ತೀರ್ಥಹಳ್ಳಿ: ಬುದ್ದಿವಂತರ ಮತಕ್ಷೇತ್ರ ತೀರ್ಥಹಳ್ಳಿಯಲ್ಲಿ ಈ ಬಾರಿ ಸಾಂಪ್ರದಾಯಕ ಎದುರಾಳಿಗಳಾದ ಕಿಮ್ಮನೆ ರತ್ನಕಾರ್ ಮತ್ತು ಆರಗ ಜ್ಞಾನೇಂದ್ರ ನಡುವೆ ನೇರ ಹಣಾಹಣಿ ಇದೆ. ಒಬ್ಬರಿಗೆ ಆಡಳಿತ ಸರಕಾರದಿಂದ ತಂದ ಯೋಜನೆಗಳು ಬೆನ್ನಿಗಿದ್ದರೆ, ಮತ್ತೊಬ್ಬರಿಗೆ ಅವರ ಅವಧಿಯಲ್ಲಿ ಮಾಡಿದ ಕೆಲಸ ಕ್ಲೀನ್ ಇಮೇಜ್ ಮತ್ತು ಜನಪರ ಚಿಂತನೆಗಳೇ ಬೆಂಗಾವಲಾಗಿವೆ. ಇಬ್ಬರೂ ತಮ್ಮ ತಮ್ಮ ವಲಯದಲ್ಲಿ ಉತ್ತಮ ಹೆಸರು ಕಾಯ್ದುಕೊಂಡಿದ್ದು, ಇಬ್ಬರಿಗೂ ಕೊನೇ ಚುನಾವಣೆ ಆಗಿರುವುದರಿಂದ ಯಾರ ಪರ ಮಲೆನಾಡು ಮಂದಿ ನಿಲ್ಲುತ್ತಾರೆ ಎಂಬುದನ್ನು ಊಹಿಸುವುದು ಕಷ್ಟ ಸಾಧ್ಯವಾಗಿದೆ
ಬಿಜೆಪಿ ಮತ್ತು ಕಾಂಗ್ರೆಸ್‌ನ ಈ ಇಬ್ಬರು ರಾಜಕಾರಣಿಗಳಲ್ಲಿ ಒಂದು ಕಾಲದಲ್ಲಿ ಗುಮ್ಮಿ ನೀರು ಕುಡಿದವ ನಾನು ಎಂದು ರಾಜಕಾರಣ ಮಾಡಿಕೊಂಡು ಬಂದು ಕಿಮ್ಮನೆ ಕುಟುಂಬದ ಸಿರಿತನವನ್ನು ಕುಟುಕುತಿದ್ದ ಆರಗ ಜ್ಞಾನೇಂದ್ರ ಅವರೂ ಈಗ ಸ್ಥಿತಿವಂತರೇ ಆಗಿದ್ದಾರೆ. ಸಚಿವರಾದ ಮೇಲೆ ಆರ್ಥಿಕವಾಗಿ ಪ್ರಬಲವಾಗಿದ್ದಾರೆನ್ನಲಾಗಿದ್ದು, ಈ ಚುನಾವಣೆಯಲ್ಲಿ ಎಲ್ಲಾ ಪ್ರಭಾವಕ್ಕೆ ಅಣಿಯಾಗಿದ್ದಾರೆ. ಕಿಮ್ಮನೆ ರತ್ನಾಕರ್ ಅವರು ಹೋದ ಕಡೆಯಲ್ಲಾ ಜನರೇ ಖರ್ಚಿಗೆ ಕಾಸು ಕೊಡುತಿದ್ದು, ಆದರ್ಶ ರಾಜಕಾರಣಿ ಶಾಂತವೇರಿ ಗೋಪಾಲಗೌಡರ ಚುನಾವಣೆಯನ್ನು ನೆನಪಿಸುತ್ತಿದೆ.
ಸಮಸ್ಯೆಗಳು:
ಕ್ಷೇತ್ರದಲ್ಲಿ ಅಡಕೆ ಎಲೆಚುಕ್ಕಿರೋಗ, ಕಸ್ತೂರಿ ರಂಗನ್ ವರದಿ, ಗುಟ್ಕಾ ನಿಷೇಧ, ಬಗರ್‌ಹುಕುಂ ಸಮಸ್ಯೆಗಳು ಎಂದಿನಂತೆ ಮುನ್ನೆಲೆಯಲ್ಲಿವೆ.
