ಶಿವಮೊಗ್ಗ : ಶರಾವತಿ ಮುಳುಗಡೆ ಸಂತ್ರಸ್ಥರ ಭೂಮಿ ಹಕ್ಕಿನ ಸಮಸ್ಯೆ ಹಾಗೂ ಅರಣ್ಯ ಭೂಮಿ, ಬಗರ್‌ಹುಕುಂ ಸಾಗುವಳಿದಾರರಿಗೆ ರಕ್ಷಣೆ ನೀಡುವ ಸಲುವಾಗಿ ಜಂಟಿ ಸರ್ವೆ ನಡೆಸಲು ಸಭೆ ಅನುಮತಿ ನೀಡಿದೆ ಎಂದು ಕೆಪಿಸಿಸಿ ವಕ್ತಾರ ರಮೇಶ್ ಹೆಗ್ಡೆ ತಿಳಿಸಿದರು.
ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮಲೆನಾಡು ಭಾಗಗಳಲ್ಲಿ ಹಲವಾರು ವರ್ಷಗಳಿಂದ ಉಳಿದಿರುವ ಸಮಸ್ಯೆಗಳ ಪರಿಹಾರಕ್ಕೆ ರಾಜ್ಯ ಸರ್ಕಾರ ಪೂರಕವಾಗಿ ಸ್ಪಂದಿಸಿದ್ದು, ಅಧಿಕಾರಕ್ಕೆ ಬಂದ ಕೂಡಲೇ ವಿವಿಧ ಇಲಾಖೆಗಳ ಸಭೆ ನಡೆಸಿ ಹಲವಾರು ಸೂಚನೆ ನೀಡಿದೆ. ಇದಕ್ಕಾಗಿ ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ರಾಜ್ಯ ಸರ್ಕಾರಕ್ಕೆ ಅಭಿನಂದನೆ ಸಲ್ಲಿಸುತ್ತೇವೆ. ಅನೇಕ ವರ್ಷಗಳಿಂದ ನೆನೆಗುದಿಗೆ ಬಿದ್ದಿರುವ ಶರಾವತಿ ಮುಳುಗಡೆ ಸಂತ್ರಸ್ತರಿಗೆ ಭೂ ಮಂಜೂರಾತಿ ನೀಡುವ ಸಲುವಾಗಿ ಸರ್ಕಾರ ಮಾಡಿದ್ದ ಡಿನೋಟಿಫಿಕೇಷನ್ ಆದೇಶವನ್ನು ಹೈಕೋರ್ಟ್ ರದ್ದು ಮಾಡಿರುವ ಹಿನ್ನೆಲೆಯಲ್ಲಿ ಸಂಪೂರ್ಣ ಮಾಹಿತಿ ಪಡೆದು, ಸುಪ್ರೀಂಕೋರ್ಟ್‌ಗೆ ನಿಯಮಾನುಸಾರ ಐ.ಎ. (ಮಧ್ಯಂತರ ಅರ್ಜಿ) ಸಲ್ಲಿಸಲು ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಸಚಿವ ಈಶ್ವರ ಖಂಡ್ರೆ ಅಧಿಕಾರಿಗಳಿಗೆ ಸೂಚಿಸಿದ್ದಾರೆ ಎಂದು ತಿಳಿಸಿದರು.
ಜಿಲ್ಲೆಯ ಶರಾವತಿ ಕಣಿವೆ ಜಲ ವಿದ್ಯುತ್ ಯೋಜನೆಯ ಸಂತ್ರಸ್ತರು, ಅರಣ್ಯ ಭೂಮಿ ಸಾಗುವಳಿದಾರರು, ಬ್ಯಾಣ, ಸೊಪ್ಪಿನ ಬೆಟ್ಟ ಮೊದಲಾದ ಸ್ವರೂಪದ ಭೂ ಮಂಜೂರಾತಿ, ಡೀಮ್ಡ್ ಫಾರೆಸ್ಟ್‌ಗೆ ತಿದ್ದುಪಡಿ ಮೊದಲಾದವುಗಳ ಬಗ್ಗೆ ಚರ್ಚೆ ನಡೆಸಿ ಕಾನೂನು ತಿದ್ದುಪಡಿ ಮಾಡಲು ಸರ್ಕಾರದ ಮುಂದೆ ಅಹವಾಲು ಮಂಡಿಸಲು ಸಭೆಯಲ್ಲಿ ನಿರ್ಧರಿಸಲಾಗಿದೆ ಎಂದರು.
