Malenadu Mitra
ರಾಜ್ಯ ಶಿವಮೊಗ್ಗ

ಶಿವಮೊಗ್ಗ ಶಾಂತ, ನಿಷೇಧಾಜ್ಞೆ ಮುಂದುವರಿಕೆ, ಭದ್ರಾವತಿಯಲ್ಲಿ ಅಘೋಷಿತ ಬಂದ್ , ಐದು ಎಫ್‌ಐಆರ್ ದಾಖಲು, ಗಾಯಾಳು ಭೇಟಿ ಮಾಡಿದ ಸಂತೋಷ್‌ಜಿ

ಸ್ವಾತಂತ್ರ್ಯ ದಿನದಂದು ನಗರದಲ್ಲಿ ಸಾವರ್ಕರ್ ಫ್ಲೆಕ್ಸ್ ವಿಚಾರಕ್ಕೆ ಉದ್ವಿಗ್ನಗೊಂಡಿದ್ದ ಶಿವಮೊಗ್ಗ ನಗರ ಸಹಜ ಸ್ಥಿತಿಯಲ್ಲಿದ್ದು, ಬುಧವಾರ ಎಂದಿನಂತೆ ಶಾಲಾ ಕಾಲೇಜುಗಳ ಆರಂಭವಾಗಿದ್ದು, ವ್ಯಾಪಾರ ವಹಿವಾಟುಗಳು ಆರಂಭವಾಗಿದ್ದವು. ಮುಂಜಾಗ್ರತಾ ಕ್ರಮವಾಗಿ ನಿಷೇಧಾಜ್ಞೆ ಮುಂದುವರಿಸಲಾಗಿದೆ. ನಗರದ ಸೂಕ್ಷ್ಮ ಪ್ರದೇಶಗಳು ಸೇರಿದಂತೆ ಎಲ್ಲಾ ಕಡೆ ಪೊಲೀಸ್ ಬಂದೋ ಬಸ್ತ್ ಕೈಗೊಳ್ಳಲಾಗಿದೆ.
ಕಾನೂನು ಮತ್ತು ಸುವ್ಯವಸ್ಥೆ ಎಡಿಜಿಪಿ ಅಲೋಕ್ ಕುಮಾರ್, ಪೂರ್ವ ವಲಯ ಐಜಿಪಿ ತ್ಯಾಗರಾಜ್, ಜಿಲ್ಲಾ ಪೊಲೀಸ್ ಅಧೀಕ್ಷಕ ಲಕ್ಷ್ಮಿ ಪ್ರಸಾದ್ ಸೇರಿದಂತೆ ಹಿರಿಯ ಪೊಲೀಸ್ ಅಧಿಕಾರಿಗಳು ಗಾಂಧಿ ಬಜಾರ್, ನೆಹರೂ ರಸ್ತೆ, ಎಂ.ಕೆ.ಕೆ. ರಸ್ತೆ ಮೊದಲಾದ ಕಡೆಗಳಲ್ಲಿ ಪರಿಶೀಲನೆ ನಡೆಸಿದರು.
ಯಾವುದೇ ಅಹಿತಕರ ಘಟನೆ ನಡೆಯದಂತೆ ಮುನ್ನೆಚ್ಚರಿಕೆ ಕ್ರಮವಾಗಿ ಆರ್.ಎ.ಎಫ್., ಕೆ.ಎಸ್.ಆರ್.ಪಿ., ಡಿಎಆರ್ ಸೇರಿದಂತೆ ಭಾರೀ ಸಂಖ್ಯೆಯ ಪೊಲೀಸರನ್ನು ಭದ್ರತೆಗೆ ನಿಯೋಜಿಸಲಾಗಿದೆ.

ಭದ್ರಾವತಿಯಲ್ಲಿ ಪಥಸಂಚಲನ:
ಕಾನೂನು ಮತ್ತು ಸುವ್ಯವಸ್ಥೆ ಎಡಿಜಿಪಿ ಅಲೋಕ್ ಕುಮಾರ್ ಅವರು ಗಲಭೆಗ್ರಸ್ಥ ಭದ್ರಾವತಿಯಲ್ಲಿ ಸ್ಥಿತಿ ಸಹಜಗೊಳಿಸಲು ಮತ್ತು ಆತಂಕದಲ್ಲಿರುವ ಜನರಲ್ಲಿ ವಿಶ್ವಾಸ ಮೂಡಿಸಲು ಬುಧವಾರ ಬೆಳಗ್ಗೆ ಪಟ್ಟಣದ ಬೀದಿಗಳಲ್ಲಿ ಶಿವಮೊಗ್ಗ ಮತ್ತು ಸ್ಥಳೀಯ ಪೊಲೀಸ್ ಹಾಗೂ ರ್‍ಯಾಪಿಡ್ ಆಕ್ಷನ್ ಫೋರ್ಸ್‌ನೊಂದಿಗೆ ಪಥ ಸಂಚಲನ ನಡೆಸಿದರು.
ಅನ್ಯಕೋಮಿನ ಯುವಕನ ಮೇಲೂ ಹಲ್ಲೆ

