ಶಿವಮೊಗ್ಗಡಿ.೨೧: :ಶರಾವತಿ ಮುಳುಗಡೆ ಸಂತ್ರಸ್ಥರ ಸಮಸ್ಯೆ ಬಗೆಹರಿಸಲು ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಮತ್ತು ಯಡಿಯೂರಪ್ಪನವರು ಸಹಕಾರ ನೀಡದ ಕಾರಣ ಶಾಸಕ ಹಾಲಪ್ಪನವರು ಧರ್ಮಸ್ಥಳಕ್ಕೆ ಹೋಗಿ ದೇವರ ಮೇಲೆ ಭಾರ ಹಾಕಿರಬೇಕು ಎಂದು ಮಾಜಿ ಶಾಸಕ ಬೇಳೂರು ಗೋಪಾಲಕೃಷ್ಣ ಅನುಮಾನ ವ್ಯಕ್ತಪಡಿಸಿದರು.
ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಈಡಿಗರ ಭವನದಲ್ಲಿ ಸಭೆ ನಡೆಸಿ ಶರಾವತಿ ಮುಳುಗಡೆ ಸಂತ್ರಸ್ಥ ರೈತರ ಸಮಸ್ಯೆಗೆ ಸಂಬಂಧಿಸಿದಂತೆ ೧೫ ದಿನದಲ್ಲಿ ಕೇಂದ್ರ ಸರ್ಕಾರದ ಅನುಮತಿ ಪಡೆಯುವುದಾಗಿ ಹೇಳಿದ್ದರು. ಆದರೆ ಈಗ ಮುಖ್ಯಮಂತ್ರಿ, ಮಾಜಿ ಸಿಎಂ ಬಿಎಸ್‌ವೈ ಹಾಗೂ ಸಂಸದ ಬಿವೈ ರಾಘವೆಂದ್ರ ಸಹಕಾರ ನೀಡುತ್ತಿಲ್ಲ.ಈ ಹಿನ್ನೆಲೆಯಲ್ಲಿ ಹಾಲಪ್ಪ ಭೇಟಿ ನೀಡಿರಬೇಕು ಎಂದರು.
ಶರಾವತಿ ಮುಳುಗಡೆ ಸಂತ್ರಸ್ತರ ಸಮಸ್ಯೆಯನ್ನು ಬಗೆಹರಿಸುವಂತೆ ಧರ್ಮಸ್ಥಳ ಮಂಜುನಾಥ ಸ್ವಾಮಿಗೆ ಬೇಡಿಕೊಂಡು ಬಂದಿದ್ದಾರೆ. ಧರ್ಮಸ್ಥಳಕ್ಕೆ ಹೋಗಿಬಂದಿದ್ದು ತಪ್ಪಲ್ಲ, ಆದರೆ ಹಕ್ಕುಪತ್ರ ಕೊಡದ ಈ ಸರ್ಕಾರ ಯಾಕೆ ಬೇಕು. ಈ ರೀತಿ ಸಮಸ್ಯೆಯನ್ನು ದೇವರ ಮೇಲೆ ಹಾಕುವುದು ಎಷ್ಟು ಸರಿ, ಇದು ಕಾಂತಾರ ಸಿನಿಮಾದ ಮಹಿಮೆ ಇರಬೇಕು ಎಂದು ವ್ಯಂಗ್ಯವಾಡಿದರು.
ಈಶ್ವರಪ್ಪ ಭಿನ್ನಮತದ ಕೇಂದ್ರಬಿಂದುವಾಗಿದ್ದಾರೆ. ಸಚಿವ ಸ್ಥಾನದ ಬೇಡಿಕೆ ಇಟ್ಟು ಅಧಿವೇಶನಕ್ಕೇ ಹೋಗಿಲ್ಲ. ಬಿಜೆಪಿಯಲ್ಲಿ ಭಿನ್ನಮತ ಈಗ ಆರಂಭವಾಗಿದೆ. ಬಿಜೆಪಿಯಲ್ಲೇ ಇದ್ದ ಡಾ. ಧನಂಜಯ ಸರ್ಜಿ ಅವರನ್ನು ಇವರು ಬಿಜೆಪಿಗೆ ಸೇರಿಸಿಕೊಂಡಿದ್ದಾರೆ. ಹಾಗೆಯೇ ಕೆ.ಎಸ್. ಈಶ್ವರಪ್ಪನವರನ್ನು ಕೂಡ ಮತ್ತೆ ಬಿಜೆಪಿಗೆ ಸೇರಿಸಿಕೊಳ್ಳಲಿ ಎಂದರು.
