Malenadu Mitra
ರಾಜ್ಯ ಶಿವಮೊಗ್ಗ

ಜನನಾಯಕನಿಗೆ ಆತ್ಮೀಯ ಅಭಿನಂದನೆ, ಕಾಗೋಡು ತಿಮ್ಮಪ್ಪರಿಗೆ ಶಿವಮೊಗ್ಗದಲ್ಲಿ ಹೃದಯ ಸ್ಪರ್ಶಿ ಸನ್ಮಾನ

ಕಾಗೋಡು.. ಈ ಹೆಸರು ಕೇಳಿದರೆ ಮೈ ರೋಮಾಂಚನವಾಗುತ್ತದೆ. ಐತಿಹಾಸಿಕ ಕಾಗೋಡು ಚಳವಳಿಯ ಬೀಜ ಬಿತ್ತಿ ಹೋರಾಟವೆಂಬ ಉಳುಮೆ ಮಾಡಿ ಉಳುವವನೆ ಹೊಲದೊಡೆಯ ಎಂಬ ಕಾಯಿದೆಯ ಫಸಲು ಕೊಯ್ದಿದ್ದು, ಆ ಮೂಲಕ ಲಕ್ಷಾಂತರ ಗೇಣಿದಾರರು ಭೂ ಒಡೆಯರಾಗಿದ್ದು ಈ ಐತಿಹಾಸಿಕ ಚಳವಳಿಯಿಂದಾಗಿಯೇ ಎಂಬುದು ಇತಿಹಾಸ.
ಜಾಗತಿಕ ಮನ್ನಣೆ ಪಡೆದಿದ್ದ ಇಂತಹ ಕಾಗೊಡು ಚಳವಳಿಯ ಪರ್ವಕಾಲದಲ್ಲಿ ಪ್ರೌಢಶಿಕ್ಷಣ ಮುಗಿಸಿದ್ದ ಹುಡುಗನೊಬ್ಬ ಮುಂದೆ ಶಾಸನ ಸಭೆಯಲ್ಲಿ ಗೇಣಿದಾರರ ಪರ ಅಂಗೀಕಾರವಾಗುವ ಕಾಯಿದೆಯ ಭಾಗವಾಗುತ್ತಾನೆ ಎಂದೂ ಯಾರೂ ಊಹಿಸಿರಲಿಲ್ಲ. ಆ ಮಹಾನ್ ನೇತಾರ ಕಾಗೋಡು ತಿಮ್ಮಪ್ಪ ಎಂಬುದು ಮಲೆನಾಡಿಗರು ಗರ್ವ ಪಡುವ ಸಂಗತಿಯಾಗಿದೆ.

ಶಿವಮೊಗ್ಗ ಜಿಲ್ಲೆ ಸಾಗರ ತಾಲೂಕು ಕಾಗೋಡು ಎಂಬ ಹೋರಾಟದ ಭೂಮಿಯಲ್ಲಿ 10 ಸೆಪ್ಟೆಂಬರ್ 1932ರಲ್ಲಿ ಸವಾಜಿ ಬೀರಾನಾಯ್ಕ ಮತ್ತು ಬೈರಮ್ಮ ದಂಪತಿಯ ಮೂರನೇ ಮಗನಾಗಿ ಹುಟ್ಟಿದ ಕಾಗೋಡು ತಿಮ್ಮಪ್ಪ ಸಮಾಜಿವಾದಿ ನೇತಾರರಾಗಿ ಬೆಳೆದದ್ದು ಸುಲಭದ ಮಾತಲ್ಲ. ಅತೀ ಹಿಂದುಳಿದ ದೀವರ ಸಮುದಾಯದಲ್ಲಿ ಹುಟ್ಟಿದ ಕಾಗೋಡು ತಿಮ್ಮಪ್ಪ ಇಂದು ಈ ಮಟ್ಟಕ್ಕೆ ಬಂದಿದ್ದೇ ಒಂದು ಹೋರಾಟ ಎಂದರೆ ತಪ್ಪಾಗಲಾರದು.

ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣವನ್ನು ಸಾಗರ ತಾಲೂಕಿನ ಹಿರೇನಲ್ಲೂರಿನಲ್ಲಿ ಮುಗಿಸಿದ ಕಾಗೋಡು ತಿಮ್ಮಪ್ಪ ಬೆಂಗಳೂರಿನಲ್ಲಿ ಬಿ.ಕಾಂ.ಬಿ ಎಲ್ ಪದವಿ ಮುಗಿಸುತ್ತಾರೆ. ಪದವಿ ಮುಗಿಸಿದ್ದ ಕಾಗೋಡು ನೇರವಾಗಿ ಸಾಗರಕ್ಕೆ ಬಂದು ನ್ಯಾಯವಾದಿಯಾಗಿ ವೃತ್ತಿ ಆರಂಭಿಸುತ್ತಾರೆ. ವಕೀಲನಾಗಿ ಸಾರ್ವಜನಿಕ ಸಂಪರ್ಕಕ್ಕೆ ಬಂದಿದ್ದ ಕಾಗೋಡು ತಿಮ್ಮಪ್ಪ ಅವರನ್ನು ಒಬ್ಬ ಅಂತಃಕರಣವುಳ್ಳ ಜನನಾಯಕನಾಗಿ ರೂಪುಗೊಳಿಸಿದ್ದ ಜನ ಸಾಮಾನ್ಯರ ಸಮಸ್ಯೆಗಳೇ ಎಂದು ಹೇಳಬಹುದು. ಮಲೆನಾಡಿನಲ್ಲಿ ಕಾಡುತಿದ್ದ ಗೇಣಿ ರೈತರ ಮತ್ತು ಮುಳುಗಡೆ ಸಂತ್ರಸ್ತರ ಸಮಸ್ಯೆಗಳು ಅವರನ್ನು ಒಬ್ಬ ಹೋರಾಟಗಾರನಾಗಿಯೂ ಮಾಡಿದವು.

ಹೋರಾಟ ಎಂಬ ಕಾಗೋಡು ಕುಲುಮೆಯಲ್ಲಿ ಅರಳಿದ್ದ ಕಾಗೋಡು ತಿಮ್ಮಪ್ಪ ಮುಂದೆ ಸಮಾಜವಾದಿ ಪಕ್ಷ ಯುವ ನಾಯಕನಾಗಿ ಗುರುತಿಸಿಕೊಂಡರು. ವಕೀಲನಾಗಿ ಗೇಣಿ ರೈತರ ವ್ಯಾಜ್ಯಗಳನ್ನೇ ಹೆಚ್ಚಾಗಿ ನಡೆಸಿದ್ದ ಕಾಗೋಡು ತಿಮ್ಮಪ್ಪ ತಮಗಿರುವ ಜನಪ್ರಿಯತೆಯಿಂದಾಗಿ 1962 ಮತ್ತು 1967 ರಲ್ಲಿ ಸಮಾಜವಾದಿ ಪಕ್ಷದಿಂದ ಚುನಾವಣೆಗೆ ಸ್ಪರ್ಧಿಸಿ ಸೊತಿದ್ದರು. ಆದರೆ ಸಾಗರ ತಾಲೂಕು ಬೋರ್ಡ್ ಚುನಾವಣೆಯಲ್ಲಿ ಜಯಗಳಿಸಿ ಸಾರ್ವಜನಿಕರ ಕ್ಷೇತ್ರದಲ್ಲಿ ತಮ್ಮ ಕೆಲಸ ಮುಂದುವರಿಸಿದ್ದರು. ಧೀಮಂತ ನಾಯಕ ಶಾಂತವೇರಿ ಗೋಪಾಲಗೌಡರ ಒಡನಾಟ, ರಾಮಮನೋಹರ ಲೋಹಿಯಾ ಅವರ ಪ್ರಭಾವದಿಂದ ಸೈದ್ಧಾಂತಿಕವಾಗಿ ಬೆಳೆದಿದ್ದ ಕಾಗೋಡು ತಿಮ್ಮಪ್ಪ ಅವರು 1972 ಲ್ಲಿ ಮೊದಲ ಬಾರಿ ವಿಧಾನ ಸಭೆ ಸದಸ್ಯರಾಗಿ ಆಯ್ಕೆಯಾದರು.
ಮೊದಲ ಬಾರಿ ಶಾಸಕರಾಗಿದ್ದಾಗಲೇ ದೇವರಾಜ ಅರಸು ಅವರು ಪ್ರೀತಿ ಗಳಿಸಿದ್ದ ತಿಮ್ಮಪ್ಪ ಗೇಣಿ ರೈತರ ಸಮಸ್ಯೆ ಪರಿಹಾರಕ್ಕೆ ರಚನೆಯಾಗಿದ್ದ ಜಾಯಿಂಟ್ ಸೆಲೆಕ್ಟ್ ಕಮಿಟಿ ಸದಸ್ಯರಾದರು. ೧೯೭೪ ರಲ್ಲಿ ಅಂದಿನ ಮುಖ್ಯಮಂತ್ರಿ ಅರಸು ಜಾರಿಗೆ ತಂದ ಉಳುವವನೆ ಹೊಲದೊಡೆಯ ಕಾಯಿದೆ ಜಾರಿಯಲ್ಲಿ ಪ್ರಮುಖ ಪಾತ್ರ ವಹಿಸಿದ್ದರು.

