Malenadu Mitra
ರಾಜ್ಯ ಶಿವಮೊಗ್ಗ

ಶರಾವತಿ  ಸಂತ್ರಸ್ತರ ವಿಶ್ವಾಸಕ್ಕೆ ಪಕ್ಷಗಳ ಪೈಪೋಟಿ
ಅಡಕೆ ಎಲೆಚುಕ್ಕಿ ರೋಗ,  ಶರಾವತಿ ಮುಳುಗಡೆ ಸಂತ್ರಸ್ತರ ಸಮಸ್ಯೆಗಳೇ ಚುನಾವಣೆ ವಿಷಯ

ನಾಗರಾಜ್ ನೇರಿಗೆ

ಮಲೆನಾಡಿನ ಪ್ರಮುಖ ವಾಣಿಜ್ಯ ಬೆಳೆ ಅಡಕೆಗೆ ಬಂದಿರುವ ಎಲೆಚುಕ್ಕಿ ರೋಗ ಹಾಗೂ ಅಡಕತ್ತರಿಯಲ್ಲಿರುವ ಶರಾವತಿ ಸಂತ್ರಸ್ತರ ಭೂಮಿಯ ಹಕ್ಕಿನ ಪ್ರಶ್ನೆ ೨೦೨೩ ರ ವಿಧಾನ ಸಭೆ ಚುನಾವಣೆಯಲ್ಲಿ ಪ್ರಮುಖ ವಿಷಯವಾಗಲಿದ್ದು, ಎರಡೂ ರಾಷ್ಟ್ರೀಯ ಪಕ್ಷಗಳೂ ಈ  ಸಮಸ್ಯೆಗಳನ್ನು ಮುಂದಿಟ್ಟುಕೊಂಡು ಮತಕೊಯ್ಲಿಗೆ ಬಿರುಸಿನ ತಯಾರಿ ನಡೆಸುತ್ತಿವೆ.
ಬಿಜೆಪಿ ಮತ್ತು ಕಾಂಗ್ರೆಸ್ ಪಕ್ಷಗಳು ಪೈಪೋಟಿಗೆ ಬಿದ್ದವರಂತೆ ಸಂತ್ರಸ್ತರ ಗಮನ ಸೆಳೆಯುವಲ್ಲಿ ನಿರತವಾಗಿವೆ. ಆರು ದಶಕಗಳ ಹಿಂದಿನ ಸಮಸ್ಯೆಯನ್ನು ಇತ್ಯರ್ಥಪಡಿಸಲು ಇಚ್ಚಾಶಕ್ತಿ ತೋರದ ಆಡಳಿತ ನಡೆಸಿದ ಸರಕಾರಗಳು ಮತ್ತು ರಾಜಕೀಯ ನಾಯಕರುಗಳು ಚುನಾವಣೆ ಹೊತ್ತಿನಲ್ಲಿ ಸಂತ್ರಸ್ತರ ಮೇಲೆ ಇನ್ನಿಲ್ಲದ ಕಕ್ಕುಲಾತಿ ತೋರುತ್ತಿದ್ದಾರೆ. ಹಿಂದಿನ ಕಾಂಗ್ರೆಸ್ ಸರಕಾರ ಶರಾವತಿ ಸಂತ್ರಸ್ತರ  ಭೂಮಿಗೆ ಹಕ್ಕುಪತ್ರ ಕೊಡಲು ಮಾಡಿದ್ದ ಡಿನೋಟಿಫಿಕೇಷ್ ಅನ್ನು ಹಾಲಿ ರಾಜ್ಯ ಸರಕಾರ ರದ್ದು ಪಡಿಸಿದೆ. ಇದನ್ನು ಖಂಡಿಸಿ ಕಾಂಗ್ರೆಸ್ ಇದೇ ನ.೨೮ ರಂದು ದೊಡ್ಡ ಮಟ್ಟದ ಹೋರಾಟ ನಡೆಸಲು ಸಂತ್ರಸ್ತರ ಸಂಘಟನೆಯಲ್ಲಿ ನಿರತವಾಗಿದೆ. ಸಮಸ್ಯೆಯ ಗಂಭೀರತೆ ಮತ್ತು ಮುಂಬರುವ ವಿಧಾನ ಸಭೆ ಮತ್ತು ಲೋಕ ಸಭೆ ಚುನಾವಣೆಯ ಮೇಲೆ ಬೀರಬಹುದಾದ ಪರಿಣಾಮವನ್ನು ಗಮನಿಸಿರುವ ಬಿಜೆಪಿ ಕೂಡಾ ಇನ್ನಿಲ್ಲದ ಕಸರತ್ತು ಮಾಡುತ್ತಿದೆ.
ಬಿಜೆಪಿ ಸಭೆ :
