ಸಾಗರ,ನ.೧೭: ಮಲೆನಾಡ ಜನರ ಬದುಕಿನ ಮೂಲವೇ ಅಡಕೆ, ಅದನ್ನು ಕಳೆದುಕೊಂಡರೆ ಮತ್ತೆ ಜೀವನ ಇಲ್ಲ, ಪ್ರಸ್ತುತ ಅಡಕೆಗೆ ಬಂದಿರುವ ಎಲೆಚುಕ್ಕಿ ರೋಗದಿಂದಾಗಿ ಇಲ್ಲಿನ ಜನರಿಗೆ ಜೀವನ್ಮರಣದ ಪ್ರಶ್ನೆ ಎದುರಾಗಿದೆ ಹಾಗಾಗಿ ಇದಕ್ಕೊಂದು ಪರಿಹಾರ ಕಂಡುಕೊಳ್ಳುವುದಕ್ಕೆ ಹೋರಾಟವೇ ಮಾರ್ಗ ಎಂದು ಸಿಗಂದೂರು ದೇವಾಲಯದ ಧರ್ಮದರ್ಶಿ ರಾಮಪ್ಪ ಹೇಳಿದರು.
ಎಲೆಚುಕ್ಕಿ ರೋಗಕ್ಕೆ ಪರಿಹಾರ ಮತ್ತು ಅಡಕೆ ಆಮದು ನಿಷೇಧ ಸೇರಿದಂತೆ ಹಲವು ಬೇಡಿಕೆಗಳ ಕುರಿತು ಸರಕಾರದ ಗಮನ ಸೆಳೆಯುವ ಉದ್ದೇಶದಿಂದ ಬೆಳೆಗಾರರ ಪರವಾಗಿ ಗುರುವಾರ ರೈತ ಹಾಗೂ ಕೂಲಿಕಾರ್ಮಿಕ ಹಿತ ರಕ್ಷಣಾ ವೇದಿಕೆಯಿಂದ ಏರ್ಪಡಿಸಿದ್ದ ಆವಿನಹಳ್ಳಿಯಿಂದ -ಸಾಗರದ ಪಟ್ಟಣದ ವರೆಗಿನ ಪ್ರತಿಭಟನಾ ಪಾದಯಾತ್ರೆಗೆ ಚಾಲನೆ ನೀಡಿದ ವೇದಿಕೆಯಲ್ಲಿ ಅವರು ಮಾತನಾಡಿದರು.
ಹೋರಾಟ ಮಾಡದೆ ಬೇರೆ ಗತಿ ಇಲ್ಲ, ಕೊಳೆ ರೋಗ ಬಂದರೆ ಅಲ್ಪಸ್ವಲ್ಪ ಬೆಳೆಯಾದರೂ ನಮಗೆ ಸಿಕ್ಕೀತು ಆದರೆ ಎಲೆ ಚುಕ್ಕಿ ಬೆಳೆ ಮಾತ್ರ ಅಲ್ಲ ತೋಟವನ್ನೇ ಕಳೆದುಕೊಳ್ಳಬೇಕಾದ ಸ್ಥಿತಿ ಇದೆ. ನಮ್ಮನ್ನು ಆಳುವವರಿಗೆ ನಾವು ಮತ ನೀಡಿದ್ದು ನಮ್ಮ ಕಷ್ಟಕ್ಕೆ ಸ್ಪಂದಿಸಿ ಎನ್ನುವ ಕಾರಣಕ್ಕೆ ಹಾಗಾಗಿ ಮತ ಕೊಟ್ಟ ನಾವು ನಮ್ಮ ಧ್ವನಿಯಿಂದಲೇ ನ್ಯಾಯ ಪಡೆಯಬೇಕಿದೆ, ಮತ್ತು ಹೋರಾಟ ಇನ್ನಷ್ಟು ಗಟ್ಟಿಗೊಳಿಸಬೇಕಿದೆ ಎಂದರು.
ಅಡಕೆಯೇ ಜನರ ಬದುಕಾಗಿದೆ: ಕಾಗೋಡು
ಮಾಜಿ ಸಚಿವ ಕಾಗೋಡು ತಿಮ್ಮಪ್ಪ ಮಾತನಾಡಿ, ಕಳೆದ ೨೦ ವರ್ಷಗಳ ಹಿಂದೆ ಸೀಮಿತವಾದ ಅಡಕೆ ಬೆಳೆಗಾರರಿದ್ದರು. ಈಗ ಇಲ್ಲಿನ ಕೃಷಿಕರ ಬದುಕೇ ಅಡಕೆ ಎನ್ನುವಷ್ಟು ಎಲ್ಲರೂ ಅಡಕೆಯ ಮೇಲೆ ಅವಲಂಬಿಸಿದ್ದಾರೆ. ಬೆಳೆಗಾರ ಮತ್ತು ಕೂಲಿಕಾರ ಇಬ್ಬರ ಜೀವನವೂ ಅಡಕೆ ಬೆಳೆಯನ್ನು ನಂಬಿಯೇ ನಡೆಯುತ್ತಿದೆ ಹೀಗಿರುವಾಗ ಅಡಕೆ ಬೆಳೆ ಮತ್ತು ತೋಟ ಕಳೆದುಕೊಳ್ಳುವವರ ಮುಂದೆ ಮುಂದೇನು ಎನ್ನುವ ಪ್ರಶ್ನೆ ಸಹಜವಾಗಿ ಬಂದಿದೆ. ಇದಕ್ಕೆ ಉತ್ತರ ಸರಕಾರ ನೀಡಬೇಕು, ಹಾಗಾಗಿ ಇಂತಹ ಹೋರಾಟ ಗಳು ಅವಾರ್‍ಯವಾಗಿದೆ ಮತ್ತು ಹೋರಾಟದಿಂದಲೇ ಅನೇಕ ವಿಷಯದಲ್ಲಿ ನ್ಯಾಯ ಕೊಡಿಸಿರುವ ಉದಾಹರಣೆ ನಮ್ಮ ಮುಂದಿದೆ ಎಂದರು.
