Malenadu Mitra
ರಾಜ್ಯ ಶಿವಮೊಗ್ಗ

ಕಸ್ತೂರಿರಂಗನ್ ವರದಿ ವಿಚಾರದಲ್ಲಿ ಆರಗ ಜ್ಞಾನೇಂದ್ರ ಸುಳ್ಳು ಹೇಳಿಕೆ

ಶಿವಮೊಗ್ಗ: ತಮ್ಮ ತೀವ್ರ ವಿರೋಧದಿಂದ ಡಾ.ಕಸ್ತೂರಿ ರಂಗನ್ ವರದಿಯನ್ನು ಜಾರಿಯಾಗದಂತೆ ತಡೆಹಿಡಿಯಲಾಗಿದೆ ಎಂದು  ಸಚಿವ ಆರಗ ಜ್ಞಾನೇಂದ್ರ ಅವರು ತೀರ್ಥಹಳ್ಳಿಯಲ್ಲಿ ನಡೆದ ಬಿ.ಜೆ.ಪಿ. ಜಿಲ್ಲಾ ರೈತ ಸಮಾವೇಶದಲ್ಲಿ ನೀಡಿರುವ ಹೇಳಿಕೆಯು ಶುದ್ಧ ಸುಳ್ಳಿನಿಂದ ಕೂಡಿದ್ದು, ಪಶ್ಚಿಮ ಘಟ್ಟ ವ್ಯಾಪ್ತಿಯಲ್ಲಿ ಪರಿಸರ ಸೂಕ್ಷ್ಮ ಪ್ರದೇಶ ಘೋಷಣೆ ಅಂತಿಮ ಹಂತಕ್ಕೆ ತಲುಪಿದೆ ಎಂದು ಕಾಂಗ್ರೆಸ್ ವಕ್ತಾರ ಬಿ.ಎ ರಮೇಶ್ ಹೆಗ್ಡೆ ತಿಳಿಸಿದರು.

ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಡಾ. ಕಸ್ತೂರಿರಂಗನ್ ವರದಿ ಕುರಿತು ಸುಪ್ರೀಂ ಕೋರ್ಟ್‌ನ ಹಸಿರು ಪೀಠದಲ್ಲಿ ನಡೆಯುತ್ತಿರುವ ಗೋವ ಪೌಂಡೇಷನ್ ವಿರುದ್ಧ ಭಾರತ ಸರ್ಕಾರ ಪ್ರಕರಣದಲ್ಲಿ ಕೇಂದ್ರ ಸರ್ಕಾರವು ಡಾ. ಕಸ್ತೂರಿ ರಂಗನ್ ವರದಿಯನ್ನು ಜಾರಿಗೊಳಿಸುವುದಾಗಿ ಆ.೨೭-೨೦೧೪ ರಲ್ಲಿ ನೀಡಿದ ಹೇಳಿಕೆ ಹಾಗೂ ಸೆ.೧೯-೨೦೧೪ ಹಾಗೂ ಆ.೨೪-೨೦೧೮ ರಲ್ಲಿ ಅಫಿಡವಿಟ್ ಸಲ್ಲಿಸಿರುವ ಕಾರಣ ಹಾಗೂ ೨೦೧೫, ೨೦೧೭, ೨೦೧೮ ಹಾಗೂ ೨೦೨೨ ರಲ್ಲಿ ಕೇಂದ್ರ ಬಿ.ಜೆ.ಪಿ. ಸರ್ಕಾರ ಪಶ್ಚಿಮಘಟ್ಟ ವ್ಯಾಪ್ತಿಯಲ್ಲಿ ಪರಿಸರ ಸೂಕ್ಷ್ಮ ಪ್ರದೇಶ ಘೋಷಿಸುವ ಸಲುವಾಗಿ ಕರಡು ಅಧಿಸೂಚನೆಯನ್ನು ೪ ಭಾರಿ ಹೊರಡಿಸಿರುವ ಕಾರಣ ಡಾ. ಕಸ್ತೂರಿ ರಂಗನ್ ವರದಿ ಅನುಷ್ಠಾನ ಅನಿವಾರ್ಯವಾಗಿದೆ. ಇದಕ್ಕೆ ಬಿ.ಜೆ.ಪಿ. ಕೇಂದ್ರ ಸರ್ಕಾರವೇ ನೇರ ಹೊಣೆಯಾಗಿದೆ ಎಂದರು.