ಕಾಂಗ್ರೆಸ್ ಪಕ್ಷ ಹೋರಾಟ ಹಮ್ಮಿಕೊಂಡಿರುವ ಕಾರಣ ಅದಕ್ಕೆ ಠಕ್ಕರ್ ಕೊಡಲು ಬಿಜೆಪಿ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ನೇತೃತ್ವದಲ್ಲಿ ಸಂತ್ರಸ್ತರ ಪೂರ್ವಭಾವಿ ಸಭೆ ನಡೆಸಿದ್ದು, ಹದಿನೈದು ದಿನದಲ್ಲಿ ಸಮಸ್ಯೆ ಇತ್ಯರ್ಥಮಾಡುವುದಾಗಿ ಘೋಷಣೆ ಮಾಡಿದ್ದಾರೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಶುಕ್ರವಾರ ಶಿವಮೊಗ್ಗ ನಗರಕ್ಕೆ ಭೇಟಿ ನೀಡುತಿದ್ದು,  ಈ ಸಂದರ್ಭ ಮುಖ್ಯಮಂತ್ರಿ ಮುಂದೆ ಸಂತ್ರಸ್ತರ ಹಕ್ಕೊತ್ತಾಯ ಮಂಡಿಸುವ ತಯಾರಿಯನ್ನು ಬಿಜೆಪಿ ಮಾಡಿಕೊಂಡಿದೆ.
ಸಮಸ್ಯೆ ಏನು?
ರಾಜ್ಯಕ್ಕೆ ಬೆಳಕು ಕೊಡಲು ೧೯೬೦ ರ ದಶಕದಲ್ಲಿ ಸಾಗರ ತಾಲೂಕು ಲಿಂಗನಮಕ್ಕಿಯಲ್ಲಿ ಜಲ ವಿದ್ಯುತ್ ಉತ್ಪಾದನೆಯ ಉದ್ದೇಶಕ್ಕೆ ನಿರ್ಮಿಸಿದ್ದ  ಡ್ಯಾಂನಿಂದ ಮುಳುಗಡೆಯಾಗಿದ್ದ  ಸಾವಿರಾರು ಕುಟುಂಬಗಳಿಗೆ ಶಿವಮೊಗ್ಗ ಜಿಲ್ಲೆಯ ಸಾಗರ, ಹೊಸನಗರ, ತೀರ್ಥಹಳ್ಳಿ, ಶಿವಮೊಗ್ಗ ತಾಲೂಕು ಹಾಗೂ ಕಾರವಾರ ಜಿಲ್ಲೆಯ ಕೆಲ ಸ್ಥಳಗಳಲ್ಲಿ ಪುನರ್ವಸತಿ ಕಲ್ಪಿಸಲಾಗಿತ್ತು. ಶಿವಮೊಗ್ಗ ಜಿಲ್ಲೆಯಲ್ಲಿಯೇ ಹತ್ತು ಸಾವಿರ ಎಕರೆ ಭೂಮಿಯನ್ನು ಮಂಜೂರು ಮಾಡಿ ಮೂರು ಸಾವಿರಕ್ಕೂ ಹೆಚ್ಚು ಕುಟುಂಬಗಳಿಗೆ ಜಮೀನು ಮತ್ತು ನಿವೇಶನಗಳನ್ನು ನೀಡಲಾಗಿತ್ತು.  ಆದರೆ ಅಂದು ಅರಣ್ಯ ಇಲಾಖೆಯಿಂದ ಬಿಡುಗಡೆಯಾಗಿದ್ದ  ಭೂಮಿಯನ್ನು ಸರಕಾರಗಳು ಕಂದಾಯ ಇಲಾಖೆಯ ದಾಖಲೆಗಳಲ್ಲಿ ಸ್ಥಿರೀಕರಿಸಿರಲಿಲ್ಲ. ೧೯೮೦ ರ ಅರಣ್ಯ ಸಂರಕ್ಷಣಾ ಕಾಯಿದೆ ಮತ್ತು ಆ ಬಳಿಕ ಬಂದ ಅರಣ್ಯ ಕಾಯಿದೆಗಳಿಂದಾಗಿ ಶರಾವತಿ ಸಂತ್ರಸ್ತರಿಗೆ ಬಿಡುಗಡೆಯಾಗಿದ್ದ ಭೂಮಿಯ ದಾಖಲೆಗಳಲ್ಲಿ ಅರಣ್ಯ ಭೂಮಿ ಎಂದೇ ನಮೂದಾಗುತ್ತಾ ಬಂದಿತ್ತು. ಈ ನಡುವೆ ಅರಣ್ಯ ಇಲಾಖೆ ನಡೆಸಿದ್ದ ಇಂಡೀಕರಣ ಪ್ರಕ್ರಿಯೆ ಬಳಿಕ ಸಂತ್ರಸ್ತರು ಕಾನೂನು ಕುಣಿಕೆಯಲ್ಲಿ ಸಿಕ್ಕಿಹಾಕಿಕೊಂಡಿದ್ದರು.  