿದ್ದರೂ ಆಡಳಿತ ಯಂತ್ರ ಸುಗಮವಾಗಿ ನಡೆಯುತ್ತಿದೆ. ಇದಕ್ಕಾಗಿ ಎಲ್ಲಾ ನೌಕರರಿಗೇ ಅಭಿನಂದನೆಗಳು. ಇದೆಲ್ಲಾ ದೇವರು ಕೊಟ್ಟಿರುವ ಅವಕಾಶ. ಕೂತಲ್ಲೇ ಖುರ್ಚಿ ಬಿಸಿ ಮಾಡಬೇಡಿ, ಜನರಿಗಾಗಿ ಕೆಲಸ ಮಾಡಿ. ಒಳ್ಳೆಯದಕ್ಕೆ ನಿಮ್ಮೊಂದಿಗೆ ಇರುತ್ತೇನೆ, ಯಾವುದೇ ಭ್ರಷ್ಟತೆಗೆ ಅವಕಾಶ ಇಲ್ಲ. ಆಡಳಿತದಲ್ಲಿ ದಕ್ಷತೆ ನಮ್ಮ ಶುದ್ಧತೆಯಿಂದ ಬರುತ್ತದೆ ಎಂದರು.
ಪಟ್ಟಭದ್ರ ಹಿತಾಸಕ್ತಿಗಳು ವ್ಯವಸ್ಥೆಯನ್ನು ಅಲ್ಲೋಲ ಕಲ್ಲೋಲ ಮಾಡುತ್ತಿರುತ್ತವೆ. ಅದಕ್ಕೆ ನಾವು ನಮ್ಮ ಸಾಮಾಜಿಕ, ಜನಪರ ಕೆಲಸ, ಕಾರ್ಯಕ್ಷಮತೆಯ ಮೂಲಕ ಉತ್ತರ ನೀಡಬೇಕು. ಅದನ್ನು ನಾನು ನಿಮ್ಮಿಂದ ಬಯಸುತ್ತಿದ್ದೇನೆ. ಬನ್ನಿ ಬದಲಾವಣೆ ಮಾಡೋಣ. ಆಡಳಿತ ಯಂತ್ರದಲ್ಲಿ ಬದಲಾವಣೆ ಮಾಡೋಣ, ಆಳುವ ರೀತಿಯನ್ನು ಬದಲಾಯಿಸೋಣ, ಜನಸಾಮಾನ್ಯರ ಬಳಿಗೆ ವ್ಯವಸ್ಥೆಯನ್ನು ಕೊಂಡೊಯ್ಯೋಣ. ಬಡವರು, ರೈತರು, ದೀನ ದಲಿತರು ಸೇರಿದಂತೆ ಎಲ್ಲರ ಅಭಿವೃದ್ದಿಗಾಗಿ ಸ್ಥಿತಪ್ರಜ್ಞ ಮತ್ತು ಸಮಯಪ್ರಜ್ಞೆಯಿಂದ ಕೆಲಸ ಮಾಡೋಣವೆಂದು ಕರೆ ನೀಡಿದರು.
ಸಂಸದರಾದ ಬಿ.ವೈ.ರಾಘವೇಂದ್ರ ಮಾತನಾಡಿ, ನಮ್ಮ ರಾಜ್ಯ ಸರ್ಕಾರವು ಸರ್ಕಾರಿ ನೌಕರರು ಸ್ವಾಭಿಮಾನದ ಬದುಕು ಕಟ್ಟಿಕೊಳ್ಳುವಂತಹ ವೇತನ ಮತ್ತು ಸೌಲಭ್ಯಗಳನ್ನು ನೀಡಿದೆ. ಕಾನೂನು ರೂಪಿಸುವವರು ನಾವಾದರೂ ಅದನ್ನು ಜಾರಿಗೆ ತರುವ ಜವಾಬ್ದಾರಿ ನಿಮ್ಮ ಮೇಲಿದೆ. ಸಾಕಷ್ಟು ಅಭಿವೃದ್ದಿ ಕಾರ್ಯಗಳಾದ ಬಗ್ಗೆ ಹೆಮ್ಮ, ಗೌರವ ಸಲ್ಲುತ್ತಿರುವುದು ಕೂಡ ನಿಮ್ಮ ಪರಿಶ್ರಮದಿಂದ ಎಂದ ಹೇಳಬಯಸುತ್ತೇನೆ.
ರಾಜ್ಯ ಸರ್ಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷರಾದ ಷಡಾಕ್ಷರಿ ಪ್ರಾಸ್ತಾವಿಕವಾಗಿ ಮಾತನಾಡಿ, ರಾಜ್ಯದಲ್ಲಿ 6 ಲಕ್ಷ ಸರ್ಕಾರಿ ನೌಕರರಿದ್ದು, ದೇಶದಲ್ಲೇ ಪ್ರಥಮವಾಗಿ ರಾಜ್ಯದಲ್ಲಿ ಸರ್ಕಾರಿ ನೌಕರರ ದಿನಾಚರಣೆ ಘೋಷಿಸಿರುವ ನಿಕಟಪೂರ್ವ ಮುಖ್ಯಮಂತ್ರಿಗಳಾದ ಬಿ.ಎಸ್.ಯಡಿಯೂರಪ್ಪನವರಿಗೆ ಮತ್ತು ಮುಖ್ಯಮಂತ್ರಿಗಳಾದ ಬಸವರಾಜ ಬೊಮ್ಮಾಯಿರವರಿಗೆ ಅಭಿನಂದನೆ ಸಲ್ಲಿಸುತ್ತೇನೆ. ರಾಜ್ಯದ 31 ಜಿಲ್ಲೆಗಳಲ್ಲಿ ಏಕಕಾಲದಲ್ಲಿ ಸರ್ಕಾರಿ ನೌಕರರ ದಿನಾಚರಣೆ ಮತ್ತು ಸರ್ವೋತ್ತಮ ಪ್ರಶಸ್ತಿಗಳನ್ನು ನೀಡಲಾಗುತ್ತಿದೆ.