ಶಿವಮೊಗ್ಗ ಗಾಂಧಿ ಬಜಾರ್ ನಲ್ಲಿ ಪ್ರೇಮ್ ಸಿಂಗ್ ಯುವಕನಿಗೆ ಚಾಕು ಇರಿದ ಗಲಾಟೆ ವೇಳೆ ಮುಸ್ಲಿಂ ಯುವಕನೋರ್ವನ ಮೇಲೂ ಹಲ್ಲೆ ನಡೆದಿದೆ. ಶಿವಮೊಗ್ಗದ ಜೆಪಿ ನಗರದ ಸದ್ದಾಂ ಹುಸೇನ್.ಎಂ ಜಮಖಂಡಿ ಎಂಬ ಯುವಕನ ಮೇಲೆ ಹಲ್ಲೆ ಮಾಡಲಾಗಿದೆ. ಹಲ್ಲೆಗೊಳಗಾದ ಯುವಕ ದೊಡ್ಡಪೇಟೆ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾನೆ. ಸದ್ದಾಂ ಹುಸೇನ್ ಗಾಂಧಿ ಬಜಾರ್‌ನ ಅಂಬಾಭವಾನಿ ಮೆಟಲ್ ಸ್ಟೋರ್‌ನಲ್ಲಿ ಕೆಲಸ ಮಾಡುತ್ತಿದ್ದಾನೆ.
ಗಲಾಟೆ ಹಿನ್ನೆಲೆ ಯುವಕ ಅಂಗಡಿ ಮುಚ್ಚಿ ಹೋಗುತ್ತಿದ್ದಾಗ ಗಾಂಧಿ ಬಜಾರ್‌ನ ಉಪ್ಪಾರಕೇರಿ ಕ್ರಾಸ್‌ನಲ್ಲಿ ಏಕಾಏಕಿ ಬೈಕ್ ಅಡ್ಡಗಟ್ಟಿ ಹಲ್ಲೆ ಮಾಡಲಾಗಿದೆ. ೧೦ ರಿಂದ ೧೨ ಜನರ ಯುವಕರ ಗುಂಪಿನಿಂದ ಸದ್ದಾಂ ಹುಸೇನ್ ಮೇಲೆ ಹಲ್ಲೆ ಮಾಡಲಾಗಿದೆ ಎನ್ನಲಾಗುತ್ತಿದೆ.
ಹಲ್ಲೆಗೊಳಗಾದ ಸದ್ದಾಂ ಆಸ್ಪತ್ರೆಗೆ ದಾಖಲಾಗಿ, ಬಳಿಕ ಪೊಲೀಸರಿಗೆ ದೂರು ನೀಡಿದ್ದಾನೆ. ಸದ್ದಾಂ ಹುಸೇನ್ ಚಿಕಿತ್ಸೆ ಬಳಿಕ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾನೆ. ಆರೋಪಿಗಳ ಪತ್ತೆಗೆ ದೊಡ್ಡಪೇಟೆ ಪೊಲೀಸರು ಬಲೆ ಬೀಸಿದ್ದಾರೆ.

ಶಿವಮೊಗ್ಗದಲ್ಲಿ ಮತ್ತೊಂದು ಎಫ್ ಐಆರ್ ದಾಖಲು:

ಸಾವರ್ಕರ್ ಫ್ಲೆಕ್ಸ್ ಅಳವಡಿಕೆ ವೇಳೆ ಗಲಾಟೆ ವಿಚಾರವಾಗಿ ಮತ್ತೊಂದು ಎಫ್ ಐಆರ್ ದಾಖಲಾಗಿದೆ. ಗಲಾಟೆ ಸಂಬಂಧ ಈವರೆಗೆ ದೊಡ್ಡಪೇಟೆ ಠಾಣೆಯಲ್ಲಿ ನಾಲ್ಕು ಎಫ್‌ಐಆರ್ ದಾಖಲಾಗಿವೆ. ಸಾವರ್ಕರ್ ಫ್ಲೆಕ್ಸ್‌ನ್ನು ತೆರವುಗೊಳಿಸುವ ವೇಳೆ ಭಾವನೆಗಳಿಗೆ ಧಕ್ಕೆ ತರುವ ಘೋಷಣೆ ಕೂಗಿದ ವ್ಯಕ್ತಿಗಳ ವಿರುದ್ಧ ಪ್ರಕರಣ ದಾಖಲಾಗಿದೆ. ದೊಡ್ಡಪೇಟೆ ಪೊಲೀಸರು ೨ನೇ ಸುಮೋಟೋ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಪ್ರಕರಣಕ್ಕೆ ಮೂರರಿಂದ ನಾಲ್ಕು ಜನರು ಕಾರಣಕರ್ತರು ಎಂದು ಪೊಲೀಸ್ ಎಫ್‌ಐಆರ್‌ನಲ್ಲಿ ದಾಖಲಾಗಿದೆ. ಎಫ್‌ಐಆರ್‌ನಲ್ಲಿ ಅಪರಿಚಿತ ವ್ಯಕ್ತಿಗಳು ಎಂದು ಪ್ರಕರಣ ದಾಖಲಾಗಿದೆ. ಆ ೪ ಜನರಿಗೆ ದೊಡ್ಡಪೇಟೆ ಪೊಲೀಸರು ಶೋಧ ಕಾರ್ಯ ಆರಂಭಿಸಿದ್ದಾರೆ.

ಭಯಪಡುವ ಅಗತ್ಯವಿಲ್ಲ: ಅಲೋಕ್‌ಕುಮಾರ್

ಪ್ರೇಮ ಸಿಂಗ್ ಚಾಕು ಇರಿತ ಪ್ರಕರಣಕ್ಕೆ ಸಂಬಂಧಪಟ್ಟಂತೆ ಶಿವಮೊಗ್ಗ ನಗರದಲ್ಲಿ ನಿಷೇಧಾಜ್ಞೆ ಮುಂದುವರಿಸಲಾಗಿದ್ದು, ಶಿವಮೊಗ್ಗ ನಗರ ಸಂಪೂರ್ಣ ಶಾಂತಿಯುತವಾಗಿದೆ ಎಂದು ಕಾನೂನು ಸುವ್ಯವಸ್ಥೆ ವಿಭಾಗದ ಎಡಿಜಿಪಿ ಅಲೋಕ್ ಕುಮಾರ್ ಹೇಳಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಗರದಲ್ಲಿ ಶಾಲಾ-ಕಾಲೇಜುಗಳು ಆರಂಭವಾಗಿವೆ. ಯಾರು ಭಯಪಡುವ ಅಗತ್ಯವಿಲ್ಲ. ೨ ದಿನದಲ್ಲಿ ನಗರ ಸಂಪೂರ್ಣ ನಿಯಂತ್ರಣಕ್ಕೆ ಬಂದಿದೆ. ನಗರದಲ್ಲಿ ಸೆಕ್ಷನ್ ೧೪೪ರ ಅನ್ವಯ ನಿಷೇಧಾಜ್ಞೆಯನ್ನು ಶುಕ್ರವಾರದವರೆಗೆ ಮುಂದುವರೆಸುವ ಕುರಿತು ಗುರುವಾರ ಸಭೆ ನಡೆಸಿ ತೀರ್ಮಾನ ಕೈಗೊಳ್ಳಲಾಗುತ್ತದೆ ಎಂದರು.
ಪೋಲೀಸ್ ಇಲಾಖೆ ಅಧಿಕಾರಿಗಳು ಸಿಬ್ಬಂದಿ ಹಗಲು ರಾತ್ರಿ ಕೆಲಸ ಮಾಡುತ್ತಿದ್ದಾರೆ. ಶಿವಮೊಗ್ಗ ಮತ್ತು ಭದ್ರಾವತಿ ಪ್ರಕರಣಗಳಲ್ಲಿ ಭಾಗಿಯಾಗಿದ್ದ ಆರೋಪಿಗಳ ಬಂಧನವಾಗಿದೆ. ಕಳೆದ ಎರಡು ದಿನಗಳಿಂದ ಗಾಂಧಿ ಬಜಾರ್ ಬಂದ್ ಆಗಿದೆ. ಗಾಂಧಿ ಬಜಾರ್‌ನಲ್ಲಿ ಲಕ್ಷಾಂತರ ರೂಪಾಯಿ ನಷ್ಟ ಹಿನ್ನಲೆಯಲ್ಲಿ ಗಾಂಧಿ ಬಜಾರ್ ಅಂಗಡಿ ಓಪನ್‌ಗೆ ಅವಕಾಶ ನೀಡಲಾಗಿದೆ ಎಂದರು.
ಭದ್ರಾವತಿಯಲ್ಲಿ ಅಘೋಷಿತ ಬಂದ್ ಮುಂದುವರಿದಿದ್ದು, ಭದ್ರಾವತಿಯಲ್ಲಿ ಕೂಡ ಅಂಗಡಿಗಳು ಬಂದ್ ಆಗಿವೆ. ಅಗತ್ಯ ವಸ್ತುಗಳ ಅಂಗಡಿ ಹೊರತುಪಡಿಸಿ ಎಲ್ಲ ಬಂದ್ ಆಗಿವೆ. ಹೋಟೆಲ್‌ನಲ್ಲಿ ಪಾರ್ಸೆಲ್‌ಗಷ್ಟೇ ಅವಕಾಶ ನೀಡಲಾಗಿದೆ ಎಂದರು.

