Malenadu Mitra
ರಾಜ್ಯ ಶಿವಮೊಗ್ಗ ಸಾಗರ

ಯತ್ನಾಳ್ ಗಿಣಿ ಶಾಸ್ತ್ರಕ್ಕೆ ಅವರ ಪಕ್ಷದಲ್ಲೇ ಮನ್ನಣೆ ಇಲ್ಲ : ಶಿಕ್ಷಣ ಸಚಿವ ಮಧು ಬಂಗಾರಪ್ಪ ವ್ಯಂಗ್ಯ

ಶಿವಮೊಗ್ಗ: ಅರು ತಿಂಗಳಲ್ಲಿ ಸರ್ಕಾರ ಬೀಳುತ್ತದೆ ಎಂದು ಹೇಳುವ ಬಿಜೆಪಿ ಶಾಸಕ ಯತ್ನಾಳ್ ಅವರ ವರ್ತನೆ ಗಿಳಿಶಾಸ್ತ್ರ ಹೇಳುವರಂತಿದೆ ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಮಧು ಬಂಗಾರಪ್ಪ ಖಾರವಾಗಿ ಪ್ರತಿಕ್ರಿಯೆ ನೀಡಿದ್ದಾರೆ.
ಶಿವಮೊಗ್ಗದಲ್ಲಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಸರ್ಕಾರದ ವಿರುದ್ಧ ಭ್ರಷ್ಟಾಚಾರದ ಆರೋಪ ಮಾಡುವಾಗ ಸಾಕ್ಷ್ಯಾಧಾರ ನೀಡಲಿ. ಸುಮ್ಮನೆ ಆರೋಪ ಮಾಡುವುದು ಬೇಡ. ಸಿಎಂ ಸಹ ಇದನ್ನೇ ಹೇಳಿದ್ದಾರೆ. ಯತ್ನಾಳ್ ಅವರ ಭವಿಷ್ಯಕ್ಕೆ ಕಿಮ್ಮತ್ತಿಲ್ಲ. ಅವರ ಮಾತನ್ನು ಅವರ ಪಕ್ಷದವರೇ ಗಂಭೀರವಾಗಿ ಪರಿಗಣಿಸುವುದಿಲ್ಲ ಎಂಬುದು ಎಲ್ಲರಿಗೆ ಗೊತ್ತಿರುವ ಸಂಗತಿಯಾಗಿದೆ ಎಂದು ತಿರುಗೇಟು ನೀಡಿದ್ದಾರೆ.
ಉಪೇಂದ್ರ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ಉಪೇಂದ್ರ ನನ್ನ ಆತ್ಮೀಯ ಸ್ನೇಹಿತರು. ಜೊತೆಗೆ ಒಂದು ಪಕ್ಷದ ಮುಖಂಡರು.ಯಾರೇ ತಪ್ಪು ಮಾಡಿದರೂ ಅದು ತಪ್ಪೇ. ತಪ್ಪಾಗಿದ್ದರೆ ಉಪೇಂದ್ರ ಅವರು ಕ್ಷಮೆ ಕೇಳಬೇಕು ಎಂದರು.

