ಮಲೆನಾಡಿನಾದ್ಯಂತ ಭೂಮಿ ಹುಣ್ಣಿಮೆ ಹಬ್ಬವನ್ನು ಭಾನುವಾರ ಸಡಗರ ಸಂಭ್ರಮದಿಂದ ಆಚರಿಸಲಾಯಿತು. ಮಹಾನವಮಿ ವಿಜಯದಶಮಿ ಕಳೆದು ಐದನೇ ದಿನ ಬರುವ ಹುಣ್ಣಿಮೆಯಲ್ಲಿ ಬಯಲು ಸೀಮೆಯಲ್ಲಿ ಸೀಗೆ ಹುಣ್ಣಿಮೆ ಎಂದು ಆಚರಿಸಿದರೆ ಮಲೆನಾಡಿನಲ್ಲಿ ಭೂಮಿ ಹುಣ್ಣಿಮೆ ಎಂದು ಆಚರಿಸುತ್ತಾರೆ. ಈ ಹುಣ್ಣಿಮೆ ಹೊತ್ತಿಗೆ ರೈತರು ಬೆಳೆದ ಫಸಲು ಹೂಬಿಟ್ಟು ತೆನೆ ಕಟ್ಟುವ ಕಾಲವಾಗಿರುತ್ತದೆ. ಹಿಂದೆ ಭತ್ತವನ್ನೇ ಹೆಚ್ಚಾಗಿ ಬೆಳೆಯುವ ಕಾಲದಲ್ಲಿ ಸೀಗೆ ಹುಣ್ಣಿಮೆ ಹೊತ್ತಿಗೆ ಭತ್ತ ಹೊಡೆಯಾಗಿರುತ್ತದೆ. ಅನ್ನ ಕೊಡುವ ಭೂಮಿತಾಯಿಯು ತುಂಬು ಬಸಿರಿ ಎಂಬ ದೈವೀ ಭಾವನೆಯನ್ನು ಭೂತಾಯಿಯೊಂದಿಗೆ ಹೊಂದಿರುವ ರೈತ ಗರ್ಭಿಣಿ ಭೂಮಿಯ ಬಯಕೆ ತೀರಿಸುವ ಹಬ್ಬವೇ ಇದೆಂದು ಸಂಭ್ರಮಿಸುತ್ತಾರೆ.
ಕಾಡು ಮೇಡಿನಲ್ಲಿನ ದೈವಗಳೆಂದೇ ಪೂಜಿಪ ಮಲೆನಾಡಿನ ಜನರಲ್ಲಿ ಅತ್ಯಂತ ಶ್ರೀಮಂತ ಆಚರಣೆಗಳಿವೆ. ನೀರು ಮತ್ತು ಪ್ರಕೃತಿಯನ್ನು ಆರಾಧಿಸುವ ಈ ಸಮುದಾಯ ಭೂಮಿಯನ್ನು ತಮ್ಮನ್ನು ಪೊರೆಯ ತಾಯಿ ಎಂದು ದೈವಿಕ ಭಾವನೆ ಹೊಂದಿದ್ದಾರೆ. ಕೃಷಿಯನ್ನೇ ಮುಖ್ಯ ಕಸುಬಾಗಿಸಿಕೊಂಡಿರುವ ಮಲೆನಾಡಿನಲ್ಲಿ ಸಂಕ್ರಮಣವನ್ನು ಸುಗ್ಗಿ ಹಬ್ಬವಾಗಿ ಆಚರಿಸಿದರೆ, ತಾವು ಹಾಕಿದ ಕಾಳು ಕಡ್ಡಿ ಬೆಳೆದು ಹೊಡೆಯಾಗುವ ಹೊತ್ತಿನಲ್ಲಿ ಭೂ ತಾಯಿ ಗರ್ಭವತಿ ಎಂದು ಬಗೆಬಗೆಯ ಅಡುಗೆ ಮಾಡಿ ಭೂಮಿಯ ಬಯಕೆ ತೀರಿಸುವುದು ಪರಂಪರಾಗತವಾಗಿ ನಡೆದುಕೊಂಡು ಬಂದ ಪದ್ದತಿ.
ರಾತ್ರಿಪೂರ ಅಡುಗೆ:
ಹುಣ್ಣಿಮೆ ಹಿಂದಿನ ದಿನ ಮಲೆನಾಡಿನ ಹೆಣ್ಣುಮಕ್ಕಳು ರಾತ್ರಿ ಪೂರಾ ಅಡುಗೆ ಮಾಡುತ್ತಾರೆ. ಭೂತಾಯಿಗೆ ಎಡೆ ಹಾಕಲು ಏಳು ರೀತಿಯ ಪಲ್ಯ, ಕಡುಬು, ಬುತ್ತಿ, ಸಹಿಕಜ್ಜಾಯ, ಕುರುಕುಲು ತಿಂಡಿ ಸೇರಿದಂತೆ ನಾನಾ ಬಗೆಯ ಖಾದ್ಯಗಳನ್ನು ತಯಾರು ಮಾಡುತ್ತಾರೆ. ಹುಣ್ಣಿಮೆಯ ದಿನ ನಸುಕಿನಲ್ಲಿಯೇ ಗದ್ದೆ-ತೋಟಗಳಿಗೆ ಕುಟುಂಬ ಸಮೇತ ಹೋಗಿ ಪೈರನ್ನು ಪೂಜೆ ಮಾಡಿ ಭೂತಾಯಿಗೆ ಎಡೆ ಹಾಕುತ್ತಾರೆ. ಕುಟುಂಬದ ಸದಸ್ಯರೆಲ್ಲರೂ ಕೂಡಿ ಗದ್ದೆಯಲ್ಲಿಯೇ ಕುಳಿತು ಊಟ ಮಾಡಿ ಸಂಭ್ರಮಿಸುತ್ತಾರೆ. ಈ ದಿನ ಭೂಮಿಯನ್ನು ಘಾಸಿಗೊಳಿಸುವಂತಹ ಯಾವುದೇ ಕೆಲಸವನ್ನು ಮಾಡುವುದಿಲ್ಲ.
