Malenadu Mitra
ರಾಜ್ಯ ಶಿವಮೊಗ್ಗ

ಬಿಜೆಪಿ , ಸಂಘಪರಿವಾರ ಅಂಬೇಡ್ಕರ್ ವಿರೋಧಿಗಳು,
ಕಾಂಗ್ರೆಸ್ ದೇಶ ಕಟ್ಟಿದೆ, ನಮ್ಮನ್ನು ಹೀಯಾಳಿಸದಿರಿ ಪ್ರಧಾನಿಗೆ ಖರ್ಗೆಪ್ರತ್ಯುತ್ತರ

ಶಿವಮೊಗ್ಗ: ಬಿಜೆಪಿ ಮತ್ತು ಸಂಘ ಪರಿವಾರದವರು ಮೂಲತಃ ಸಂವಿಧಾನ ಮತ್ತು ಬಾಬಾಸಾಹೇಬ್  ಅಂಬೇಡ್ಕರ್ ಅವರ  ವಿರೋಧಿಗಳು. ಆದರೆ ಪ್ರಧಾನಿ ಮೋದಿ ಅವರು ಕಾಂಗ್ರೆಸ್ ಅಂಬೇಡ್ಕರ್ ಅವರಿಗೆ ಅವಮಾನ ಮಾಡಿದೆ ಎಂದು ಹೇಳುತ್ತಿರುವುದು ಹಾಸ್ಯಾಸ್ಪದ ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹೇಳಿದರು.
ಭಾನುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಸಂವಿಧಾನ ಕರಡು ರಚನೆಯಾದ ನಂತರ ಅಂಬೇಡ್ಕರ್ ಅವರ ಮೊದಲ ಭಾಷಣವನ್ನೇ ವಿರೋಧಿಸಿದ್ದ  ಆರ್.ಎಸ್.ಎಸ್. ಈ ಸಂವಿಧಾನ ಮನುಸ್ಕೃತಿ ಸಿದ್ಧಾಂತಗಳಿಗೆ ವಿರೋಧವಾಗಿದೆ. ಇದನ್ನು ಒಪ್ಪುವುದಿಲ್ಲ ಎಂದು ಹೇಳಿತ್ತು. ಭಾರತದ ತ್ರಿವರ್ಣ ಧ್ವಜವನ್ನೇ ಮೂರು ಬಣ್ಣ ಅಶುಭ ಎಂದು ವಿರೋಧ ಮಾಡಿದ್ದ ಈ ಜನಕ್ಕೆ ಇಂದು ಕಾಂಗ್ರೆಸ್ ಮೇಲೆ ಆರೋಪ ಮಾಡುವ ನೈತಿಕತೆ ಇಲ್ಲವಾಗಿದೆ ಎಂದು ಖರ್ಗೆ ಹೇಳಿದರು.

ಕರ್ನಾಟಕ ರಾಜ್ಯದಲ್ಲಿ ಏನು ಕೆಲಸ ಮಾಡಿದ್ದೀರಿ, ಭ್ರಷ್ಟಾಚಾರ ನಿಯಂತ್ರಿಸಲು ಯಾವ ಕ್ರಮ ಕೈಗೊಂಡಿದ್ದೀರಿ ಎಂದು ಹೇಳುವುದನ್ನು ಬಿಟ್ಟು ನನ್ನನ್ನು ಬೈದರು ಎಂದು ಮತ ಕೇಳುವ ಪ್ರಧಾನಿ ಮೋದಿ ಅವರು ಕಾಂಗ್ರೆಸ್ ಪಕ್ಷ ಮತ್ತು ನಮ್ಮ ನೇತಾರರನ್ನು ಎಷ್ಟು ಬಾರಿ ಹೀಗಳೆದಿದ್ದಾರೆ ಎಂದು ನೆನಪು ಮಾಡಿಕೊಳ್ಳಬೇಕು. ಕೇಂದ್ರ ಸರಕಾರದ ೩೦ ಲಕ್ಷ ಉದ್ಯೋಗಗಳು ಖಾಲಿ ಇವೆ. ರಾಜ್ಯದಲ್ಲಿ ೨೫ ಸಾವಿರ ಹುದ್ದೆಗಳು ಖಾಲಿ ಇವೆ ಇವುಗಳನ್ನು ಯಾಕೆ ತುಂಬಿಲ್ಲ. ವರ್ಷಕ್ಕೆ ೨ ಕೋಟಿ ಉದ್ಯೋಗ ಎಲ್ಲಿ ಹೋದವು. ವಿದೇಶದ ಕಪ್ಪು ಹಣ ಎಲ್ಲಿ ಬಂತು.  ಗ್ಯಾಸ್ ದರ ಯಾಕೆ ಸಾವಿರದ ಗಡಿ ದಾಟಿತು ಎಂಬ ಬಗ್ಗೆ ಮಾತನಾಡಬೇಕಾದ ಪ್ರಧಾನಿ ಕಾಂಗ್ರೆಸ್‌ನವರು ನನ್ನನ್ನು ಬೈಯುತ್ತಾರೆ ಎಂದು ಜನರ ಮುಂದೆ ದೂರು ಹೇಳುತ್ತಿದ್ದಾರೆ ಎಂದು ಖರ್ಗೆ ವ್ಯಂಗ್ಯವಾಡಿದರು.

