Malenadu Mitra
ರಾಜ್ಯ ಶಿವಮೊಗ್ಗ

ಆಗಸ್ಟ್‌ನಲ್ಲಿ ರೈಲ್ವೆ ಮೇಲ್ಸೇತುವೆ, ತುಂಗಾ ಸೇತುವೆ ಲೋಕಾರ್ಪಣೆ: ಸಂಸದ ರಾಘವೇಂದ್ರ ಭರವಸೆ

ಶಿವಮೊಗ್ಗ: ಕೇಂದ್ರ ಸರ್ಕಾರಕ್ಕೆ 9 ವರ್ಷ ತುಂಬಿದ ಸುಸಂದರ್ಭದಲ್ಲಿ ಪ್ರಧಾನಿ ಮೋದಿ ಅವರ ಸೂಚನೆಯಂತೆ ಅಭಿವೃದ್ಧಿ ಕಾರ್ಯಗಳಿಗೆ ವೇಗ ಹೆಚ್ಚಿಸಲು ಎಲ್ಲಾ ಸಂಸದರು ವಿಕಾಸತೀರ್ಥ ರ್‍ಯಾಲಿ ಅಂಗವಾಗಿ ಸ್ಥಳ ವೀಕ್ಷಣೆ ಕಾರ್ಯಕ್ರಮ ಹಮ್ಮಿಕೊಂಡಿದ್ದೇವೆ ಎಂದು ಸಂಸದ ಬಿ.ವೈ. ರಾಘವೇಂದ್ರ ಹೇಳಿದರು.
ಅವರು ನಗರದ ವಿದ್ಯಾನಗರದ ರೈಲ್ವೇ ಮೇಲ್ಸೇತುವೆ ಕಾಮಗಾರಿ ವೀಕ್ಷಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದರು. 44 ಕೋಟಿ ರೂ. ವೃತ್ತಾಕಾರದ ಸೇತುವೆ ಕಾಮಗಾರಿ ಮುಗಿಯುವ ಹಂತದಲ್ಲಿದ್ದು, ರೈಲ್ವೇ ಟ್ರ್ಯಾಕ್ ಕ್ರಾಸಿಂಗ್ ನಲ್ಲಿ ಮೇಲ್ ಕವಚ ಎತ್ತಿ ಇಡುವ ಕೆಲಸ ಬಾಕಿ ಇದೆ. ಆ. 15ಕ್ಕೆ ನಾಗರಿಕರಿಗೆ ಇದು ಕೊಡುಗೆಯಾಗಿ ಸಮರ್ಪಣೆಯಾಗಲಿದೆ ಎಂದರು.
ಭದ್ರಾವತಿ ಕಡದಕಟ್ಟೆ ರೈಲ್ವೇ ಲೆವೆಲ್ ಕ್ರಾಸಿಂಗ್ ಹಂತ ಹಂತವಾಗಿ ಲೋಕಾರ್ಪಣೆಯಾಗಲಿದೆ. ಈ ಬಗ್ಗೆ ಹುಬ್ಬಳ್ಳಿಯಲ್ಲಿ ರೈಲ್ವೇ ಜಿಎಂ ಅವರೊಂದಿಗೆ ಸಭೆ ನಡೆಸಲಾಗಿದೆ. ಡಿಸೆಂಬರ್ ಒಳಗೆ ರೈಲ್ವೇ ಮೇಲ್ಸೇತುವೆ ಕಾಮಗಾರಿಗಳು ಪೂರ್ಣವಾಗಲಿವೆ ಎಂದು ಹೇಳಿದರು.
ಬೈಪಾಸ್ ರಸ್ತೆಯಲ್ಲಿ ತುಂಗಾ ಸೇತುವೆ 20 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣವಾಗಿದ್ದು, ಆಗಸ್ಟ್ ನಲ್ಲಿ ಉದ್ಘಾಟನೆಗೊಳ್ಳಲಿದೆ. ಡಬ್ಬಲ್ ಇಂಜಿನ್ ಸರ್ಕಾರ ಏನು ಮಾಡಿದೆ ಎಂದು ಹಾಸ್ಯ ಮಾಡುತ್ತಿರುವವರು ಚರ್ಚೆಗೆ ಬರಲಿ ಪಟ್ಟಿ ನೀಡುತ್ತೇನೆ ಎಂದರು.