ಲೋಕಸಭೆ ಚುನಾವಣೆಯಲ್ಲಿ ಸಚಿವರ ಸ್ಪರ್ಧೆ ಹಾಗೂ ಗುರಿ ನೀಡಿಕೆ ವಿಚಾರವಾಗಿ ಮಾಹಿತಿ ನೀಡಿದ ಅವರು, ದೆಹಲಿಯಲ್ಲಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ನೇತೃತ್ವದಲ್ಲಿ ಎರಡು ದಿನ ಸಭೆ ನಡೆದಿತ್ತು. ಅಲ್ಲಿ ಇಡಿ ರಾಜ್ಯದಲ್ಲಿ ಗೆಲುವು ಸಾಧಿಸಲು ಸಿಎಂ ಹಾಗೂ ಡಿಸಿಎಂ ಗೆ ಗುರಿ ನೀಡಲಾಗಿದೆ. ಅದೇ ರೀತಿ ಸಚಿವರಿಗೂ ಕೆಲ ಕ್ಷೇತ್ರಗಳಲ್ಲಿ ಗೆಲ್ಲಲು ಟಾರ್ಗೆಟ್ ನೀಡಲಾಗಿದೆ ಅದರಂತೆ ಕೆಲಸ ನಡೆಯುತ್ತಿದೆ ಎಂದು ಹೇಳಿದರು.
೧ರಿಂದ ೧೦ ನೇ ತರಗತಿ ಮಕ್ಕಳಿಗೆ ವಾರದಲ್ಲಿ ಎರಡು ದಿನ ಎರಡು ಮೊಟ್ಟೆ ನೀಡಲಾಗುವುದು. ಮೊಟ್ಟೆ ತಿನ್ನದ ಮಕ್ಕಳಿಗೆ ಚಿಕ್ಕಿ ನೀಡುತ್ತೇವೆ. ಮಕ್ಕಳನ್ನು ಫೇಲ್ ಮಾಡಬಾರದು ಅವರಿಗೆ ಅವಕಾಶ ನೀಡಬೇಕು. ಮಕ್ಕಳು ಅನುತ್ತೀರ್ಣವಾಗುವುದಕ್ಕೆ ಹಲವು ಕಾರಣಗಳಿರುತ್ತವೆ.ಹೀಗಾಗಿ ಎರಡನೇ ಪೂರಕ ಪರೀಕ್ಷೆ ನಡೆಸುತ್ತೇವೆ. ದೇಶದಲ್ಲೇ ಇದು ಹೊಸ ಪ್ರಯತ್ನವಾಗಲಿದೆ ಎಂದರು.

ಈಗಾಗಲೇ ಪಠ್ಯ ಪುಸ್ತಕ ಪರಿಷ್ಕರಣೆ ಆಗಿದೆ. ಆದರೆ ಅದರಲ್ಲಿ ಇನ್ನಷ್ಟು ಬದಲಾವಣೆಯಾಗಬೇಕಿದೆ. ಸ್ಟೇಟ್ ಎಜುಕೇಷನ್ ಪಾಲಿಸಿಯನ್ನು ಮುಂದಿನ ದಿನಗಳಲ್ಲಿ ಜಾರಿಗೆ ತರುತ್ತೇವೆ. ಇದಕ್ಕಾಗಿ ಕಮಿಟಿಗಳನ್ನು ರಚಿಸುವ ಕೆಲಸ ಮಾಡಿದ್ದೇವೆ. ಮಕ್ಕಳ ಭವಿಷ್ಯಕ್ಕೆ ಪೂರಕವಾಗುವಂತ ಶಿಕ್ಷಣ ನೀಡುತ್ತೇವೆ. ಕರ್ನಾಟಕ ಡಿಜಿಟಲ್ ಲೈಬ್ರರಿಯಲ್ಲಿ ೪೦ ಲಕ್ಷ ಪುಸ್ತಕಗಳಿವೆ. ಇಲ್ಲಿ ಒಂದನೇ ತರಗತಿಯಿಂದ ಐಎಎಸ್ ವರೆಗೆ ವ್ಯಾಸಂಗ ಮಾಡುವ ಪುಸ್ತಕಗಳಿವೆ. ಕರ್ನಾಟಕ ಡಿಜಿಟಲ್ ಲೈಬ್ರರಿ ವೆಬ್ ನಲ್ಲಿ ಎಲ್ಲರೂ ಓದಬಹುದು. ಶಿಕ್ಷಕರ ದಿನಾಚರಣೆಯಂದು ಈ ವೆಬ್ ಸೈಟ್ ರಿ ಲಾಂಚ್ ಮಾಡುತ್ತೇವೆ ಎಂದರು.