ರಾಜ್ಯದಲ್ಲಿ ಪಿಎಸ್‌ಐ ನೇಮಕ, ಅಧ್ಯಾಪಕರು, ಎಂಜನಿಯರ್, ಹಲವು ಇಲಾಖೆಗಳ ಗುತ್ತಿಗೆ ಆಧಾರಿತ ನೌಕರಿ ನೇಮಕದಲ್ಲಿ ಭ್ರಷ್ಟಾಚಾರ ಎಸಗಲಾಗಿದೆ. ರಾಜ್ಯದಲ್ಲಿ ನಡೆಸಿದ ಎಲ್ಲಾ ಕಾಮಗಾರಿಗಳಿಗೆ ಶೇ.೪೦ ಪರ್ಸಂಟೇಜ್ ವ್ಯವಹಾರ ಮಾಡಲಾಗಿದೆ. ಇವುಗಳ ಬಗ್ಗೆ ಉತ್ತರ ಕೊಡಬೇಕಾಗಿರುವ ಪ್ರಧಾನಿ ಮೋದಿ ಅವರು, ಭಾವನಾತ್ಮಕ ವಿಚಾರಗಳನ್ನು ಕೆದಕಿ ಮತಪ್ರಚಾರ ಮಾಡುತ್ತಿದ್ದಾರೆ ಎಂದು ದೂರಿದರು.


ಬಗಲಲ್ಲಿಯೇ ಭ್ರಷ್ಟರು:
ಪ್ರಧಾನಿ ಮೋದಿ ಯಾವಾಗಲೂ ನಾನೂ ತಿನ್ನುವುದಿಲ್ಲ , ತಿನ್ನುವವರಿಗೂ ಬಿಡುವುದಿಲ್ಲ ಎಂಬ ಘೋಷಣೆ ಕೂಗುತ್ತಲೇ ಇರುತ್ತಾರೆ. ಆದರೆ ಕರ್ನಾಟಕದಲ್ಲಿ ಭ್ರಷ್ಟರನ್ನು ಪಕ್ಕದಲ್ಲಿಯೇ ಕೂರಿಸಿಕೊಂಡು ಪ್ರಚಾರ ಮಾಡುತ್ತಿದ್ದಾರೆ. ರಾಜ್ಯ ಬಿಜೆಪಿ ಸರಕಾರ ಭ್ರಷ್ಟಾಚಾರದಲ್ಲಿಯೇ ಮುಳುಗಿದ್ದು, ಜನರು ಇವರ ನಾಟಕ ಅರ್ಥ ಮಾಡಿಕೊಳ್ಳುತ್ತಾರೆ ಎಂದರು. ಕಾಂಗ್ರೆಸ್ ನಾಯಕರಾದ ಮಯೂರ್ ಜೈಕುಮಾರ್, ಮಂಜುನಾಥ್ ಭಂಡಾರಿ, ಜಿಲ್ಲಾಧ್ಯಕ್ಷ ಹೆಚ್.ಎಸ್.ಸುಂದರೇಶ್, ಅಭ್ಯರ್ಥಿಗಳಾದ ಹೆಚ್.ಸಿ.ಯೋಗೇಶ್, ಡಾ.ಶ್ರೀನಿವಾಸ್ ಕರಿಯಣ್ಣ  ಮತ್ತಿರರಿದ್ದರು.