ದಾಖಲೆ ಅವಧಿಯಲ್ಲಿ ವಿಮಾನ ನಿಲ್ದಾಣ ಕಾಮಗಾರಿ ಪೂರ್ಣಗೊಂಡಿದೆ. ಬೈಪಾಸ್ ರೋಡ್, ಶಿವಮೊಗ್ಗ ರಿಂಗ್ ರೋಡ್ ಕಾಮಗಾರಿ ಮುಂದುವರೆಸಲು ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ವೇಗಗೊಳಿಸಲು ಕೇಂದ್ರ ಸಚಿವ ನಿತಿನ್ ಗಡ್ಕರಿ ಅವರನ್ನು ಈಗಾಗಲೇ ಭೇಟಿ ಮಾಡಿ ವಿನಂತಿಸಿದ್ದೇನೆ. ಶಿವಮೊಗ್ಗ -ಸವಳಂಗ -ದಾವಣಗೆರೆ ಹೆದ್ದಾರಿಯಲ್ಲಿ ವಾಹನಗಳ ಸಂಖ್ಯೆ ಹೆಚ್ಚಾಗಿದ್ದು, ಹೆದ್ದಾರಿ ಮೇಲ್ದರ್ಜೆಗೇರಿಸಲು ಒತ್ತಾಯಿಸಿದ್ದೇನೆ ಎಂದರು.

ಭದ್ರಾವತಿಯ ವಿಐಎಸ್‌ಎಲ್ ಕಾರ್ಖಾನೆ ಪುನಶ್ಚೇತನ ವಿಚಾರವಾಗಿ ಸಂಬಂಧಪಟ್ಟ ಸಚಿವರ ಬಳಿ ಚರ್ಚೆ ನಡೆಸಿದ್ದೇನೆ. ಹಣಕಾಸು ಸಚಿವರಿಗೂ ಮನವಿ ಮಾಡಿದ್ದು, ಸೇಲ್ ಅಧ್ಯಕ್ಷರೊಂದಿಗೆ ಈ ವಿಚಾರವಾಗಿ ಮಾತನಾಡಿದ್ದೇನೆ ಎಂದರು.

