Malenadu Mitra
ರಾಜ್ಯ ಶಿವಮೊಗ್ಗ ಸಾಗರ

ಮಲೆನಾಡಲ್ಲಿ ವರ್ಷಧಾರೆ, ಚುರುಕಾದ ಕೃಷಿ ಚಟುವಟಿಕೆ, ಭರ್ತಿಯತ್ತ ಗಾಜನೂರು ಡ್ಯಾಂ, ಮಾಣಿಯಲ್ಲಿ ದಾಖಲೆ, ಜೋಗಕ್ಕೆ ಜೀವಕಳೆ

ಶಿವಮೊಗ್ಗ: ಮುಂಗಾರು ವಿಳಂಬದಿಂದ ಕಂಗಾಲಾಗಿದ್ದ ಮಲೆನಾಡಿನಲ್ಲಿ ಆರಿದ್ರಾ ಮಳೆಯ ಕೊನೆಯ ಪಾದ ತಂಪೆರೆದಿದ್ದು, ರೈತ ಸಮುದಾಯ ಕೊಂಚ ನಿರಾಳವಾಗುವಂತೆ ಮಾಡಿದೆ. ಜೂನ್ ಮೊದಲ ವಾರದಲ್ಲಿಯೇ ರಾಜ್ಯಕ್ಕೆ ಮುಂಗಾರು ಮಳೆ ಬರಬೇಕಿತ್ತು. ಒಂದು ತಿಂಗಳಾದರೂ ಮಳೆ ಬಾರದ ಕಾರಣ ಕುಡಿಯುವ ನೀರಿಗೇ ಹಾಹಾಕಾರ ನಿರ್ಮಾಣವಾಗಿತ್ತು. ಚಂಡಮಾರುತದ ಕಾರಣದಿಂದ ಮುಂಗಾರು ರಾಜ್ಯಕ್ಕೆ ಬರುವುದು ವಿಳಂಬವಾಗಿತ್ತು.
ಮಳೆವಿಳಂಬದ ಕಾರಣ ಮಲೆನಾಡಿನಲ್ಲಿ ಕೃಷಿ ಚಟುವಟಿಕೆಗೆ ಕುಂಠಿತವಾಗಿದ್ದು, ಮಳೆಯಾಶ್ರಿತ ಹಂಕಲು ಬೇಸಾಯ ಆರಂಭವೇ ಆಗಿರಲಿಲ್ಲ. ಮೆಕ್ಕೆಜೋಳ, ಶೇಂಗಾ ಹಾಗೂ ಹತ್ತಿ ಬೆಳೆಗಳ ಬಿತ್ತನೆಯೇ ಆಗಿರದ ಕಾರಣ ರೈತ ಸಮುದಾಯ ಆತಂಕಗೊಂಡಿತ್ತು. ಮಳೆ ಚುರುಕಾಗುತ್ತಿದ್ದಂತೆ ಜಿಲ್ಲೆಯಲ್ಲಿ ಕೃಷಿ ಚಟುವಟಿಕೆ ಬಿರುಸಾಗಿದ್ದು, ಮೆಕ್ಕೆಜೋಳ ಬಿತ್ತನೆ ಆರಂಭವಾಗಿದೆ.
ಶಕ್ತನದಿ ಶರಾವತಿ ಜಲಾನಯನ ಪ್ರದೇಶದಲ್ಲಿ ವ್ಯಾಪಕ ಮಳೆಯಾಗಿದ್ದರಿಂದ ಲಿಂಗನಮಕ್ಕಿ ಜಲಾಶಯಕ್ಕೆ ಒಳಹರಿವು ಹೆಚ್ಚಾಗಿದೆ.
ಗಾಜನೂರು ಡ್ಯಾಂ ಭರ್ತಿ:


ಮಲೆನಾಡಿನಲ್ಲಿ ಕಳೆದ ಮೂರು ದಿನಗಳಿಂದ ವ್ಯಾಪಕ ಮಳೆ ಸುರಿಯುತ್ತಿದ್ದು, ನದಿಗಳಲ್ಲಿ ನೀರಿನ ಹರಿವು ಕಂಡುಬರುತ್ತಿದೆ. ಪಶ್ಚಿಮಘಟ್ಟದಲ್ಲಿ ವ್ಯಾಪಕ ಮಳೆಯಾಗುತ್ತಿರುವುದರಿಂದ ತುಂಗಾ ಹಾಗೂ ಭದ್ರಾನದಿಗಳಿಗೆ ನೀರು ಬಂದಿದೆ. ತುಂಗಾ ಹಾಗೂ ಭದ್ರಾ ನದಿಗೆ ಒಳಹರಿವು ಹೆಚ್ಚಾಗಿದೆ. ಶಿವಮೊಗ್ಗ ತಾಲೂಕು ಗಾಜನೂರು ಡ್ಯಾಂ ತುಂಬುವ ಹಂತಕ್ಕೆ ಬಂದಿದ್ದು, ಭರ್ತಿಗೆ ಕೇವಲ ಎರಡು ಅಡಿ ಬಾಕಿ ಇದ್ದು, ಯಾವುದೇ ಕ್ಷಣದಲ್ಲಿ ನದಿಗೆ ನೀರು ಬಿಡುವ ಸಾಧ್ಯತೆ ಇದೆ.
೫೮೮.೨೪ ಮೀಟರ್ ಗರಿಷ್ಠ ಮಟ್ಟದ ಈ ಗಾಜನೂರು ಜಲಾಶಯದಲ್ಲಿ ಪ್ರಸ್ತುತ ೫೮೭.೫೪ ಮೀಟರ್ ನಷ್ಟು ನೀರಿದೆ. ಪೂರ್ಣ ಪ್ರಮಾಣದ ಭರ್ತಿಗೆ ೨ ಅಡಿ ಮಾತ್ರ ಬಾಕಿ ಇದ್ದು, ಶೃಂಗೇರಿ, ತೀರ್ಥಹಳ್ಳಿ ಭಾಗದಲ್ಲಿ ಭಾರೀ ಮಳೆಯಾಗುತ್ತಿರುವುದರಿಂದ ಭಾರೀ ಪ್ರಮಾಣದಲ್ಲಿ ನೀರು ಹರಿದು ಬರುತ್ತಿದೆ.
ಮುನ್ನೆಚ್ಚರಿಕೆ ಕ್ರಮವಾಗಿ ಯಾವುದೇ ಕ್ಷಣದಲ್ಲೂ ನೀರು ಹೊರ ಬಿಡುವ ಸಾಧ್ಯತೆ ಇದೆ. ಅಂದಹಾಗೆ, ಹೊಸಪೇಟೆ ತುಂಗಾಭದ್ರಾ ಜಲಾಶಯ ತುಂಬಲು ತುಂಗಾ ನೀರೇ ಪ್ರಮುಖ ಆಧಾರವಾಗಿದ್ದು, ಈ ಗಾಜನೂರು ತುಂಗಾ ಜಲಾಶಯದಿಂದ ನದಿಗೆ ಇಂದು ಸಂಜೆ ಅಥವಾ ನಾಳೆ ಬೆಳಗ್ಗೆ ನೀರು ಹೊರಬಿಡುವ ಸಾಧ್ಯತೆ ಹೆಚ್ಚಿದೆ.

