Malenadu Mitra
ರಾಜ್ಯ ಶಿವಮೊಗ್ಗ

ಉಳುವವನೇ ಭೂ ಮಾಲೀಕನಾಗಿ ಮಾಡಿದ್ದು ಅರಸು, ದೇವರಾಜ ಅರಸುರವರ ೧೦೭ ನೇ ಜನ್ಮ ದಿನಾಚರಣೆಯಲ್ಲಿ ಡಾ.ಮೋಹನ್ ಚಂದ್ರಗುತ್ತಿ ಉಪನ್ಯಾಸ

ಬಸವಳಿದ ಜನರ ಆಶಾಕಿರಣವಾಗಿದ್ದವರು ಅರಸು ಎಂದು  ಸಹ್ಯಾದ್ರಿ ಕಲಾ ಕಾಲೇಜಿನ ಸಹಾಯಕ ಪ್ರಾಧ್ಯಾಪಕ ಡಾ.ಮೋಹನ ಚಂದ್ರಗುತ್ತಿ ಹೇಳಿದರು.
  ಶಿವಮೊಗ್ಗ ಜಿಲ್ಲಾಡಳಿತದ ವತಿಯಿಂದ ಶನಿವಾರ  ಸುವರ್ಣ ಸಾಂಸ್ಕೃತಿಕ ಭವನದಲ್ಲಿ ಏರ್ಪಡಿಸಲಾಗಿದ್ದ ಮಾಜಿ ಮುಖ್ಯಮಂತ್ರಿಗಳಾದ ಡಿ.ದೇವರಾಜ ಅರಸುರವರ ೧೦೭ ನೇ ಜನ್ಮ ದಿನಾಚರಣೆ ಹಾಗೂ ಡಿ.ದೇವರಾಜ ಅರಸು ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಡಿ.ದೇವರಾಜ ಅರಸುರವರ ಜೀವನ ಚರಿತ್ರೆ ಮತ್ತು ಸಾಧನೆಗಳ ಕುರಿತು ವಿಶೇಷ ಉಪನ್ಯಾಸ ನೀಡಿ ಅವರು ಮಾತನಾಡಿದರು.
  ದಿ.ದೇವರಾಜ ಅರಸು ಅವರೊಬ್ಬ ಸಾಮಾಜಿಕ ಚಿಕಿತ್ಸಕ. ಕಷ್ಟ ಕಾರ್ಪಣ್ಯದಿಂದ ವಿಕಾಸ ಹೊಂದಿದವರು. ಇಂದಿನ ಪೀಳಿಗೆಗೆ ಅಂದಿನ ಸಾಮಾಜಿಕ ಸ್ಥಿತಿಗತಿ, ಕಷ್ಟಗಳು ಗೊತ್ತಿಲ್ಲ. ಅವರಂತಹವರ ಹೋರಾಟದ ಫಲದಿಂದಲೇ ಇಂದು ನೀವೆಲ್ಲ ಉತ್ತಮ ಶಿಕ್ಷಣ ಪಡೆಯುತ್ತಿದ್ದೀರಿ. ಹಿಂದುಳಿದ ವರ್ಗಗಳ ಆತ್ಮಚೈತನ್ಯ ಎಂದು ಹೇಳಬಹುದಾದ ಹಾವನೂರು ವರದಿಯನ್ನು ಜಾರಿಗೆ ತಂದು ಹಿಂದುಳಿದವರಿಗೆ ಮೀಸಲಾತಿ ಕಲ್ಪಿಸಿದರು. ಅತ್ಯಂತ ಹೀನಾಯವಾದ ತಲೆ ಮೇಲೆ ಮಲ ಹೊರುವ ಪದ್ದತಿ ರದ್ದತಿಗೊಳಿಸಿದರು. ಕ್ರಾಂತಿಕಾರಿಯಾದ ಭೂಸುಧಾರಣೆ ಕಾಯ್ದೆ ಜಾರಿಗೆ ತಂದರು.