ಬಿಜೆಪಿ ಕೆಟ್ಟ ಸರ್ಕಾರ:
ಬಿಜೆಪಿ ಸರ್ಕಾರ ಅತ್ಯಂತ ಕೆಟ್ಟ ಸರ್ಕಾರವಾಗಿದೆ. ಅದರಲ್ಲೂ ಕೇಂದ್ರ ಸರ್ಕಾರ ರಾಜಕೀಯ ದ್ವೇಷ ಸಾಧಿಸುತ್ತಿದೆ. ವಿರೋಧ ಪಕ್ಷಗಳ ನಾಯಕರುಗಳನ್ನು ಹತ್ತಿಕ್ಕುವ ಕೆಲಸ ಮಾಡುತ್ತಿದೆ. ಇಡಿ, ಐಟಿ, ಸಿಬಿಐ ಸಂಸ್ಥೆಗಳನ್ನು ದುರ್ಬಳಕೆ ಮಾಡಿಕೊಳ್ಳುತ್ತಿದೆ. ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರ ಶಿಕ್ಷಣ ಸಂಸ್ಥೆಯ ಮೇಲೆ ಸಿಬಿಐ ದಾಳಿ ನಡೆಸಿರುವುದೇ ಇದಕ್ಕೆ ಸಾಕ್ಷಿ. ಬಿಜೆಪಿ ಮುಖಂಡರ ವಿದ್ಯಾ ಸಂಸ್ಥೆಗಳು ಇಲ್ಲವೇ, ಕೆ.ಎಸ್. ಈಶ್ವರಪ್ಪ ಸೇರಿದಂತೆ ಬಿಜೆಪಿ ನಾಯಕರ ಶಿಕ್ಷಣ ಸಂಸ್ಥೆಗಳು ಭಾರೀ ಇವೆ. ಆದರೂ ಏಕೆ ಆ ಸಂಸ್ಥೆಗಳ ಮೇಲೆ ದಾಳಿ ನಡೆದಿಲ್ಲ ಎಂದರು.
ಹೊನ್ನಾಳಿ ಶಾಸಕ ಎಂ.ಪಿ. ರೇಣುಕಾಚಾರ್ಯ ಸಹೋದರನ ಮಗ ಅಪಘಾತದಲ್ಲಿ ಸಾವು ಕಂಡಿದ್ದಾರೆ. ಆದರೆ ಈ ಸಾವನ್ನು ರೇಣುಕಾಚಾರ್ಯ ರಾಜಕೀಯಕ್ಕೆ ಬಳಸಿಕೊಂಡಿರುವುದು ಎಷ್ಟರ ಮಟ್ಟಿಗೆ ಸರಿ? ಬಿಜೆಪಿಯ ಅಜೆಂಡಾವೇ ಬೇರೆಯಾಗುತ್ತಿದೆ. ಚುನಾವಣೆ ಹತ್ತಿರ ಬರುತ್ತಿದ್ದಂತೆಯೇ ಹಿಂದುತ್ವ, ವಿರಾಟ್ ಸಮಾವೇಶಗಳು ಪ್ರಾರಂಭವಾಗುತ್ತವೆ. ಅಭಿವೃದ್ಧಿ ಮಾತ್ರ ಶೂನ್ಯವಾಗಿದೆ. ಅರ್ಥವಿಲ್ಲದ ರಾಷ್ಟ್ರೀಯ ಶಿಕ್ಷಣ ನೀತಿ ರೂಪಿಸಲಾಗುತ್ತಿದೆ. ಅಡಿಕೆ ಬೆಳೆಗಾರರು ಆತ್ಮಹತ್ಯೆ ದಾರಿ ತುಳಿಯುತ್ತಿದ್ದಾರೆ. ಮಕ್ಕಳಿಗೆ ಸೈಕಲ್ ಕೊಡುವುದನ್ನು ನಿಲ್ಲಿಸಲಾಗಿದೆ. ಮತದಾರರು ಮುಂದಿನ ಚುನಾವಣೆಯಲ್ಲಿ ಇದಕ್ಕೆ ತಕ್ಕ ಪಾಠ ಕಲಿಸಲಿದ್ದಾರೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಪ್ರಮುಖರಾದ ಜಿ.ಡಿ.ಮಂಜುನಾಥ್, ಚಂದ್ರಭೂಪಾಲ್, ದೀಪಕ್ ಸಿಂಗ್, ರಾಜ್‌ಕುಮಾರ್ ಮತ್ತಿತರರಿದ್ದರು.