Malenadu Mitra
ರಾಜ್ಯ ಶಿವಮೊಗ್ಗ

ದಲಿತ ಚಳವಳಿಯಿಂದ ಯಾವ ನಾಯಕನೂ ಶಾಸನ ಸಭೆಗೆ ಆಯ್ಕೆಯಾಗಿಲ್ಲ, ಡಾ.ಸಿದ್ಧನಗೌಡ ಪಾಟೀಲ್ ವಿಷಾದ

ದಲಿತ ಸಂಘರ್ಷ ಸಮಿತಿ ಸಂಸ್ಥಾಪಕ ಪ್ರೊ. ಕೃಷ್ಣಪ್ಪ ಮತ್ತು ಡಾ. ಅಂಬೇಡ್ಕರ್ ಅವರ ಆರಾಧನೆ ಮಾತ್ರ ಆಗಬಾರದು. ಅವರ ಸಿದ್ಧಾಂತಗಳು ಮತ್ತು ಅವರ ಬದುಕಿನ ಅಧ್ಯಯನ ಆಗಬೇಕು ಎಂದು ದಲಿತ ನಾಯಕ ಹಾಗೂ ಹೊಸತು ಪತ್ರಿಕೆ ಸಂಪಾದಕ ಡಾ. ಸಿದ್ದನಗೌಡ ಪಾಟೀಲ್ ಹೇಳಿದರು.
ಶಿವಮೊಗ್ಗ ಕುವೆಂಪು ರಂಗಮಂದಿರದಲ್ಲಿ ಕರ್ನಾಟಕ ದಲಿತ ಸಂಘರ್ಷ ಸಮಿತಿ ಸಮಿತಿ, ಕರ್ನಾಟಕ ದಲಿತ ನೌಕರರ ಒಕ್ಕೂಟ ಜಿಲ್ಲಾ ಸಮಿತಿ ಶಿವಮೊಗ್ಗ ಇವರ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಂಡಿದ್ದ ಪ್ರೊ. ಬಿ. ಕೃಷ್ಣಪ್ಪನವರ ೮೫ನೇ ಜನ್ಮದಿನ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು.
ಸ್ವಾವಲಂಬನೆಯ ಹೋರಾಟ ಮತ್ತು ಸ್ವಾಭಿಮಾನದ ಹೋರಾಟಕ್ಕೆ ದಲಿತರಿಗೆ ಪ್ರೊ. ಕೃಷ್ಣಪ್ಪನವರು ೭೦ರ ದಶಕದಲ್ಲೇ ಕರೆ ನೀಡಿದ್ದರು. ಇವತ್ತು ಕಾರ್ಪೋರೇಟ್ ಕಂಪನಿಗಳಿಗೆ ಮಣೆ ಹಾಕಿ ಸಾರ್ವಜನಿಕ ಸಂಪತ್ತನ್ನು ಪರಭಾರೆ ಮಾಡಿದ್ದರಿಂದ ದಲಿತರು ತಮ್ಮ ಮೀಸಲಾತಿಯನ್ನು ಕಳೆದುಕೊಳ್ಳುತ್ತಿದ್ದಾರೆ. ಇದರಿಂದ ದಲಿತರಿಗೆ ಆರ್ಥಿಕ ಹಿನ್ನೆಡೆ ಉಂಟಾಗುತ್ತಿದೆ ಕಳವಳ ವ್ಯಕ್ತಪಡಿಸಿದರು.
ಕರ್ನಾಟಕದ ದಲಿತ ಚಳುವಳಿಗಳ ಮೂಲಕ ಯಶಸ್ವಿಯಾಗಿ ವಿಧಾನಸಭೆ ಪ್ರವೇಶಿಸಿದ ಯಾವೊಬ್ಬ ರಾಜಕಾರಣಿಯೂ ಇಲ್ಲ. ಅನೇಕ ದಲಿತ ಮುಖಂಡರು ಬಿಜೆಪಿ, ಜೆಡಿಎಸ್, ಕಾಂಗ್ರೆಸ್‌ನಿಂದ ಆರಿಸಿ ಬಂದಿರಬಹುದು. ದಲಿತ ಚಳುವಳಿಗಳ ಮೂಲಕ ಆಯ್ಕೆಯಾದವರು ಯಾರೂ ಇಲ್ಲ. ಹಾಗಾಗಿ ರಾಜಕೀಯ ಪಕ್ಷಗಳು ದಲಿತರನ್ನು ತಮ್ಮ ಇಚ್ಛಾಶಕ್ತಿಗಾಗಿ ಅಸ್ತ್ರಗಳನ್ನಾಗಿ ಬಳಸಿಕೊಳ್ಳುತ್ತಿದ್ದಾರೆ. ಇವತ್ತು ಒಬ್ಬ ದಲಿತ ನಾಯಕ ಆರೆಸ್‌ಎಸ್ ಶಕ್ತಿಯನ್ನು ತಬ್ಬಿಕೊಂಡು ಹೋರಾಟ ಮಾಡುತ್ತಾನೆ ಎಂದರೆ ದಲಿತರನ್ನು ಯಾವ ರೀತಿ ಬಳಸಿಕೊಳ್ಳುತ್ತಿದ್ದಾರೆ ಎನ್ನುವುದನ್ನು ಯೋಚನೆ ಮಾಡಬೇಕಾಗಿದೆ ಎಂದರು.
