Malenadu Mitra
ರಾಜ್ಯ ಶಿವಮೊಗ್ಗ

ಪರಿಸರ ರಕ್ಷಣೆಗೆ ಕಠಿಣ ಕಾನೂನು ಅಗತ್ಯವಿದೆ: ವಿನಯ್ ಗುರೂಜಿ

ಶಿವಮೊಗ್ಗ: ಪರಿಸರ ರಕ್ಷಣೆಗೆ ಕಠಿಣ ಕಾನೂನಿನ ಅವಶ್ಯಕತೆ ಇದೆ. ಪರಿಸರ ನಾಶ ಮಾಡುವವರಿಗೆ ದೊಡ್ಡ ಮಟ್ಟದ ದಂಡ ಹಾಕಿದಾಗ ಮಾತ್ರ ಪರಿಸರ ರಕ್ಷಣೆ ಸಾಧ್ಯ ಎಂದು ಹರಿಹರಪುರದ ಗೌರಿಗದ್ದೆ ಅವಧೂತ ವಿನಯ್ ಗುರೂಜಿ ಹೇಳಿದ್ದಾರೆ.
ಸಕ್ರೆಬೈಲ್ ಆನೆ ಬಿಡಾರದಿಂದ 6 ಕಿ.ಮೀ. ವ್ಯಾಪ್ತಿಯಲ್ಲಿ ‘ಸ್ವಚ್ಛ ಭಾರತ್ ಶ್ರೇಷ್ಠ ಭಾರತ್’ ಘೋಷವಾಕ್ಯದೊಂದಿಗೆ ಗೌರಿಗದ್ದೆಯ ಮಹಾತ್ಮಗಾಂಧಿ ಟ್ರಸ್ಟ್, ಶಿವಮೊಗ್ಗದ ಸರ್ಜಿ ಫೌಂಡೇಷನ್, ಓಪನ್ ಮೈಂಡ್ ಶಾಲೆ ಜಾವಳ್ಳಿ, ಜೆಸಿಐ ಶಿವಮೊಗ್ಗ, ರೌಂಡ್ ಟೇಬಲ್ ಇಂಡಿಯಾ ೧೬೬, ಪರೋಪಕಾರಂ, ಆಶ್ರಮ ಬಡಾವಣೆ ಹಿತರಕ್ಷಣಾ ವೇದಿಕೆ ಇವರ ಸಹಯೋಗದೊಂದಿಗೆ ೩೦೦ ಕ್ಕೂ ಹೆಚ್ಚು ಕಾರ್ಯಕರ್ತರು ಈ ಸ್ವಚ್ಛತಾ ಆಂದೋಲನದಲ್ಲಿ ಪಾಲ್ಗೊಂಡಿದ್ದರು.
ಈ ಕಾರ್ಯಕ್ರಮ ಉದ್ಘಾಟಿಸಿ ಆಂದೋಲನದ ನೇತೃತ್ವ ವಹಿಸಿ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ವಿನಯ್ ಗುರೂಜಿ, ಕಸ ಹಾಕಿದರೆ ಅರಣ್ಯ ಇಲಾಖೆ ದಂಡ ವಿಧಿಸಿದಾಗ ಮಾತ್ರ ನಮ್ಮ ಜನ ಎಚ್ಚೆತ್ತುಕೊಳ್ಳುತ್ತಾರೆ. ಸ್ವಚ್ಛತಾ ಅಭಿಯಾನ ಎನ್ನುವುದಕ್ಕಿಂತ ನಾವು ಇವತ್ತು ಪ್ರಾಯಶ್ಚಿತ್ತ ಮಾಡುತ್ತಿದ್ದೇವೆ ಎನ್ನಬಹುದು. ತಮ್ಮ ಚಟಕ್ಕಾಗಿ ದುರಭ್ಯಾಸಕ್ಕೆ ಬಲಿಯಾಗಿ ಅದರಿಂದ ಅನಾರೋಗ್ಯಕ್ಕೆ ಒಳಗಾಗುವುದು ಮಾತ್ರವಲ್ಲದೇ, ದಟ್ಟ ಕಾಡಿನಲ್ಲಿರುವ ಉತ್ತಮ ಪರಿಸರವನ್ನು ಮನುಷ್ಯ ತನ್ನ ತೆವಲಿಗಾಗಿ ಹಾಳು ಮಾಡುತ್ತಿದ್ದಾನೆ. ಮದ್ಯಪಾನದ ಬಾಟಲಿಗಳ ರಾಶಿ ನೋಡಿದಾಗ ಅರ್ಥವಾಗುವುದೇನೆಂದರೆ ಮನುಷ್ಯತ್ವ ಮರೆತು ಮಾನವನ ವರ್ತನೆ ಪ್ರಾಣಿಗಳ ಸಾವಿಗೂ ಕಾರಣವಾಗುತ್ತಿದೆ. ಇಲ್ಲಿ ತಂದು ಹಾಕುವ ಪ್ಲಾಸ್ಟಿಕ್ ತ್ಯಾಜ್ಯ ತಿಂದು ಅನೇಕ ಪ್ರಾಣಿಗಳು ಸಾಯುತ್ತಿವೆ. ದೇವರನ್ನು ನಂಬದಿದ್ದರೂ, ಪರಿಸರವನ್ನು ನಂಬಿ, ಮನುಷ್ಯರನ್ನು ನಂಬಿ. ವಾರಕ್ಕೊಮ್ಮೆಯಾದರೂ ವೀಕೆಂಡ್ ಪಾರ್ಟಿ ಮಾಡುವುದಕ್ಕಿಂತ ಎಲ್ಲರೂ ಒಟ್ಟಾಗಿ ಯಾವುದಾದರೊಂದು ಕಡೆ ಸ್ವಚ್ಛತಾ ಅಭಿಯಾನ ಕೈಗೊಳ್ಳಿ. ಯೋಗ, ಸೈಕ್ಲಿಂಗ್, ಓದುವುದು, ವಾಕ್ ಮಾಡುವುದು ಮುಂತಾದವುಗಳಿಗೆ ಸಮಯ ವಿನಿಯೋಗಿಸಿ ಎಂದರು.
ರಾಜಸ್ಥಾನ ಘಟನೆಗೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ಅವರು, ಎಲ್ಲಾ ಧರ್ಮಗಳ ತಿರುಳು ಮನುಷ್ಯತ್ವ. ಮನುಷ್ಯ ಬದುಕಲು ಧರ್ಮಗ್ರಂಥಗಳೇ ಮೂಲ. ನಾವದನ್ನು ಮರೆತಿದ್ದೇವೆ. ಕೊಲೆ ಮಾಡಿದವನು ಯಾವುದೇ ಜಾತಿಯವನಿರಲಿ, ಆತನಿಗೆ ಉಗ್ರ ಶಿಕ್ಷೆ ನೀಡಬೇಕು. ಆತನ ಸಮಾಜದ ಮುಖಂಡರೇ ಅವನಿಗೆ ತಕ್ಕ ಪಾಠ ಕಲಿಸಬೇಕು. ಭಾರತ ತನ್ನಲ್ಲಿರುವ ಆದರ್ಶಗಳಿಂದ ಮತ್ತು ಸಂಸ್ಕಾರದಿಂದ ಇವತ್ತು ವಿಶ್ವವೇ ತಲೆ ಬಾಗುತ್ತದೆ. ಯಾರೇ ತಪ್ಪು ಮಾಡಿದರೂ ಆ ಧರ್ಮದವರೇ ಆತನಿಗೆ ಬುದ್ಧಿ ಹೇಳಬೇಕು. ಕೊಲೆ ಮಾಡಲು ಯಾವ ಧರ್ಮವೂ ಹೇಳುವುದಿಲ್ಲ. ಅಪರ ಜಿಲ್ಲಾಧಿಕಾರಿ ನಾಗೇಂದ್ರ ಹೊನ್ನಳ್ಳಿ, ಆರ್.ಟಿ.ಒ. ದೀಪಕ್, ಪರೋಪಕಾರಂ ತಂಡದ ಶ್ರೀಧರ್ ಮತ್ತು ಸದಸ್ಯರು, ಕಂದಾಯಾಧಿಕಾರಿ ವಿಜಯಕುಮಾರ್, ಅರಣ್ಯ ಇಲಾಖೆ ಸಿಬ್ಬಂದಿ ಹಾಗೂ ವಿವಿಧ ಸಂಘಟನೆಗಳ ಪ್ರಮುಖರು ಇದ್ದರು.

