Malenadu Mitra
ರಾಜ್ಯ ಶಿಕಾರಿಪುರ ಶಿವಮೊಗ್ಗ

ಸಿಹಿಮೊಗೆಯ ತುಂಗಾಪಾನ ಯಾರಿಗೆ ?, ಕಾಂಗ್ರೆಸ್,ಬಿಜೆಪಿಗೆ ಹಿತಶತ್ರುಗಳ ಕಾಟ, ಅಸದೃಶ ಮತ ನಂಬಿಕೊಂಡ ಆಯನೂರು ಮಂಜುನಾಥ್‌

ಮಲೆನಾಡಿನ ಹೆಬ್ಬಾಗಿಲು,ಸಾಂಸ್ಕೃತಿಕ ನಗರಿ ಶಿವಮೊಗ್ಗ ನಗರ ಕ್ಷೇತ್ರದ ಚುನಾವಣೆ ಈ ಬಾರಿ ತನ್ನ ಮಗ್ಗಲು ಹೊರಳಿಸಿದೆಯೇ ಎಂಬ ಭಾವ ಮೂಡುತ್ತಿದೆ. ಈ ಕ್ಷೇತ್ರದಿಂದ ಐದು ಬಾರಿ ಗೆದ್ದು ಬೀಗಿದ್ದ ಮಾಜಿ ಡಿಸಿಎಂ ಕೆ.ಎಸ್.ಈಶ್ವರಪ್ಪ ಅವರು ಚುನಾವಣೆ ರಾಜಕಾರಣದಿಂದ ನೇಪಥ್ಯಕ್ಕೆ ಸರಿದಿದ್ದಾರೆ. ನಾಲ್ಕೂ ಮನೆಯನ್ನು ಪ್ರತಿನಿಧಿಸಿದ ಖ್ಯಾತಿವೆತ್ತ ಆಯನೂರು ಮಂಜುನಾಥ್ ಅವರು ಮತ್ತೊಮ್ಮೆ ಬಿಜೆಪಿ ಬಿಟ್ಟು ಜಾತ್ಯತೀತ ಜನತಾದಳದ ಹುರಿಯಾಳಾಗಿದ್ದಾರೆ ಈ ಎರಡು ಬೆಳವಣಿಗೆಗಳು ಈ ಕ್ಷೇತ್ರ ಈ ಬಾರಿ ಹೊರಳುದಾರಿಯಲ್ಲಿ ಸಾಗಲಿದೆಯೇ ಎಂಬ ಸಂಕೇತವನ್ನು ನೀಡಿವೆ.
೧೯೮೯ ಕ್ಕೂ ಮೊದಲು ಕಾಂಗ್ರೆಸ್ ಪಾರುಪಥ್ಯದ ಕಾಲದಲ್ಲಿ ಈ ಕ್ಷೇತ್ರ ಆ ಪಕ್ಷದ ಭದ್ರಕೋಟೆಯಾಗಿತ್ತು. ಬಿಜೆಪಿಯ ಕಮಲ ಅರಳಿದ ಮೇಲೆ ಐದು ಚುನಾವಣೆಯಲ್ಲಿ ಅದೇ ಪಕ್ಷ ಗೆದ್ದಿತ್ತು. ಅದಾದ ಮೇಲೆ ೧೯೯೯ ಮತ್ತು ೨೦೧೩ ರಲ್ಲಿ ಕಾಂಗ್ರೆಸ್ ಗೆದ್ದಿರುವುದು ಇತಿಹಾಸ.
ಪ್ರಸಕ್ತ ಚುನಾವಣೆಯ ಕಣದಲ್ಲಿ ಬಿಜೆಪಿಯಿಂದ ಇಷ್ಟು ವರ್ಷ ಈಶ್ವರಪ್ಪರ ನೆರಳಂತೆ ಕೆಲಸ ಮಾಡಿದ್ದ ಪರಿವಾರದ ಕಟ್ಟಾಳು ಎಸ್.ಎನ್.ಚನ್ನಬಸಪ್ಪ ಬಿಜೆಪಿ ಅಭ್ಯರ್ಥಿಯಾಗಿದ್ದರೆ, ಕಾಂಗ್ರೆಸ್‌ನಿಂದ ೧೯೯೯ ರಲ್ಲಿ ಈಶ್ವರಪ್ಪರನ್ನು ಸೋಲಿಸಿದ್ದ ಎಚ್.ಎಂ.ಚಂದ್ರಶೇಖರಪ್ಪ ಅವರ ಮಗ ಹೆಚ್.ಸಿ.ಯೋಗೇಶ್ ಸ್ಪರ್ಧೆ ಮಾಡಿದ್ದರೆ, ಹಿರಿಯ ನಾಯಕ ಪ್ರಖರ ವಾಗ್ಮಿ ಆಯನೂರು ಮಂಜುನಾಥ್ ಅವರು ಜೆಡಿಎಸ್‌ನಿಂದ ತಮ್ಮ ಅದೃಷ್ಟವನ್ನು ಒರೆಗೆ ಹಚ್ಚಿದ್ದಾರೆ. ಉಳಿದಂತೆ ಸ್ವಚ್ಚ ಪಕ್ಷ ಆಪ್‌ನಿಂದ ನೇತ್ರಾವತಿ, ಪ್ರಜಾಕೀಯದಿಂದ ವೆಂಕಟೇಶ್ ಸೇರಿದಂತೆ ಒಟ್ಟು ೧೧ ಅಭ್ಯರ್ಥಿಗಳು ಕಣದಲ್ಲಿದ್ದಾರೆ.