ಆಸ್ಪತ್ರೆಗೆ ಬಿಜೆಪಿ ಮುಖಂಡರ ಭೇಟಿ

ಹಲ್ಲೆಗೊಳಗಾಗಿ ಮೆಗ್ಗಾನ್ ಆಸ್ಪತ್ರೆಯಲ್ಲಿ ದಾಖಲಾಗಿರುವ ಪ್ರೇಮ್ ಸಿಂಗ್‌ನನ್ನು ಬಿಜೆಪಿ ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಬಿ.ಎಲ್. ಸಂತೋಷ್, ಶಾಸಕ ಕೆ.ಎಸ್. ಈಶ್ವರಪ್ಪ, ಸಂಸದ ಬಿ.ವೈ. ರಾಘವೇಂದ್ರ,ಮೇಯರ್ ಸುನೀತಾ ಅಣ್ಣಪ್ಪ ಭೇಟಿ ಮಾಡಿ ಆರೋಗ್ಯ ವಿಚಾರಿಸಿದರು. ಈ ಸಂದರ್ಭದಲ್ಲಿ ಪಾಲಿಕೆ ಉಪಮೇಯರ್ ಶಂಕರ್(ಗನ್ನಿ), ಪ್ರಮುಖರಾದ ಕೆ ವಿ ಅಣ್ಣಪ್ಪ ಸೇರಿದಂತೆ ಅನೇಕರು ಹಾಜರಿದ್ದರು.

Ad Widget

Related posts

ಸಾಮಾಜಿಕ ಸಮಸ್ಯೆಗಳ ಮುಕ್ತಿಗೆ ಉನ್ನತ ಶಿಕ್ಷಣ ಮದ್ದು

Malenadu Mirror Desk

ನಾರಾಯಣಗುರು ಅಭಿವೃದ್ಧಿ ನಿಗಮ ರಚನೆ: ಸರಕಾರಕ್ಕೆ ರೇಣುಕಾನಂದ ಶ್ರೀ ಅಭಿನಂದನೆ, ಹೋರಾಟಕ್ಕೆ ಸಂದ ಜಯ ಎಂದ ಸ್ವಾಮೀಜಿ, ಅನುದಾನ ಬಿಡುಗಡೆಗೆ ಸರಕಾರಕ್ಕೆ ಒತ್ತಾಯ

Malenadu Mirror Desk

ಟವರ‍್ರೇ ಇಲ್ಲ , ಆನ್ ಲೈನ್ ಕ್ಲಾಸ್ ಎಲ್ಲಿ ?

Malenadu Mirror Desk

Leave a Comment

error: Content is protected !! ಮಲೆನಾಡು ಮಿರರ್‌ನಲ್ಲಿ ಪ್ರಕಟಗೊಂಡ ಸುದ್ದಿ, ಲೇಖನ, ಫೊಟೊಗಳನ್ನುಪೂರ್ವಾನುಮತಿಯಿಲ್ಲದೆ ನಕಲು ಮಾಡುವುದು ಕಾನೂನುಬಾಹಿರವಾಗಿದೆ.