ಮುಂದಿನ ವರ್ಷದೊಳಗೆ ಕರ್ನಾಟಕ ಪಬ್ಲಿಕ್ ಶಾಲೆಗಳನ್ನು ಆರಂಭಿಸಲಿದ್ದೇವೆ. ಎರಡು ಮೂರು ಗ್ರಾಮಪಂಚಾಯತಿಗಳಿಗೆ ಒಂದರಂತೆ ಕರ್ನಾಟಕ ಪಬ್ಲಿಕ್ ಸ್ಕೂಲ್ ಆರಂಭಿಸಲಿದ್ದೇವೆ. ಎಲ್ ಕೆಜಿ, ಯುಕೆಜಿಯನ್ನು ಸರ್ಕಾರಿ ಶಾಲೆಗಳನ್ನು ಆರಂಭಿಸಲಿದ್ದೇವೆ ಎಂದರು. ಶಿಕ್ಷಕರ ನೇಮಕಾತಿ ವಿಷಯ ಕೋರ್ಟ್ ನಲ್ಲಿದೆ. ಹೀಗಾಗಿ ನೇಮಕಾತಿ ಸಾಧ್ಯವಾಗುತ್ತಿಲ್ಲ. ಬೇಗನೆ ಸಮಸ್ಯೆ ಬಗೆಹರಿಸುವ ವಿಶ್ವಾಸವಿದೆ. ಶಿಕ್ಷಕರ ಕೊರತೆ ನೀಗಿಸುವ ಉದ್ದೇಶದಿಂದ ಶೀಘ್ರವೇ ೧೦ ಸಾವಿರ ಅತಿಥಿ ಶಿಕ್ಷಕರ ನೇಮಕ ಮಾಡಿಕೊಳ್ಳುತ್ತೇವೆ ಎಂದು ಹೇಳಿದರು.

ಶಿವಮೊಗ್ಗ ಜಿಲ್ಲೆಯಲ್ಲಿ ಹಲವು ದಶಕಗಳಿಂದ ಕಗ್ಗಂಟಾಗಿರುವ ಶರಾವತಿ ಮುಳುಗಡೆ ಸಂತ್ರಸ್ಥರು ಹಾಗೂ ಬಗರ್ ಹುಕುಂ ಸಾಗುವಳಿದಾರರ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಮುಖ್ಯಮಂತ್ರಿಗಳು ಹಾಗೂ ಉಪಮುಖ್ಯಮಂತ್ರಿಗಳು ವಿಶೇಷ ಆಸಕ್ತಿ ವಹಿಸಿದ್ದು, ಶೀಘ್ರದಲ್ಲಿ ಸದರಿ ಸಮಸ್ಯೆಗಳ ಪರಿಹಾರಕ್ಕೆ ಅಗತ್ಯ ಕ್ರಮವಹಿಸಲಾಗುವುದು. ಅಗತ್ಯವಿದ್ದಲ್ಲಿ ರೈತರ ಹಿತ ಕಾಯುವಲ್ಲಿ ಕಾನೂನು ಸಮರಕ್ಕೂ ಸರ್ಕಾರ ಬದ್ಧವಾಗಿದೆ. ಜಿಲ್ಲೆಯಲ್ಲಿನ ಕಂದಾಯ ಮತ್ತು ಅರಣ್ಯ ಇಲಾಖೆಗಳ ನಡುವಿನ ಭೂ ಸಮಸ್ಯೆಯನ್ನು ಇತ್ಯರ್ಥಪಡಿಸಲು ಕ್ರಮ ಕೈಗೊಳ್ಳಲಾಗುತ್ತಿದೆ.

ಮಧು ಬಂಗಾರಪ್ಪ, ಜಿಲ್ಲಾ ಉಸ್ತುವಾರಿ ಸಚಿವ

Ad Widget

Related posts

ಶಿವಮೊಗ್ಗದಲ್ಲಿ ಶ್ರೀರಾಮಾಯಣ ಕಥಾಮೃತ

Malenadu Mirror Desk

ಸಾಕು ನಾಯಿ ಮೇಲೆ ಗುಂಡು ಹಾರಿಸಿದ ವ್ಯಕ್ತಿ: ಠಾಣೆಗೆ ದೂರು

Malenadu Mirror Desk

ಶಿವಮೊಗ್ಗದಲ್ಲಿ ಭಾರೀ ಮಳೆ,ಮನೆಗಳಿಗೆ ನೀರು

Malenadu Mirror Desk

Leave a Comment

error: Content is protected !! ಮಲೆನಾಡು ಮಿರರ್‌ನಲ್ಲಿ ಪ್ರಕಟಗೊಂಡ ಸುದ್ದಿ, ಲೇಖನ, ಫೊಟೊಗಳನ್ನುಪೂರ್ವಾನುಮತಿಯಿಲ್ಲದೆ ನಕಲು ಮಾಡುವುದು ಕಾನೂನುಬಾಹಿರವಾಗಿದೆ.