ಅಂಬೇಡ್ಕರ್‌ವರ ಚಿಂತನ ಕ್ರಮಗಳನ್ನು ಮುಂದುವರೆಸಿದ ಇಂತಹ ಮಹನೀಯರ ಜೀವನ ಚರಿತ್ರೆ, ಗುಣಗಳನ್ನು ತಿಳಿದು, ಅಳವಡಿಸಿಕೊಂಡಾಗ ನಮ್ಮ ಓದು ಮತ್ತು ಬುದ್ದಿಗೆ ಶಕ್ತಿ ಬರುತ್ತದೆ ಎಂದು ತಿಳಿಸಿದರು.
ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಮೇಯರ್ ಸುನೀತಾ ಅಣ್ಣಪ್ಪ, ಇಂದು ಹಿಂದುಳಿದ ವರ್ಗಗಳಿಗೆ ಸ್ಥಾನಮಾನ ಸಿಕ್ಕಿದೆ ಎಂದರೆ ಅದಕ್ಕೆ ಡಿ.ದೇವರಾಜ ಅರಸುರವರೇ ಕಾರಣ ಎಂದರು.

ಮಹಿಳಾ ಸ್ವಾವಲಂಬನೆ ಕೂಡ ಅವರಿಂದ ಸಾಧ್ಯವಾಗಿದೆ. ಪಾಲಿಕೆ ವತಿಯಿಂದ ಸಹ ಹೊಸದಾಗಿ ಮಹಿಳಾ ಬಜಾರ್ ನಿರ್ಮಿಸಲಾಗುತ್ತಿದ್ದು, ಮಹಿಳಾ ಉದ್ಯಮಿಗಳು ಅನೇಕರಿಗೆ ಕೆಲಸ ಕೊಡಬಹುದು. ಈ ನಿಟ್ಟಿನಲ್ಲಿ ಮುಂದೆ ಬರಬೇಕೆಂದು ತಿಳಿಸಿದರು.

 ಮಾಜಿ ವಿಧಾನ ಪರಿಷತ್ ಶಾಸಕರಾದ ಸಿದ್ದರಾಮಣ್ಣ ಮಾತನಾಡಿ, ಅನೇಕ ಕ್ರಾಂತಿಕಾರಿ ನಿಲುವುಗಳ ಮೂಲಕ ಹಿಂದುಳಿದ ವರ್ಗಗಳ ಉದ್ದಾರಕ್ಕೆ ನಿಂತ ಬದ್ದ ಮತ್ತು ಧೀಮಂತ ವ್ಯಕ್ತಿ ಅರಸುರವರು. ಹಿಂದುಳಿದವರ ಮೀಸಲಾತಿ ಒಂದು ಸಂವಿಧಾನಬದ್ದ ಹಕ್ಕು ಮತ್ತು ಆಶಯವಾಗಿದೆ ಎಂದ ಅವರು ಸರ್ಕಾರ ಕೈಗೊಂಡಿರುವ ಸಾಮಾಜಿಕ-ಶೈಕ್ಷಣಿಕ ವರದಿಯು ಸ್ವೀಕೃತವಾಗಿ, ಅಧ್ಯಯನ ನಡೆದು ಅನುಷ್ಟಾನಗೊಳ್ಳಬೇಕೆಂದು ಮನವಿ ಮಾಡಿದರು.

ಜಿಲ್ಲಾಧಿಕಾರಿ ಡಾ.ಆರ್.ಸೆಲ್ವಮಣಿ ಅಧ್ಯಕ್ಷತೆ ವಹಿಸಿದ್ದರು.  ಜಯಂತಿ ಅಂಗವಾಗಿ ಸುವರ್ಣ ಸಂಸ್ಕೃತಿ ಭವನದ ಆವರಣದಲ್ಲಿ ವಿವಿಧ ಇಲಾಖೆಗಳ ಮಳಿಗೆಗಳನ್ನು ತೆರೆಯಲಾಗಿದ್ದು, ಮಹಾಪೌರರು ಹಾಗೂ ಜಿಲ್ಲಾಧಿಕಾರಿಗಳು ಚಾಲನೆ ನೀಡಿದರು.  ವೇದಿಕೆ ಕಾರ್ಯಕ್ರಮದಲ್ಲಿ ಎಸ್‌ಎಸ್‌ಎಲ್‌ಸಿ ಮತ್ತು ಪಿಯುಸಿ ಯಲ್ಲಿ ಅತಿ ಹೆಚ್ಚು ಅಂಕ ಪಡೆದ ಹಿಂದುಳಿದ ವರ್ಗಗಳ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು.