ಉಪನ್ಯಾಸಕ ಪ್ರೊ. ಬಿ.ಎಲ್. ರಾಜು ಪ್ರಾಸ್ತಾವಿಕವಾಗಿ ಮಾತನಾಡಿ,ಸರ್ಕಾರ ಶಾಖಾಪಠ್ಯಗಳನ್ನು ಶಾಲಾಪಠ್ಯಗಳನ್ನಾಗಿಸುತ್ತಿದೆ. ಇಂತಹ ಸಂದರ್ಭದಲ್ಲಿ ಸಂವಿಧಾನವನ್ನು ನಿಷ್ಕ್ರಿಯಗೊಳಿಸಲಾಗಿದೆ ಈ ಬಗ್ಗೆ ದಲಿತರು ಎಚ್ಚೆತ್ತುಕೊಳ್ಳುವ ಸಮಯ ಬಂದಿದೆ ಎಂದರು. ಪ್ರೊ. ಕೃಷ್ಣಪ್ಪನವರು ದಲಿತರಿಗೆ ಭೂಮಿ ಕೊಡಿ ಎಂದು ಹೋರಾಟ ಮಾಡಿದರು. ನಂಜುಂಡಸ್ವಾಮಿಯವರು ರೈತರ ಬೆಳೆಗಳಿಗೆ ಬೆಲೆ ಕೊಡಿ ಎಂದು ಹೋರಾಟ ಮಾಡಿದರು. ಅವರಿಬ್ಬರೂ ಒಟ್ಟಾಗಲೇ ಇಲ್ಲ. ಆದ್ದರಿಂದ ದಲಿತರಿಗೆ ಅಧಿಕಾರ ಸಿಕ್ಕಿಲ್ಲ. ಅಧಿಕಾರ ಸಿಕ್ಕಿದ ದಲಿತರು ರಾಜಕೀಯ ಪಾರ್ಟಿಗಳಲ್ಲಿ ಬ್ರೋಕರ್‍ಗಳ ಥರ ಇದ್ದು, ತಮ್ಮ ವೈಯಕ್ತಿಕ ಹಿತಾಸಕ್ತಿಗಾಗಿ ದಲಿತರ ಮತಗಳನ್ನು ರಾಜಕೀಯ ಪಾರ್ಟಿಗಳಿಗೆ ಕೊಡಿಸುತ್ತಿದ್ದಾರೆ. ಇದೇ ಕಾರಣಕ್ಕೆ ಪ್ರೊ. ಕೃಷ್ಣಪ್ಪನವರು ರಾಜಕೀಯಕ್ಕೆ ಬಂದಿಲ್ಲ. ಅವರ ಆಶಯಗಳನ್ನು ನೆರವೇರಿಸುವುದು ನಮ್ಮೆಲ್ಲರ ಕರ್ತವ್ಯ ಎಂದರು.
ರೈತ ಚಳುವಳಿಯ ಪ್ರೊ. ನಂಜುಂಡಸ್ವಾಮಿ ಮತ್ತು ದಲಿತ ಚಳುವಳಿಯ ಪ್ರೊ. ಕೃಷ್ಣಪ್ಪ ಒಂದಾಗಿದ್ದರೆ ಕರ್ನಾಟಕದ ಭವಿಷ್ಯವೇ ಬದಲಾಗುತ್ತಿತ್ತು. ಆದರೆ, ಅವರಿಬ್ಬರೂ ಕೂಡ ಚಳವಳಿಗಳನ್ನು ರಾಜಕೀಯಕ್ಕೆ ತರಲು ಒಪ್ಪಲಿಲ್ಲ. ಪ್ರೊ. ನಂಜುಂಡಸ್ವಾಮಿಯವರು ರೈತ ಚಳುವಳಿಯಿಂದ ವಿಧಾನಸೌಧ ಆರಿಸಿ ಬಂದರು. ಆದರೆ, ಜಮೀನು ಹಣ ಅಂತಸ್ತು ಇಲ್ಲದ ದಲಿತರು ಸ್ವತಂತ್ರವಾಗಿ ಚಳುವಳಿಗಳ ಮೂಲಕ ಇದುವರೆಗೂ ಒಬ್ಬನೂ ಆರಿಸಿ ಬಂದಿಲ್ಲ. ದಲಿತರು ಅಂದರೆ ಎಸ್‌ಸಿ, ಎಸ್‌ಟಿಗಳು ಮಾತ್ರವಲ್ಲ. ಆರ್ಥಿಕವಾಗಿ, ಸಾಮಾಜಿಕವಾಗಿ ಹಿಂದುಳಿದವರು. ಎಲ್ಲರೂ ದಲಿತರೇ ಎಂದರು.
ಡಿಎಸ್‌ಎಸ್ ರಾಜ್ಯ ಸಂಚಾಲಕ ಎಂ. ಗುರುಮೂರ್ತಿ, ಅಪರ ಜಿಲ್ಲಾಧಿಕಾರಿ ಡಾ. ನಾಗೇಂದ್ರ ಹೊನ್ನಳ್ಳಿ, ರೈತಮುಖಂಡ ಕೆ.ಟಿ. ಗಂಗಾಧರ್, ಮುಖಂಡರಾದ ಡಿ.ಬಿ. ಚಂದ್ರೇಗೌಡ, ಇ. ರಾಜು, ಚಂದ್ರಹಾಸ ಹಿರೇಮಳಲಿ, ಫಕ್ಕೀರಪ್ಪ, ಮಂಜುನಾಥ್, ಗಿರೀಶ್, ಬಿ.ಎ. ಕಾಟ್ಕೆ, ವೆಂಕಟೇಶ್, ಎನ್. ಮಂಜುನಾಥ್, ಶಿವಬಸಪ್ಪ ಸೇರಿದಂತೆ ಹಲವರಿದ್ದರು.