ಹಿಂದಿನ ಕಾಂಗ್ರೆಸ್ ಸರಕಾರದಲ್ಲಿ ಕಂದಾಯ ಸಚಿವರಾಗಿದ್ದ ಕಾಗೋಡು ತಿಮ್ಮಪ್ಪ ಅವರು, ೨೦೧೬-೧೭ರಲ್ಲಿ ೧೯೫೨ ರಿಂದ ಶರಾವತಿ ಸಂತ್ರಸ್ಥರಿಗೆ ಮಂಜೂರಾಗಿದ್ದ  ಭೂಮಿಯನ್ನು ಅರಣ್ಯ ಇಲಾಖೆಯಿಂದ ಬಿಡಿಸಲು ಡಿನೋಟಿಫಿಕೇಷನ್ ಮಾಡಿತ್ತು.
ಸಮಾಜಪರಿವರ್ತನಾ ಟ್ರಸ್ಟ್‌ನ ಗಿರೀಶ್ ಆಚಾರ್ಯ ಎಂಬುವರು ೨೦೧೭ ರಲ್ಲಿ  ಕೇಂದ್ರ ಸರಕಾರದ ಅನುಮತಿ ಪಡೆಯದೇ ಮಾಡಿರುವ ಡಿನೋಟಿಫಿಕೇಷನ್ ಕಾನೂನು ಬಾಹಿರವಾಗಿದ್ದು, ಇದನ್ನು ರದ್ದು ಮಾಡುವಂತೆ ಕೋರಿ ರಾಜ್ಯ ಉಚ್ಚನ್ಯಾಯಲಯಕ್ಕೆ ಅರ್ಜಿ ಸಲ್ಲಿಸಿದ್ದರು. ಅರ್ಜಿ ಎತ್ತಿಹಿಡಿದಿದ್ದ ನ್ಯಾಯಾಲಯದ ಆದೇಶ ಪಾಲಿಸಿರುವ ರಾಜ್ಯ ಬಿಜೆಪಿ ಸರಕಾರ ಶರಾವತಿ ಸಂತ್ರಸ್ತರ ಎಲ್ಲಾ ಡಿನೋಟಿಫಿಕೇಷನ್ ಆದೇಶಗಳನ್ನು ರದ್ದು ಮಾಡಿದೆ. ಈ ಪ್ರಕರಣದಲ್ಲಿ ರಾಜ್ಯ ಸರಕಾರ ನ್ಯಾಯಾಲಯಕ್ಕೆ ವಾಸ್ತವ ಮನವರಿಕೆ ಮಾಡಿಕೊಡುವಲ್ಲಿ ವಿಫಲವಾಗಿದ್ದರಿಂದ ಸಮಸ್ಯೆ ಉಲ್ಬಣವಾಗಿದೆ.
ಮತಬ್ಯಾಂಕ್:
ಚುನಾವಣೆ ವರ್ಷದಲ್ಲಿ ಶಿವಮೊಗ್ಗ ಜಿಲ್ಲೆಯ ದೊಡ್ಡ ಮತಬ್ಯಾಂಕ್ ಆಗಿರುವ ಶರಾವತಿ ಸಂತ್ರಸ್ತರ ವಿಶ್ವಾಸಗಳಿಸಲು ಆಡಳಿತ ಮತ್ತು ವಿರೋಧ ಪಕ್ಷಗಳು ಪೈಪೋಟಿಗಿಳಿದಿವೆ.  ಆಡಳಿತ ಪಕ್ಷ ಬಿಜೆಪಿಯ ಪ್ರತಿನಿಧಿಗಳು ಸಂತ್ರಸ್ತರಿಗಾಗಿ ದಿಲ್ಲಿ ಮತ್ತು ಬೆಂಗಳೂರಿಗೆ ಓಡಾಡುತ್ತಿದೆ. ಆ ಪಕ್ಷದ ನಾಯಕರು ತಮ್ಮ ಸರಕಾರದಿಂದ ಆದ ಪ್ರಮಾದಕ್ಕೆ ತೇಪೆ ಹಚ್ಚಲು ಯತ್ನಿಸುತ್ತಿದ್ದಾರೆ. ಕಾಂಗ್ರೆಸ್ ಪಕ್ಷದ ನಾಯಕರು ಬಿಜೆಪಿ ಎಡವಟ್ಟು  ಎತ್ತಿತೋರಿಸುತ್ತಾ, ಹಿಂದೆ ತಾನು ಮಾಡಿದ್ದ ಹಳೆ ಗಾಯವನ್ನು ಮರೆಮಾಚುತ್ತಿದೆ. ಈ ರಾಜಕೀಯ ಪಕ್ಷಗಳ ಮತ ರಾಜಕಾರಣಕ್ಕೆ ಶರಾವತಿ ಸಂತ್ರಸ್ತರು ಮಾತ್ರ ಹೈರಾಣಾಗುತ್ತಿದ್ದಾರೆ.