ವೇದಿಕೆಯಲ್ಲಿ ಸವಿತಾ ಸಮಾಜದ ಅಧ್ಯಕ್ಷ ಎಂ.ವಿಜಯಭಾಸ್ಕರ್, ದೇವರಾಜ ಅರಸು ಅಭಿವೃದ್ದಿ ನಿಗಮದ ನಿರ್ದೇಶಕ ಮಾಲತೇಶ್, ಜಿಲ್ಲಾ ಹಿಂದುಳಿದ ಒಕ್ಕೂಟದ ಅಧ್ಯಕ್ಷ ರಾಜೇಶ್, ಕಾರ್ಯದರ್ಶಿ ಅಶೋಕ್, ಜಿಲ್ಲಾ ಮೊಗವೀರ ಸಮಾಜದ ಅಧ್ಯಕ್ಷ ಅಣ್ಣಪ್ಪ, ಡಿಎಸ್‌ಎಸ್ ರಾಜ್ಯ ಸಂಚಾಲಕ ಗುರುಮೂರ್ತಿ, ಗವಿಸಿದ್ದಪ್ಪ ತೆಗ್ಗಿನಮಠ, ಒಕ್ಕೂಟಗಳ ಪದಾಧಿಕಾರಿಗಳು, ಜಿಲ್ಲಾ ಮಟ್ಟದ ಅಧಿಕಾರಿಗಳು ಹಾಜರಿದ್ದರು.


ಪ್ರಶಸ್ತಿ ಪ್ರದಾನ  
ಜಿಲ್ಲಾ ಮಟ್ಟದ ಡಿ.ದೇವರಾಜ ಅರಸು ಪ್ರಶಸ್ತಿಯನ್ನು ಜಿಲ್ಲಾ ಹಿಂದುಳಿದ ವರ್ಗಗಳ ಜಾತಿ ಒಕ್ಕೂಟದ ಅಧ್ಯಕ್ಷ ವಿ.ರಾಜು ಇವರಿಗೆ ಪ್ರದಾನ ಮಾಡಲಾಯಿತು. ಪ್ರಶಸ್ತಿಯೊಂದಿಗೆ ನೀಡಲಾದ ರೂ.೫೦ ಸಾವಿರವನ್ನು ಹಿಂದುಳಿದ ವರ್ಗಗಳ ವಿದ್ಯಾರ್ಥಿಗಳ ವಿವಿಧ ಶೈಕ್ಷಣಿಕ ಚಟುವಟಿಕೆಗೆ ವಿನಿಯೋಗಿಸಿಕೊಳ್ಳಲು ನೀಡುವುದಾಗಿ  ವಿ.ರಾಜು ಘೋಷಿಸಿದರು.

Ad Widget

Related posts

ಅಕ್ರಮ ಗಣಿಗಾರಿಕೆ ವಿರುದ್ಧ ಕಾಂಗ್ರೆಸ್ ಪ್ರತಿಭಟನೆ

Malenadu Mirror Desk

ಸರಕಾರಿ ಕಾರ್ಯಕ್ರಮ ಎಲ್ಲರೂ ಬನ್ನಿ, ವಿಮಾನ ನಿಲ್ದಾಣ ಉದ್ಘಾಟನೆಗೆ ಜಿಲ್ಲಾಧಿಕಾರಿ ಡಾ.ಆರ್.ಸೆಲ್ವಮಣಿ ಆಹ್ವಾನ

Malenadu Mirror Desk

ಕೋವಿಡ್ ಮಾರ್ಗಸೂಚಿ: ಶಿವಮೊಗ್ಗ ಅಘೋಷಿತ ಬಂದ್

Malenadu Mirror Desk

Leave a Comment

error: Content is protected !! ಮಲೆನಾಡು ಮಿರರ್‌ನಲ್ಲಿ ಪ್ರಕಟಗೊಂಡ ಸುದ್ದಿ, ಲೇಖನ, ಫೊಟೊಗಳನ್ನುಪೂರ್ವಾನುಮತಿಯಿಲ್ಲದೆ ನಕಲು ಮಾಡುವುದು ಕಾನೂನುಬಾಹಿರವಾಗಿದೆ.