ದೇಶದ ಗಮನ:

ಶಿವಮೊಗ್ಗ ಕ್ಷೇತ್ರದಲ್ಲಿ ಈಶ್ವರಪ್ಪರಿಗೆ ಟಿಕೆಟ್ ಕೊಡುವುದಿಲ್ಲ ಎಂಬುದನ್ನೇ ರಾಷ್ಟ್ರೀಯ ವಿಷಯವನ್ನಾಗಿಸಿದ ಬಿಜೆಪಿ, ಚುನಾವಣೆ ರಾಜಕೀಯದಿಂದ ಒತ್ತಾಯ ಪೂರ್ವಕವಾಗಿ ನಿವೃತ್ತಿ ಘೋಷಿಸುವಂತೆ ಮಾಡಿತ್ತು. ಇದಾದ ಬಳಿಕ ಖುದ್ದು ಪ್ರಧಾನಿಯೇ ದೂರವಾಣಿ ಕರೆ ಮಾಡಿ ನಿಮ್ಮ ತ್ಯಾಗ ಅನನ್ಯ, ಬಿಜೆಪಿಗೆ ಮಾದರಿ ಎಂದು ಈಶ್ವರಪ್ಪರನ್ನು ಕೊಂಡಾಡಿದ್ದರು. ಈ ಕಾರಣಕ್ಕೆ ಶಿವಮೊಗ್ಗ ಕ್ಷೇತ್ರ ದೇಶದ ಗಮನ ಸೆಳೆದಿದೆ. ಇನ್ನೊಂದೆಡೆ ಕೋಮುಗಲಭೆ ಕಾರಣಕ್ಕೆ ಅಪಖ್ಯಾತಿಗೆ ಕಾರಣವಾಗಿದ್ದ ಶಿವಮೊಗ್ಗ ನಗರವನ್ನು ಸರ್ವಜನಾಂಗದ ಶಾಂತಿಯ ತೋಟ ಮಾಡುವೆ ಎಂದು ಆಯನೂರು ಮಂಜುನಾಥ್ ಆವರು ಈ ಕ್ಷೇತ್ರದತ್ತ ಜನರು ನೋಡುವಂತೆ ಮಾಡಿದರು. ಇಂತಿಪ್ಪ ಕ್ಷೇತ್ರದಲ್ಲಿ ಆಮ್ ಆದ್ಮಿ ಪಕ್ಷ ಸ್ವಾಭಿಮಾನದ ಹೋರಾಟ ಮಾಡುತ್ತಿದ್ದರೆ, ಕಾಂಗ್ರೆಸ್, ಬಿಜೆಪಿ ಹಾಗೂ ಜೆಡಿಎಸ್ ನಡುವೆ ತ್ರಿಕೋನ ಸ್ಪರ್ಧೆ ಏರ್ಪಟ್ಟಿದೆ.
ಜಾತಿ ಲೆಕ್ಕಾಚಾರ ಏನು:
ಶಿವಮೊಗ್ಗ ಒಂದು ಕಾಲದಲ್ಲಿ ಬ್ರಾಹ್ಮಣರ ಕ್ಷೇತ್ರ. ಈಶ್ವರಪ್ಪ ಪ್ರವೇಶದ ಬಳಿಕ ಒಮ್ಮೆ ಮಾತ್ರ ಬ್ರಾಹ್ಮಣ ಸಮುದಾಯದ ಕೆ.ಬಿ.ಪ್ರಸನ್ನಕುಮಾರ್ ಕಾಂಗ್ರೆಸ್‌ನಿಂದ ಅಯ್ಕೆಯಾಗಿದ್ದರು. ಪ್ರಸ್ತುತ ಕ್ಷೇತ್ರದಲ್ಲಿ ಲಿಂಗಾಯತರು, ಮುಸ್ಲಿಮರು,ಬ್ರಾಹ್ಮಣರು, ಎಸ್ಸಿ ಎಸ್ಟಿ, ತಮಿಳರ ಮತಗಳು ಗಮನಾರ್ಹವಾಗಿವೆ. ಕುರುಬರು, ಮರಾಠರ ಮತಗಳೂ ಗಣನೀಯ ಪ್ರಮಾಣದಲ್ಲಿವೆ.
ಮೂವರು ಅಭ್ಯರ್ಥಿಗಳು ಲಿಂಗಾಯತರು
ಲಿಂಗಾಯತರಲ್ಲಿ ಒಳಮೀಸಲಾತಿ ಕೂಗೆದ್ದಮೇಲೆ ಒಳಪಂಗಡಗಳ ಚರ್ಚೆ ಮುನ್ನೆಲೆಗೆ ಬಂದಿದೆಯೇ ವಿನಾ ಚುನಾವಣೆ ಬಂದಾಗ ಯಾವತ್ತೂ ಒಗ್ಗಟ್ಟು ಇರುತ್ತದೆ. ಬಿಜೆಪಿಯ ಚನ್ನಬಸಪ್ಪ ಲಿಂಗಾಯತ(ಗೌಳೇರ ಲಿಂಗಾಯತ) ಆಯನೂರು ಮಂಜುನಾಥ್(ಬಣಜಿಗ) ಹಾಗೂ ಯೋಗೇಶ್ ಅವರು (ಸಾದರ) ಲಿಂಗಾಯತರಾಗಿದ್ದಾರೆ. ಶಿವಮೊಗ್ಗ ಕ್ಷೇತ್ರದಲ್ಲಿ ೪೦ ಸಾವಿರಕ್ಕೂ ಹೆಚ್ಚು ಲಿಂಗಾಯತರಿದ್ದು ಅದರಲ್ಲಿ ೩೩ ಸಾವಿರ ಸಾದರಿದ್ದಾರೆ. ಈ ಮೂರು ಅಭ್ಯರ್ಥಿಗಳು ಒಟ್ಟಾರೆಯಾಗಿ ಲಿಂಗಾಯತ ಮತಗಳನ್ನು ಹಂಚಿಕೊಳ್ಳಲಿದ್ದಾರೆ ಆದರೆ ಎಷ್ಟು ಪ್ರಮಾಣದಲ್ಲಿ ಎಂಬುದು ನಿಗೂಢ.
ಬಿಜೆಪಿಯ ನಿರೀಕ್ಷೆ ಏನು?