ವೀಕ್‌ಎಂಡ್ ಮೋಜು ಮಸ್ತಿಗೆ ಪರಿಸರ ನಾಶ


ಅಭಿಯಾನದ ರೂವಾರಿ ಡಾ. ಧನಂಜಯ ಸರ್ಜಿ ಮಾತನಾಡಿ, ವೀಕೆಂಡ್ ಮೋಜು ಮಸ್ತಿಗೆ ಪರಿಸರ ನಾಶವಾಗುತ್ತಿದೆ. ಕಾರ್‌ನಲ್ಲಿ ಬಾರ್ ಆಗಿ ದರ್ಬಾರ್ ಮಾಡುವವರ ಸಂಖ್ಯೆ ಜಾಸ್ತಿಯಾಗಿದೆ. ಒಂದು ಮರ ಇಬ್ಬರಿಗೆ ಒಂದು ವರ್ಷಕ್ಕಾಗುವಷ್ಟು ಆಕ್ಸಿಜನ್ ನೀಡುತ್ತದೆ. ಕೊರೋನಾ ಸಂದರ್ಭದಲ್ಲಿ ದುಡ್ಡು ಕೊಟ್ಟರೂ ಆಕ್ಸಿಜನ್ ಸಿಗದ ದುಸ್ಥಿತಿಯನ್ನು ಎಲ್ಲರೂ ನೋಡಿದ್ದೇವೆ. ವನ್ಯ ಜೀವಿಗಳು ಬದುಕುವ ಕಾಡಿನಲ್ಲಿ ಪರಿಸರ ಹಾಳು ಮಾಡಬಾರದು. ಅದಕ್ಕಾಗಿ ಈ ಸ್ವಚ್ಛತಾ ಆಂದೋಲನ ಹಮ್ಮಿಕೊಂಡಿದ್ದು, ಮಂಡಗದ್ದೆ ರಸ್ತೆಯಲ್ಲಿ6 ಕಿ.ಮೀ. ದೂರದವರೆಗೆ500 ಮೀ. ಒಂದರಂತೆ ವಿವಿಧ ಸಂಘ, ಸಂಸ್ಥೆಗಳ ಸಹಕಾರದೊಂದಿಗೆ ಡಸ್ಟ್ ಬಿನ್ ಅಳವಡಿಸಲಾಗಿದೆ. ಮೋಜು ಮಸ್ತಿಗೆ ಬಂದವರು ಕನಿಷ್ಠ ತಮ್ಮ ತ್ಯಾಜ್ಯಗಳನ್ನು ಡಸ್ಟ್ ಬಿನ್ ಗಳಿಗೆ ಹಾಕಿ ಎಂದರು

ದುಬೈನಲ್ಲಿ ಕೊಲೆ ಮಾಡಲು ಹೆದರುತ್ತಾರೆ. ಕಾರಣ ಅಲ್ಲಿ ಬಹಿರಂಗವಾಗಿ ನೇಣು ಹಾಕಲಾಗುತ್ತದೆ. ಆ ರೀತಿಯ ಕಠಿಣ ಕಾನೂನುಗಳನ್ನು ತಂದಾಗ ಯಾವುದೇ ಕುಕೃತ್ಯ ಮಾಡಲು ಹಿಂಜರಿಯುತ್ತಾರೆ. ಅನ್ಯಾಯವಾದಾಗ ಸಾರ್ವಜನಿಕರು ಜವಾಬ್ದಾರಿ ಮೆರೆಯಬೇಕು. ತಪ್ಪು ಮಾಡಿದವನನ್ನು ಎರಡು ತಟ್ಟಿ ಕಾನೂನಿಗೆ ಒಪ್ಪಿಸಬೇಕು. ಆಗ ವ್ಯವಸ್ಥೆ ಸುಧಾರಿಸುತ್ತದೆ

ಅವಧೂತ ವಿನಯ್ ಗುರೂಜಿ

.

Ad Widget

Related posts

ಕಣ್ಣೂರು ಕಚ್ಚಾಬಾಂಬ್ ಸ್ಫೋಟದ ಹಿಂದಿನ ಅಸಲಿಯತ್ತು ಗೊತ್ತಾ ?, ಬಚ್ಚಲುಮನೆ ಒಲೆಯಲ್ಲಿ ಬಾಂಬಿಟ್ಟು ಕೊಲೆ ಸಂಚು ನಡೆದಿತ್ತಾ ?

Malenadu Mirror Desk

ಶಿವಮೊಗ್ಗದಲ್ಲಿ 166 ಮಂದಿಗೆ ಸೋಂಕು, ಒಂದು ಸಾವು

Malenadu Mirror Desk

ಜನತೆ ವೈಚಾರಿಕತೆ ಮೈಗೂಡಿಸಿಕೊಳ್ಳಬೇಕು :ಡಾ.ಮಹಾಂತ ಸ್ವಾಮೀಜಿ

Malenadu Mirror Desk

Leave a Comment

error: Content is protected !! ಮಲೆನಾಡು ಮಿರರ್‌ನಲ್ಲಿ ಪ್ರಕಟಗೊಂಡ ಸುದ್ದಿ, ಲೇಖನ, ಫೊಟೊಗಳನ್ನುಪೂರ್ವಾನುಮತಿಯಿಲ್ಲದೆ ನಕಲು ಮಾಡುವುದು ಕಾನೂನುಬಾಹಿರವಾಗಿದೆ.