ಸೊರಬ: ನಾಲ್ಕು ದಶಕಗಳ ಕಾಲ ಒಂದೇ ಕುಟುಂಬದ ಅಭ್ಯರ್ಥಿಗಳನ್ನು ವಿಧಾನ ಸಭೆ ಚುನಾವಣೆಯಲ್ಲಿ ಸೋಲಿಸುವ ಮೂಲಕ ಹೊಸ ಮುಖಕ್ಕೆ ಅವಕಾಶ ನೀಡಲು ಬಾಸೂರು ಚಂದ್ರೇಗೌಡ ಅವರಿಗೆ ಮತ ಚಲಾಯಿಸಿ ಎಂದು ಮಾಜಿ ಮುಖ್ಯಂತ್ರಿ ಹೆಚ್.ಡಿ.ಕುಮಾರಸ್ವಾಮಿ ಕರೆ ನೀಡಿದರು.
ಜೆಡಿಎಸ್ ಅಭ್ಯರ್ಥಿ ಬಾಸೂರು ಚಂದ್ರೇಗೌಡ ಅವರ ಪರ ಬುಧವಾರ ಹಮ್ಮಿಕೊಂಡ ವಿಧಾನ ಸಭಾ ಚುನಾವಣಾ ಬಹಿರಂಗ ಪ್ರಚಾರ ಸಭೆಯಲ್ಲಿ ಅವರು ಮಾತನಾಡಿದರು.
ಸೊರಬದಲ್ಲಿ ದುರಹಂಕಾರ, ದೌಲತ್ತು ಹೊಂದಿದ ಅಭ್ಯರ್ಥಿಗಳು ಒಂದು ಕಡೆಯಾದರೆ, ಬಡವರ, ರೈತರ ಬಗ್ಗೆ ಕಾಳಜಿ ಇರುವ ಅಭ್ಯರ್ಥಿ ಇನ್ನೊಂದು ಕಡೆ ಇದ್ದು, ತಾಲೂಕಿನ ಮತದಾರರು ಯಾರನ್ನು ಆಯ್ಕೆ ಮಾಡಬೇಕು ಎಂದು ಯೋಚಿಸಿ ಮತ ನೀಡಬೇಕು ಎಂದರು.
ಈ ಹಿಂದೆ ಎಸ್.ಬಂಗಾರಪ್ಪನವರು ನನ್ನನ್ನು ಅವರ ಮನೆಗೆ ಕರೆಸಿ ೨ ರಾಷ್ಟ್ರೀಯ ಪಕ್ಷಗಳ ವಿರುದ್ಧವಾಗಿ ತಾವುಗಳು ಉತ್ತಮ ಹೋರಾಟ ಮಾಡುತ್ತಿದ್ದೀರಿ. ನಿಮ್ಮ ಶಕ್ತಿಯನ್ನು ಮೆಚ್ಚಿ ನಾನು ನಿಮಗೆ ಬೆಂಬಲ ನೀಡುತ್ತೇನೆ ಎಂದು ಬಂಗಾರಪ್ಪ ಅವರು ಜೆಡಿಎಸ್ ಪಕ್ಷ ಸೇರಿದ್ದಲ್ಲದೆ, ನನ್ನ ಮಗನನ್ನು ನಿಮ್ಮ ಮಡಿಲಿಗೆ ಹಾಕಿದ್ದು, ಬೆಳೆಸುವ ಹೊಣೆಗಾರಿಕೆ ನಿಮ್ಮದು ಎಂದಿದ್ದರು. ಅದರಂತೆಯೇ ಅವರ ಮಗನನ್ನು ಇಡೀ ರಾಜ್ಯಕ್ಕೆ ಪರಿಚಯಿಸಿ, ಶಕ್ತಿ ತುಂಬಿ ಬೆಳೆಸಿದ್ದೆ. ತಂದೆ ಇದ್ದಾಗ ಗೆಲ್ಲಲಿಕ್ಕಾಗದವರನ್ನು ತಂದೆ ಇಲ್ಲದಿರುವಾಗ ಜೆಡಿಎಸ್ ಪಕ್ಷದಿಂದ ಗೆಲ್ಲಿಸಿ ಶಾಸಕನಾಗಿ ಮಾಡಿದ್ದೇನೆಯೇ ಹೊರತು ಯಾವುದೇ ಅಪಚಾರ ನನ್ನಿಂದ ನಡೆದಿಲ್ಲ ಎಂದು ಪರೋಕ್ಷವಾಗಿ ಮಧು ಬಂಗಾರಪ್ಪ ಅವರ ನಡೆಯನ್ನು ಟೀಕಿಸಿದರು.