ಕಾರ್ಯಕ್ರಮದಲ್ಲಿ ಗೃಹ ಸಚಿವರಾದ ಆರಗ ಜ್ಞಾನೇಂದ್ರ, ಉನ್ನತ ಶಿಕ್ಷಣ,ಮಾಹಿತಿ ತಂತ್ರಜ್ಞಾನ, ಬಿಟಿ, ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವರಾದ ಡಾ.ಅಶ್ವಥನಾರಾಯಣ, ಮಾಜಿ ಉಪಮುಖ್ಯಮಂತ್ರಿಗಳು ಮತ್ತು ಶಾಸಕರಾದ ಲಕ್ಷ್ಮಣ ಸವದಿ, ಶಾಸಕ ಅಶೋಕ್‌ನಾಯ್ಕ್ ಎಂಎಡಿಬಿ ಅಧ್ಯಕ್ಷರಾದ ಗುರುಮೂರ್ತಿ, ಕಾಡಾ ಅಧ್ಯಕ್ಷರಾದ ಪವಿತ್ರ ರಾಮಯ್ಯ, ಪಾಲಿಕೆ ಮಹಾಪೌರರಾದ ಸುನೀತಾ ಅಣ್ಣಪ್ಪ, ಜಿಲ್ಲಾಧಿಕಾರಿ ಡಾ.ಆರ್.ಸೆಲ್ವಮಣಿ, ಜಿ.ಪಂ ಸಿಇಓ ಎಂ.ಎಲ್.ವೈಶಾಲಿ, ಸರ್ಕಾರಿ ನೌಕರರ ಸಂಘದ ಜಿಲ್ಲಾ ಮತ್ತು ತಾಲ್ಲೂಕು ಶಾಖೆ ಪದಾಧಿಕಾರಿಗಳು ಹಾಜರಿದ್ದರು.