ಬಿಜೆಪಿ ತಂತ್ರಗಾರಿಕೆ ಏನು ?
ನ್ಯಾಯಾಲಯದ ಆದೇಶದಂತೆ ರಾಜ್ಯಸರಕಾರ ಸುಮಾರು ೫೨ ಡಿನೋಟಿಫಿಕೇಷನ್‌ಗಳನ್ನು ರದ್ದು ಮಾಡಿದ್ದು, ೯೨೦೦ ಎಕರೆ ಭೂಮಿ ೧೯೬೦ ರದಶಕದಲ್ಲಿಯೇ ಬಿಡುಗಡೆಯಾಗಿದ್ದರಿಂದ ಸುಲಭವಾಗಿ ಕೇಂದ್ರದ ಅನುಮತಿ ಪಡೆಯಬಹುದು. ಕೇಂದ್ರದ ಮೇಲೆ ಹಾಕಿದ ಒತ್ತಡ ಅಲ್ಲಿಂದ ಬಂದ ಪ್ರತಿಕ್ರಿಯೆ ಮುಂದಿಟ್ಟುಕೊಂಡು ಸಂತ್ರಸ್ತರಿಗೆ ಭಾರೀ ಉಪಕಾರ ಮಾಡಿದೆವು ಎಂದು ಪ್ರಚಾರ ಪಡೆಯುವ ತಂತ್ರಗಾರಿಕೆಯನ್ನು ಬಿಜೆಪಿ ಹೊಂದಿದೆ ಎನ್ನಲಾಗಿದೆ. ಆದರೆ ಶರಾವತಿ ಸಂತ್ರಸ್ತರ ಅಸಲಿ ಸಮಸ್ಯೆಯೇ ಬೇರೆ ಇದೆ. ಮೂರು ತಲೆಮಾರುಗಳ ಹಿಂದೆ ಕೇವಲ ಹತ್ತು ಸಾವಿರ ಎಕರೆ ಭೂಮಿಯನ್ನು ಬಿಡುಗಡೆ ಮಾಡಿದ್ದರೆ, ಜನಸಂಖ್ಯೆ ಬೆಳೆದಂತೆ ಸಂತ್ರಸ್ತರ ಕುಟುಂಬಗಳು ಈಗ ಅಂದಾಜು ೫೦ ಸಾವಿರ ಎಕರೆಗೂ ಹೆಚ್ಚು ಭೂಮಿ ಸಾಗುವಳಿ ಮಾಡಿಕೊಂಡಿದ್ದಾರೆ.
ಈಡಿಗರ ಮನವೊಲಿಕೆಗೆ ಯತ್ನ:
ಕಾಕತಾಳೀಯ ಎಂಬಂತೆ ಶರಾವತಿ ಸಂತ್ರಸ್ತರಲ್ಲಿ ಶೇ.೯೦ ಭಾಗ ಈಡಿಗರೇ ಇದ್ದು, ಶಿವಮೊಗ್ಗ ಜಿಲ್ಲೆಯ ದೊಡ್ಡ ಮತಬ್ಯಾಂಕ್ ಆಗಿದೆ. ಈ ಸಮುದಾಯದ ವಿಶ್ವಾಸಗಳಿಸಲು ಬಿಜೆಪಿ ಮತ್ತು ಕಾಂಗ್ರೆಸ್ ಪಕ್ಷದ ನಾಯಕರುಗಳು ಪೈಪೋಟಿಗೆ ಬಿದ್ದಿದ್ದಾರೆ. ಎರಡೂ ಪಕ್ಷಗಳು ಸಂತ್ರಸ್ತರ ಪೂರ್ವಭಾವಿ ಸಭೆಯನ್ನು ಶಿವಮೊಗ್ಗ ಈಡಿಗರ ಭವನದಲ್ಲಿಯೇ ನಡೆಸಿದ್ದು, ಸಭೆಯ ನೆಪದಲ್ಲಿ ಬೇರೆ ಯಾವುದೊ ಸಂದೇಶ ರವಾನಿಸಿದ್ದಾರೆ ಎಂದೇ ಹೇಳಲಾಗುತ್ತಿದೆ. ಶರಾವತಿ ಸಂತ್ರಸ್ತರು ಸಾಗರ,ತೀರ್ಥಹಳ್ಳಿ ಹಾಗೂ ಶಿವಮೊಗ್ಗ ಗ್ರಾಮಾಂತರ ಕ್ಷೇತ್ರದಲ್ಲಿ ನಿರ್ಣಾಯಕರಾಗಿದ್ದರಿಂದ ಈ ಚುನಾವಣೆಯ ಮೇಲೆ ನೇರ ಪರಿಣಾಮ ಬೀರುವುದನ್ನು ರಾಜಕೀಯ ಪಕ್ಷಗಳು ಮನಗಂಡಿರುವುದರಿಂದಲೇ ಈ ತಂತ್ರಗಾರಿಕೆ ಮಾಡುತ್ತಿವೆ.