ಬಿ.ಎಸ್. ಯಡಿಯೂರಪ್ಪನವರು ಸಂಸದರಾಗಿದ್ದ ಸಂದರ್ಭದಲ್ಲಿ ಕೇಂದ್ರ ಪರಿಸರ ಹಾಗೂ ಅರಣ್ಯ ಸಚಿವರು ಡಾ. ಕಸ್ತೂರಿ ರಂಗನ್ ವರದಿ ಅನುಷ್ಠಾನ ಕುರಿತು ಕರೆದ ಪಶ್ಚಿಮ ಘಟ್ಟಗಳ ಸಂಸದರ ಸಭೆಯಲ್ಲಿ ೨೦೧೫ ಆಗಸ್ಟ್  ತಿಂಗಳ ೦೩ ಹಾಗೂ ೧೧ರಂದು ನಡೆದ ಗೈರು ಹಾಜರಾಗಿರುವುದು ಹಾಗೂ ಹಾಲಿ ಸಂಸದರಾದ ಬಿ.ವೈ. ರಾಘವೇಂದ್ರರವರು ಈ ವರದಿಯ ವಿರುದ್ಧ ಸಂಸತ್ ಅಧಿವೇಶನದಲ್ಲಿ ಒಮ್ಮೆಯೂ ಪ್ರಸ್ತಾಪಿಸದೇ ಇರುವುದು ಶಿವಮೊಗ್ಗ ಜಿಲ್ಲೆಯ ೪೭೫ ಗ್ರಾಮಗಳ ಜನರಿಗೆ ಎಸಗಿದ ದ್ರೋಹವಾಗಿದೆ ಎಂದು ಆರೋಪಿಸಿದರು.

ಕೇಂದ್ರ ಅರಣ್ಯ ಸಚಿವರಾದ  ಭೂಪೇಂದರ್ ಯಾದವ್‌ರವರು, ಡೈರೆಕ್ಟರ್ ಜನರಲ್ ಆಫ್ ಫಾರೆಸ್ಟ್ (ನಿವೃತ್ತ)  ಸಂಜಯ್‌ಕುಮಾರ್‌ರವರ ನೇತೃತ್ವದಲ್ಲಿ ಉನ್ನತ ಅಧಿಕಾರಿಗಳ ಸಮಿತಿಯನ್ನು ರಚಿಸಿ ಒಂದು ವರ್ಷದ ಒಳಗಾಗಿ ಪಶ್ಚಿಮ ಘಟ್ಟಗಳ ಗ್ರಾಮಗಳ ಭೌತಿಕ ಭೂ ದೃಶ್ಯಾವಳಿ  ನಡೆಸಿ ಸಮಗ್ರ ವರದಿಯನ್ನು ಸಲ್ಲಿಸಿದ ನಂತರ ಡಾ. ಕಸ್ತೂರಿ ರಂಗನ್ ವರದಿ ರೀತ್ಯಾ ಹೊರಡಿಸಿದ ಪರಿಸರ ಸೂಕ್ಷ್ಮ ಪ್ರದೇಶ ಕರಡು ಅಧಿಸೂಚನೆಯನ್ನು ಅಂತಿಮಗೊಳಿಸಲಾಗುವುದು ಎಂದು ಹೇಳಿಕೆ ನೀಡಿರುವ ಕಾರಣ ಡಾ. ಕಸ್ತೂರಿ ರಂಗನ್ ವರದಿ ಅನುಷ್ಠಾನ ತಡೆಹಿಡಿಯಲಾಗಲ್ಲ ಎಂಬ ಅಂಶವನ್ನು ಆರಗ ಜ್ಞಾನೇಂದ್ರರವರು ತಿಳಿಯಬೇಕಾಗಿದೆ ಎಂದು ಹೇಳಿದರು.