ಜಾತಿ ಲೆಕ್ಕಾಚಾರ:
ಒಕ್ಕಲಿಗರು, ಈಡಿಗರು, ಮುಸ್ಲಿಮರು, ಬ್ರಾಹ್ಮಣರು ಹಾಗೂ ಎಸ್ಸಿ ಎಸ್ಟಿ ಮತಗಳು ಗಣನೀಯ ಪ್ರಮಾಣದಲ್ಲಿದ್ದು, ಮೂರೂ ಪ್ರಮುಖ ಪಕ್ಷಗಳ ಅಭ್ಯರ್ಥಿಗಳು ಒಕ್ಕಲಿಗರೇ ಆಗಿದ್ದಾರೆ. ಕ್ಷೇತ್ರ ವಿಂಗಡಣೆಯ ಬಳಿಕ ತೀರ್ಥಹಳ್ಳಿ ಕ್ಷೇತ್ರಕ್ಕೆ ಹುಂಚ, ನಗರ ಹೋಬಳಿಗಳು ಸೇರಿದ ಬಳಿಕ ಈಡಿಗರ ಪ್ರಾಬಲ್ಯವೂ ಹೆಚ್ಚಿದೆ. ಈ ಸಮುದಾಯ ಸಾರಾಸಗಟಾಗಿ ಬೆಂಬಲಿಸುವ ಅಭ್ಯರ್ಥಿ ಗೆಲ್ಲುತ್ತಾರೆ ಎಂಬ ವಾತಾವರಣವಿದೆ.
ಹಲವು ಮುಖಾಮುಖಿ:
ಸತತವಾಗಿ ಹತ್ತು ಚುನಾವಣೆಯಲ್ಲಿ ಸ್ಪರ್ಧಿಸಿರುವ ಬಿಜೆಪಿಯ ಅಭ್ಯರ್ಥಿ ಆರಗ ಜ್ಞಾನೇಂದ್ರ ಗೃಹ ಸಚಿವರಾಗಿ ಅಧಿಕಾರದ ಅನುಭವದೊಂದಿಗೆ ಐದನೇ ಗೆಲುವಿಗಾಗಿ ಬಿರುಸಿನ ಹೋರಾಟ ನಡೆಸುತ್ತಿದ್ದಾರೆ. ಎರಡು ಬಾರಿ ಕ್ಷೇತ್ರದ ಶಾಸಕರಾಗಿ, ಈ ಹಿಂದೆ ಶಿಕ್ಷಣ ಸಚಿವರಾಗಿದ್ದ ಕಿಮ್ಮನೆ ರತ್ನಾಕರ್ ಮತ್ತೊಮ್ಮೆ ಗೆಲುವಿನ ಹಾದಿ ಹಿಡಿಯಬೇಕೆಂಬ ಹಠ ಹಿಡಿದು ಕ್ಷೇತ್ರಾದ್ಯಂತ ಬಿರುಸಿನ ಪ್ರಚಾರದಲ್ಲಿ ತೊಡಗಿದ್ದಾರೆ. ಈ ಇಬ್ಬರು ಮುಖ್ಯ ಪ್ರತಿಸ್ಪರ್ಧಿಗಳ ನಡುವೆ ಜೆಡಿಎಸ್ ಅಭ್ಯರ್ಥಿ ಯಡೂರು ರಾಜಾರಾಮ್ ಹೆಗ್ಡೆ ,ಆಪ್ ಅಭ್ಯರ್ಥಿ ಸಾಲೂರು ಶಿವಕುಮಾರ್ ಹಾಗೂ ಕೆ.ಆರ್.ಎಸ್. ಪಕ್ಷದ ಅರುಣ್ ಕುಮಾರ್ ಕೂಡ ಸ್ಪರ್ಧೆಯಲ್ಲಿದ್ದಾರೆ.
2018ರ ಚುನಾವಣೆಯಲ್ಲಿ 22,500 ಮತಗಳ ಅಂತರದಲ್ಲಿ ಬಿಜೆಪಿಯ ಆರಗ ಜ್ಞಾನೇಂದ್ರ ಕಾಂಗ್ರೇಸ್ ಅಭ್ಯರ್ಥಿ ಕಿಮ್ಮನೆ ರತ್ನಾಕರ್ ವಿರುದ್ಧ ಜಯಭೇರಿ ಬಾರಿಸಿದ್ದರು,ಆ ಚುನಾವಣೆಯಲ್ಲಿ ಜೆಡಿಎಸ್‌ನಿಂದ ಸ್ಪರ್ದಿಸಿದ್ದ ಆರ್.ಎಂ.ಮಂಜುನಾಥ್ ಗೌಡ 40,000 ಮತಗಳನ್ನು ಪಡೆದಿದ್ದರು,ಅಂದು ಕಿಮ್ಮನೆ ರತ್ನಾಕರ್ ಪಡೆದಿದ್ದು 42,000 ಮತಗಳು,ಆದರೆ ಈ ಬಾರಿಯ ಚುನಾವಣೆಯಲ್ಲಿ ಆರ್.ಎಂ.ಮಂಜುನಾಥ್ ಗೌಡರ ಸಾರಥ್ಯದಲ್ಲಿ ಕಾಂಗ್ರೆಸ್ ಪಕ್ಷ ಕ್ಷೇತ್ರದಲ್ಲಿ ಪ್ರಚಾರದಲ್ಲಿ ಮುನ್ನುಗ್ಗುತ್ತಿದೆ.