ರಾಜ್ಯದಲ್ಲಿ ೭೦ರ ದಶಕ ಸಾಮಾಜಿಕ ಪ್ರಜ್ಞೆ ಜಾಗೃತವಾದ ದಶಕ. ಗುಂಡೂರಾಯರ ಕಾಲದಲ್ಲಿ ಗೋಲಿಬಾರ್ ಆದನಂತರ ದಲಿತ, ರೈತ ಹಾಗೂ ಕಾರ್ಮಿಕ ಚಳುವಳಿಗಳು ದೊಡ್ಡ ಪ್ರಮಾಣದಲ್ಲಿ ಆರಂಭವಾಯ್ತು. ಪ್ರೊ. ಕೃಷ್ಣಪ್ಪನವರು ಭದ್ರಾವತಿಯಿಂದ ಚಳುವಳಿಯ ದೀಪವನ್ನು ಬೆಳಗಿಸಿದರು. ಅದು ರಾಜ್ಯಾದ್ಯಂತ ಪಸರಿಸಿತು. ದಲಿತರ ಶೋಷಣೆಯ ವಿರುದ್ಧ ಪ್ರೊ. ಕೃಷ್ಣಪ್ಪನವರು ಜಾಗೃತಿಯ ದೀಪವನ್ನು ಬೆಳಗಿಸಿದರು. ೧೯೭೦ರಿಂದ ೯೦ರ ವರೆಗೆ ೨೦ ವರ್ಷಗಳ ಕಾಲ ದಲಿತ ಚಳುವಳಿಯ ಸುವರ್ಣ ಯುಗ ಎನ್ನಬಹುದು

ಡಾ.ಸಿದ್ದನಗೌಡ ಪಾಟೀಲ್

Ad Widget

Related posts

ಕುವೆಂಪು ವಿವಿ ಆಡಳಿತ ಅಧ್ಯಾಪಕರ ಹಿತಾಸಕ್ತಿ ಕಾಯಲಿ

Malenadu Mirror Desk

ಕೊರೋನ ನಿಯಂತ್ರಣದಲ್ಲಿ ಕಟ್ಟುನಿಟ್ಟಿನ ಕ್ರಮ ಅನಿವಾರ್ಯ

Malenadu Mirror Desk

ಕಾನೂನು ತಿದ್ದುಪಡಿ ಆಗುವವರೆಗೆ ಅರಣ್ಯ ಸಮಿತಿ ಸಭೆ ಮುಂದೂಡಿ : ಮನವಿ

Malenadu Mirror Desk

Leave a Comment

error: Content is protected !! ಮಲೆನಾಡು ಮಿರರ್‌ನಲ್ಲಿ ಪ್ರಕಟಗೊಂಡ ಸುದ್ದಿ, ಲೇಖನ, ಫೊಟೊಗಳನ್ನುಪೂರ್ವಾನುಮತಿಯಿಲ್ಲದೆ ನಕಲು ಮಾಡುವುದು ಕಾನೂನುಬಾಹಿರವಾಗಿದೆ.