ಸರ್ಕಾರದ ಕೆಲಸ ದೇವರ ಕೆಲಸವಾಗಿದ್ದು ಎಲ್ಲರೂ ಪ್ರಾಮಾಣಿಕವಾಗಿ ಸೇವೆ ಸಲ್ಲಿಸುವ ಮೂಲಕ ಸಮಾಜದ ಕಟ್ಟಕಡೆಯ ವ್ಯಕ್ತಿಗೂ ಕೂಡ ನ್ಯಾಯ ಒದಗಿಸಬೇಕು. ನಾವೆಲ್ಲ ಸೇರಿ ಸರ್ವಾಂಗೀಣ ಅಭಿವೃದ್ದಿ ಮಾಡೋಣ

ಬಸವರಾಜ ಬೊಮ್ಮಾಯಿ ,ಮುಖ್ಯಮಂತ್ರಿ

ಸರ್ಕಾರಿ ನೌಕರರು ಅನೇಕ ಒತ್ತಡಗಳು, ಸಮಸ್ಯೆಗಳು ಮತ್ತು ಸವಾಲುಗಳ ನಡುವೆಯೂ ತಮ್ಮ ಜವಾಬ್ದಾರಿಯನ್ನು ದಕ್ಷತೆಯಿಂದ ನಿರ್ವಹಿಸುತ್ತಿದ್ದಾರೆ. ಮಾನ್ಯ ಮುಖ್ಯಮಂತ್ರಿಗಳು ನಮ್ಮ ಮನವಿಗಳಿಗೆ ಉತ್ತಮವಾಗಿ ಸ್ಪಂದಿಸುತ್ತಿದ್ದಾರೆ. ಕೇಂದ್ರಕ್ಕೆ ಸಮಾನ ವೇತನ ನೀಡಲು ವೇತನ ಆಯೋಗ ರಚನೆ ಸೇರಿದಂತೆ ನೌಕರರ ಹಿತರಕ್ಷಕರಾಗಿರುವ ಅವರಿಗೆ ಎಲ್ಲ ನೌಕರರ ಪರವಾಗಿ ಹೃದಯಪೂರ್ವಕ ಅಭಿನಂದನೆ ಸಲ್ಲಿಸುತ್ತೇನೆ

ಷಡಾಕ್ಷರಿ, ರಾಜ್ಯ ಸರ್ಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷ

ಉತ್ತಮ ಸೇವೆಗಾಗಿ ಸರ್ವೋತ್ತಮ ಪ್ರಶಸ್ತಿ ಪಡೆದ ವಿವಿಧ ಹಂತದ ಅಧಿಕಾರಿಗಳು ಮತ್ತು ಸಿಬ್ಬಂದಿ
Ad Widget

Related posts

ಸಂಪುಟ ಸೇರುವ ಆರಗ,ಈಶ್ವರಪ್ಪ

Malenadu Mirror Desk

ಆವಿಷ್ಕಾರ, ಬೆಳವಣಿಗೆಗಳನ್ನು ಜನರ ಒಳಿತಿಗೆ ಬಳಸಬೇಕು: ಪ್ರಥಮ ವೈಜ್ಞಾನಿಕ ಸಮ್ಮೇಳನವನ್ನು ಉದ್ಘಾಟಿಸಿ ಇಸ್ರೋದ ಮಾಜಿ ಅಧ್ಯಕ್ಷ ಆರ್. ಕಿರಣ್‌ಕುಮಾರ್

Malenadu Mirror Desk

ಅಕೇಶಿಯಾ ಹೋರಾಟ ರೂಪುರೇಷೆ ಚರ್ಚೆ

Malenadu Mirror Desk

Leave a Comment

error: Content is protected !! ಮಲೆನಾಡು ಮಿರರ್‌ನಲ್ಲಿ ಪ್ರಕಟಗೊಂಡ ಸುದ್ದಿ, ಲೇಖನ, ಫೊಟೊಗಳನ್ನುಪೂರ್ವಾನುಮತಿಯಿಲ್ಲದೆ ನಕಲು ಮಾಡುವುದು ಕಾನೂನುಬಾಹಿರವಾಗಿದೆ.