ಬಿಜೆಪಿಯ ಡಬ್ಬಲ್ ಇಂಜಿನ್ ಸರ್ಕಾರದ ಸಾಧನೆ,ಕ್ಷೇತ್ರಕ್ಕೆ ತಂದ ೩೨೫೩ಕೋಟಿ ಅನುದಾನದ ಅಭಿವೃದ್ದಿಯ ಹೆಸರಲ್ಲಿ ಬಿಜೆಪಿಯ ಲೆಕ್ಕಾಚಾರದ ಪ್ರಚಾರವು ಹೆಚ್ಚಾಗಿ ಕಂಡು ಬಂದಿದೆ,ಒಗ್ಗಟ್ಟಿನ ಪ್ರಚಾರ,ತಂತ್ರಗಾರಿಕೆಯೊಂದಿಗೆ ಬಿಜೆಪಿಗೆ ಗೆಲುವು ಸಲೀಸು ಎಂಬ ಮಾತು ಬಿಜೆಪಿ ವಲಯದಲ್ಲಿ ಪ್ರತಿಧ್ವನಿಸುತ್ತಿದೆ.
ಬಿಜೆಪಿ ಮತ್ತು ಕಾಂಗ್ರೇಸ್ ಪಕ್ಷದ ಪ್ರಭಾವಿ ಮುಖಂಡರು,ಕಾರ್ಯಕರ್ತರು ಕ್ಷೇತ್ರದ ಜಾತಿವಾರು ಮತಗಳನ್ನು ಲೆಕ್ಕಹಾಕುತ್ತ ಕೊನೆಕ್ಷಣದಲ್ಲಿ ಜನ ಬಲದೊಂದಿಗೆ ,ಹಣಬಲವು ಮುಖ್ಯ ಎಂಬ ಚಿಂತನೆಯಲ್ಲಿದ್ದಾರೆ.
ಕಿಮ್ಮನೆಗೆ ಆರ್.ಎಂ.ಎಂ.ಆನೆ ಬಲ:
ಸಹಕಾರಿ ಧುರೀಣ ಆರ್.ಎಂ.ಮಂಜುನಾಥ್‌ಗೌಡ ಅವರು ವಿಧಾನ ಸಭೆ ಚುನಾವಣೆಯಲ್ಲಿ ಗೆಲುವಿನ ಸನಿಹಕ್ಕೆ ಬಂದವರು. ಈ ಬಾರಿ ಕಾಂಗ್ರೆಸ್ ಪಕ್ಷದಲ್ಲಿದ್ದಾರೆ. ಕ್ಷೇತ್ರದಲ್ಲಿ ತಮ್ಮದೇ ಆದ ಪ್ರಭಾವ ಹೊಂದಿರುವ ಅವರು ಈಗ ಕಿಮ್ಮನೆ ಪರವಾಗಿ ಹಗಲಿರಳೂ ಕೆಲಸ ಮಾಡುತ್ತಿರುವುದು. ಕಾಂಗ್ರೆಸ್ ಅಭ್ಯರ್ಥಿಗೆ ಆನೆಬಲ ಬಂದಿದೆ. ಆರಂಭದಲ್ಲಿ ದೂರವಿದ್ದ ಈ ನಾಯಕರು ಕಾಂಗ್ರೆಸ್ ಗೆಲ್ಲಿಸಲೆಂದೇ ಒಂದಾಗಿದ್ದಾರೆ. ಕೆಪಿಸಿಸಿ ಅಧ್ಯಕ್ಷ ಡಿಕೆಶಿ ಅವರು ಇಬ್ಬರಿಗೂ ಗೆದ್ದು ಬನ್ನಿ ಎಂದು ಹೇಳಿದ್ದಾರೆ. ಈ ಕಾರಣದಿಂದ ಇಬ್ಬರೂ ನಾಯಕರು ಒಂದಾಗಿ ಕಾಂಗ್ರೆಸ್ ಆಡಳಿತ, ಗ್ಯಾರಂಟಿಗಳು, ಬಿಜೆಪಿಯ ವೈಫಲ್ಯಗಳನ್ನು ಮುಂದಿಟ್ಟುಕೊಂಡು ಜನರ ಬಳಿ ಹೋಗಿದ್ದಾರೆ.
ಮತಗಣಿತ:
ಮತದಾರರು;188,146
ಪುರುಷರು:92822
ಮಹಿಳೆಯರು:95269