ಈ ವರ್ಷ ಅತೀವೃಷ್ಟಿಯಿಂದ ಬಹುತೇಕ ಬೆಳೆಗಳು ಸರಿಯಾಗಿ ಬಂದಿಲ್ಲ. ಆದರೆ ನಂಬಿದ ಭೂಮಿ ಕೈಬಿಡುವುದಿಲ್ಲ ಎಂದು ವಾಡಿಕೆಯಂತೆ ಪೂಜೆ ಮಾಡಿ ಭೂತಾಯಿಗೆ ಗೌರವ ಸಲ್ಲಿಸಿದ ದೃಶ್ಯ ಮಲೆನಾಡಿನಾದ್ಯಂತ ಕಂಡು ಬಂತು.
ಚರಗ ಚೆಲ್ಲುವುದು:
ರೈತ ಸಮುದಾಯ ಮನೆಯಲ್ಲಿ ಮಾಡಿದ ಎಲ್ಲಾ ಅಡುಗೆಯನ್ನು ಚರಗ ಚೆಲ್ಲುವ ಬುಟ್ಟಿಯಲ್ಲಿ ತುಂಬಕೊಂಡು ತಮ್ಮ ಹೊಲಗಳಲ್ಲಿ ಬೀರುತ್ತಾರೆ. ಹಚ್ಚಂಬಲಿ.. ಹರಿವೆ ಸೊಪ್ಪು,,, ಹಿತ್ತಲಾಗಿನ ಹೀರೆಕಾಯಿ,,, ಬಡವನ ಮನೆ ಅಡುಗೆ ಉಣ್ಣು ತಾಯಿ…. ಎಂದು ಪ್ರಾರ್ಥಿಸುತ್ತ ಭೂ ತಾಯಿಗೆ ನಮನ ಸಲ್ಲಿಸುವ ರೀತಿ ಭೂಮಿ ಮತ್ತು ರೈತನಿಗಿರುವ ಅನುಬಂಧವನ್ನು ತೋರಿಸುತ್ತದೆ.
ಬುಮ್ಮಣ್ಣಿ ಬುಟ್ಟಿ:
ಮಲೆನಾಡಿನಲ್ಲಿ ಅದರಲ್ಲೂ ದೀವರು, ಮಡಿವಾಳರು ಮತ್ತು ಪರಿಶಿಷ್ಟ ಸಮುದಾಯದಲ್ಲಿ ಬೂಮಣ್ಣಿ ಬುಟ್ಟಿ ಚಿತ್ತಾರ ಪ್ರಚಲಿತದಲ್ಲಿದೆ. ಹಬ್ಬ ಹದಿನೈದು ದಿನ ಇರುವಾಗಲೇ ಅಕ್ಕಿ ಹಿಟ್ಟು ಮತ್ತು ಕೆಮ್ಮಣ್ಣುಗಳಿಂದ ಪುಂಡಿ ನಾರಿನ ಕುಂಚದ ಮೂಲಕ ಬಿದಿರು ಬುಟ್ಟಿಯ ಮೇಲೆ ಚಿತ್ತಾರ ಬರೆಯಲಾಗುತ್ತದೆ. ದೇಸೀ ಕಲೆಯಾದ ಈ ಚಿತ್ತಾರ ಕಲೆ ಮಲೆನಾಡಿನ ಹೆಣ್ಣುಮಕ್ಕಳಿಗಿರುವ ಕಲಾ ನೈಪುಣ್ಯತೆಯನ್ನು ತೋರಿಸುತ್ತದೆ. ಈ ಚಿತ್ತಾರ ಬರೆದ ಬುಟ್ಟಿಯಲ್ಲಿಯೇ ಬಗೆಬಗೆಯ ಖಾದ್ಯಗಳನ್ನು ತುಂಬಿಕೊಂಡು ಪೂಜೆಗೆ ಹೋಗುವುದೇ ಒಂದು ಸಂಭ್ರಮ ಆ ರೀತಿಯ ಸಡಗರ ಸಂಭ್ರಮದ ಹಬ್ಬವನ್ನು ಮಲೆನಾಡಿಗರು ಆಚರಿಸಿ ಸಂಭ್ರಮಿಸಿದರು.