ಲೋಕಸಭೆ ಚುನಾವಣೆ ಮೇಲೂ ಪರಿಣಾಮ:


ಪ್ರತಿ ಲೋಕಸಭೆ ಚುನಾವಣೆಯಲ್ಲಿ ಮಲೆನಾಡಿನಲ್ಲಿ ಅಡಕೆ ಆರೋಗ್ಯಕ್ಕೆ ಹಾನಿಕಾರಕ ಎಂಬ ಅಂಶ, ಕಸ್ತೂರಿ ರಂಗನ್ ವರದಿ ಅನುಷ್ಠಾನದ ಸಂಗತಿಗಳು ಮುನ್ನೆಲೆಗೆ ಬಂದು ಮತಜೋಳಿಗೆ ತುಂಬಿದ ಬಳಿಕ ಮರೆಯಾಗುತ್ತಿದ್ದವು. ಉಪಚುನಾವಣೆ ಸೇರಿದಂತೆ ಕಳೆದ ಮೂರು ಚುನಾವಣೆಯಲ್ಲಿ ಇದೇ ವಿಷಯದ ಮೇಲೆ ಚುನಾವಣೆ ನಡೆದಿದ್ದರೂ ಸಮಸ್ಯೆ ಬಗೆಹರಿದಿಲ್ಲ. ಈ ಬಾರಿ ಶರಾವತಿ ಸಂತ್ರಸ್ತರಿಗೆ ಎದುರಾಗಿರುವ ಕಾನೂನು ಕುಣಿಕೆ ಹಾಗೂ ಅಡಕೆ ಬೆಳೆಯ  ಎಲೆಚುಕ್ಕಿ ರೋಗ ಸಮಸ್ಯೆ ಸೇರಿಕೊಂಡಿದ್ದು, ಲೋಕಸಭೆ ಚುನಾವಣೆ ಮೇಲೆ ಗಂಭೀರ ಪರಿಣಾಮ ಬೀರಲಿವೆ. ಈ ಕಾರಣದಿಂದಲೇ ಸಂಸದ ರಾಘವೇಂದ್ರ ಅವರು ಯಡಿಯೂರಪ್ಪ ಅವರನ್ನು ದಿಲ್ಲಿಗೆ ಕರೆದೊಯ್ದು  ಕೇಂದ್ರ ಸಚಿವರಿಗೆ ಮನವಿ ಕೊಡಿಸಿದ್ದಾರೆ. ರಾಜ್ಯ ಸರಕಾರದ ಎಡವಟ್ಟಿನಿಂದ  ಸಮಸ್ಯೆ ಜಟಿಲವಾಗಿದೆ. ಆದರೆ ಈಗ ಮಾಜಿ ಸಿಎಂ ಯಡಿಯೂರಪ್ಪ ಅವರು  ಹದಿನೈದು ದಿನದಲ್ಲಿ ಸಮಸ್ಯೆ ಇತ್ಯರ್ಥ ಮಾಡುವುದಾಗಿ ಹೇಳಿಕೆ ಕೊಟ್ಟಿದ್ದು, ಸಂತ್ರಸ್ತರು ನ್ಯಾಯಕ್ಕಾಗಿ ಎದುರು ನೋಡುತ್ತಿದ್ದಾರೆ. 