ಮುಂದೆ ದೇವರಾಜು ಅರಸು ಅವರ ಪ್ರಭಾವದಿಂದ ಕಾಂಗ್ರೆಸ್ ಸೇರಿದ್ದ ಕಾಗೋಡು ತಿಮ್ಮಪ್ಪ ಶಾಸಕರಾಗಿ, ಗೃಹಮಂಡಳಿ ಅಧ್ಯಕ್ಷರಾಗಿ, ಸಮಾಜ ಕಲ್ಯಾಣ, ಅರಣ್ಯ, ಆಹಾರ, ಆರೋಗ್ಯ, ಕಂದಾಯ ಸಚಿವರಾಗಿ ತಮ್ಮದೇ ಆದ ಛಾಪು ಮೂಡಿಸಿದರು. ಉತ್ತಮ ಸಂಸದೀಯ ಪಟುವಾಗಿದ್ದ ಕಾಗೋಡು ತಿಮ್ಮಪ್ಪ ವಿಧಾನ ಸಭೆಯ ಹೆಡ್ ಮಾಸ್ಟರ್ ಎಂದೆನಿಸುವ ಸ್ಪೀಕರ್ ಹುದ್ದೆ ಅಲಂಕರಿಸಿ ಅದಕ್ಕೊಂದು ನ್ಯಾಯ ತಂದುಕೊಟ್ಟರು ಮಾತ್ರವಲ್ಲದೆ, ಶಾಸನ ಸಭೆಯ ಪ್ರತಿನಿಧಿಗಳ ಜವಾಬ್ದಾರಿ ಏನು ಎಂಬುದನ್ನು ತಿಳಿಹೇಳಿದರು.
ಬಡಜನರು, ಶೋಷಿತ ವರ್ಗದವರ ಪರ ಚಿಂತನೆ ಮಾಡುವ ಕಾಗೋಡು ತಿಮ್ಮಪ್ಪ ತಳಸಮುದಾಯಕ್ಕೆ ಸ್ವಾಭಿಮಾನದ ಧ್ವನಿ ಕೊಟ್ಟರು. ಭೂಮಿಯ ಮೇಲಿರುವ ಪ್ರತಿಯೊಬ್ಬರಿಗೂ ಸಮಪಾಲು ಸಮಬಾಳು ಸಿಗಬೇಕೆಂದು ಪ್ರತಿಪಾದಿಸುವ ಸಾಮಾಜಿಕ ನ್ಯಾಯದ ಹರಿಕಾರ ಕಾಗೋಡು ತಿಮ್ಮಪ್ಪ ಅವರಿಗೆ ಗೋಪಾಲಗೌಡ, ಅರಸು ಹೆಸರಿನ ಪ್ರಶಸ್ತಿಗಳೂ ಸೇರಿದಂತೆ ಅನೇಕ ಪ್ರಶಸ್ತಿಗಳು ಬಂದಿವೆ.
ಸಾಮಾಜಿಕ ನ್ಯಾಯ ಪ್ರತಿಪಾದಕ:
ಕಾಗೋಡು ತಿಮ್ಮಪ್ಪ ಅವರು ಜನ ಸೇವೆಗಾಗಿ ರಾಜಕೀಯ ಮಾಡಿದವರು. ಅಧಿಕಾರ ಇರಲಿ ಬಿಡಲಿ ಅವರು ಯಾವತ್ತೂ ಜನರೊಂದಿಗೇ ಬಾಳುತ್ತಿರುವವರು. ಅಧಿಕಾರ ಇಲ್ಲದಾಗ ಎಂದೂ ಸುಮ್ಮನೇ ಕೂತವರಲ್ಲ. ಎರಡು ಬಾರಿ ಸತತ ಸೋಲು ಕಂಡಾಗಲೂ ಅವರು ಕ್ಷೇತ್ರದಲ್ಲಿ ಯಾವುದೇ ಸಮಸ್ಯೆ ಆದರೆ ಮೊದಲು ಅಲ್ಲಿಗೆ ಹೋಗಿ ಜನರ ಸಮಸ್ಯೆ ಆಲಿಸುತ್ತಿದ್ದರು.
ಜೀವನದ ಸಂಧ್ಯಾಕಾಲದಲ್ಲಿಯೂ ಜನಪರ ಚಿಂತನೆ, ಉಳುವ ಎಲ್ಲರಿಗೂ ಭೂಮಿಯ ಹಕ್ಕುದಾರಿಕೆ ಸಿಗಬೇಕೆಂದು ಸದಾ ತುಡಿಯುವ ಕಾಗೋಡು ತಿಮ್ಮಪ್ಪ ಹಿಂದುಳಿವ ವರ್ಗಗಳ ನೈಜ ನಾಯಕ, ಮೇಲ್ವರ್ಗದವರ ಸವಾಲು ಎದುರಿಸಿ ಬಲಾಡ್ಯವಾಗಿ ಬೆಳೆದು ಇಂದೂ ಅದೇ ಲವಲವಿಕೆಯಲ್ಲಿರುವ ಕಾಗೋಡು ತಿಮ್ಮಪ್ಪ ಅಧಿಕಾರ ಬಂದಾಗ ಅಪ್ಪಟ ಸಮಾಜವಾದಿಯಂತೆ ಅದನ್ನು ಚಲಾಯಿಸಿದವರು.