ದೇಶ ಕಟ್ಟಿದ್ದು ಕಾಂಗ್ರೆಸ್


70 ವರ್ಷ ಏನು ಮಾಡಿದ್ದಾರೆ ಎಂದು ಕಾಂಗ್ರೆಸ್ ಮತ್ತು ನಮ್ಮ ನೇತಾರರನ್ನು ನಿಂದಿಸುವ ಪ್ರಧಾನಿ ಮೋದಿ ಮತ್ತವರ ಪಕ್ಷ ಈ ದೇಶ 1947 ರಲ್ಲಿ ಹೇಗಿತ್ತು.2014 ರ ಹೊತ್ತಿಗೆ ಹೇಗಿತ್ತು ಎಂಬುದನ್ನು ಮನಬಿಚ್ಚಿ ನೋಡಲಿ. ದೇಶದಲ್ಲಿ ಕೈಗಾರಿಕಾ ಕ್ರಾಂತಿ, ಹಸಿರು ಕ್ರಾಂತಿ, ಕಾರ್ಖಾನೆ, ಅಣೇಕಟ್ಟು, ವಿದ್ಯುತ್, ರೈಲ್ವೆ , ಅಣುಸ್ಥಾವರ ಯೋಜನೆಗಳು, ವಿಮಾನ ನಿಲ್ಧಾಣಗಳನ್ನು ಯಾರು ನಿರ್ಮಾಣ ಮಾಡಿದರು. ದೇಶದ ಆರ್ಥಿಕ ಪರಿಸ್ಥಿತಿ ಹೇಗೆ ಸುಧಾರಿಸಿತ್ತು ಎಂಬುದನ್ನು ನೋಡಲಿ. ಸ್ವಾತಂತ್ರ್ಯ ಚಳವಳಿ ಮಾಡಿದ ಕಾಂಗ್ರೆಸ್ ಈ ದೇಶ ಕಟ್ಟಿದೆ. ಭಾವನಾತ್ಮಕ ವಿಷಯಗಳನ್ನು ಮುಂದಿಟ್ಟು ಕೊಂಡು ಜನರನ್ನು ಮರಳು ಮಾಡಿಲ್ಲ ಎಂದು ಮಲ್ಲಿಕಾರ್ಜುನ ಖರ್ಗೆ ತಿರುಗೇಟು ನೀಡಿದರು.

ಅಂಬೇಡ್ಕರ್ ಕಾಂಗ್ರೆಸ್ ಹೊಗಳಿದ್ದರು
ಬಾಬಾ ಸಾಹೇಬ್ ಅಂಬೇಡ್ಕರ್ ಅವರು 1947 ರಲ್ಲಿ ಸಂವಿಧಾನ ರಚನಾ ಕರಡು ಸಮಿತಿಗೆ ತಮ್ಮನ್ನು ಅಧ್ಯಕ್ಷರನ್ನಾಗಿ ಮಾಡಿದ್ದಕ್ಕೆ ಕಾಂಗ್ರೆಸ್ ಪಕ್ಷ ಮತ್ತು ಅಂದಿನ ಪ್ರಧಾನಿ ನೆಹರೂ ಅವರನ್ನು ಹೊಗಳಿದ್ದಾರೆ. ಅವೆಲ್ಲ ಇತಿಹಾಸದಲ್ಲಿ ದಾಖಲಾಗಿದೆ. ಕೃಷ್ಣಮಾಚಾರಿ ಅವರು ಸಂವಿಧಾನ ಕರಡು ರಚನೆ ಸಮಿತಿಯ ಇಬ್ಬರು ಖಾಯಿಲೆಯಿಂದ ಭಾಗಿಯಾಗಿರಲಿಲ್ಲ. ಮತ್ತೊಬ್ಬರು ವಿದೇಶದಲ್ಲಿದ್ದರು. ಹೀಗಿದ್ದರೂ ಅಂಬೇಡ್ಕರ್ ಅವರೊಬ್ಬರೇ ಸಂವಿಧಾನದ ಕರಡು ರಚನೆ ಮಾಡಿದ್ದರು ಎಂದು ಹೇಳಿದ್ದಾರೆ  ಪ್ರಧಾನಿ ಮೋದಿ ಅವರು ಈ ವಾಸ್ತವಗಳನ್ನು ಮರೆಮಾಚುತ್ತಿದ್ದಾರೆ ಎಂದು ಖರ್ಗೆ ದೂರಿದರು.

Ad Widget

Related posts

ಮಧುಗೆಲ್ಲಿಸಿ ಸೊರಬಕ್ಕೆ ಬಂದು ಕುಣಿದು ಕುಪ್ಪಳಿಸುವೆ, ಆನವಟ್ಟಿ ರೋಡ್‌ಶೋನಲ್ಲಿ ಶಿವರಾಜ್ ಕುಮಾರ್ ಮನವಿ

Malenadu Mirror Desk

ಕಲಿಸಿದ ಗುರುಗಳಿಗೆ ಗೌರವ ಸಮರ್ಪಣೆ, ಸಹ್ಯಾದ್ರಿ ವಿಜ್ಞಾನ ಕಾಲೇಜಿನಲ್ಲೊಂದು ಭಾವುಕ ಕಾರ್ಯಕ್ರಮ

Malenadu Mirror Desk

ಅತಿಥಿ ಉಪನ್ಯಾಸಕರ ಕಾಯಂಗೊಳಿಸಬೇಕು: ಆಯನೂರು ಮಂಜುನಾಥ್

Malenadu Mirror Desk

Leave a Comment

error: Content is protected !! ಮಲೆನಾಡು ಮಿರರ್‌ನಲ್ಲಿ ಪ್ರಕಟಗೊಂಡ ಸುದ್ದಿ, ಲೇಖನ, ಫೊಟೊಗಳನ್ನುಪೂರ್ವಾನುಮತಿಯಿಲ್ಲದೆ ನಕಲು ಮಾಡುವುದು ಕಾನೂನುಬಾಹಿರವಾಗಿದೆ.