ರಾಜ್ಯದಲ್ಲಿ ೨,೯೪,೩೬೩ ಅರ್ಜಿ ಗಳು ಅರಣ್ಯ ಹಕ್ಕು ಕಾಯಿದೆಯಡಿ ಬಂದಿವೆ. ಆದರೆ ಹಕ್ಕು ನೀಡಿರುವುದು ಕೆಲವೇ ಕೆಲವು ಅರ್ಜಿಗಳಿಗೆ. ಹೀಗಾಗಿ ೭೫ ವರ್ಷಗಳಿಂದ ಸಾಗುವಳಿ ಮಾಡುತ್ತಿರಬೇಕೆಂಬ ನಿಯಮಕ್ಕೆ ತಿದ್ದುಪಡಿ ತಂದು ಅದನ್ನು ೨೫ ವರ್ಷಕ್ಕೆ ಇಳಿಸಲು ಕೇಂದ್ರಕ್ಕೆ ಪ್ರಸ್ತಾವನೆ ಸಲ್ಲಿಸಲು ಸಭೆಯಲ್ಲಿ ತೀರ್ಮಾನಿಸಲಾಗಿದೆ ಎಂದರು.
ಪ್ರತಿಯೊಬ್ಬರಿಗೆ ೩ ಎಕರೆ ಮಿತಿಯಲ್ಲಿ ೧೯೭೭ ರಲ್ಲಿ ೧೯೩೪೮ ಜನರಿಗೆ ಅರಣ್ಯ ಭೂಮಿ ಮಂಜೂರಾತಿ ಮಾಡಲಾಗಿತ್ತು. ಆದರೆ ೧೯೭೮ ಅರಣ್ಯ ಕಾಯಿದೆಯಲ್ಲಿ ಇದನ್ನು ತಡೆ ಹಿಡಿಯಲಾಗಿತ್ತು. ಹೀಗಾಗಿ ಭೂ ಹಕ್ಕು ನೀಡಿರಲಿಲ್ಲ. ಇಂತಹವರಿಗೂ ಭೂ ಹಕ್ಕು ನೀಡಲು ತೀರ್ಮಾನಿಸಲಾಗಿದೆ ಎಂದರು.
೨೦೧೨ ರಲ್ಲಿ ಜಿಯಲ್ಲಿ ಅರಣ್ಯ ಇಂಡೀಕರಣ ಮಾಡಲಾಗಿದ್ದು, ಆ ಸಂದರ್ಭದಲ್ಲಿ ವಿವಿಧ ಯೋಜನೆಗಳಲ್ಲಿ ಭೂ ಹಕ್ಕು ಪಡೆದವರ ಭೂಮಿಯನ್ನು ಇಂಡೀಕರಣ ಮಾಡಲಾಗಿದೆ. ಅಂತಹವರನ್ನು ಗುರುತಿಸಲು ಹಕ್ಕು ರಕ್ಷಣೆಮಾಡಲು ತೀರ್ಮಾನಿಸಲಾಗಿದೆ ಎಂದರು. ಫೋರ್ ಒನ್ ನೋಟಿಫಿಕೇಶನ್ ಆದ ಭೂಮಿಯನ್ನು ೧೯೬೩ ರ ಅರಣ್ಯ ಕಾಯಿದೆ ಅನ್ವಯ ಮೀಸಲು ಅರಣ್ಯವೆಂದು ಮಾರ್ಪಾಡು ಮಾಡಿರುವುದರಿಂದ ಅಂತಹ ಭೂಮಿಗೂ ಸಮರ್ಪಕ ದಾಖಲೆ ನೀಡಲು ಸಾಧ್ಯವಾಗುತ್ತಿಲ್ಲ. ಅದನ್ನುಸರಿಪಡಿಸಲು ನಿರ್ಧರಿಸಲಾಗಿದೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಡಿಸಿಸಿ ಹಿಂದುಳಿದ ವಿಭಾಗದ ಅಧ್ಯಕ್ಷ ಇಕ್ಕೇರಿ ರಮೇಶ್, ಪ್ರಮುಖರಾದ ಎನ್.ಪಿ. ಧರ್ಮರಾಜ್, ಜಿ.ಡಿ. ಮಂಜುನಾಥ, ಡಿ.ಸಿ. ನಿರಂಜನ್ ಇದ್ದರು.
ಜಿಲ್ಲೆಯ ಶರಾವತಿ ಕಣಿವೆ ಜಲ ವಿದ್ಯುತ್ ಯೋಜನೆಯ ಸಂತ್ರಸ್ತರು, ಅರಣ್ಯ ಭೂಮಿ ಸಾಗುವಳಿದಾರರು, ಬ್ಯಾಣ, ಸೊಪ್ಪಿನ ಬೆಟ್ಟ ಮೊದಲಾದ ಸ್ವರೂಪದ ಭೂ ಮಂಜೂರಾತಿ, ಡೀಮ್ಡ್ ಫಾರೆಸ್ಟ್‌ಗೆ ತಿದ್ದುಪಡಿ ಮೊದಲಾದವುಗಳ ಬಗ್ಗೆ ಚರ್ಚೆ ನಡೆಸಿ ಕಾನೂನು ತಿದ್ದುಪಡಿ ಮಾಡಲು ಸರ್ಕಾರದ ಮುಂದೆ ಅಹವಾಲು ಮಂಡಿಸಲು ಸಭೆಯಲ್ಲಿ ನಿರ್ಧರಿಸಲಾಗಿದೆ.
–ರಮೇಶ್ ಹೆಗ್ಡೆ ಕೆಪಿಸಿಸಿ ವಕ್ತಾರರು