ಕಾಗೋಡು ಚಳವಳಿಯ ಪೂರ್ಣ ಆಶಯ ಈಡೇರಿಲ್ಲ. ಇಂದಿಗೂ ಮಲೆನಾಡಿನಲ್ಲಿ ಸಣ್ಣ ರೈತರಿಗೆ ಭೂಮಿಯ ಒಡೆತನ ಸಿಕ್ಕಿಲ್ಲ. ನಾಡಿಗೆ ಬೆಳಕು ಕೊಟ್ಟ ಶರಾವತಿ ಸಂತ್ರಸ್ಥರ ಭೂಮಿಯ ಹಕ್ಕುದಾರಿಕೆ ಅತಂತ್ರ ಸ್ಥಿತಿಯಲ್ಲಿದೆ. ಉಳುವ ರೈತ ಭೂಮಿಯ ಒಡೆಯನಾಗಬೇಕೆಂಬ ಹಂಬಲ ಕಾಗೋಡು ಅವರದು. ಕಂದಾಯ ಸಚಿವರಾಗಿದ್ದ ಕಾಲದಲ್ಲಿ ಕಂದಾಯ ಗ್ರಾಮ, ವಾಸಿಸುವವನೇ ಮನೆ ಒಡೆಯ ಮುಂತಾದ ಯೋಜನೆಗಳನ್ನು ಜಾರಿಗೆ ತರುವ ಮೂಲಕ ಬಡಜನರ ಬಗ್ಗೆ ಇದ್ದ ಕಕ್ಕುಲಾತಿಯನ್ನು ತೋರಿದವರು ಕಾಗೋಡು ತಿಮ್ಮಪ್ಪ.