ಗೃಹಸಚಿವ  ಆರಗ ಜ್ಞಾನೇಂದ್ರ ಹಾಗೂ ರಾಜ್ಯ ಬಿ.ಜೆ.ಪಿ. ನಾಯಕರು ಕರ್ನಾಟಕ ರಾಜ್ಯದ ಪಶ್ಚಿಮ ಘಟ್ಟಗಳ ವ್ಯಾಪ್ತಿಯ ಶಿವಮೊಗ್ಗ, ಉತ್ತರ ಕನ್ನಡ, ದಕ್ಷಿಣ ಕನ್ನಡ, ಉಡುಪಿ, ಚಿಕ್ಕಮಗಳೂರು, ಹಾಸನ, ಮೈಸೂರು, ಬೆಳಗಾಂ, ಚಾಮರಾಜನಗರ, ಕೊಡಗು ಜಿಲ್ಲೆಯ ೧೫೭೨ ಗ್ರಾಮಗಳ ಜನರ ಬದುಕಿನ ಜೊತೆ ಚೆಲ್ಲಾಟವಾಡುವ ಬದಲು ತಮ್ಮದೇ ಕೇಂದ್ರ  ಸರ್ಕಾರದ ವತಿಯಿಂದ ರಾಷ್ಟ್ರೀಯ ಹಸಿರು ಪೀಠಕ್ಕೆ ಡಾ. ಕಸ್ತೂರಿ ರಂಗನ್ ವರದಿಯನ್ನು ಕೈಬಿಡುವುದಾಗಿ ಆಫಿಡವಿಟ್ ಸಲ್ಲಿಸಿ ಪರಿಸರ ಸೂಕ್ಷ್ಮ ಪ್ರದೇಶ ಅಧಿಸೂಚನೆಯನ್ನು ಕೈಬಿಟ್ಟಿರುವುದಾಗಿ ಪ್ರಧಾನ ಮಂತ್ರಿಗಳಿಂದ ಹೇಳಿಕೆ ಕೊಡಿಸಬೇಕು. ಇಲ್ಲದಿದ್ದಲ್ಲಿ ಪಶ್ಚಿಮ ಘಟ್ಟಗಳ ಜನರು ೨೦೨೩ ರ ವಿಧಾನಸಭಾ ಚುನಾವಣೆಯಲ್ಲಿ ಬಿ.ಜೆ.ಪಿ. ತಕ್ಕ ಪಾಠ ಕಲಿಸಲಿದ್ದಾರೆ ಎಂದರು.
ಜಿಲ್ಲಾ ಕಾಂಗ್ರೆಸ್ ಹಿಂದುಳಿದ ವಿಭಾಗದ ಅಧ್ಯಕ್ಷ ರಮೇಶ್ ಇಕ್ಕೇರಿ, ಎನ್.ಪಿ.ಧರ್ಮರಾಜ್, ಜಿ.ಡಿ. ಮಂಜುನಾಥ, ದೀಪಕ್ ಸಿಂಗ್, ಖಲೀಂ ಪಾಷಾ ಇದ್ದರು.ಏನು

ಕಸ್ತೂರಿ ರಂಗನ್ ವರದಿ ಜಾರಿಗೆ ಕೇಂದ್ರ ಸರಕಾರ ಎಲ್ಲಾ ತಯಾರಿ ಮಾಡಿಕೊಂಡಿದ್ದರೆ, ಸಚಿವ ಆರಗ ಜ್ಞಾನೇಂದ್ರ ಅವರು ಸುಳ್ಳು ಹೇಳಿ ಮಲೆನಾಡಿನ ಜನರಿಗೆ ಮಂಕುಬೂದಿ ಎರಚುತ್ತಿದ್ದಾರೆ. ಕೇಂದ್ರ ಸರಕಾರ ಹಸಿರು ಪೀಠಕ್ಕೆ ಪ್ರಮಾಣ ಪತ್ರ ಸಲ್ಲಿಸಿದರೆ ಮಾತ್ರ ವರದಿ ಕೈಬಿಡಬಹುದು. ದಾಖಲೆ ಇಲ್ಲದೆ ಮತರಾಜಕಾರಣ ಮಾಡುವುದನ್ನು ಜನರು ಅರ್ಥ ಮಾಡಿಕೊಳ್ಳಬೇಕು

ರಮೇಶ್ ಹೆಗ್ಡೆ

Ad Widget

Related posts

ಸಕ್ರೆಬೈಲ್ ಸಮೀಪ ಅಪಘಾತ: ಸಾವು

Malenadu Mirror Desk

ಉದ್ರಿಕ್ತರ ನಿಯಂತ್ರಿಸಲು ಪೊಲೀಸರು ಹೈರಾಣ, ಸಾರ್ವಜನಿಕ ಆಸ್ತಿಪಾಸ್ತಿಗೆ ಹಾನಿ, ನಿಷೇಧಾಜ್ಞೆ ನಡುವೆಯೂ ಮೆರವಣಿಗೆ, ನೀವು ಹೇಳಿದಾಕ್ಷಣ ಎನ್‌ಕೌಂಟರ್ ಮಾಡಲಾಗದು: ಈಶ್ವರಪ್ಪ

Malenadu Mirror Desk

ನಕ್ಸಲ್ ಭಾದಿತ ಪ್ರದೇಶಚುನಾವಣೆ ಬಹಿಷ್ಕಾರ

Malenadu Mirror Desk

Leave a Comment

error: Content is protected !! ಮಲೆನಾಡು ಮಿರರ್‌ನಲ್ಲಿ ಪ್ರಕಟಗೊಂಡ ಸುದ್ದಿ, ಲೇಖನ, ಫೊಟೊಗಳನ್ನುಪೂರ್ವಾನುಮತಿಯಿಲ್ಲದೆ ನಕಲು ಮಾಡುವುದು ಕಾನೂನುಬಾಹಿರವಾಗಿದೆ.