ಶಿವಮೊಗ್ಗದ ವಿಮಾನ ನಿಲ್ದಾಣದಿಂದ ಲಾಭ
ರೈಲ್ವೆ ಕ್ಷೇತ್ರದಲ್ಲೂ ಕೂಡ ಮಹತ್ತರ ಬದಲಾವಣೆಯಾಗಿವೆ. ಶಿವಮೊಗ್ಗ-ಶಿಕಾರಿಪುರ-ರಾಣೆಬೆನ್ನೂರಿಗೆ ನೂತನ ರೈಲು ಸಂಪರ್ಕ ಕಲ್ಪಿಸಲಾಗುತ್ತಿದೆ. 10 ಜಿಲ್ಲೆಗಳಿಗೆ ಇದು ಸಂಪರ್ಕ ಕಲ್ಪಿಸಲಿದೆ. ಇದರಿಂದಾಗಿ ಶಿವಮೊಗ್ಗ ಜಿಲ್ಲೆ ಮತ್ತಷ್ಟು ಅಭಿವೃದ್ಧಿ ಆಗುವುದರಲ್ಲಿ ಅನುಮಾನವೇ ಇಲ್ಲ ಎಂದು ವಿಶ್ವಾಸ ವ್ಯಕ್ತಪಡಿಸಿದರು.ಪ್ರವಾಸೋದ್ಯಮದಲ್ಲಿ ಜೋಗ ಅಭಿವೃದ್ಧಿ ಆಗುತ್ತಿದೆ. ಜೋಗ ಅಭಿವೃದ್ಧಿಯಾದರೆ, ಉದ್ಯೋಗ ಸೇರಿದಂತೆ ವಿವಿಧ ಆಯಾಮಗಳಲ್ಲಿ ಶಿವಮೊಗ್ಗ ಜನತೆಗೆ ಲಾಭವಾಗಲಿದೆ. ಹೀಗಾಗಿ ಜೋಗದಲ್ಲಿ ಪ್ರವಾಸೋದ್ಯಮಕ್ಕೆ ಹೆಚ್ಚಿನ ಆದ್ಯತೆ ನೀಡಲಾಗುತ್ತಿದೆ ಎಂದು ಹೇಳಿದರು.
ಶಿವಮೊಗ್ಗದ ವಿಮಾನ ನಿಲ್ದಾಣದಿಂದ ಲಾಭ ಆಗಲಿದೆ. ಶಿವಮೊಗ್ಗದಿಂದ ಹಲವಾರು ಜನರು ದೆಹಲಿಗೆ ಸಂಚರಿಸುತ್ತಾರೆ. ಪ್ರವಾಸೋದ್ಯಮ, ಕೈಗಾರಿಕಾ ವಲಯ ಅಭಿವೃದ್ಧಿಗೆ ಇದು ಪೂರಕವಾಗಿದೆ. ಈಗಾಗಲೇ ನಾವು ಇಂಡಿಗೋ ಸಂಸ್ಥೆಗೆ ಸಬ್ಸಿಡಿ ನೀಡಿದ್ದೇವೆ. ಆ. 11 ರಿಂದ ವಿಮಾನ ಹಾರಾಟ ಆರಂಭವಾಗಲಿದೆ. ಈಗಾಗಲೇ ಇಂಟರ್ ನ್ಯಾಷನಲ್ ಕೋಡ್ ಆರ್.ಕ್ಯೂ.ವೈ. ಶಿವಮೊಗ್ಗ ವಿಮಾನ ನಿಲ್ದಾಣಕ್ಕೆ ನೀಡಲಾಗಿದೆ ಎಂದು ಮಾಹಿತಿ ನೀಡಿದರು.
ರಾಜಕಾರಣಕ್ಕಾಗಿ ಗೋ ಹತ್ಯೆ ನಿಷೆಧ ಕಾಯ್ದೆ ಜಾರಿ ಹಿಂಪಡೆಯಲು ರಾಜ್ಯ ಕಾಂಗ್ರೆಸ್ ಸರ್ಕಾರ ನಿರ್ಧಾರ ಮಾಡಿದೆ. ಈ ಬಗ್ಗೆ ಪಶು ಸಂಗೋಪನೆ ಇಲಾಖೆ ಸಚಿವರು ಹೇಳಿದ್ದಾರೆ. ಗೋವನ್ನು ತಾಯಿಯ ಹಾಗೆ ನಾವು ಪೂಜಿಸುತ್ತೇವೆ. ಈ ಕಾಯ್ದೆ ಹಿಂಪಡೆಯುವುದು ಎಷ್ಟರ ಮಟ್ಟಿಗೆ ಸರಿ ಎಂದು ಸಂಸದರು ಪ್ರಶ್ನಿಸಿದರು.

Ad Widget

Related posts

ದೇಶದಲ್ಲಿ ವಿದ್ಯಾವಂತರು ಹೆಚ್ಚಿದ್ದರಿಂದ ನಿರುದ್ಯೋಗ ಹೆಚ್ಚಿದೆಯಂತೆ, ಎಷ್ಟು ಉದ್ಯೋಗ ಸೃಷ್ಟಿಯಾಗಿದೆ ಎಂಬ ಮಾಹಿತಿಯೂ ಇಲ್ಲವಂತೆ
ಶಿವಮೊಗ್ಗದಲ್ಲಿ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಉವಾಚ

Malenadu Mirror Desk

ತುಂಬಿದ ತುಂಗೆಗೆ ಸಚಿವರಿಂದ ಬಾಗೀನ

Malenadu Mirror Desk

ಮತಾಂತರ ನಿಷೇಧ ಕಾಯಿದೆ ಹಿಂಡೆಯಲು ವಿರೋಧ
ವಿಶ್ವಹಿಂದೂ ಪರಿಷತ್ ನೇತೃತ್ವದಲ್ಲಿ ಪ್ರತಿಭಟನೆ

Malenadu Mirror Desk

Leave a Comment

error: Content is protected !! ಮಲೆನಾಡು ಮಿರರ್‌ನಲ್ಲಿ ಪ್ರಕಟಗೊಂಡ ಸುದ್ದಿ, ಲೇಖನ, ಫೊಟೊಗಳನ್ನುಪೂರ್ವಾನುಮತಿಯಿಲ್ಲದೆ ನಕಲು ಮಾಡುವುದು ಕಾನೂನುಬಾಹಿರವಾಗಿದೆ.