ಮುತ್ಸದ್ದಿ ರಾಜಕಾರಣಿ

ಕಾಗೋಡು ತಿಮ್ಮಪ್ಪ ಅವರು ಎಂದೂ ಬೂಟಾಟಿಕೆಯ ರಾಜಕಾರಣ ಮಾಡಿದವರಲ್ಲ. ಅವರು ಸಭೆ ನಡೆಸುವಾಗ ಅಧಿಕಾರಿಗಳು ಮೈಯೆಲ್ಲ ಕಣ್ಣಾಗಿರುತ್ತಿದ್ದರು. ಭೂಮಿಗೆ ಸಂಬಂಧಿಸಿದ ಯಾವುದೇ ಕಾನೂನುಗಳ ಬಗ್ಗೆ ಆಳವಾದ ತಿಳಿವಳಿಕೆ ಹೊಂದಿದ್ದ ಅವರನ್ನು ಅಧಿಕಾರಿಗಳು ದಾರಿ ತಪ್ಪಿಸಲು ಆಗುತ್ತಿರಲಿಲ್ಲ. ರಾಜಕಾರಣವನ್ನು ಒಂದು ಹೋರಾಟವೆಂದೇ ಪರಿಗಣಿಸಿದ್ದ ಕಾಗೋಡು ತಿಮ್ಮಪ್ಪ ಅವರು, ನಾಡು ಕಂಡ ಮುತ್ಸದ್ದಿ ರಾಜಕಾರಣಿ. ತಮ್ಮ ಬದ್ಧತೆಯ ಕಾರಣದಿಂದ ಪ್ರಶ್ನಾತೀತ ನಾಯಕರಾಗಿರುವ ತಿಮ್ಮಪ್ಪ ಅವರನ್ನು ಸರ್ವಪಕ್ಷಗಳ ಮುಖಂಡರು, ಜನಪ್ರತಿನಿಧಿಗಳು ಒಂದಾಗಿ ಶಿವಮೊಗ್ಗದಲ್ಲಿ ಅಭಿನಂದಿಸುತ್ತಿರುವುದು ಇಡೀ ಮಲೆನಾಡಿನ ಜನರ ಹೆಮ್ಮೆಯಾಗಿದೆ.

Ad Widget

Related posts

ಸರಕಾರದ ವಿರುದ್ಧ ಗುಡುಗಿದ ಕೈ ನಾಯಕರು

Malenadu Mirror Desk

ದುಡಿಮೆಯೇ ದೊಡ್ಡಪ್ಪ ಎಂಬ ಧ್ಯೇಯದ ಮೇಲೆ ಬಜೆಟ್ ಮಂಡನೆ: ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ

Malenadu Mirror Desk

ಪುನೀತ ದರ್ಶನಕ್ಕೆ ಜನಸಾಗರ, ಮಲೆನಾಡಿನೊಂದಿಗೆ ಮಧುರ ಬಾಂಧವ್ಯ ಹೊಂದಿದ್ದ ಅಪ್ಪು

Malenadu Mirror Desk

Leave a Comment

error: Content is protected !! ಮಲೆನಾಡು ಮಿರರ್‌ನಲ್ಲಿ ಪ್ರಕಟಗೊಂಡ ಸುದ್ದಿ, ಲೇಖನ, ಫೊಟೊಗಳನ್ನುಪೂರ್ವಾನುಮತಿಯಿಲ್ಲದೆ ನಕಲು ಮಾಡುವುದು ಕಾನೂನುಬಾಹಿರವಾಗಿದೆ.