ಮುಖಂಡ ಮಲ್ಲಿಕಾರ್ಜುನ್ ಹಕ್ರೆ ಮಾತನಾಡಿ, ಇತ್ತ ಎಲೆ ಚುಕ್ಕಿ ರೋಗದ ಸಮಸ್ಯೆ ಒಂದು ಕಡೆಯಾದರೆ ಅಡಕೆ ಆಮದು ಮಾಡಿಕೊಳ್ಳುವ ಮೂಲಕ ದರ ಕುಸಿತವೂ ಬೆಳೆಗಾರರನ್ನು ಕುಸಿಯುವಂತೆ ಮಾಡಿದೆ. ಕೇಂದ್ರ ಸರ್ಕಾರ ಕಳೆದ ೨ ತಿಂಗಲ ಹಿಂದೆ ಬೂತಾನ್‌ನಿಂದ ಅಡಿಕೆ ಆಮದು ಆದೇಶ ಮಾಡಿದ ಮಾರನೆ ದಿನವೇ ಅಡಿಕೆಗೆ ಕ್ವಿಂಟಾಲ್‌ಗೆ ೩೦೦೦ ರೂ ದರ ಕುಸಿತಕಂಡಿತು. ಈಗ ಕೆಂಪಡಿಕೆಗೆ ಕ್ವಿಂಟಾಲ್‌ಗೆ ೧೦೦೦೦ ರೂ ಬೆಲೆ ಕುಸಿತ ಕಂಡಿದೆ.ಚಾಲಿ ಅಡಿಕೆಗೆ ೫೦೦೦ ರೂ ಕುಸಿತವಾಗಿರುವುದು ಮಲೆನಾಡಿನ ದೇಶಿ ರೈತ ಬೆಳೆಗಾರರ ಮರಣಶಾಸನವಾದಂತಾಗಿದೆ ಎಂದು ಆರೋಪಿಸಿದರು.
ಸರ್ಕಾರ ತಕ್ಷಣ ಬೂತಾನ್ ಅಡಿಕೆ ಆಮದು ಆದೇಶ ರದ್ದುಪಡಿಸಬೇಕು. ಆಮದು ಶುಂಕ ೨೬೨ ರೂಗಳ ತೆರಿಗೆಯ ಬದಲಿಗೆ ೩೬೨ ರೂಗಳ ತೆರಿಗೆ ವಿಧಿಸುವ ಮೂಲಕ ಭಾರತದ ಅಡಿಕೆ ಬೆಳೆಗಾರರ ರಕ್ಷಣೆಗೆ ಸಕಾಧರಗಳು ದಾವಿಸಬೇಕು ಎಂದು ಒತ್ತಾಯಿಸಿದರು.
ಇನ್ನು ಎಲೆ ಚುಕ್ಕಿ ಪರಿಹಾರ ಕಂಡುಕೊಳ್ಳುವುದಕ್ಕೆ ದೆಹಲಿಯ ಐಎನ್‌ಆರ್ ಸಂಶೋಧನಾ ಕೇಂದ್ರಕ್ಕೆ ವಹಿಸಬೇಕು,ಇಲ್ಲಿನ ವಿವಿಗಳಿಗೆ ವಹಿಸಿ ಸುಮ್ಮನೆ ತೋಟಗಳನ್ನು ಪರಿಶೀಲಿಸಿದರೆ ಪರಿಹಾರ ಸಿಕ್ಕಲ್ಲ ಎಂದರು.
ಪ್ರತಿಭಟನೆಯನ್ನು ನಾಗೇಂದ್ರ ಭಟ್ ಉದ್ಘಾಟಿಸಿದರು. ಡಾ. ರಾಜನಂದಿನಿ ಕಾಗೋಡು, ತಿ.ನಾ. ಶ್ರೀನಿವಾಸ, ರೈತ ಸಂಘದ ಅಧ್ಯಕ್ಷ ಅರುಣ್‌ಕುಮಾರ್, ಭೀಮನಕೋಣೆ ಕೆ.ಎಸ್ ಸುಬ್ರಾವ್, ಇಂದೂಧರ ಗೌಡ, ಪಡವಗೋಡು ಸುಬ್ಬಣ್ಣ,ರವಿ ಗೌಡ, ಆದರ್ಶ ಭಟ್, ಮಹಮ್ಮದ್ ಖಾಸಿಂ, ಹರೀಶ್ ಘಂಟೆ,ಸುಮಂಗಲಾರಾಮಕೃಷ್ಣ,ಎಲ್.ಟಿ.ತಿಮ್ಮಪ್ಪ,ಮಕ್ಬುಲ್‌ಅಹಮದ್,,ಮಧು ಮಾಲತಿ,ಅಮೃತೇಶ್,ನಾಗರಾಜ್‌ಮಜ್ಜಿಗೆರೆ,ಶ್ರೀಧರ ಈಳಿ ಮತ್ತಿತರರು ಭಾಗವಹಿಸಿದ್ದರು.