ನನ್ನ ಅಧಿಕಾರದ ಅವಧಿಯಲ್ಲಿ ಸೊರಬ ತಾಲೂಕಿಗೆ ನೀರಾವರಿ ಸೇರಿದಂತೆ ಅಭಿವೃದ್ಧಿ ಕಾಮಗಾರಿಗಳಿಗೆ ನನ್ನದೇ ಆದ ಕೊಡುಗೆ ನೀಡಿದ್ದೇನೆ. ರಾಜ್ಯದಲ್ಲಿ ೨ ಪಕ್ಷಗಳಿಂದ ಬೇಸತ್ತ ಜನತೆ ಜೆಡಿಎಸ್ ಸರಕಾರ ತರಲು ಆಸಕ್ತಿ ತೋರಿದ್ದು, ಜನರ ಆಶೀರ್ವಾದಿಂದ ಜೆಡಿಎಸ್ ಅಧಿಕಾರಕ್ಕೆ ಬರುವುದು ಖಚಿತ. ಅಧಿಕಾರಕ್ಕೆ ಬಂದ ಕೂಡಲೆ ಜನತೆಯ ಪ್ರಗತಿಯ ದೃಷ್ಟಿಯಿಂದ ಪಂಚರತ್ನ ಯೋಜನೆಗಳನ್ನು ಜಾರಿಗೊಳಿಸಲಾಗುವುದು ಎಂದರು.
ಜೆಡಿಎಸ್ ಅಧಿಕಾರಕ್ಕೆ ಬಂದರೆ ಬಡ ವಿದ್ಯಾರ್ಥಿಗಳಿಗೆ ಉಚಿತ ಶಿಕ್ಷಣ, ಆರೋಗ್ಯ ವಿಮೆ, ರೈತರಿಗೆ ನೆರವು, ಮನೆಗಳ ನಿರ್ಮಾಣ, ವೃದ್ಯಾಪ್ಯ ವೇತನ ಹೆಚ್ಚಳ ಸೇರಿದಂತೆ ಹಲವಾರು ಕಲ್ಯಾಣ ಕಾರ್ಯಕ್ರಮಗಳನ್ನು ನಾಡಿನ ಜನತೆಗೆ ನೀಡುವುದಾಗಿ ಭರವಸೆ ನೀಡಿದರು.
ಜೆಡಿಎಸ್ ಅಭ್ಯರ್ಥಿ ಬಾಸೂರು ಚಂದ್ರೇಗೌಡ ಮಾತನಾಡಿ, ರಾಜ್ಯದಲ್ಲಿ ಕುಮಾರ ಸ್ವಾಮಿಯವರ ಆಡಳಿತದಲ್ಲಿ ಜಾರಿಗೊಳಿಸಿದ ಜನಪರ, ರೈತಪರ, ಬಡವರ ಪರ ಹಲವಾರು ಕಾರ್ಯಕ್ರಮಗಳು ಮನೆಮಾತಾಗಿವೆ. ತಾಲೂಕಿನಲ್ಲಿ ೬೦ ವರ್ಷಗಳ ಒಂದೇ ಕುಟುಂಬದ ಆಡಳಿತವನ್ನು ಬದಲಿಸಲು ಜನರು ಸಿದ್ಧರಾಗಿದ್ದು ನನ್ನ ಗೆಲುವು ಖಚಿತ ಎಂದರು. ಜೆಡಿಎಸ್ ರಾಜ್ಯ ಕಾರ್ಯದರ್ಶಿ ಎನ್.ಕುಮಾರ್, ರಾಜ್ಯ ಉಪಾಧ್ಯಕ್ಷ ಕೆ.ಅಜ್ಜಪ್ಪ, ಜೆಡಿಎಸ್ ಜಿಲ್ಲಾಧ್ಯಕ್ಷ ಶ್ರೀಕಾಂತ್, ತಾಲುಕು ಅಧ್ಯಕ್ಷ ಶಿವಪ್ಪ ದ್ವಾರಳ್ಳಿ, ಪ್ರಧಾನ ಕಾರ್ಯದರ್ಶಿ ಪ್ರಶಾಂತ್ ತತ್ತೂರು, ಸಾಗರ ಜೆಡಿಎಸ್ ಅಧ್ಯಕ್ಷ ಕನ್ನಪ್ಪ, ಸೇರಿದಂತೆ ನೂರಾರು ಮುಖಂಡರಿದ್ದರು.