ಮಾಣಿಯಲ್ಲಿ ಅತ್ಯಧಿಕ ೧೪ ಸೆಂ.ಮೀ. ಮಳೆ

ಹೊಸನಗರ : ರಾಜ್ಯದಲ್ಲೇ ಅತ್ಯಧಿಕ ಮಳೆ ಬೀಳುವ ಪ್ರದೇಶವಾದ ಹೊಸನಗರ ತಾಲೂಕಿನಾದ್ಯಂತ ಮಂಗಳವಾರ ಬೆಳಗ್ಗೆಯಿಂದ ವರ್ಷಧಾರೆ ಹೆಚ್ಚಾಗಿದೆ.ಮಳೆ ಬಿರುಸುಗೊಂಡಿರುವುದರಿಂದ ಕೃಷಿ ಚಟುವಟಿಕೆ ಚುರುಕುಗೊಂಡಿದೆ. ಭತ್ತ ನಾಟಿ ಮಾಡಲು ಸಸಿ ಮಡಿ ಸಿದ್ಧಪಡಿಸುವುದು, ಗೊಬ್ಬರ ಹಾಕುವ ಕಾರ್ಯದಲ್ಲಿ ರೈತರು ನಿರತರಾಗಿದ್ದಾರೆ.
ತಾಲೂಕಿನ ಮಾಣಿಯಲ್ಲಿ ಬುಧವಾರ ಬೆಳಗ್ಗೆ ೮:೩೦ಕ್ಕೆ ಅಂತ್ಯಗೊಂಡಂತೆ ಕಳೆದ ೨೪ ಗಂಟೆಗಳಲ್ಲಿ ೧೪೨ ಮಿಲಿ ಮೀಟರ್ ಅತ್ಯಧಿಕ ಮಳೆ ದಾಖಲಾಗಿದೆ.
ಉಳಿದಂತೆ ಹುಲಿಕಲ್ಲಿನಲ್ಲಿ ೧೨೭, ಸಾವೆಹಕ್ಲುವಿನಲ್ಲಿ ೧೨೦, ಚಕ್ರಾನಗರದಲ್ಲಿ ೧೧೮, ಮಾಸ್ತಿಕಟ್ಟೆಯಲ್ಲಿ ೧೧೬, ಯಡೂರಿನಲ್ಲಿ ೧೦೦, ನಗರದಲ್ಲಿ ೮೭ ಮತ್ತು ಹೊಸನಗರದಲ್ಲಿ ೪೮ ಮಿಲಿ ಮೀಟರ್ ಮಳೆ ದಾಖಲಾಗಿದೆ.
೧೮೧೯ ಅಡಿ ಗರಿಷ್ಠ ನೀರಿನ ಮಟ್ಟ ಹೊಂದಿರುವ ಲಿಂಗನಮಕ್ಕಿ ಜಲಾಶಯದ ಇಂದಿನ ನೀರಿನ ಮಟ್ಟ ೧೭೪೨.೬೫ ಅಡಿ ತಲುಪಿದೆ. ಕಳೆದ ವರ್ಷಕ್ಕಿಂತ ೨೦ ಅಡಿ ನೀರು ಸಂಗ್ರಹ ಕಡಿಮೆ ಇದೆ. ಜಲಾಶಯಕ್ಕೆ ೯೨೩೭ ಕ್ಯೂಸೆಕ್ ನೀರು ಹರಿದು ಬರುತ್ತಿದೆ.

ಜೋಗಕ್ಕೆ ಜೀವಕಳೆ:
ಶರಾವತಿ ಜಲಾನಯನ ಪ್ರದೇಶದಲ್ಲಿ ಮಳೆಯಾಗುತ್ತಿರುವ ಕಾರಣ ವಿಶ್ವವಿಖ್ಯಾತ ಜೋಗ ಜಲಪಾತಕ್ಕೆ ನೀರು ಬರುತ್ತಿದೆ. ನದಿಯ ಕೆಳಗಿನ ಭಾಗದಲ್ಲಿ ಸುರಿದ ಮಳೆಗೆ ಫಾಲ್ಸ್‌ಗೆ ಜೀವಕಳೆ ಬಂದಿದ್ದು, ಜಲಪಾತ ದೃಶದೃಶ್ಯ ನಯನಮನೋಹರವಾಗಿದೆ.

Ad Widget

Related posts

ಆಸ್ತಿತೆರಿಗೆ ಹೆಚ್ಚಳ ಬೇಡ

Malenadu Mirror Desk

ಮಲ್ಲಿಕಾರ್ಜುನ ಖರ್ಗೆ ಆಯ್ಕೆಯಿಂದ ರಾಷ್ಟ್ರ ರಾಜಕಾರಣದಲ್ಲಿ ಹೊಸ ಸಂಚಲನ, ಕಾಂಗ್ರೆಸ್ ಸಮಾವೇಶದಲ್ಲಿ ಮಾಜಿ ಸಚಿವ ಕಾಗೋಡು ತಿಮ್ಮಪ್ಪ ಹೇಳಿಕೆ

Malenadu Mirror Desk

ಈ ಬಾರಿ ಸಿಗಂದೂರು ಜಾತ್ರೆ ಇಲ್ಲ

Malenadu Mirror Desk

Leave a Comment

error: Content is protected !! ಮಲೆನಾಡು ಮಿರರ್‌ನಲ್ಲಿ ಪ್ರಕಟಗೊಂಡ ಸುದ್ದಿ, ಲೇಖನ, ಫೊಟೊಗಳನ್ನುಪೂರ್ವಾನುಮತಿಯಿಲ್ಲದೆ ನಕಲು ಮಾಡುವುದು ಕಾನೂನುಬಾಹಿರವಾಗಿದೆ.