ಆಡಳಿತ ಪಕ್ಷ ಬಿಜೆಪಿಯ ಅಭ್ಯರ್ಥಿ ಚನ್ನಬಸಪ್ಪ ಅವರು ಹಿಂದುತ್ವ ಮತ್ತು ಅಭಿವೃದ್ಧಿ ಆಧಾರದಲ್ಲಿ ಮತ ಕೇಳುತ್ತಿದ್ದಾರೆ. ಪಕ್ಷದ ನಿಷ್ಟಾವಂತ ಕಾರ್ಯಪಡೆಯ ತಳಪಾಯ ಆ ಪಕ್ಷಕ್ಕಿದೆ. ಫಲಾಪೇಕ್ಷೆಯಿಲ್ಲದೆ ಪಕ್ಷಕ್ಕೆ ದುಡಿಯುವ ದೊಡ್ಡ ಸಮೂಹ ಅಲ್ಲಿದೆ. ಇದೇ ರೀತಿ ನಿರಂತರವಾಗಿ ದುಡಿದ ಚನ್ನಬಸಪ್ಪ ಈ ಬಾರಿ ಕಣಕ್ಕಿಳಿದಿದ್ದಾರೆ. ನಗರ ಸಭೆ, ಮಹಾನಗರ ಪಾಳಿಕೆ, ಸೂಡಾ ಹೀಗೆ ಸ್ಥಳೀಯ ಸಂಸ್ಥೆಗಳಲ್ಲಿಕೆಲಸ ಮಾಡಿರುವ ಅಪಾರ ಅನುಭವ ಅವರಿಗಿದೆ. ಪಕ್ಷದಲ್ಲಿ ಟಿಕೆಟ್ ಕೇಳಿ ಸಿಗದೆ ಹಲವು ಮಂದಿ ಮುನಿಸಿಕೊಂಡಿದ್ದಾರೆ. ರಾಜ್ಯವ್ಯಾಪಿ ಪ್ರಚಾರ ಮಾಡುವ ಹೊಣೆಗಾರಿಕೆ ಇರುವ ಈಶ್ವರಪ್ಪ ಅವರೇ ಕ್ಷೇತ್ರದಲ್ಲಿ ಹೆಚ್ಚು ಗಮನಕೊಟ್ಟಿಲ್ಲ ಎನ್ನಲಾಗಿದೆ. ಬಿಜೆಪಿಯ ಅನೇಕ ಆಕಾಂಕ್ಷಿಗಳಿಗೆ ಚೆನ್ನಿ ಗೆಲ್ಲುವುದು ಬೇಕಾಗಿಲ್ಲ. ಈ ಒಳ ಪೆಟ್ಟುಗಳ ನಡುವೆ ಅವರನ್ನು ಪಕ್ಷ ಮತ್ತು ಸಂಘನಿಷ್ಟೆ ಮಾತ್ರ ಕಾಯಬೇಕಿದೆ. ಪ್ರಧಾನಿ ನರೇಂದ್ರ ಮೋದಿ ಅಲೆ, ಹಿಂದುತ್ವದ ನೆಲೆಯಲ್ಲಿರುವ ಮತಗಳ ದೊಡ್ಡ ಬುಟ್ಟಿ ಅವರ ಬಳಿ ಇವೆ. ಅದರೆ ಗೆಲ್ಲಲು ಅವಷ್ಟೇ ಸಾಕಾಗುವುದಿಲ್ಲ ಎನ್ನವುದು ಸತ್ಯ.
ಮಹತ್ವಾಕಾಂಕ್ಷಿ ಕಾಂಗ್ರೆಸ್ ಅಭ್ಯರ್ಥಿ:

ಹೆಚ್.ಸಿ.ಯೋಗೇಶ್ ಅವರು ವಿದ್ಯಾವಂತ, ಯುವ ಕಾಂಗ್ರೆಸ್‌ನಲ್ಲಿ ರಾಷ್ಟ್ರಮಟ್ಟದ ಸಂಘಟನೆಯಲ್ಲಿ ಕೆಲಸ ಮಾಡಿದವರು. ಸ್ವಾತಂತ್ರ್ಯ ಹೋರಾಟಗಾರರ ಕುಟುಂಬದ ಯೋಗೇಶ್ ಅವರ ತಾತ, ತಂದೆ ಶಾಸಕರಾಗಿದ್ದವರು. ಮೂರು ಬಾರಿ ಪಾಲಿಕೆ ಸದಸ್ಯರಾಗಿದ್ದ ಯೋಗೇಶ್ ಪ್ರಬಲ ಸ್ಪರ್ಧಿಯಾಗಿ ಬಿಂಬಿತರಾಗಿದ್ದಾರೆ. ಅವರ ಈ ಹೈ ಪ್ರೊಫೈಲೇ ಕಾಂಗ್ರೆಸ್‌ನ ಹಲವು ಮಹತ್ವಾಕಾಂಕ್ಷಿಗಳಿಗೆ ಹೊಟ್ಟೆಯಲ್ಲಿ ಹುಣಸೆ ಹಣ್ಣು ಹಿಂಡಿದಂತಾಗುತ್ತಿದೆ. ಇದೇ ಕಾರಣಕ್ಕೆ ಕೆಲವರು ಜತೆಗೆ ಇದ್ದಂತೆ ನಟಿಸುತ್ತಿದ್ದಾರೆ. ಆದರೂ ಕಾಂಗ್ರೆಸ್ ಸಾಂಪ್ರದಾಯಿಕ ಮತ,ವೀರಶೈವ ಸಮಾಜದಲ್ಲಿರುವ ಮತಗಳು, ಹಾಗೂ ಕ್ರಿಶ್ಚಿಯನ್ ಮತ್ತು ಮುಸ್ಲಿಂ ಮತಗಳು ಕಾಂಗ್ರೆಸ್‌ಗೆ ಬಂದರೆ ಸುಲಭವಾಗಿ ದಡ ಸೇರಬಹುದು ಎಂಬುದು ಅವರ ಲೆಕ್ಕಾಚಾರ.