ReplyForward
Ad Widget

Related posts

ಕೊರೊನ : ಶಿವಮೊಗ್ಗದಲ್ಲಿ ಮೂರು ಸಾವು

Malenadu Mirror Desk

ಆಸ್ಪತ್ರೆ ತೊಟ್ಟಿಯಲ್ಲಿ ಬಿದ್ದು ಬಾಲಕ ಸಾವು

Malenadu Mirror Desk

ವಿದ್ಯಾರ್ಥಿಗಳು ಅಂಕಗಳಿಕೆಯೊಂದಿಗೆ ಜೀವನ ಮೌಲ್ಯ ಅಳವಡಿಸಿಕೊಳ್ಳಬೇಕು, ಸರ್ಕಾರಿ ನೌಕರರ ಸಂಘದ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ಡಾ.ಸರ್ಜಿ ಅಭಿಮತ

Malenadu Mirror Desk

Leave a Comment

error: Content is protected !! ಮಲೆನಾಡು ಮಿರರ್‌ನಲ್ಲಿ ಪ್ರಕಟಗೊಂಡ ಸುದ್ದಿ, ಲೇಖನ, ಫೊಟೊಗಳನ್ನುಪೂರ್ವಾನುಮತಿಯಿಲ್ಲದೆ ನಕಲು ಮಾಡುವುದು ಕಾನೂನುಬಾಹಿರವಾಗಿದೆ.