ಆಯನೂರು ಮಂಜುನಾಥ್:

ಹಿರಿಯ ರಾಜಕಾರಣಿ ಆಡಿಬೆಳೆದ ಶಿವಮೊಗ್ಗ ಕ್ಷೇತ್ರದಿಂದ ಶಾಸಕರಾಗಬೇಕು. ಕೋಮುಗಲಭೆಯ ಕಾರಣಕ್ಕೆ ಘನತೆ ಕಳೆದುಕೊಂಡು ಕ್ಷೇತ್ರವನ್ನು ಸರ್ವಜನಾಂಗದ ಶಾಂತಿಯ ತೋಟ ಮಾಡಬೇಕೆಂದು ಆಯನೂರು ಮಂಜುನಾಥ್ ಕೊನೇ ಕ್ಷಣದಲ್ಲಿ ಜೆಡಿಎಸ್ ಟಿಕೆಟ್ ಪಡೆದು ಅಖಾಡಕ್ಕಿಳಿದಿದ್ದಾರೆ. ಒಂದೂವರೆ ವರ್ಷ ವಿಧಾನ ಪರಿಷತ್ ಸದಸ್ಯತ್ವ ಅವಧಿ ಇದ್ದರೂ ರಾಜೀನಾಮೆ ಕೊಟ್ಟು ಬಿಜೆಪಿಯಿಂದ ಹೊರ ಬಂದಿದ್ದಾರೆ. ಅಸಂಘಟಿತ ವಲಯದ ಮತ್ತು ಸಂಘಟಿತ ವಲಯದ ಕಾರ್ಮಿಕರ ನಾಯಕರಾಗಿರುವ ಅವರು ಗೆದ್ದೇ ಗೆಲ್ಲುವೆ ಎಂಬ ಉಮೇದಿನಲ್ಲಿದ್ದಾರೆ. ಮಾಜಿ ಶಾಸಕರ ಕೆ.ಬಿ.ಪ್ರಸನ್ನಕುಮಾರ್, ಜೆಡಿಎಸ್ ಅಧ್ಯಕ್ಷ ಎಂ.ಶ್ರೀಕಾಂತ್ ಅವರುಗಳ ಆನೆಬಲದೊಂದಿಗೆ ತಮ್ಮ ನಾಮಬಲವೂ ಸೇರಿ ಶಾಸನಸಭೆಗೆ ಕೊಂಡೊಯ್ಯಬಲ್ಲದು ಎಂಬ ವಿಶ್ವಾಸ ಅವರದು. ನಗರವನ್ನು ಸದಾ ಅಶಾಂತಿಯ ಮೋಡ್‌ನಲ್ಲಿಡುವ ರಾಜಕಾರಣಿಗಳನ್ನು ಧಿಕ್ಕರಿಸಿ ಪ್ರೀತಿ ಮತ್ತು ಸೌಹಾರ್ದ ನಗರ ಕಟ್ಟೋಣ ಎಂಬ ದ್ಯೇಯವಾಕ್ಯದೊಂದಿಗೆ ಅಭಿವೃದ್ಧಿಯ ಬಗ್ಗೆ ಅವರದೇ ಕನಸು ಇಟ್ಟುಕೊಂಡು ಮತದಾರರ ಮನವೊಲಿಸುತ್ತಿದ್ದಾರೆ. ಅಲ್ಪಸಂಖ್ಯಾತರು, ಬ್ರಾಹ್ಮಣ ಸಮುದಾಯದ ಮತಗಳು ಒಲಿಯಬಹುದು ಎಂಬ ನಿರೀಕ್ಷೆ ಅವರದು.

ಉಳಿದವರು ಪಡೆವ ಮತಗಳು:
ಕಾಂಗ್ರೆಸ್ ಪಕ್ಷ ನಮ್ಮ ಪ್ರತಿಸ್ಪರ್ಧಿ ಬಿಜೆಪಿ ಮಾತ್ರ ಎಂದು ಹೇಳುತ್ತಿದೆ. ಮತ ವಿಭಜನೆ ಆಗಲಿ ಎಂಬ ಕಾರಣಕ್ಕೆ ಬಿಜೆಪಿ ಕ್ಷೇತ್ರದಲ್ಲಿ ತ್ರಿಕೋನ ಸ್ಪರ್ಧೆ ಎಂದು ಹೇಳುತ್ತಿದೆ. ಆಯನೂರು ಮಂಜುನಾಥ್ ನಾನೇ ಮುಂದಿದ್ದು, ನನ್ನ ಸಮೀಪ ಯಾರೂ ಕಾಣುತ್ತಿಲ್ಲ ಎಂದಿದ್ದಾರೆ. ಹಿಂದುತ್ವ, ಶಾಂತಿ ಸೌಹಾರ್ದತೆ, ಅಭಿವೃದ್ಧಿ, ಭ್ರಷ್ಟಾಚಾರದಂತಹ ಪ್ರಮುಖ ವಿಷಯಗಳ ಮೇಲೆ ನಡೆಯುವ ಈ ಚುನಾವಣೆಯಲ್ಲಿ ಪಕ್ಷೇತರ ಅಭ್ಯರ್ಥಿಗಳು ಪಡೆಯುವ ಮತಗಳೂ ಗೆಲುವಿನ ಮೇಲೆ ಪರಿಣಾಮ ಬೀರಬಹುದು.

ಒಳಪೆಟ್ಟು
ಶಿವಮೊಗ್ಗ ಕ್ಷೇತ್ರದಲ್ಲಿ ಮೊದಲಿಂದಲೂ ಈಶ್ವರಪ್ಪ ಮತ್ತು ಯಡಿಯೂರಪ್ಪ ಬಣದ ನಡುವೆ ಭಿನ್ನಮತ ಇತ್ತು. ಅದು ಮುಂದುವರಿದರೆ ಬಿಜೆಪಿ ಅಭ್ಯರ್ಥಿಗೆ ಮಗ್ಗಲು ಮುಳ್ಳಾಗಲಿದೆ. ಅತಿಯಾದ ಆತ್ಮ ವಿಶ್ವಾಸ ಸಹಮುಖಂಡರ ತಾತ್ಸಾರ ಯೋಗೇಶ್‌ಗಿರುವ ನಕಾರಾತ್ಮಕ ಅಂಶ. ಅಧಿಕಾರದಲ್ಲಿರುವಾಗ ವೀರಶೈವ ಸಂಘಟನೆಗೆ ಮಹತ್ವ ಕೊಡಲಿಲ್ಲ. ಈಗ ಸಮುದಾಯದತ್ತ ಮುಖ ಮಾಡುತ್ತಿದ್ದಾರೆ ಎಂಬ ಅಂಶ ಆಯನೂರು ಮಂಜುನಾಥ್‌ಗೆ ತೊಡಕಾಗಬಹುದು. ಒಟ್ಟಿನಲ್ಲಿ ಸಿಹಿಮೊಗೆಯ ತುಂಗಾಪಾನ ಯಾರಿಗೆ ಸಿಗುವುದೊ, ಬಿಜೆಪಿಯೂ ಅಲ್ಲದ ಕಾಂಗ್ರೆಸ್ಸೂ ಅಲ್ಲದ ತಟಸ್ಥ ಮತದಾರ ಯಾರಿಗೆ ಒಲಿಯುತ್ತಾನೊ ಅವರು ಗೆಲುವಿನ ನಗೆ ಬೀರಬಹುದು.

Ad Widget

Related posts

ಎಸಿಬಿ ಬಲೆಗೆ ಎಂಜಿನಿಯರ್

Malenadu Mirror Desk

ಭದ್ರಾವತಿಯಲ್ಲಿ ಕೋಮುಗಲಭೆ ಸೃಷ್ಟಿಸಲು ಬಿಜೆಪಿ ಹುನ್ನಾರ

Malenadu Mirror Desk

ಬೃಹತ್‌ ಸ್ವದೇಶಿ ಮೇಳದಲ್ಲಿ ಮಳಿಗೆಗೆ ಬುಕ್ಕಿಂಗ್‌

Malenadu Mirror Desk

Leave a Comment

error: Content is protected !! ಮಲೆನಾಡು ಮಿರರ್‌ನಲ್ಲಿ ಪ್ರಕಟಗೊಂಡ ಸುದ್ದಿ, ಲೇಖನ, ಫೊಟೊಗಳನ್ನುಪೂರ್ವಾನುಮತಿಯಿಲ್ಲದೆ ನಕಲು ಮಾಡುವುದು ಕಾನೂನುಬಾಹಿರವಾಗಿದೆ.